ರೋಹಿತ್ ಶರ್ಮಾ-ಡಿಕೆಯ ಫೋಟೋ ಬಳಸಿ ಹೆಲ್ಮೆಟ್ ಜಾಗೃತಿ ಮೂಡಿಸಿದ ಟ್ರಾಫಿಕ್ ಪೊಲೀಸ್
Rohit Sharma - Dinesh Karthik: ಹೈದರಾಬಾದ್ ಸಿಟಿ ಪೊಲೀಸ್ ಟೀಮ್ ಇಂಡಿಯಾ ಆಟಗಾರರ ಫೋಟೋಗಳನ್ನು ಬಳಸಿ ರಸ್ತೆ ಸುರಕ್ಷತೆಯ ಬಗ್ಗೆ ಮೂಡಿಸಿರುವ ಜಾಗೃತಿ ಬಗ್ಗೆ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.
ಭಾರತದಲ್ಲಿ ಕ್ರಿಕೆಟ್ ಪ್ರೇಮಿಗಳಿಗೇನು ಬರವಿಲ್ಲ. ಅದರಲ್ಲೂ ದೇಶದ ಯುವ ಸಮೂಹದ ನೆಚ್ಚಿನ ಕ್ರೀಡೆಯಾಗಿ ಕ್ರಿಕೆಟ್ ಮಾರ್ಪಟ್ಟಿದೆ. ಇಂತಹದೊಂದು ಅಚ್ಚುಮೆಚ್ಚಿನ ಕ್ರೀಡೆಯ ಸನ್ನಿವೇಶವನ್ನೇ ಬಳಸಿ ಜನರಿಗೆ ಜಾಗೃತಿ ಮೂಡಿಸಿದರೆ ಬೇಗನೆ ತಲುಪುದರಲ್ಲಿ ಸಂದೇಹವೇ ಇಲ್ಲ. ಅದನ್ನೇ ಈಗ ಹೈದರಾಬಾದ್ ಸಿಟಿ ಪೊಲೀಸ್ ಮಾಡಿ ತೋರಿಸಿದ್ದಾರೆ. ರಸ್ತೆ ಸುರಕ್ಷತೆಯ ಕುರಿತಾಗಿ ಜಾಗೃತಿ ಮೂಡಿಸಲು ಹೈದರಾಬಾದ್ ಸಿಟಿ ಪೊಲೀಸ್ ರೋಹಿತ್ ಶರ್ಮಾ ಹಾಗೂ ದಿನೇಶ್ ಕಾರ್ತಿಕ್ ಅವರ ಫೋಟೋಗಳನ್ನು ಬಳಸಿದ್ದಾರೆ.
ಈ ಫೋಟೋಗಳು ಭಾರತ-ಆಸ್ಟ್ರೇಲಿಯಾ ನಡುವಣ ಟಿ20 ಸರಣಿಯ ವೇಳೆ ಕಂಡು ಬಂದ ದೃಶ್ಯಗಳು ಎಂಬುದು ವಿಶೇಷ. ಅಂದರೆ ಆಸೀಸ್ ವಿರುದ್ಧದ 2ನೇ ಪಂದ್ಯದ ವೇಳೆ ಮೈದಾನದಲ್ಲೇ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ತಮಾಷೆಗೆ ದಿನೇಶ್ ಕಾರ್ತಿಕ್ ಅವರ ಕುತ್ತಿಗೆಗೆ ಕೈ ಹಾಕಿದ್ದರು. ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು.
ಇದಾದ ಬಳಿಕ 3ನೇ ಪಂದ್ಯದಲ್ಲೂ ಹಿಟ್ಮ್ಯಾನ್ ಹಾಗೂ ಡಿಕೆ ನಡುವೆ ಕೆಲ ಬ್ರೋಮನ್ಸ್ ಸನ್ನಿವೇಶ ಕಂಡು ಬಂತು. ಈ ವೇಳೆ ರೋಹಿತ್ ಶರ್ಮಾ ದಿನೇಶ್ ಕಾರ್ತಿಕ್ ಅವರ ತಲೆ ಮುತ್ತಿಕ್ಕಿದ್ದರು. ಈ ಎರಡು ಸನ್ನಿವೇಶಗಳ ಫೋಟೋಗಳನ್ನು ಬಳಸಿ ಇದೀಗ ಹೈದರಾಬಾದ್ ಪೊಲೀಸ್ ರಸ್ತೆ ಸುರಕ್ಷತಾ ಜಾಗೃತಿಗೆ ಮುಂದಾಗಿದ್ದಾರೆ.
ವಿಶೇಷ ಎಂದರೆ ರೋಹಿತ್ ಶರ್ಮಾ ದಿನೇಶ್ ಕಾರ್ತಿಕ್ ಅವರ ಕುತ್ತಿಗೆಗೆ ಕೈಹಾಕಿದ್ದಾಗ ಡಿಕೆ ಹೆಲ್ಮೆಟ್ ಧರಿಸಿರಲಿಲ್ಲ. ಹಾಗೆಯೇ ಮುತ್ತಿಕ್ಕಿದಾಗ ದಿನೇಶ್ ಕಾರ್ತಿಕ್ ವಿಕೆಟ್ ಕೀಪಿಂಗ್ ಹೆಲ್ಮೆಂಟ್ ಧರಿಸಿದ್ದರು. ಈ ಫೋಟೋಗಳನ್ನು ಬಳಸಿ ಹೆಲ್ಮೆಟ್ ಧರಿಸದಿದ್ದಾಗ ವರ್ತನೆ ಹೇಗಿರುತ್ತೆ, ಹೆಲ್ಮೆಟ್ ಧರಿಸಿದಾಗ ವರ್ತನೆ ಹೇಗಿರುತ್ತೆ ಎಂಬುದನ್ನು ಸೂಚಿಸಿದ್ದಾರೆ.
When commuters follow traffic rules… #HelmetSavesLives #HyderabadCityPolice #wearhelmet #BeSafe #RoadSafety pic.twitter.com/DZwlQggJ6W
— Hyderabad City Police (@hydcitypolice) September 26, 2022
ಅಂದರೆ ಬೈಕ್ ಸವಾರರು ಹೆಲ್ಮೆಟ್ ಧರಿಸದಿದ್ದಾಗ ವರ್ತನೆ ಹಾಗೂ ಧರಿಸಿದಾಗ ಪೊಲೀಸರ ವರ್ತನೆಗಳು ಹೇಗಿರುತ್ತದೆ ಎಂಬುದನ್ನು ಸೂಚಕವಾಗಿ ಈ ಫೋಟೋಗಳನ್ನು ಹೈದರಾಬಾದ್ ಸಿಟಿ ಪೊಲೀಸ್ ಬಳಸಿದ್ದಾರೆ. ಈ ಮೂಲಕ ಹೆಲ್ಮೆಟ್ ಧರಿಸಿ ಜೀವ ಉಳಿಸಿ ಎಂಬ ಸಂದೇಶವನ್ನು ಸಾರಿದಿದ್ದಾರೆ.
ಇದೀಗ ಹೈದರಾಬಾದ್ ಸಿಟಿ ಪೊಲೀಸ್ ಟೀಮ್ ಇಂಡಿಯಾ ಆಟಗಾರರ ಫೋಟೋಗಳನ್ನು ಬಳಸಿ ರಸ್ತೆ ಸುರಕ್ಷತೆಯ ಬಗ್ಗೆ ಮೂಡಿಸಿರುವ ಜಾಗೃತಿ ಬಗ್ಗೆ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ. ಒಟ್ಟಿನಲ್ಲಿ ಬಹುತೇಕ ಭಾರತೀಯರ ಅಚ್ಚುಮೆಚ್ಚಿನ ಕ್ರೀಡೆಯಾಗಿರುವ ಕ್ರಿಕೆಟ್ ಮೂಲಕವೇ ಹೆಲ್ಮೆಟ್ ಕುರಿತಾದ ಜಾಗೃತಿ ಮೂಡಿಸುವಲ್ಲಿ ಹೈದರಾಬಾದ್ ಸಿಟಿ ಪೊಲೀಸ್ ಯಶಸ್ವಿಯಾಗಿದೆ ಎಂದೇ ಹೇಳಬಹುದು.