IND vs AUS: ಕಾಕತಾಳೀಯವಾದರೂ ಸತ್ಯ; ದೇವಸ್ಥಾನಕ್ಕೆ ಭೇಟಿ ನೀಡಿದ ಬಳಿಕ ಶತಕ ಬಾರಿಸುವ ಕೊಹ್ಲಿ!

Virat Kohli: ಅದರಲ್ಲೂ ಈ 3 ಶತಕಗಳ ವಿಶೇಷವೆನೆಂದರೆ, ದೇವಸ್ಥಾನಕ್ಕೆ ಭೇಟಿ ನೀಡಿದ ಬಳಿಕ ಈ ಮೂರೂ ಶತಕಗಳು ಕೊಹ್ಲಿ ಬ್ಯಾಟ್​ನಿಂದ ಹೊರಬಂದಿವೆ.

IND vs AUS: ಕಾಕತಾಳೀಯವಾದರೂ ಸತ್ಯ; ದೇವಸ್ಥಾನಕ್ಕೆ ಭೇಟಿ ನೀಡಿದ ಬಳಿಕ ಶತಕ ಬಾರಿಸುವ ಕೊಹ್ಲಿ!
ದೇವಸ್ಥಾನಕ್ಕೆ ಭೇಟಿ ನೀಡಿದ್ದ ಕೊಹ್ಲಿ ದಂಪತಿಗಳು
Follow us
ಪೃಥ್ವಿಶಂಕರ
|

Updated on:Mar 12, 2023 | 2:51 PM

ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ (India Vs Australia) ವಿರಾಟ್ ಕೊಹ್ಲಿ (Virat Kohli) ಶತಕ ಸಿಡಿಸಿದ್ದಾರೆ. ಏಕದಿನ ಹಾಗೂ ಟಿ20 ಮಾದರಯಲ್ಲಿ ಶತಕ ಸಿಡಿಸಿ ತನ್ನ ಶತಕಗಳ ಬರವನ್ನು ನೀಗಿಸಿಕೊಂಡಿದ್ದ ಕೊಹ್ಲಿಗೆ, ಟೆಸ್ಟ್ ಕ್ರಿಕೆಟ್​ನಲ್ಲಿ ಮಾತ್ರ ಶತಕ ಸಿಡಿಸುವುದು ಕಷ್ಟಕರವಾಗಿತ್ತು. 2019 ರಲ್ಲಿ ಬಾಂಗ್ಲಾ ವಿರುದ್ಧ ಟೆಸ್ಟ್ ಶತಕ ಬಾರಿಸಿದ್ದ ಕೊಹ್ಲಿಯ ಬ್ಯಾಟ್ ಆ ಬಳಿಕ ಮೌನವಾಗಿತ್ತು. ಆದರೆ ಈಗ ತಮ್ಮ ವೃತ್ತಿಜೀವನದ 75ನೇ ಶತಕ ಮತ್ತು ಟೆಸ್ಟ್ ವೃತ್ತಿಜೀವನದ 28ನೇ ಶತಕ ಸಿಡಿಸಿರುವ ಕೊಹ್ಲಿಗೆ ಟೆಸ್ಟ್ ವೃತ್ತಿಜೀವನದ ಪುನರ್​ಜನ್ಮ ಸಿಕ್ಕಂತ್ತಾಗಿದೆ. ಅದರಲ್ಲೂ ಕಳೆದ 2 ತಿಂಗಳಿಂದ ಅದ್ಭುತ ಫಾರ್ಮ್​ನಲ್ಲಿರುವ ಕೊಹ್ಲಿ ಬ್ಯಾಟ್‌ನಿಂದ 3 ಶತಕಗಳು ಹೊರಬಂದಿವೆ. ಅದರಲ್ಲೂ ಈ 3 ಶತಕಗಳ ವಿಶೇಷವೆನೆಂದರೆ, ದೇವಸ್ಥಾನಕ್ಕೆ ಭೇಟಿ ನೀಡಿದ ಬಳಿಕ ಈ ಮೂರೂ ಶತಕಗಳು ಕೊಹ್ಲಿ ಬ್ಯಾಟ್​ನಿಂದ ಹೊರಬಂದಿವೆ. ಇದು ಕಾಕತಾಳೀಯವಾದರೂ ಸತ್ಯವಾಗಿದೆ. ಅದಕ್ಕೆ ಪೂರವೆಯೂ ಇದೆ.

ಮಹಾಕಾಳೇಶ್ವರ ಮಂಧಿರಕ್ಕೆ ಭೇಟಿ

ವಾಸ್ತವವಾಗಿ ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಕೊಹ್ಲಿ ತಂಡದಲ್ಲಿದ್ದರೂ ಇಲ್ಲದಂತ್ತಾಗಿದ್ದರು. ಇದಕ್ಕೆ ಕಾರಣ ಅವರ ಆಟ. ಇಡೀ ಸರಣಿಯಲ್ಲಿ ಕೊಹ್ಲಿ ಬ್ಯಾಟ್​ನಿಂದ ಒಂದೇ ಒಂದು ಹೇಳಿಕೊಳ್ಳುವಂತಹ ಇನ್ನಿಂಗ್ಸ್ ಹೊರಬಂದಿರಲಿಲ್ಲ. ಮೊದಲೆರಡು ಟೆಸ್ಟ್ ಪಂದ್ಯಗಳಲ್ಲಿ ಟೀಂ ಇಂಡಿಯಾ ಗೆದ್ದಿದ್ದರಿಂದ ಕೊಹ್ಲಿ ಕಳಪೆ ಫಾರ್ಮ್​ ಬಗ್ಗೆ ಹೆಚ್ಚಿನ ಟೀಕೆ ಕೇಳಿಬಂದಿರಲಿಲ್ಲ. ಆದರೆ ಇಂದೋರ್ ಟೆಸ್ಟ್​ನಲ್ಲಿ ಟೀಂ ಇಂಡಿಯಾ ಹೀನಾಯ ಸೋಲು ಅನುಭವಿಸಿದ ಬಳಿಕ ಕೊಹ್ಲಿಯನ್ನು ಟೆಸ್ಟ್ ತಂಡದಿಂದ ಕೈಬಿಡಬೇಕು ಎಂಬ ಕೂಗು ಕೇಳಲಾರಂಭಿಸಿತು. ಕೊಹ್ಲಿಗೂ ಈ ಕೂಗು ಕೇಳಿಸಿತು ಎಂದು ತೋರುತ್ತದೆ. ಹೀಗಾಗಿ ಕೊಹ್ಲಿ 4ನೇ ಟೆಸ್ಟ್ ಆರಂಭಕ್ಕೂ ಮುನ್ನ ಮಹಾಕಾಳೇಶ್ವರ ಮಂಧಿರಕ್ಕೆ ಭೇಟಿ ನೀಡಲು ಉಜ್ಜಯಿನಿಗೆ ತೆರಳಿದ್ದರು. ಅಲ್ಲಿ ಭಸ್ಮ ಆರತಿಯಲ್ಲಿಯೂ ಭಾಗವಹಿಸಿದ್ದರು. ಆ ಬಳಿಕ ನೆರವಾಗಿ ಟೀಂ ಇಂಡಿಯಾವನ್ನು ಸೇರಿಕೊಂಡಿದ್ದ ಕೊಹ್ಲಿ ಇದೀಗ ತಮ್ಮ ವೃತ್ತಿಜೀವನದ 75 ನೇ ಶತಕ ಬಾರಿಸಿ ಮಿಂಚಿದ್ದಾರೆ.

IND vs AUS: ಕೊನೆಗೂ ನೀಗಿತು ಟೆಸ್ಟ್ ಶತಕದ ಬರ; 75ನೇ ಶತಕ ಸಿಡಿಸಿ ಮಿಂಚಿದ ಕಿಂಗ್ ಕೊಹ್ಲಿ..!

ನೀಮ್ ಕರೋಲಿ ಬಾಬಾನ ದರ್ಶನ

ಇದಕ್ಕೂ ಮೊದಲು, ವರ್ಷದ ಆರಂಭದಲ್ಲಿ ವೃಂದಾವನದಲ್ಲಿರುವ ನೀಮ್ ಕರೋಲಿ ಬಾಬಾ ಅವರ ಆಶ್ರಮಕ್ಕೆ ಭೇಟಿ ನೀಡಿದ್ದ ಕೊಹ್ಲಿ, ನಂತರ ಮುಂದಿನ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಗುವಾಹಟಿಯಲ್ಲಿ 113 ರನ್‌ಗಳ ಅಬ್ಬರದ ಇನ್ನಿಂಗ್ಸ್ ಆಡಿದ್ದರು. ಆ ಬಳಿಕ ಶ್ರೀಲಂಕಾ ವಿರುದ್ಧ ತಿರುವನಂತಪುರಂನಲ್ಲಿಯೂ ಶತಕ ಸಿಡಿಸಿದ್ದ ಕೊಹ್ಲಿ ಅಜೇಯ 166 ರನ್​ಗಳ ಇನ್ನಿಂಗ್ಸ್ ಆಡಿದ್ದರು. ಈ ಎರಡು ನಿದರ್ಶನಗಳ ಹೊರತಾಗಿಯೂ, ಸುಮಾರು 3 ವರ್ಷಗಳಿಂದ ಏಕದಿನ ಮಾದರಿಯಲ್ಲಿ ಶತಕ ಸಿಡಿಸಲಾಗದೆ ಬಸವಳಿದಿದ್ದ ಕೊಹ್ಲಿ, ಕಳೆದ ವರ್ಷ ನವೆಂಬರ್‌ನಲ್ಲಿ ಉತ್ತರಾಖಂಡದ ನೀಮ್ ಕರೋಲಿ ಬಾಬಾ ಆಶ್ರಮಕ್ಕೆ ಭೇಟಿ ನೀಡಿದ್ದರು. ಆ ನಂತರ ಬಾಂಗ್ಲಾದೇಶ ವಿರುದ್ಧ ನಡೆದ ಏಕದಿನ ಸರಣಿಯಲ್ಲಿ ಕೊಹ್ಲಿ ಬ್ಯಾಟ್ ಆಗಸ ನೋಡಿತ್ತು. ಇದರೊಂದಿಗೆ 3 ವರ್ಷಗಳ ಏಕದಿನ ಶತಕದ ಬರವನ್ನು ಕೊಹ್ಲಿ ನೀಗಿಸಿಕೊಂಡಿದ್ದರು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:48 pm, Sun, 12 March 23