IND vs ENG: 5 ಪಂದ್ಯಗಳ ಟೆಸ್ಟ್ ಸರಣಿಗಾಗಿ ಹೈದರಾಬಾದ್ಗೆ ಬಂದಿಳಿದ ಆಂಗ್ಲರು; ವಿಡಿಯೋ
IND vs ENG: ಭಾರತ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಗಾಗಿ ಇಂಗ್ಲೆಂಡ್ ಕ್ರಿಕೆಟ್ ತಂಡ ಹೈದರಾಬಾದ್ಗೆ ಬಂದಿಳಿದಿದೆ. ಉಭಯ ತಂಡಗಳ ಮೊದಲ ಟೆಸ್ಟ್ ಪಂದ್ಯ ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದೆ. ಹೀಗಾಗಿ ಆಂಗ್ಲ ಪಡೆ ದುಬೈನಿಂದ ಸೀದಾ ಹೈದರಾಬಾದ್ಗೆ ಬಂದಿಳಿದಿದೆ.

ಭಾರತ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಗಾಗಿ ಇಂಗ್ಲೆಂಡ್ ಕ್ರಿಕೆಟ್ ತಂಡ (India vs England) ಹೈದರಾಬಾದ್ಗೆ ಬಂದಿಳಿದಿದೆ. ಉಭಯ ತಂಡಗಳ ಮೊದಲ ಟೆಸ್ಟ್ ಪಂದ್ಯ ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ (Rajiv Gandhi International Stadium ) ನಡೆಯಲಿದೆ. ಹೀಗಾಗಿ ಆತಿಥೇಯ ಭಾರತ ಈಗಾಗಲೇ ಹೈದರಾಬಾದ್ ತಲುಪಿದ್ದು, ಅಲ್ಲಿ ಸಮರಾಭ್ಯಾಸ ಶುರು ಮಾಡಿದೆ. ಇತ್ತ ಇಂಗ್ಲೆಂಡ್ ತಂಡ ಕೂಡ ಭಾನುವಾರ ಸಂಜೆ ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದು, ಆಂಗ್ಲರಿಗೆ ಭರ್ಜರಿ ಸ್ವಾಗತ ಸಿಕ್ಕಿದೆ. ಇನ್ನು ಇಂಗ್ಲೆಂಡ್ ಮತ್ತು ಭಾರತ ನಡುವಿನ ಟೆಸ್ಟ್ ಸರಣಿಯು ಜನವರಿ 25 ರಂದು ಪ್ರಾರಂಭವಾಗಲಿದ್ದು, ಮಾರ್ಚ್ 11 ರಂದು ಧರ್ಮಶಾಲಾದಲ್ಲಿ ನಡೆಯಲ್ಲಿರುವ ಐದನೇ ಮತ್ತು ಕೊನೆಯ ಟೆಸ್ಟ್ ಪಂದ್ಯದೊಂದಿಗೆ ಮುಕ್ತಾಯಗೊಳ್ಳಲಿದೆ.
2012 ರಲ್ಲಿ ಕೊನೆಯ ಗೆಲುವು
ಹೈದರಾಬಾದ್ಗೆ ಬಂದಿಳಿದಿರುವ ಇಂಗ್ಲೆಂಡ್ ಪಡೆ ಇಂದಿನಿಂದ ಅಭ್ಯಾಸ ಆರಂಭಿಸಿದೆ. ವಾಸ್ತವವಾಗಿ ಈ ಐದು ಟೆಸ್ಟ್ ಪಂದ್ಯಗಳ ಸರಣಿಗಾಗಿ ಬಹಳ ಹಿಂದಿಯೇ ದುಬೈಗೆ ಹಾರಿದ್ದ ಆಂಗ್ಲರು, ಅಲ್ಲಿ ಕೆಲ ದಿನಗಳವರೆಗೆ ಅಭ್ಯಾಸ ನಡೆಸಿದ್ದರು. ಭಾರತದಂತಹ ಪರಿಸ್ಥಿತಿಗಳಲ್ಲಿ ಅಭ್ಯಾಸ ಮಾಡುವ ಸಲುವಾಗಿ ಬೆನ್ ಸ್ಟೋಕ್ಸ್ ಪಡೆ ದುಬೈನಲ್ಲಿ ಅಭ್ಯಾಸ ನಡೆಸಿತ್ತು. ಇಂಗ್ಲೆಂಡ್ ತಂಡಕ್ಕೆ ಈ ಸರಣಿ ಅತ್ಯಂತ ಮಹತ್ವದ್ದಾಗಿದೆ. ಏಕೆಂದರೆ 2012 ರಲ್ಲಿ ಭಾರತದ ನೆಲದಲ್ಲಿ ಕೊನೆಯ ಬಾರಿಗೆ ಟೆಸ್ಟ್ ಸರಣಿ ಗೆದ್ದಿದ್ದ ಆಂಗ್ಲರಿಗೆ ಆ ಬಳಿಕ ಟೀಂ ಇಂಡಿಯಾವನ್ನು ಅವರದ್ದೇ ನೆಲದಲ್ಲಿ ಮಣಿಸಲು ಸಾಧ್ಯವಾಗಿಲ್ಲ.
IND vs ENG: ಟೆಸ್ಟ್ನಲ್ಲಿ ಇಂಗ್ಲೆಂಡ್ ವಿರುದ್ಧ ಭಾರತದ ದಾಖಲೆ ಹೇಗಿದೆ ಗೊತ್ತಾ?
ಸತತ 16 ಟೆಸ್ಟ್ ಸರಣಿಯಲ್ಲಿ ಗೆಲುವು
ಇತ್ತ 2012 ರಲ್ಲಿ ತವರು ನೆಲದಲ್ಲಿ ಕೊನೆಯ ಬಾರಿಗೆ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯನ್ನು ಸೋತಿತ್ತು. ಇದಾದ ಬಳಿಕ ಟೀಂ ಇಂಡಿಯಾ ಭಾರತದಲ್ಲಿ 16 ಟೆಸ್ಟ್ ಸರಣಿಗಳನ್ನು ಆಡಿದ್ದು, ಎಲ್ಲವನ್ನೂ ಗೆದ್ದುಕೊಂಡಿದೆ. ಭಾರತ ತವರಿನಲ್ಲಿ ಕಳೆದ 46 ಟೆಸ್ಟ್ ಪಂದ್ಯಗಳಲ್ಲಿ ಕೇವಲ 3 ಪಂದ್ಯಗಳಲ್ಲಿ ಸೋತಿದ್ದರೆ, 36 ಟೆಸ್ಟ್ ಪಂದ್ಯಗಳನ್ನು ಗೆದ್ದಿದೆ. ಉಳಿದಂತೆ 7 ಟೆಸ್ಟ್ ಪಂದ್ಯಗಳು ಡ್ರಾ ಆಗಿವೆ. ಈ ಅಂಕಿಅಂಶಗಳನ್ನು ಗಮನಿಸಿದರೆ, ತಾಯ್ನಾಡಿನಲ್ಲಿ ಟೀಂ ಇಂಡಿಯಾ ಎಷ್ಟು ಬಲಿಷ್ಠವಾಗಿದೆ ಎಂಬುದು ತಿಳಿಯುತ್ತದೆ. ಹಾಗಾಗಿ ಈ ಬಾರಿಯಾದರೂ ಟೀಂ ಇಂಡಿಯಾವನ್ನು ಮಣಿಸುವ ಕನಸಿನೊಂದಿಗೆ ಇಂಗ್ಲೆಂಡ್ ತಂಡ ಭಾರತಕ್ಕೆ ಆಗಮನಿಸಿದೆ.
Hello, Hyderabad! 👋
The City of Pearls ⚪
🇮🇳 #INDvENG 🏴 | #EnglandCricket pic.twitter.com/hJLQFWkIgp
— England Cricket (@englandcricket) January 21, 2024
ಸರಣಿಗೂ ಮುನ್ನ ಆಂಗ್ಲ ತಂಡದಲ್ಲಿ ಬದಲಾವಣೆ
ಇಂಗ್ಲೆಂಡ್ ತಂಡದ ಯುವ ಬ್ಯಾಟ್ಸ್‌ಮನ್ ಹ್ಯಾರಿ ಬ್ರೂಕ್ ಭಾರತ ಟೆಸ್ಟ್ ಪ್ರವಾಸದಿಂದ ಹೊರಗುಳಿದಿದ್ದಾರೆ. ವೈಯಕ್ತಿಕ ಕಾರಣಗಳಿಂದ ಬ್ರೂಕ್ ಈ ಸರಣಿಯಿಂದ ತಮ್ಮ ಹೆಸರನ್ನು ಹಿಂಪಡೆದಿದ್ದು, ಅವರ ಜಾಗಕ್ಕೆ ಡಾನ್ ಲಾರೆನ್ಸ್ರನ್ನು ಬದಲಿಯಾಗಿ ಆಯ್ಕೆ ಮಾಡಿದೆ.
ಟೆಸ್ಟ್ ಸರಣಿಗೆ ಇಂಗ್ಲೆಂಡ್ ತಂಡ: ಬೆನ್ ಸ್ಟೋಕ್ಸ್ (ನಾಯಕ), ಝಾಕ್ ಕ್ರಾಲಿ, ಬೆನ್ ಡಕೆಟ್, ರೆಹಾನ್ ಅಹ್ಮದ್, ಜಾನಿ ಬೈರ್‌ಸ್ಟೋವ್ (ವಿಕೆಟ್ ಕೀಪರ್), ಶೋಯೆಬ್ ಬಶೀರ್, ಬೆನ್ ಫೋಕ್ಸ್ (ವಿಕೆಟ್ ಕೀಪರ್), ಜೇಮ್ಸ್ ಆಂಡರ್ಸನ್, ಗಸ್ ಅಟ್ಕಿನ್ಸನ್, ಟಾಮ್ ಹಾರ್ಟ್ಲಿ, ಜ್ಯಾಕ್ ಲೀಚ್, ಓಲಿ ಪೋಪ್, ಆಲಿ ರಾಬಿನ್ಸನ್, ಜೋ ರೂಟ್, ಮಾರ್ಕ್ ವುಡ್.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:55 pm, Mon, 22 January 24
