- TV9 Kannada Kannada News Photos Cricket Photos Shai Hope Becomes First Overseas Batter With Triple Format Tons In India
ಭಾರತೀಯ ಪಿಚ್ನಲ್ಲಿ ಹಿಂದೆಂದೂ ಕಂಡರಿಯದ ದಾಖಲೆ ಬರೆದ ಶಾಯ್ ಹೋಪ್
ವಿಶ್ವ ಕ್ರಿಕೆಟ್‌ನ ದೈತ್ಯ ತಂಡಗಳಿಗೇ ಭಾರತದ ಸ್ಪಿನ್ ಮತ್ತು ವೇಗದ ಬೌಲಿಂಗ್ ದಾಳಿಯನ್ನು ಅವರದೇ ನೆಲದಲ್ಲಿ ಎದುರಿಸುವುದು ಅತ್ಯಂತ ಕಠಿಣ ಸವಾಲು. ಇಂತಹ ಕಠಿಣ ಪರಿಸ್ಥಿತಿಯಲ್ಲೂ ಭಾರತದ ಪಿಚ್‌ಗಳಲ್ಲೇ ಭಾರತೀಯ ಬೌಲರ್ಗಳನ್ನು ದಂಡಿಸಿ, ಕ್ರಿಕೆಟ್ ಇತಿಹಾಸದಲ್ಲೇ ಯಾರೂ ಮಾಡದ ಅಪರೂಪದ ಮಹಾ ದಾಖಲೆಯೊಂದನ್ನು ವೆಸ್ಟ್ ಇಂಡೀಸ್ ನಾಯಕ ಶಾಯ್ ಹೋಪ್ ಬರೆದಿದ್ದಾರೆ.
Updated on: Oct 10, 2026 | 8:25 AM

ವೆಸ್ಟ್ ಇಂಡೀಸ್ ತಂಡದ ನಾಯಕ ಶಾಯ್ ಹೋಪ್ ಭಾರತದಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಅದು ಸಹ ವಿಶ್ವ ಕ್ರಿಕೆಟ್ ಇತಿಹಾಸದಲ್ಲೇ ಸುವರ್ಣ ಅಕ್ಷರಗಳಲ್ಲಿ ಬರೆದಿಡುವಂತಹ ಅದ್ಭುತ ದಾಖಲೆಯೊಂದಿಗೆ ಎಂಬುದು ವಿಶೇಷ. ಅಂದರೆ ಯಾವುದೇ ವಿದೇಶಿ ದಾಂಡಿಗನಿಗೆ ಸಾಧ್ಯವಾಗದಿರುವುದನ್ನು ಶಾಯ್ ಹೋಪ್ ಸಾಧಿಸಿ ತೋರಿಸಿದ್ದಾರೆ. (PC: Gettyimages)

ರಾಂಚಿಯ ಜೆಎಸ್ಸಿಎ ಮೈದಾನದಲ್ಲಿ ನಡೆದ ಭಾರತದ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಕೇವಲ 45 ಎಸೆತಗಳಲ್ಲಿ ಶಾಯ್ ಹೋಪ್ ಅಜೇಯ 102 ರನ್ ಬಾರಿಸಿದರು. ಈ ಶತಕದೊಂದಿಗೆ ಭಾರತೀಯ ಪಿಚ್ನಲ್ಲಿ ಮೂರು ಸ್ವರೂಪಗಳಲ್ಲಿ ಸೆಂಚುರಿ ಸಿಡಿಸಿದ ಮೊದಲ ವಿದೇಶಿ ಬ್ಯಾಟರ್ ಎನಿಸಿಕೊಂಡಿದ್ದಾರೆ. (PC: Gettyimages)

ಟೆಸ್ಟ್ ಶತಕ: 2025 ರಲ್ಲಿ ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ 2ನೇ ಟೆಸ್ಟ್ ಪಂದ್ಯದ ದ್ವಿತೀಯ ಇನಿಂಗ್ಸ್‌ನಲ್ಲಿ 103 ರನ್ಗಳ ಅಮೋಘ ಇನಿಂಗ್ಸ್ ಆಡಿದ್ದರು. ಇದು ಶಾಯ್ ಹೋಪ್ ಬ್ಯಾಟ್ನಿಂದ ಭಾರತದಲ್ಲಿ ಮೂಡಿಬಂದ ಮೊದಲ ಟೆಸ್ಟ್ ಶತಕವಾಗಿದೆ. (PC: Gettyimages)

ಏಕದಿನ ಶತಕ: ಭಾರತದಲ್ಲಿ ಹೋಪ್ ಭರ್ಜರಿ ಬ್ಯಾಟಿಂಗ್ ರೆಕಾರ್ಡ್ ಹೊಂದಿದ್ದಾರೆ. ಇತ್ತೀಚೆಗಷ್ಟೇ ನ್ಯೂ ಚಂಡೀಗಢದ ಮುಲ್ಲನ್‌ಪುರ ಮೈದಾನದಲ್ಲಿ ಭಾರತದ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ ಅಜೇಯ 162 ರನ್ ಸಿಡಿಸಿ ವಿಂಡೀಸ್ ಇತಿಹಾಸದ ಅತ್ಯಂತ ದೊಡ್ಡ ರನ್ ಚೇಸ್ಗೆ ಕಾರಣರಾಗಿದ್ದರು. ಇದರೊಂದಿಗೆ ವಿಶಾಖಪಟ್ಟಣಂ ಹಾಗೂ ಚೆನ್ನೈನಲ್ಲೂ ಏಕದಿನ ಶತಕಗಳನ್ನು ಬಾರಿಸಿದ ದಾಖಲೆ ಇವರ ಹೆಸರಿನಲ್ಲಿದೆ. (PC: Gettyimages)

ಟಿ20 ಶತಕ: ಇದೀಗ ರಾಂಚಿಯ ಮೈದಾನದಲ್ಲಿ ಭಾರತದ ವಿರುದ್ಧ 45 ಎಸೆತಗಳಲ್ಲಿ 9 ಭರ್ಜರಿ ಸಿಕ್ಸರ್‌ಗಳ ನೆರವಿನಿಂದ ಅಜೇಯ 102 ರನ್ ಚಚ್ಚಿದ್ದಾರೆ. ಈ ಮೂಲಕ ಟೀಮ್ ಇಂಡಿಯಾ ವಿರುದ್ಧ ಭಾರತದಲ್ಲಿ ಮೂರು ಸ್ವರೂಪಗಳಲ್ಲೂ ಶತಕ ಸಿಡಿಸಿದ ಮೊದಲ ವಿದೇಶಿ ಬ್ಯಾಟರ್ ಎಂಬ ಹೆಗ್ಗಳಿಕೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. (PC: Gettyimages)

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.
Read More



