ಮೈದಾನದಲ್ಲಿ ಅನುಚಿತ ವರ್ತನೆ: ವೆಸ್ಟ್ ಇಂಡೀಸ್‌ನ ಇಬ್ಬರು ಆಟಗಾರರಿಗೆ ಎಚ್ಚರಿಕೆ!

ಭಾರತದ ವಿರುದ್ಧದ ಟಿ20 ಪಂದ್ಯದಲ್ಲಿ ಮೈದಾನದಲ್ಲಿ ಅಶಿಸ್ತು ಪ್ರದರ್ಶಿಸಿದ ವೆಸ್ಟ್ ಇಂಡೀಸ್ ತಂಡದ ಇಬ್ಬರು ಪ್ರಮುಖ ಆಟಗಾರರಿಗೆ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ ಬಿಸಿ ಮುಟ್ಟಿಸಿದೆ. ರಾಂಚಿಯಲ್ಲಿ ನಡೆದ ಎರಡನೇ ಟಿ20 ಪಂದ್ಯದ ವೇಳೆ ಐಸಿಸಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದ ಆರೋಪದ ಮೇಲೆ ವೆಸ್ಟ್ ಇಂಡೀಸ್‌ನ ಪೊವೆಲ್ ಮತ್ತು ರದರ್‌ಫೋರ್ಡ್ ಅವರಿಗೆ ಅಧಿಕೃತ ಎಚ್ಚರಿಕೆ ನೀಡಿದೆ.

ಮೈದಾನದಲ್ಲಿ ಅನುಚಿತ ವರ್ತನೆ: ವೆಸ್ಟ್ ಇಂಡೀಸ್‌ನ ಇಬ್ಬರು ಆಟಗಾರರಿಗೆ ಎಚ್ಚರಿಕೆ!
Sherfane Rutherford - Rovman Powell
Image Credit source: GettyImages

Updated on: Oct 13, 2026 | 9:04 AM

ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ರಾಂಚಿಯಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದ ಕಾರಣಕ್ಕಾಗಿ ವೆಸ್ಟ್ ಇಂಡೀಸ್ ತಂಡದ ಆಟಗಾರರಾದ ರೋವ್‌ಮನ್ ಪೊವೆಲ್ ಮತ್ತು ಶೆರ್ಫೇನ್ ರದರ್‌ಫೋರ್ಡ್ ಅವರಿಗೆ ಐಸಿಸಿ ಅಧಿಕೃತ ಎಚ್ಚರಿಕೆ ನೀಡಿದೆ. ಇದರೊಂದಿಗೆ ಇಬ್ಬರ ಶಿಸ್ತು ದಾಖಲೆಗೆ ತಲಾ ಒಂದು ಡಿಮೆರಿಟ್ ಪಾಯಿಂಟ್ ಸೇರಿಸಲಾಗಿದೆ.

ಯಾವ ನಿಯಮಗಳ ಉಲ್ಲಂಘನೆ?

ರೋವ್‌ಮನ್ ಪೊವೆಲ್ (ಕ್ರೀಡಾ ಸಾಮಗ್ರಿ ದುರುಪಯೋಗ): ವೆಸ್ಟ್ ಇಂಡೀಸ್ ಇನಿಂಗ್ಸ್‌ನ 6ನೇ ಓವರ್‌ನಲ್ಲಿ ಭಾರತದ ವೇಗಿ ಮಯಾಂಕ್ ಯಾದವ್ ಬೌಲಿಂಗ್‌ನಲ್ಲಿ ಔಟ್ ಆದ ನಂತರ, ಪೊವೆಲ್ ತೀವ್ರ ನಿರಾಸೆಯಿಂದ ತಮ್ಮ ಬ್ಯಾಟ್‌ನಿಂದ ಚೆಂಡನ್ನು ಜೋರಾಗಿ ಹೊಡೆದು ಕಳುಹಿಸಿದ್ದರು. ಇದು ಐಸಿಸಿ ನೀತಿ ಸಂಹಿತೆಯ ಆರ್ಟಿಕಲ್ 2.2 ರ ಉಲ್ಲಂಘನೆಯಾಗಿದೆ.

ಶೆರ್ಫೇನ್ ರದರ್‌ಫೋರ್ಡ್ (ಅಂಪೈರ್ ನಿರ್ಧಾರಕ್ಕೆ ಅಸಮ್ಮತಿ): ಇನಿಂಗ್ಸ್‌ನ 13ನೇ ಓವರ್‌ನಲ್ಲಿ ತಾವು ವೈಡ್ ಎಂದು ಭಾವಿಸಿದ್ದ ಎಸೆತವನ್ನು ಅಂಪೈರ್ ಮಾನ್ಯ ಮಾಡಿದಾಗ, ರದರ್‌ಫೋರ್ಡ್ ಅಂಪೈರ್ ವಿರುದ್ಧ ಆಕ್ರೋಶ ಹೊರಹಾಕಿ ಜೋರಾಗಿ ಕೂಗಾಡಿದ್ದರು. ಇದು ಅಂಪೈರ್ ನಿರ್ಧಾರಕ್ಕೆ ಅಸಮ್ಮತಿ ಸೂಚಿಸುವ ಆರ್ಟಿಕಲ್ 2.8 ರ ಉಲ್ಲಂಘನೆಯಾಗಿದೆ.

ತಪ್ಪು ಒಪ್ಪಿಕೊಂಡ ಆಟಗಾರರು:

ಮ್ಯಾಚ್ ರೆಫ್ರಿ ಪ್ರಕಾಶ್ ಭಟ್ ಅವರು ಪ್ರಸ್ತಾಪಿಸಿದ ಈ ಶಿಕ್ಷೆಯನ್ನು ಇಬ್ಬರೂ ಆಟಗಾರರು ಒಪ್ಪಿಕೊಂಡಿರುವುದರಿಂದ ಯಾವುದೇ ಅಧಿಕೃತ ವಿಚಾರಣೆಯ ಅಗತ್ಯ ಬಿದ್ದಿಲ್ಲ. ಆನ್-ಫೀಲ್ಡ್ ಅಂಪೈರ್‌ಗಳಾದ ಜಯರಾಮನ್ ಮದನಗೋಪಾಲ್, ರೋಹನ್ ಪಂಡಿತ್, ಟಿವಿ ಅಂಪೈರ್ ನಿತಿನ್ ಮೆನನ್ ಮತ್ತು ನಾಲ್ಕನೇ ಅಂಪೈರ್ ವೀರೇಂದ್ರ ಶರ್ಮಾ ಅವರು ಆಟಗಾರರ ವಿರುದ್ಧ ದೂರು ದಾಖಲಿಸಿದ್ದರು.

ಐಸಿಸಿ ನಿಯಮಾವಳಿಗಳ ಪ್ರಕಾರ ಇದು ಹಂತ-1ರ ತಪ್ಪಾಗಿದ್ದು, ಹೀಗಾಗಿ ಆಟಗಾರರಿಗೆ ಅಧಿಕೃತ ಎಚ್ಚರಿಕೆ ನೀಡಲಾಗಿದೆ. ಒಂದು ವೇಳೆ ಇಂತಹ ತಪ್ಪು ಮುಂದಿನ ದಿನಗಳಲ್ಲಿ ಪುನರಾವರ್ತನೆಯಾದರೆ ಆಟಗಾರರು ಕಠಿಣ ಶಿಕ್ಷೆ ಎದುರಿಸಬೇಕಾಗುತ್ತದೆ. ಅಂದರೆ ಆಟಗಾರರ ಖಾತೆ ಮುಂದಿನ 24 ತಿಂಗಳುಗಳ ಒಳಗೆ 4 ಅಥವಾ ಅದಕ್ಕಿಂತ ಹೆಚ್ಚು ಡಿಮೆರಿಟ್ ಪಾಯಿಂಟ್‌ಗಳು ಸೇರಿದರೆ,  ಆ ಆಟಗಾರನನ್ನು ಒಂದು ಟೆಸ್ಟ್ ಪಂದ್ಯ ಅಥವಾ ಎರಡು ಏಕದಿನ ಅಥವಾ 2 ಟಿ20 ಪಂದ್ಯಗಳಿಂದ ನಿಷೇಧಿಸಲಾಗುತ್ತದೆ.

ಇದನ್ನೂ ಓದಿ: ಹರಾಜಿಗೂ ಮುನ್ನವೇ ಮುಂಬೈ ಇಂಡಿಯನ್ಸ್ ತಂಡಕ್ಕೆ ತಾರಾ ನೊರ್ರಿಸ್ ಎಂಟ್ರಿ

ಅದೇ ರೀತಿ ಮುಂದಿನ ಬಾರಿ ಇದೇ ಹಂತ-1ರ ತಪ್ಪು ಮರುಕಳಿಸಿದರೆ, ಅಧಿಕೃತ ಎಚ್ಚರಿಕೆಯ ಬದಲಿಗೆ ಶೇ. 50 ರಷ್ಟು ಪಂದ್ಯದ ಸಂಭಾವನೆಯನ್ನು ನೇರವಾಗಿ ದಂಡದ ರೂಪದಲ್ಲಿ ಕಡಿತಗೊಳಿಸಲಾಗುತ್ತದೆ. ಹೀಗಾಗಿ ರೋವ್‌ಮನ್ ಪೊವೆಲ್ ಹಾಗೂ ಶೆರ್ಫೇನ್ ರದರ್‌ಫೋರ್ಡ್ ಮುಂಬರುವ ಪಂದ್ಯಗಳಲ್ಲಿ ಮೈದಾನದಲ್ಲಿ ಶಿಸ್ತು ಕಾಯ್ದುಕೊಂಡು, ಯಾವುದೇ ತಪ್ಪು ಮಾಡದಂತೆ ಎಚ್ಚರಿಕೆ ವಹಿಸಬೇಕಾಗುತ್ತದೆ.

 

ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Loading...
Unable to load recommendations.
Follow Us