IND vs ENG: 3 ಪಂದ್ಯಗಳಲ್ಲೂ ಟಾಸ್ ಸೋತ ಗಿಲ್; ಭಾರತ ತಂಡದಲ್ಲಿ 3 ಬದಲಾವಣೆ

India vs England 3rd ODI: ಭಾರತ-ಇಂಗ್ಲೆಂಡ್ ODI ಸರಣಿ 1-1ರಲ್ಲಿ ಸಮಬಲಗೊಂಡಿದ್ದು, ಲಾರ್ಡ್ಸ್‌ನಲ್ಲಿ ನಿರ್ಣಾಯಕ 3ನೇ ಪಂದ್ಯ ನಡೆಯುತ್ತಿದೆ. ಟಾಸ್ ಗೆದ್ದ ಇಂಗ್ಲೆಂಡ್ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದೆ. ಬುಮ್ರಾ ಇಲ್ಲದೆ ಭಾರತ ಮೂರು ಬದಲಾವಣೆಗಳೊಂದಿಗೆ ಕಣಕ್ಕಿಳಿದಿದೆ. ಟಿ20 ಸೋಲಿನ ನಂತರ ODI ಸರಣಿ ಗೆಲ್ಲುವ ತವಕದಲ್ಲಿರುವ ಭಾರತಕ್ಕೆ, ಲಾರ್ಡ್ಸ್‌ನಲ್ಲಿ ಇಂಗ್ಲೆಂಡ್ ವಿರುದ್ಧ 22 ವರ್ಷಗಳ ಗೆಲುವಿನ ಬರ ನೀಗಿಸುವ ಸವಾಲಿದೆ.

IND vs ENG: 3 ಪಂದ್ಯಗಳಲ್ಲೂ ಟಾಸ್ ಸೋತ ಗಿಲ್; ಭಾರತ ತಂಡದಲ್ಲಿ 3 ಬದಲಾವಣೆ
Ind Vs Eng Toss

Updated on: Jul 19, 2026 | 3:15 PM

ಭಾರತ ಮತ್ತು ಇಂಗ್ಲೆಂಡ್ (India vs England) ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯು ಪ್ರಸ್ತುತ 1-1 ರಲ್ಲಿ ಸಮಬಲಗೊಂಡಿದೆ. ಎಡ್ಜ್‌ಬಾಸ್ಟನ್‌ನಲ್ಲಿ ನಡೆದ ಮೊದಲ ಪಂದ್ಯವನ್ನು ಭಾರತ 6 ವಿಕೆಟ್‌ಗಳಿಂದ ಗೆದ್ದುಕೊಂಡಿತು. ಏತನ್ಮಧ್ಯೆ, ಕಾರ್ಡಿಫ್‌ನಲ್ಲಿ ನಡೆದ ಪಂದ್ಯದಲ್ಲಿ ಇಂಗ್ಲೆಂಡ್ 4 ವಿಕೆಟ್‌ಗಳ ಜಯ ಸಾಧಿಸುವ ಮೂಲಕ ಸರಣಿಯನ್ನು ಜೀವಂತವಾಗಿರಿಸಿತು. ಇದೀಗ ಲಾರ್ಡ್ಸ್‌ನಲ್ಲಿ ಉಭಯ ತಂಡಗಳ ನಡುವಿನ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯ ನಡೆಯುತ್ತಿದೆ. ಈ ಪಂದ್ಯದಲ್ಲಿ ಗೆದ್ದ ತಂಡಕ್ಕೆ ಸರಣಿ ಕೈಸೇರಲಿದೆ. ಈಗಾಗಲೇ ಟಿ20 ಸರಣಿ ಸೋತಿರುವ ಟೀಂ ಇಂಡಿಯಾ ಏಕದಿನ ಸರಣಿ ಗೆಲುವಿನೊಂದಿಗೆ ಈ ಪ್ರವಾಸಕ್ಕೆ ಅಂತ್ಯ ಹಾಡಲು ನೋಡುತ್ತಿದೆ.

ಟಾಸ್ ಗೆದ್ದ ಇಂಗ್ಲೆಂಡ್‌ ಬ್ಯಾಟಿಂಗ್‌ ಆಯ್ಕೆ

ಈ ಸರಣಿ ನಿರ್ಧಾರಕ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್‌ ಮೊದಲು ಬ್ಯಾಟಿಂಗ್‌ ಮಾಡುತ್ತಿದೆ. ಇದರ ಜೊತೆಗೆ ಉಭಯ ತಂಡಗಳ ಆಡುವ ಹನ್ನೊಂದರ ಬಳಗವೂ ಹೊರಬಿದ್ದಿದೆ. ಅದರಂತೆ ಇಂಗ್ಲೆಂಡ್‌ ತಂಡದಲ್ಲಿ 1 ಬದಲಾವಣೆಯಾಗಿದ್ದರೆ, ಟೀಂ ಇಂಡಿಯಾದಲ್ಲಿ ಮೂರು ಬದಲಾವಣೆಗಳಾಗಿವೆ. ಜಸ್ಪ್ರೀತ್ ಬುಮ್ರಾ ಗಾಯದ ಕಾರಣದಿಂದಾಗಿ ಈ ಪಂದ್ಯದಿಂದ ಹೊರಗುಳಿದಿದ್ದಾರೆ. ಹಾಗೆಯೇ ವಾಷಿಂಗ್ಟನ್ ಸುಂದರ್ ಕೂಡ ಈ ಮೊದಲೇ ಗಾಯಗೊಂಡು ಪಂದ್ಯದಿಂದ ಹೊರಬಿದ್ದಿದ್ದರು. ಇವರಿಬ್ಬರ ಜೊತೆಗೆ ಶಿವಂ ದುಬೆ ಅವರನ್ನು ಈ ಪಂದ್ಯದಿಂದ ಕೈಬಿಡಲಾಗಿದೆ. ಈ ಮೂವರ ಬದಲಿಗೆ ಕೆಎಲ್ ರಾಹುಲ್, ಪ್ರಿನ್ಸ್ ಯಾದವ್ ಹಾಗೂ ಅರ್ಷದೀಪ್ ಸಿಂಗ್​ರನ್ನು ಆಡಿಸಲಾಗುತ್ತಿದೆ.

22 ವರ್ಷಗಳಿಂದ ಗೆಲುವಿನ ಬರ

ವಾಸ್ತವವಾಗಿ ಟೀಂ ಇಂಡಿಯಾಗೆ ಲಾರ್ಡ್ಸ್ ಮೈದಾನವು 1983 ರ ವಿಶ್ವಕಪ್ ಪ್ರಶಸ್ತಿ ಗೆಲುವು ಮತ್ತು 2002 ರ ನ್ಯಾಟ್‌ವೆಸ್ಟ್ ಟ್ರೋಫಿ ಫೈನಲ್‌ನಂತಹ ಸ್ಮರಣೀಯ ನೆನಪುಗಳಿಗೆ ಹೆಸರುವಾಸಿಯಾಗಿದೆ. ಆದರೆ ಕಟು ವಾಸ್ತವವೆಂದರೆ 2004 ರಿಂದ ಟೀಂ ಇಂಡಿಯಾ ಈ ಮೈದಾನದಲ್ಲಿ ಇಂಗ್ಲೆಂಡ್ ವಿರುದ್ಧ ಒಂದೇ ಒಂದು ಏಕದಿನ ಪಂದ್ಯವನ್ನು ಗೆದ್ದಿಲ್ಲ. ಲಾರ್ಡ್ಸ್‌ನಲ್ಲಿ ಭಾರತದ ಕೊನೆಯ ಏಕದಿನ ಗೆಲುವು ಸೆಪ್ಟೆಂಬರ್ 5, 2004 ರಂದು ಬಂದಿತು, ಆ ಪಂದ್ಯದಲ್ಲಿ ಸೌರವ್ ಗಂಗೂಲಿ ನಾಯಕತ್ವದಲ್ಲಿ ಭಾರತ ತಂಡವು ಇಂಗ್ಲೆಂಡ್ ತಂಡವನ್ನು 23 ರನ್‌ಗಳಿಂದ ಸೋಲಿಸಿತು. ಆ ಐತಿಹಾಸಿಕ ವಿಜಯದ ನಂತರ ಈಗ ಪೂರ್ಣ 22 ವರ್ಷಗಳು ಕಳೆದಿವೆ, ಆದರೆ ಟೀಂ ಇಂಡಿಯಾ ಇನ್ನೂ ಇಲ್ಲಿ ವಿಜಯವನ್ನು ಸವಿದಿಲ್ಲ.

IND vs ENG: ಲಾರ್ಡ್ಸ್ ಏಕದಿನ ಪಂದ್ಯಕ್ಕೂ ಮುನ್ನ ಭಾರತ ತಂಡದಲ್ಲಿ ಬದಲಾವಣೆ

ಉಭಯ ತಂಡಗಳ ಪ್ಲೇಯಿಂಗ್ 11

ಭಾರತ ತಂಡ: ಶುಭ್​ಮನ್ ಗಿಲ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್, ಕೆಎಲ್ ರಾಹುಲ್, ಅಕ್ಷರ್ ಪಟೇಲ್, ಅರ್ಷದೀಪ್ ಸಿಂಗ್, ಪ್ರಸಿದ್ಧ್ ಕೃಷ್ಣ, ಪ್ರಿನ್ಸ್ ಯಾದವ್, ಗುರ್ನೂರ್ ಬ್ರಾರ್.

ಇಂಗ್ಲೆಂಡ್‌ ತಂಡ: ಜಾಕೋಬ್ ಬೆಥೆಲ್, ಬೆನ್ ಡಕೆಟ್, ಜೋ ರೂಟ್, ಹ್ಯಾರಿ ಬ್ರೂಕ್ (ನಾಯಕ), ಜೋಸ್ ಬಟ್ಲರ್ (ವಿಕೆಟ್ ಕೀಪರ್), ಸ್ಯಾಮ್ ಕರನ್, ವಿಲ್ ಜ್ಯಾಕ್ಸ್, ಜೋಫ್ರಾ ಆರ್ಚರ್, ಗಸ್ ಅಟ್ಕಿನ್ಸನ್, ಜೋಶ್ ಟಂಗ್, ಆದಿಲ್ ರಶೀದ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:12 pm, Sun, 19 July 26

Follow Us