AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs AUS: ಜಡೇಜಾ ಬೆರಳಿಗೆ ಸವರಿಕೊಂಡಿದ್ದೇನು? ಆಸ್ಟ್ರೇಲಿಯನ್ನರ ಹುನ್ನಾರಕ್ಕೆ ಸ್ಪಷ್ಟೀಕರಣ ನೀಡಿದ ಬಿಸಿಸಿಐ

IND vs AUS: ಅಂದಹಾಗೆ, 5 ವರ್ಷಗಳ ಹಿಂದೆ ಇದೇ ಆಸ್ಟ್ರೇಲಿಯಾ ತಂಡದ ಆಟಗಾರರು ಚೆಂಡನ್ನು ವಿರೋಪಗೊಳಿಸಿದ ಆರೋಪದಡಿ ಕ್ರಿಕೆಟ್ ಜಗತ್ತಿನ ಮುಂದೆ ತಲೆ ತಗ್ಗಿಸಿದ್ದರು.

IND vs AUS: ಜಡೇಜಾ ಬೆರಳಿಗೆ ಸವರಿಕೊಂಡಿದ್ದೇನು? ಆಸ್ಟ್ರೇಲಿಯನ್ನರ ಹುನ್ನಾರಕ್ಕೆ ಸ್ಪಷ್ಟೀಕರಣ ನೀಡಿದ ಬಿಸಿಸಿಐ
ರವೀಂದ್ರ ಜಡೇಜಾ ವಿವಾದ
TV9 Web
| Edited By: |

Updated on:Feb 10, 2023 | 10:53 AM

Share

ತಾನು ಗಾಜಿನ‌ ಮನೆಯಲ್ಲಿದ್ದುಕೊಂಡು ಕಂಡವರ ಮನೆಗೆ ಕಲ್ಲು ಹೊಡೀಬಾರ್ದು ಎಂಬ ನಾಣ್ಣುಡಿ ಯಾರಿಗೆ ಸರಿ ಹೊಂದುತ್ತದೋ ಇಲ್ಲವೋ, ಆದರೆ ಆಸ್ಟ್ರೇಲಿಯಾ ಕ್ರಿಕೆಟ್​ ಮಾಧ್ಯಮ ಮತ್ತು ಅಭಿಮಾನಿಗಳಿಗೆ ಮಾತ್ರ ಈ ಮಾತು ಹೇಳಿ ಮಾಡಿಸಿದಂತಿದೆ. ನಾಗ್ಪುರದಲ್ಲಿ ನಡೆಯುತ್ತಿರುವ ಭಾರತ ವಿರುದ್ಧದ ಟೆಸ್ಟ್‌ನ ಮೊದಲ ದಿನದಂದು ಆಸ್ಟ್ರೇಲಿಯಾ (India vs Australia) ತಂಡದ ಹೀನಾಯ ಪ್ರದರ್ಶನ ಕಂಡ ಆಸ್ಟ್ರೇಲಿಯನ್ ಅಭಿಮಾನಿಗಳು ಮತ್ತು ಮಾಧ್ಯಮಗಳು ಟೀಂ ಇಂಡಿಯಾ (Team India) ಆಟಗಾರರನ್ನು ಟಾರ್ಗೆಟ್ ಮಾಡಲು ಆರಂಭಿಸಿವೆ. ಟೆಸ್ಟ್ ಸರಣಿಯ ಆರಂಭಕ್ಕೂ ಮೊದಲು ಪಿಚ್ ಬಗ್ಗೆ ಅಪಸ್ವರ ಎತ್ತಿದ್ದವರು ಇದೀಗ ಬೌಲರ್​ಗಳ ಮೇಲೆಯೂ ಸಂಶಯ ಹೊರಹಾಕಿದ್ದಾರೆ. ಆಸೀಸ್ ಅಭಿಮಾನಿಗಳು, ಮಾಧ್ಯಮ ಹಾಗೂ ಮಾಜಿ ನಾಯಕ ಟಿಮ್ ಪೈನ್ ಸೇರಿದಂತೆ ಆಸ್ಟ್ರೇಲಿಯಾದ ಮಾಜಿ ಆಟಗಾರರು ಟೀಂ ಇಂಡಿಯಾ ಆಲ್​ರೌಂಡರ್ ರವೀಂದ್ರ ಜಡೇಜಾ (Ravindra Jadeja) ಮೇಲೆ ಪ್ರಶ್ನೆಗಳನ್ನು ಎತ್ತಿದ್ದಾರೆ.

5 ವಿಕೆಟ್ ಪಡೆದು ಮಿಂಚಿದ ಜಡೇಜಾ

ವಾಸ್ತವವಾಗಿ ಗುರುವಾರದಿಂದ ಆರಂಭವಾಗಿರುವ ನಾಗ್ಪುರ ಟೆಸ್ಟ್‌ನ ಮೊದಲ ದಿನದಂದು ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡ ತನ್ನ ಮೊದಲ ಇನ್ನಿಂಗ್ಸ್​ನಲ್ಲಿ ಕೇವಲ 177 ರನ್‌ಗಳಿಗೆ ಆಲೌಟ್ ಆಯಿತು. ಜಡೇಜಾ ಸ್ಪಿನ್ ದಾಳಿಗೆ ನಲುಗಿದ ಆಸ್ಟ್ರೇಲಿಯಾದ ಸ್ಟಾರ್ ಬ್ಯಾಟ್ಸ್​ಮನ್​ಗಳು ಒಬ್ಬರ ಹಿಂದೆ ಒಬ್ಬರಂತೆ ಪೆವಿಲಿಯನ್ ಸೇರಿಕೊಂಡರು. ಬರೋಬ್ಬರಿ 5 ತಿಂಗಳ ನಂತರ ಮೈದಾನಕ್ಕೆ ಮರಳಿದ ಜಡೇಜಾ 5 ವಿಕೆಟ್ ಪಡೆದು ಮಿಂಚಿದರು. ಅದಾಗ್ಯೂ, ಈ ನಡುವೆ ಆಸೀಸ್ ಮೀಡಿಯಾ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ಜಡೇಜಾ ಅವರ ವೀಡಿಯೊವೊಂದು ಸಖತ್ ವೈರಲ್ ಆಗಿದ್ದು, ಇದು ಹೊಸ ಚರ್ಚೆಯನ್ನು ಹುಟ್ಟುಹಾಕಿದ್ದಲ್ಲದೆ, ಆಸ್ಟ್ರೇಲಿಯನ್ನರು ಟೀಂ ಇಂಡಿಯಾದ ಮೇಲೆ ಗೂಬೆ ಕೂರಿಸುವ ಹುನ್ನಾರ ಮಾಡಲಾರಂಭಿಸಿದ್ದಾರೆ.

IND vs AUS: ಎರಡನೇ ದಿನದಾಟದ ಮೇಲೆ ಎಲ್ಲರ ಕಣ್ಣು

ಪಂದ್ಯದ ಎರಡನೇ ಸೆಷನ್‌ನಲ್ಲಿ ಬೌಲಿಂಗ್ ಮಾಡುವ ವೇಳೆ ಜಡೇಜಾ ತಮ್ಮ ಬೆರಳಿಗೆ ಏನನ್ನೋ ಹಚ್ಚಿಕೊಳ್ಳುತ್ತಿರುವ ವೀಡಿಯೊವನ್ನು ಆಸ್ಟ್ರೇಲಿಯಾದ ನೆಟ್ಟಿಗರೊಬ್ಬರು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಜಡೇಜಾ, ಮೊಹಮ್ಮದ್ ಸಿರಾಜ್‌ ಬಳಿ ಏನನ್ನೋ ತೆಗೆದುಕೊಂಡು ಎಡ ಬೆರಳಿಗೆ ಉಜ್ಜಿಕೊಳ್ಳುತ್ತಿರುವ ದೃಶ್ಯವಿದೆ. ಈ ಬಗ್ಗೆ ಆಸ್ಟ್ರೇಲಿಯಾದ ಮಾಜಿ ನಾಯಕ ಟಿಮ್ ಪೈನ್ ಅವರನ್ನು ಆಸ್ಟ್ರೇಲಿಯಾ ಅಭಿಮಾನಿಯೊಬ್ಬರು ಪ್ರಶ್ನಿಸಿದ್ದು, ಪೈನ್ ಕುತೂಹಲಕಾರಿಯಾಗಿ ಉತ್ತರಿಸಿದ್ದಾರೆ.

ಸ್ಪಷ್ಟೀಕರಣ ನೀಡಿದ ಬಿಸಿಸಿಐ

ಆಸ್ಟ್ರೇಲಿಯಾದ ಪ್ರಸಿದ್ಧ ಕ್ರಿಕೆಟ್ ಚಾನೆಲ್ ಫಾಕ್ಸ್ ಕ್ರಿಕೆಟ್ ಕೂಡ ಇದರ ಬಗ್ಗೆ ವರದಿ ಮಾಡಿದ್ದು, ಜಡೇಜಾ ಏನು ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂಬ ಪ್ರಶ್ನೆಗಳನ್ನು ಎತ್ತಿದೆ. ಆಸ್ಟ್ರೇಲಿಯನ್ ಮಾಧ್ಯಮಗಳು ಕ್ರಿಕೆಟ್ ಕಳ್ಳಾಟದ ಬಗ್ಗೆ ಬಹಿರಂಗವಾಗಿ ಮಾತನಾಡದಿದ್ದರೂ, ಪರೋಕ್ಷವಾಗಿ ಜಡೇಜಾ, ಬೌಲಿಂಗ್​ಗೆ ಸಹಾಯಕವಾಗುವಂತಹ ಯಾವುದೇ ಮುಲಾಮನ್ನು ಬಳಸಿದ್ದಾರೆ ಎಂಬುದು ಅವರ ವಾದವಾಗಿದೆ. ಆದರೆ, ಜಡೇಜಾ ಬೆರಳಿನ ನೋವನ್ನು ಕಡಿಮೆ ಮಾಡುವ ಸಲುವಾಘಿ ಮುಲಾಮೊಂದನ್ನು ಹಚ್ಚಿಕೊಂಡಿದ್ದಾರೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಸ್ಪಷ್ಟಪಡಿಸಿದೆ.

ಕಳ್ಳಾಟ ಆಡಿ ಸಿಕ್ಕಿ ಬಿದ್ದಿದ್ದ ಆಸೀಸ್ ಆಟಗಾರರು

ಅಂದಹಾಗೆ, 5 ವರ್ಷಗಳ ಹಿಂದೆ ಇದೇ ಆಸ್ಟ್ರೇಲಿಯಾ ತಂಡದ ಆಟಗಾರರು ಚೆಂಡನ್ನು ವಿರೋಪಗೊಳಿಸಿದ ಆರೋಪದಡಿ ಕ್ರಿಕೆಟ್ ಜಗತ್ತಿನ ಮುಂದೆ ತಲೆ ತಗ್ಗಿಸಿದ್ದರು. ವಾಸ್ತವವಾಗಿ 2018 ರಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ, ತಂಡದ ನಾಯಕ ಸ್ಟೀವ್ ಸ್ಮಿತ್, ಉಪನಾಯಕ ಡೇವಿಡ್ ವಾರ್ನರ್ ಮತ್ತು ಯುವ ಬ್ಯಾಟ್ಸ್‌ಮನ್ ಕ್ಯಾಮರೂನ್ ಬ್ಯಾಂಕ್ರಾಫ್ಟ್ ಚೆಂಡನ್ನು ಸ್ಯಾಂಡ್‌ಪೇಪರ್​ನಿಂದ ಉಜ್ಜುವ ವೇಳೆ ಕ್ಯಾಮರ ಕಣ್ಣಿನಲ್ಲಿ ಸಿಕ್ಕಿ ಹಾಕಿಕೊಂಡಿದ್ದರು. ಇದರ ನಂತರ, ಮೂವರಿಗೂ ಒಂದು ವರ್ಷದವರೆಗೆ ಕ್ರಿಕೆಟ್​ನಿಂದ ನಿಷೇಧ ಹೇರಲಾಗಿತ್ತು. ಈ ಆಟಗಾರರ ಪೈಕಿ ಡೇವಿಡ್ ವಾರ್ನರ್ ಹಾಗೂ ಸ್ಟೀವ್ ಸ್ಮಿತ್ ಸದ್ಯ ಭಾರತ ಪ್ರವಾಸದಲ್ಲಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:52 am, Fri, 10 February 23