IND vs AUS: ‘ಸರಣಿಗೆ ನನ್ನ ಹೆಸರಿಟ್ಟು ಈ ರೀತಿ ಮಾಡುವುದು ಸರಿಯಲ್ಲ‘; ಗವಾಸ್ಕರ್ ಅಸಮಾಧಾನ
Border-Gavaskar Trophy: ಆಸ್ಟ್ರೇಲಿಯಾ ಬಾರ್ಡರ್-ಗವಾಸ್ಕರ್ ಟ್ರೋಫಿ ಗೆದ್ದ ನಂತರ, ಸುನಿಲ್ ಗವಾಸ್ಕರ್ ಅವರನ್ನು ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಆಹ್ವಾನಿಸದಿರುವುದು ವಿವಾದಕ್ಕೆ ಕಾರಣವಾಗಿದೆ. ಗವಾಸ್ಕರ್ ಅವರು ಈ ಬಗ್ಗೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕ್ರಿಕೆಟ್ ಆಸ್ಟ್ರೇಲಿಯಾದ ಈ ಕ್ರಿಯೆ ಟೀಕೆಗೆ ಗುರಿಯಾಗಿದೆ. ಗವಾಸ್ಕರ್ ಅವರನ್ನು ಆಹ್ವಾನಿಸದಿರುವುದಕ್ಕೆ ಕಾರಣಗಳ ಬಗ್ಗೆ ಚರ್ಚೆಗಳು ನಡೆಯುತ್ತಿವೆ.
ಸಿಡ್ನಿ ಟೆಸ್ಟ್‌ನಲ್ಲಿ ಟೀಂ ಇಂಡಿಯಾವನ್ನು ಸೋಲಿಸುವ ಮೂಲಕ ಆಸ್ಟ್ರೇಲಿಯಾ ತಂಡ ಬಾರ್ಡರ್-ಗವಾಸ್ಕರ್ ಟ್ರೋಫಿಯನ್ನು ವಶಪಡಿಸಿಕೊಂಡಿದೆ. ಆಸ್ಟ್ರೇಲಿಯ ತಂಡ 10 ವರ್ಷಗಳ ಬಳಿಕ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಭಾರತ ತಂಡವನ್ನು ಸೋಲಿಸುವುದರೊಂದಿಗೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಗೂ ಟಿಕೆಟ್ ಪಡೆದುಕೊಂಡಿದೆ. ಸಿಡ್ನಿ ಟೆಸ್ಟ್ ಮುಕ್ತಾಯದೊಂದಿಗೆ ಉಭಯ ತಂಡಗಳ ನಡುವಿನ ಟೆಸ್ಟ್ ಸರಣಿಗೂ ಅಂತ್ಯ ಹಾಡಲಾಯಿತು. ಹೀಗಾಗಿ ಪಂದ್ಯವನ್ನು ಗೆದ್ದ ನಂತರ, ಆಸ್ಟ್ರೇಲಿಯಾದ ಮಾಜಿ ಆಟಗಾರ ಅಲನ್ ಬಾರ್ಡರ್ ಆಸ್ಟ್ರೇಲಿಯಾದ ನಾಯಕ ಪ್ಯಾಟ್ ಕಮಿನ್ಸ್‌ಗೆ ಟ್ರೋಫಿಯನ್ನು ಹಸ್ತಾಂತರಿಸಿದರು. ಆದರೆ ಇದೇ ವೇಳೆ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಅವರಿಗೆ ಅವಮಾನವಾಗುವಂತಹ ಘಟನೆ ನಡೆದಿದೆ. ಇದನ್ನು ಸ್ವತಃ ಸುನಿಲ್ ಗವಾಸ್ಕರ್ ಅವರೇ ಹೇಳಿದ್ದು, ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದಾರೆ.
ಪ್ರಶಸ್ತಿ ಪ್ರಸ್ತುತಿಗೆ ಆಹ್ವಾನಿಸಲಿಲ್ಲ
ವಾಸ್ತವವಾಗಿ ಬಾರ್ಡರ್-ಗವಾಸ್ಕರ್ ಟ್ರೋಫಿಗೆ ಆಸ್ಟ್ರೇಲಿಯಾದ ಮಾಜಿ ಆಟಗಾರರಾದ ಅಲನ್ ಬಾರ್ಡರ್ ಮತ್ತು ಟೀಂ ಇಂಡಿಯಾದ ಮಾಜಿ ನಾಯಕ ಸುನಿಲ್ ಗವಾಸ್ಕರ್ ಅವರ ಹೆಸರನ್ನು ಇಡಲಾಗಿದೆ. ಹೀಗಿರುವಾಗ ಬಾರ್ಡರ್ ಜತೆಗೆ ಗವಾಸ್ಕರ್ ಕೂಡ ಪ್ರಶಸ್ತಿ ಪ್ರಧಾನ ವೇದಿಕೆಯಲ್ಲಿ ಇರಬೇಕಿತ್ತು. ಇದಕ್ಕೆ ಪೂರಕವಾಗಿ ಸುನಿಲ್ ಗವಾಸ್ಕರ್ ಕೂಡ ಮೈದಾನದಲ್ಲಿದ್ದರು. ವಾಸ್ತವವಾಗಿ ಗವಾಸ್ಕರ್ ಇಡೀ ಸರಣಿಯಲ್ಲಿ ವೀಕ್ಷಕ ವಿವರಣೆಗಾರನಾಗಿ ಕಾರ್ಯನಿರ್ವಹಿಸಿದ್ದರು. ಆದರೆ ಗವಾಸ್ಕರ್ ಮೈದಾನದಲ್ಲಿದ್ದರೂ ಅವರನ್ನು ಪ್ರಶಸ್ತಿ ಪ್ರಸ್ತುತಿಗೆ ಆಹ್ವಾನಿಸಲಿಲ್ಲ. ಇದು ಗವಾಸ್ಕರ್ ಅಸಮಾಧಾನಗೊಳ್ಳುವಂತೆ ಮಾಡಿದೆ.
His name is on the trophy, but Sunil Gavaskar was still left off the presentation dais after a thrilling Australia-India series.
The Indian great was less than happy. #AUSvIND
STORY ▶️ https://t.co/GFwagjr3VC pic.twitter.com/j4YaiwHQNe
— CODE Cricket (@codecricketau) January 5, 2025
ಆಹ್ವಾನಿಸದ ಬಗ್ಗೆ ಗವಾಸ್ಕರ್ ಹೇಳಿದ್ದೇನು?
ಅಲನ್ ಬಾರ್ಡರ್, ಆಸೀಸ್ ನಾಯಕ ಕಮ್ಮಿನ್ಸ್‌ಗೆ ಟ್ರೋಫಿ ಹಸ್ತಾಂತರಿಸುತ್ತಿದ್ದಾಗ, ಸುನಿಲ್ ಗವಾಸ್ಕರ್ ಬೌಂಡರಿ ಲೈನ್ ಬಳಿ ನಿಂತು ಚಪ್ಪಾಳೆ ತಟ್ಟುತ್ತಿದ್ದರು. ಆದರೆ ಗವಾಸ್ಕರ್ ಅವರನ್ನು ಸೌಜನ್ಯಕ್ಕಾದರೂ ವೇದಿಕೆಗೆ ಆಹ್ವಾನಿಸುವ ಕೆಲಸವನ್ನು ಕ್ರಿಕೆಟ್ ಆಸ್ಟ್ರೇಲಿಯಾ ಮಾಡಲಿಲ್ಲ. ಇದರಿಂದ ಬೇಸರಗೊಂಡಿರುವ ಗವಾಸ್ಕರ್ ಈ ಬಗ್ಗೆ ಮಾತನಾಡಿದ್ದು, ನಾನು ಪ್ರಶಸ್ತಿ ಪ್ರಸ್ತುತಿ ವೇಳೆ ಅಲ್ಲಿದ್ದಿದ್ದರೆ ಖಂಡಿತ ಖುಷಿಯಾಗುತ್ತಿತ್ತು. ಇದು ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯಾಗಿದ್ದು, ಆಸ್ಟ್ರೇಲಿಯಾ ಮತ್ತು ಭಾರತ ನಡುವಿನ ಪಂದ್ಯವಾಗಿದೆ.
ಪ್ರಶಸ್ತಿ ಪ್ರಸ್ತುತಿಯ ವಿಷಯದಲ್ಲಿ, ಆಸ್ಟ್ರೇಲಿಯಾ ಗೆಲ್ಲುವುದು ನನಗೆ ಮುಖ್ಯವಲ್ಲ. ಅವರು ಉತ್ತಮ ಕ್ರಿಕೆಟ್ ಆಡಿದರು ಆದ್ದರಿಂದ ಅವರು ಗೆದ್ದರು, ಪರವಾಗಿಲ್ಲ. ನಾನು ಭಾರತೀಯ ಎಂಬ ಕಾರಣಕ್ಕೆ ನನಗೆ ಟ್ರೋಫಿ ನೀಡಲು ಅವಕಾಶ ನೀಡಲಿಲ್ಲ. ನನ್ನ ಉತ್ತಮ ಸ್ನೇಹಿತ ಅಲನ್ ಬಾರ್ಡರ್ ಅವರೊಂದಿಗೆ ಟ್ರೋಫಿಯನ್ನು ಪ್ರಸ್ತುತಪಡಿಸಲು ನಾನು ಸಂತೋಷಪಡುತ್ತೇನೆ ಎಂದು ಗವಾಸ್ಕರ್ ಹೇಳಿಕೊಂಡಿದ್ದಾರೆ.
ಆಸ್ಟ್ರೇಲಿಯಾದ ಯೋಜನೆ ಹೀಗಿತ್ತು
ಮಾಹಿತಿ ಪ್ರಕಾರ ಸಿಡ್ನಿ ಟೆಸ್ಟ್ ಫಲಿತಾಂಶ ಆಧರಿಸಿ ಕ್ರಿಕೆಟ್ ಆಸ್ಟ್ರೇಲಿಯಾ ಗವಾಸ್ಕರ್ ಅವರನ್ನು ಪ್ರಶಸ್ತಿ ಪ್ರಸ್ತುತಿಗೆ ಕರೆದಿಲ್ಲ ಎಂದು ಹೇಳಲಾಗುತ್ತಿದೆ. ಸಿಡ್ನಿ ಪಂದ್ಯದಲ್ಲಿ ಭಾರತ ಗೆದ್ದಿದ್ದರೆ ಸುನಿಲ್ ಗವಾಸ್ಕರ್ ಟ್ರೋಫಿಯನ್ನು ಟೀಂ ಇಂಡಿಯಾಗೆ ಹಸ್ತಾಂತರಿಸುತ್ತಿದ್ದರು ಎನ್ನಲಾಗಿದೆ. ಭಾರತ ಗೆದ್ದಿದ್ದರೆ ಈಸರಣಿ ಡ್ರಾ ಆಗುತ್ತಿತ್ತು ಹಾಗಾಗಿ ಟ್ರೋಫಿ ಭಾರತದ ಬಳಿಯೇ ಉಳಿಯುತ್ತಿತ್ತು. ಆದರೆ ಆಸ್ಟ್ರೇಲಿಯಾ ಗೆದ್ದ ನಂತರ ಪ್ಯಾಟ್ ಕಮ್ಮಿನ್ಸ್‌ಗೆ ಟ್ರೋಫಿ ನೀಡಲು ಅಲನ್ ಬಾರ್ಡರ್ ಅವರನ್ನು ವೇದಿಕೆಗೆ ಕಳುಹಿಸಲು ನಿರ್ಧರಿಸಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಕ್ರಿಕೆಟ್ ಆಸ್ಟ್ರೇಲಿಯಾ ಮಾಡಿಕೊಂಡಿರುವ ಈ ಯೋಜನೆ ಬಹುಶಃ ಗವಾಸ್ಕರ್‌ಗೆ ತಿಳಿದಿರಲಿಲ್ಲ ಎಂದು ತೋರುತ್ತದೆ. ಹೀಗಾಗಿ ಅವರು ಈ ರೀತಿಯ ಪ್ರತಿಕ್ರಿಯೆ ನೀಡಿರುವ ಸಾಧ್ಯತೆಗಳಿವೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:48 pm, Sun, 5 January 25