ಒಬ್ಬ ಹಿಟ್ಟರ್, ಮತ್ತೊಬ್ಬ ಸ್ಪಿನ್ನರ್: 24 ವಿಕೆಟ್ ಕಬಳಿಸಿ ಮಿಂಚಿದ ವೀರೇಂದ್ರ ಸೆಹ್ವಾಗ್ ಪುತ್ರ
ಟೀಮ್ ಇಂಡಿಯಾದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಅವರ ಇಬ್ಬರೂ ಪುತ್ರರು ಕ್ರಿಕೆಟ್ ಜಗತ್ತಿನಲ್ಲಿ ತಮ್ಮದೆಯಾದ ಛಾಪು ಮೂಡಿಸುವ ವಿಶ್ವಾಸದಲ್ಲಿದ್ದಾರೆ. ಸೆಹ್ವಾಗ್ ಅವರ ಹಿರಿಯ ಮಗ ಇತ್ತೀಚೆಗೆ ಕೂಚ್ ಬೆಹಾರ್ ಟ್ರೋಫಿಯಲ್ಲಿ 297 ರನ್ ಗಳಿಸುವ ಮೂಲಕ ಸುದ್ದಿಯಾದರೆ, ಇದೀಗ ಅವರ ಕಿರಿಯ ಪುತ್ರ ವಿಜಯ್ ಮರ್ಚೆಂಟ್ ಟ್ರೋಫಿಯಲ್ಲಿ ಸ್ಪಿನ್ ಬೌಲಿಂಗ್ನೊಂದಿಗೆ ಮೋಡಿ ಮಾಡಿದ್ದಾರೆ.
ಭಾರತ ಕ್ರಿಕೆಟ್ ತಂಡದ ಲೆಜೆಂಡರಿ ಓಪನರ್ ವೀರೇಂದ್ರ ಸೆಹ್ವಾಗ್ ಆಕ್ರಮಣಕಾರಿ ಬ್ಯಾಟಿಂಗ್‌ಗೆ ಹೆಸರುವಾಸಿ. ಇದೀಗ ಸೆಹ್ವಾಗ್ ಅವರ ಪುತ್ರರಿಬ್ಬರೂ ತಂದೆಯ ಹಾದಿಯಲ್ಲಿದ್ದಾರೆ. ವೀರು ಅವರ ಹಿರಿಯ ಪುತ್ರ ಆರ್ಯವೀರ್ ದೆಹಲಿ ಅಂಡರ್-19 ತಂಡದ ಪರ ಕಣಕ್ಕಿಳಿಯುತ್ತಿದ್ದಾರೆ. ಮತ್ತೊಂದೆಡೆ ಕಿರಿಯ ಮಗ ವೇದಾಂತ್ ಸೆಹ್ವಾಗ್ ಕ್ರಿಕೆಟ್ ಅಂಗಳದಲ್ಲಿ ಸಂಚಲನವನ್ನು ಆರಂಭಿಸಿದ್ದಾರೆ. ವಿಶೇಷವೆಂದರೆ ವೇದಾಂತ್ ಬ್ಯಾಟ್ಸ್ಮನ್ ಅಲ್ಲ, ಬದಲಾಗಿ ಬೌಲರ್ ಆಗಿ ಮಿಂಚುವ ಪ್ರಯತ್ನದಲ್ಲಿದ್ದಾರೆ.
ಪ್ರಸ್ತುತ ನಡೆಯುತ್ತಿರುವ ವಿಜಯ್ ಮರ್ಚೆಂಟ್ ಟ್ರೋಫಿ ಟೂರ್ನಿಯಲ್ಲಿ ವೇದಾಂತ್ ಸೆಹ್ವಾಗ್ ಕಣಕ್ಕಿಳಿದಿದ್ದಾರೆ. 16 ವರ್ಷದೊಳಗಿನವರ ಈ ಟೂರ್ನಿಯಲ್ಲಿ ಆಫ್ ಸ್ಪಿನ್ನರ್ ಬೌಲರ್ ಆಗಿ ಕಾಣಿಸಿಕೊಂಡಿರುವ ವೇದಾಂತ್ ದೆಹಲಿ ಪರ ಅದ್ಭುತ ಬೌಲಿಂಗ್ ಪ್ರದರ್ಶಿಸಿದ್ದಾರೆ.
ಈ ಟೂರ್ನಿಯಲ್ಲಿ 5 ಪಂದ್ಯಗಳನ್ನಾಡಿರುವ 14 ವರ್ಷದ ವೇದಾಂತ್ ಈಗಾಗಲೇ ಒಟ್ಟು 24 ವಿಕೆಟ್ ಕಬಳಿಸಿದ್ದಾರೆ. ವೀರೇಂದ್ರ ಸೆಹ್ವಾಗ್ ಕೂಡ ತಮ್ಮ ಮಗನ ಬೌಲಿಂಗ್ ಅನ್ನು ಶ್ಲಾಘಿಸಿ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ.
ವೀರೇಂದ್ರ ಸೆಹ್ವಾಗ್ ಶೇರ್ ಮಾಡಿರುವ ವಿಡಿಯೋದಲ್ಲಿ ವೇದಾಂತ್ ಸೆಹ್ವಾಗ್ ಬೌಲಿಂಗ್ ಮಾಡುತ್ತಿರುವುದನ್ನು ಕಾಣಬಹುದು. ಅಲ್ಲದೆ 5 ಪಂದ್ಯಗಳಿಂದ 24 ವಿಕೆಟ್ ಕಬಳಿಸಿರುವ ಮಗನ ಸಾಧನೆಯನ್ನು ಸೆಹ್ವಾಗ್ ಕೊಂಡಾಡಿದ್ದಾರೆ.
ವೇದಾಂತ್ ಸೆಹ್ವಾಗ್ ಬೌಲಿಂಗ್ ವಿಡಿಯೋ
View this post on Instagram
ವೇದಾಂತ್ ಪರಾಕ್ರಮ:
2024-25ರ ವಿಜಯ್ ಮರ್ಚೆಂಟ್ ಟ್ರೋಫಿಯಲ್ಲಿ ವೇದಾಂತ್ ಸೆಹ್ವಾಗ್ ದೆಹಲಿ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದಾರೆ. ಈ ಟೂರ್ನಿಯಲ್ಲಿ ವೇದಾಂತ್ ಎರಡು ಬಾರಿ ಇನ್ನಿಂಗ್ಸ್‌ನಲ್ಲಿ 5 ವಿಕೆಟ್‌ಗಳನ್ನು ಪಡೆದಿರುವುದು ವಿಶೇಷ. ಇದರ ಜೊತೆಗೆ ಎರಡು ಬಾರಿ ತಲಾ 4 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ವೇದಾಂತ್ ಸೆಹ್ವಾಗ್ ಅವರನ್ನು ಹೊರತುಪಡಿಸಿ ದೆಹಲಿಯ ಯಾವುದೇ ಬೌಲರ್ 10 ವಿಕೆಟ್ ಪಡೆದಿಲ್ಲ ಎಂಬುದು ಇಲ್ಲಿ ಉಲ್ಲೇಖಾರ್ಹ.
ಇದನ್ನೂ ಓದಿ: ಹೀನಾಯ ಸೋಲುಗಳ ಸರಮಾಲೆ: ಟೀಮ್ ಇಂಡಿಯಾಗೆ ‘ಗಂಭೀರ’ ಸಮಸ್ಯೆ
ಆರ್ಯವೀರ್ ಅಬ್ಬರ:
ವೇದಾಂತಕ್ಕೂ ಮುನ್ನ ಆರ್ಯವೀರ್ ಸೆಹ್ವಾಗ್ ಕೂಡ ಎಲ್ಲರ ಗಮನ ಸೆಳೆದಿದ್ದರು. ಕೂಚ್ ಬೆಹಾರ್ ಟ್ರೋಫಿಯಲ್ಲಿ ದೆಹಲಿ ಅಂಡರ್-19 ತಂಡ ಪರ ಕಣಕ್ಕಿಳಿದಿದ್ದ ಆರ್ಯವೀರ್ 297 ರನ್‌ಗಳ ಸ್ಫೋಟಕ ಇನ್ನಿಂಗ್ಸ್ ಆಡಿದ್ದರು. ಈ ಮೂಲಕ ತಂದೆಯಂತೆ ಆಕ್ರಮಣಕಾರಿ ಬ್ಯಾಟಿಂಗ್ನೊಂದಿಗೆ ಆರ್ಯವೀರ್ ಸಂಚಲನ ಸೃಷ್ಟಿಸಿದ್ದರು. ಇದೀಗ ತಮ್ಮ ವೇದಾಂತ್ ಕೂಡ 24 ವಿಕೆಟ್ ಕಬಳಿಸಿ ಮೋಡಿ ಮಾಡಿದ್ದಾರೆ.
Published On - 1:31 pm, Sun, 5 January 25