WTC Points Table: ಪಾಯಿಂಟ್ ಟೇಬಲ್ನಲ್ಲಿ ಮೇಲೇರಿದ ಇಂಗ್ಲೆಂಡ್: ಟೀಮ್ ಇಂಡಿಯಾಗೆ ಎಷ್ಟನೇ ಸ್ಥಾನ?
ICC World Test Championship Points Table: 2021 ರಿಂದ 2023 ರವರೆಗೆ ನಡೆಯಲಿರುವ ಪ್ರಮುಖ ದೇಶಗಳ ಪಂದ್ಯಗಳ ಫಲಿತಾಂಶದ ಮೇಲೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ನಡೆಯುತ್ತಿದೆ. ಇಲ್ಲಿ ಒಟ್ಟು 9 ಟೆಸ್ಟ್ ಆಡುವ ರಾಷ್ಟ್ರಗಳು ಕಾಣಿಸಿಕೊಳ್ಳುತ್ತಿದ್ದು, ಅದರಂತೆ ಪಾಯಿಂಟ್ಸ್ ಟೇಬಲ್ನಲ್ಲಿ ಮೊದಲ ಎರಡು ಸ್ಥಾನಗಳನ್ನು ಪಡೆಯುವ ತಂಡಗಳು ಫೈನಲ್ ಆಡಲಿದೆ.

ಒಂದೆಡೆ ವೆಸ್ಟ್ ಇಂಡೀಸ್ ತಂಡವು ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯನ್ನು 2-0 ಅಂತರದಲ್ಲಿ ವಶಪಡಿಸಿಕೊಂಡಿದೆ. ಮತ್ತೊಂದೆಡೆ, ಇಂಗ್ಲೆಂಡ್ ತಂಡವು ಹಾಲಿ ಟೆಸ್ಟ್ ಚಾಂಪಿಯನ್ ನ್ಯೂಜಿಲೆಂಡ್ ಅನ್ನು 3-0 ಅಂತರದಿಂದ ಸೋಲಿಸಿದೆ. ಈ ಎರಡು ಪ್ರಮುಖ ಸರಣಿ ವಿಜಯಗಳೊಂದಿಗೆ ICC ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ 2021-23 ಪಾಯಿಂಟ್ ಟೇಬಲ್ನಲ್ಲಿ (ICC World Test Championship Points Table) ಮಹತ್ವದ ಬದಲಾವಣೆಗಳಾಗಿವೆ. ನ್ಯೂಜಿಲೆಂಡ್ ವಿರುದ್ಧದ ಗೆಲುವಿನ ನಂತರ ಇಂಗ್ಲೆಂಡ್ ಅಂಕಪಟ್ಟಿಯಲ್ಲಿ ತನ್ನ ಸ್ಥಾನದಲ್ಲಿ ಮೇಲೇರಿದ್ದು, ನೂತನ ಪಾಯಿಂಟ್ ಟೇಬಲ್ನಲ್ಲಿ 7ನೇ ಸ್ಥಾನ ಅಲಂಕರಿಸಿದೆ. ಇನ್ನು ಇಂಗ್ಲೆಂಡ್ ವಿರುದ್ಧದ ಹೀನಾಯವಾಗಿ ಸೋತಿರುವ ನ್ಯೂಜಿಲೆಂಡ್ ತಂಡವು 8ನೇ ಸ್ಥಾನಕ್ಕೆ ಕುಸಿದಿದೆ. ಅಷ್ಟೇ ಅಲ್ಲದೆ ಚೊಚ್ಚಲ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಗೆದ್ದಿರುವ ನ್ಯೂಜಿಲೆಂಡ್‌ಗೆ ಈ ಬಾರಿ ಫೈನಲ್‌ಗೆ ತಲುಪುವುದು ಕಷ್ಟಸಾಧ್ಯ ಎಂದೇ ಹೇಳಬಹುದು.
ಹಾಗೆಯೇ ವೆಸ್ಟ್ ಇಂಡೀಸ್ ತಂಡವು ಬಾಂಗ್ಲಾದೇಶ ವಿರುದ್ಧದ ಸರಣಿ ಜಯಿಸುವ ಮೂಲಕ ಪಾಯಿಂಟ್ಸ್ ಟೇಬಲ್ನಲ್ಲಿ 6 ನೇ ಸ್ಥಾನವನ್ನು ಅಲಂಕರಿಸಿದೆ. ಈ ಸರಣಿ ಜಯದೊಂದಿಗೆ ವೆಸ್ಟ್ ಇಂಡೀಸ್ ತಂಡದ ಗೆಲುವಿನ ಶೇಕಡಾವಾರು 50ಕ್ಕೆ ಏರಿದೆ. ಮತ್ತೊಂದೆಡೆ ಪಾಕಿಸ್ತಾನ್ ತಂಡವು 5ನೇ ಸ್ಥಾನದಲ್ಲಿದ್ದು, ಶೇಕಡಾವಾರು 52.38 ಅಂಕಗಳನ್ನು ಹೊಂದಿದೆ. ಇನ್ನು ಪಾಕ್ ವಿರುದ್ದದ ಸರಣಿ ಸೋಲಿನ ಬಳಿಕ ಬಾಂಗ್ಲಾದೇಶ 9ನೇ ಸ್ಥಾನಕ್ಕೆ ಕುಸಿದಿದೆ.
ಮತ್ತೊಂದೆಡೆ ಇಂಗ್ಲೆಂಡ್ ವಿರುದ್ದದ ಟೆಸ್ಟ್ ಪಂದ್ಯಕ್ಕೆ ಸಜ್ಜಾಗುತ್ತಿರುವ ಟೀಮ್ ಇಂಡಿಯಾ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಭಾರತ ತಂಡದ ಗೆಲುವಿನ ಶೇಕಡಾವಾರು 58.33 ಇದ್ದು, ಇಂಗ್ಲೆಂಡ್ ವಿರುದ್ದದ ಗೆಲುವಿನ ಬಳಿಕ ಪಾಯಿಂಟ್ಸ್ ಮತ್ತಷ್ಟು ಹೆಚ್ಚಾಗಲಿದೆ. ಇನ್ನು ದ್ವಿತೀಯ ಸ್ಥಾನದಲ್ಲಿರುವ ಸೌತ್ ಆಫ್ರಿಕಾ ತಂಡವು 71.43 ಗೆಲುವಿನ ಶೇಕಡಾವಾರು ಹೊಂದಿದೆ. ಹಾಗೆಯೇ ಮೊದಲ ಸ್ಥಾನವನ್ನು ಆಸ್ಟ್ರೇಲಿಯಾ ಅಲಂಕರಿಸಿದ್ದು, ಒಟ್ಟು 8 ಪಂದ್ಯಗಳಲ್ಲಿ 3 ಡ್ರಾ ಹಾಗೂ 5 ಜಯ ಸಾಧಿಸುವ ಮೂಲಕ ಒಟ್ಟು 75 ಗೆಲುವಿನ ಶೇಕಡಾವಾರು ಹೊಂದಿದೆ.
ಏನಿದು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್?
2021 ರಿಂದ 2023 ರವರೆಗೆ ನಡೆಯಲಿರುವ ಪ್ರಮುಖ ದೇಶಗಳ ಪಂದ್ಯಗಳ ಫಲಿತಾಂಶದ ಮೇಲೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ನಡೆಯುತ್ತಿದೆ. ಇಲ್ಲಿ ಒಟ್ಟು 9 ಟೆಸ್ಟ್ ಆಡುವ ರಾಷ್ಟ್ರಗಳು ಕಾಣಿಸಿಕೊಳ್ಳುತ್ತಿದ್ದು, ಅದರಂತೆ ಪಾಯಿಂಟ್ಸ್ ಟೇಬಲ್ನಲ್ಲಿ ಮೊದಲ ಎರಡು ಸ್ಥಾನಗಳನ್ನು ಪಡೆಯುವ ತಂಡಗಳು ಫೈನಲ್ ಆಡಲಿದೆ. ಆದರೆ ಇಲ್ಲಿ ಗೆಲುವಿನ ಶೇಕಡಾವಾರು (ಪರ್ಸಂಟೇಜ್) ಮೇಲೆ ಪಾಯಿಂಟ್ಸ್ ಟೇಬಲ್ನಲ್ಲಿ ಸ್ಥಾನ ನಿಗದಿಯಾಗಲಿದೆ. ಅದರಂತೆ ಗೆಲುವುಗಳ ಸಂಖ್ಯೆ, ಡ್ರಾ ಪಂದ್ಯಗಳ ಸಂಖ್ಯೆ ಕೂಡ ಇಲ್ಲಿ ಗಣನೆಗೆ ಬರಲಿದೆ. ಇದರಿಂದ ಹೆಚ್ಚು ಪಂದ್ಯ ಗೆದ್ದ ತಂಡ ಅಧಿಕ ಪಾಯಿಂಟ್ ಪಡೆದರೂ, ಗೆಲುವು ಹಾಗೂ ಡ್ರಾ ಸಾಧಿಸಿದ ತಂಡ ಪಾಯಿಂಟ್ ಟೇಬಲ್ನಲ್ಲಿ ಮೇಲೇರಬಹುದು.
ಅಂದರೆ ಇಲ್ಲಿ ಪ್ರತಿ ಪಂದ್ಯಕ್ಕೆ 12 ಅಂಕ ನಿಗದಿಪಡಿಸಲಾಗಿದೆ. ಹಾಗೆಯೇ ಪಂದ್ಯ ಟೈ ಆದರೆ 6 ಅಂಕ ಹಾಗೂ ಪಂದ್ಯ ಡ್ರಾ ಆದರೆ 4 ಅಂಕ ನೀಡಲಾಗುತ್ತದೆ. ಇದರಿಂದ ಸರಣಿಗಳ ಪಂದ್ಯಾವಳಿಯ ಲೆಕ್ಕಚಾರ ಸಮಗೊಳ್ಳಲಿದೆ. ಇಲ್ಲಿ ಗೆದ್ದ ಪಂದ್ಯಗಳಿಗೆ ಮತ್ತು ಡ್ರಾ ಪಂದ್ಯಗಳಿಗೆ ಅನುಸಾರವಾಗಿ ಶೇಕಡಾವಾರಿನಂತೆ ತಂಡಗಳು ಪಾಯಿಂಟ್ಸ್ ಟೇಬಲ್ನಲ್ಲಿ ರ್‍ಯಾಂಕ್ ಪಡೆದುಕೊಳ್ಳುತ್ತವೆ. ಇದರಿಂದ ಪಂದ್ಯಗಳಿಗೆ ಅಥವಾ ಸರಣಿಗೆ ಅನುಸಾರವಾಗಿ ಶ್ರೇಯಾಂಕ ಪಟ್ಟಿ ಬದಲಾಗಬಹುದು. ಅಲ್ಲದೆ ಪಾಯಿಂಟ್ ಟೇಬಲ್ನಲ್ಲೂ ಪಂದ್ಯಕ್ಕನುಸಾರವಾಗಿ ಪೈಪೋಟಿ ಕಂಡು ಬರಲಿದೆ. ಅಂತಿಮವಾಗಿ ಪಾಯಿಂಟ್ಸ್ ಟೇಬಲ್ನಲ್ಲಿ ಮೊದಲ ಮತ್ತು ಎರಡನೇ ಸ್ಥಾನ ಪಡೆಯುವ ತಂಡಗಳು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯವಾಡಲಿದೆ.
ಎಷ್ಟು ಪಂದ್ಯ ನಡೆಯಲಿದೆ? ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ 2021 ರಿಂದ 2023 ರ ಒಳಗೆ ಒಂದು ತಂಡವು ಒಟ್ಟು 6 ಟೆಸ್ಟ್ ಸರಣಿಗಳನ್ನು ಆಡಲಿದೆ. ಇದರಲ್ಲಿ ಮೂರು ಟೆಸ್ಟ್ ಸರಣಿ ತವರಿನಲ್ಲಿ ನಡೆದರೆ ಮತ್ತು ಮೂರು ವಿದೇಶಿ ಸರಣಿಗಳನ್ನು ಆಡಲಿದೆ. ಭಾರತ ತಂಡವು ನ್ಯೂಜಿಲೆಂಡ್, ಶ್ರೀಲಂಕಾ ಮತ್ತು ಆಸ್ಟ್ರೇಲಿಯಾ ತಂಡಗಳನ್ನು ತಮ್ಮ ಮನೆಯಲ್ಲಿ ಎದುರಿಸಲಿದೆ. ಹಾಗೆಯೇ ಇಂಗ್ಲೆಂಡ್, ದಕ್ಷಿಣ ಆಫ್ರಿಕಾ ಮತ್ತು ಬಾಂಗ್ಲಾದೇಶ ಪ್ರವಾಸ ಸರಣಿ ಆಡಲಿದೆ.