ಏಷ್ಯಾಕಪ್ 2022ರ (Asia Cup 2022) ಎರಡನೇ ಪಂದ್ಯದಲ್ಲಿಂದು ಭಾರತ ಹಾಗೂ ಪಾಕಿಸ್ತಾನ (India vs Pakistan) ತಂಡ ಮುಖಾಮುಖಿ ಆಗುತ್ತಿದೆ. ರೋಹಿತ್–ಬಾಬರ್ (Rohit-Babar) ಪಡೆಯ ಕಾದಾಟ ವೀಕ್ಷಿಸಲು ಇಡೀ ವಿಶ್ವವೇ ಕಾದುಕುಳಿತಿದ್ದು ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ಈ ಹೈವೋಲ್ಟೇಜ್ ಕದನಕ್ಕೆ ಸಾಕ್ಷಿಯಾಗಲಿದೆ. ಏಷ್ಯಾಕಪ್ ಇತಿಹಾಸದಲ್ಲಿ ಈವರೆಗೆ ಅತಿ ಹೆಚ್ಚು ಬಾರಿ ಟೂರ್ನಿಯನ್ನು ಗೆದ್ದಿರುವುದು ಭಾರತ. ಒಟ್ಟು ಏಳು ಬಾರಿ ಏಷ್ಯಾಕಪ್ ಕಿರೀಟವನ್ನು ಭಾರತ ತೊಟ್ಟಿದ್ದರೆ, ಪಾಕಿಸ್ತಾನ ಎರಡು ಬಾರಿ ಮಾತ್ರ ಪ್ರಶಸ್ತಿ ಗೆದ್ದಿದೆ. ಹಾಗಾದರೆ ಉಭಯ ತಂಡಗಳು ಇದುವರೆಗೆ ಏಷ್ಯಾಕಪ್ನಲ್ಲಿ ಎಷ್ಟು ಬಾರಿ ಮುಖಾಮುಖಿ ಆಗಿದೆ?, ಯಾರು ಹೆಚ್ಚು ಗೆಲುವು ಸಾಧಿಸಿದ್ದಾರೆ ಎಂಬುದನ್ನು ನೋಡೋಣ.
ಟಿ20 ಯಲ್ಲಿ ಭಾರತ–ಪಾಕ್ ಇದುವರೆಗೆ ಒಟ್ಟು ಒಂಬತ್ತು ಪಂದ್ಯಗಳಲ್ಲಿ ಎದುರಾಗಿದೆ. ಇದರಲ್ಲಿ ಭಾರತ ಏಳು ಪಂದ್ಯಗಳನ್ನು ಗೆದ್ದರೆ ಪಾಕಿಸ್ತಾನ ಎರಡು ಪಂದ್ಯಗಳಲ್ಲಷ್ಟೆ ಜಯ ಸಾಧಿಸಿದೆ. ಅಂತೆಯೆ ಏಷ್ಯಾಕಪ್ನಲ್ಲಿ ಉಭಯ ತಂಡಗಳು ಈವರೆಗೆ 14 ಬಾರಿ ಮುಖಾಮುಖಿ ಆಗಿದೆ. ಇದರಲ್ಲಿ ಭಾರತ ಎಂಟು ಹಾಗೂ ಪಾಕಿಸ್ತಾನ 5 ಪಂದ್ಯ ಗೆದ್ದರೆ ಒಂದು ಪಂದ್ಯ ಫಲಿತಾಂಶವಿಲ್ಲದೆ ಅಂತ್ಯಕಂಡಿದೆ.
ಭಾರತ – ಪಾಕಿಸ್ತಾನ ಕೊನೆಯ ಬಾರಿ ಮುಖಾಮುಖಿ ಆಗಿದ್ದು 2021ರ ಐಸಿಸಿ ಟಿ20 ವಿಶ್ವಕಪ್ನಲ್ಲಿ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ವಿರಾಟ್ ಕೊಹ್ಲಿ ಹಾಗೂ ರಿಷಭ್ ಪಂತ್ ಅವರ ಕೊಡುಗೆಯ ನೆರವಿನಿಂದ 151 ರನ್ ಗಳಿಸಿತು. ಆದರೆ, ಪಾಕ್ ಈ ಪಂದ್ಯದಲ್ಲಿ ಬಾಬರ್ ಅಜಮ್ ಹಾಗೂ ಮೊಹಮ್ಮದ್ ರಿಜ್ವಾನ್ ಅವರ ಬೊಂಬಾಟ್ ಬ್ಯಾಟಿಂಗ್ ಪ್ರದರ್ಶನದಿಂದ 10 ವಿಕೆಟ್ಗಳ ಸುಲಭ ಗೆಲುವು ಸಾಧಿಸಿತು.
ಇನ್ನು ಏಷ್ಯಾಕಪ್ ಏಕದಿನ ಟೂರ್ನಿಯಲ್ಲಿ ಕೊಹ್ಲಿ ಪ್ರದರ್ಶನ ಅದ್ಭುತವಾಗಿದೆ. 10 ಪಂದ್ಯಗಳಲ್ಲಿ 61.30ರ ಸರಾಸರಿಯಲ್ಲಿ 613 ರನ್ ಸಿಡಿಸಿದ್ದಾರೆ. 3 ಶತಕ, 1 ಅರ್ಧಶತಕ ಬಾರಿಸಿದ್ದಾರೆ. ಏಷ್ಯಾಕಪ್ ಟಿ20ಯಲ್ಲಿ ಆಡಿದ್ದು ಕಡಿಮೆ ಪಂದ್ಯಗಳಾದರೂ, ಭರ್ಜರಿ ಸರಾಸರಿ ಹೊಂದಿದ್ದಾರೆ. ಕೊಹ್ಲಿ 4 ಪಂದ್ಯಗಳಲ್ಲಿ ಬ್ಯಾಟ್ ಬೀಸಿದ್ದು, 76.50ರ ಸರಾಸರಿಯಲ್ಲಿ 153 ರನ್ ಕಲೆ ಹಾಕಿದ್ದಾರೆ. ಅಜೇಯ 56 ರನ್, ಕೊಹ್ಲಿಯ ಬೆಸ್ಟ್ ಸ್ಕೋರ್ ಆಗಿದೆ.
33 ವರ್ಷದ ವಿರಾಟ್ ಕೊಹ್ಲಿ 99 ಟಿ20 ಪಂದ್ಯಗಳಲ್ಲಿ 91 ಇನ್ನಿಂಗ್ಸ್ಗಳನ್ನು ಆಡಿದ್ದಾರೆ. ಈ ವೇಳೆ 50 ಸರಾಸರಿಯಲ್ಲಿ 3308 ರನ್ ಗಳಿಸಿದ್ದಾರೆ. ಈ ವೇಳೆ 30 ಅರ್ಧಶತಕಗಳನ್ನು ಬಾರಿಸಿದ್ದಾರೆ. ಹಾಗೆಯೇ ಟಿ20 ಕ್ರಿಕೆಟ್ನಲ್ಲಿ ಅತ್ಯಧಿಕ ರನ್ಗಳಿಸಿದ ವಿಶ್ವದ ಮೂರನೇ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದಾರೆ. ಅಲ್ಲದೆ ಇಂದು ಕೊಹ್ಲಿ 100ನೇ ಟಿ20 ಅಂತಾರಾಷ್ಟ್ರೀಯ ಪಂದ್ಯ ಆಡಲಿದ್ದಾರೆ. ಈ ಸಾಧನೆ ಮಾಡಿದ ಎರಡನೇ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೂ ವಿರಾಟ್ ಪಾತ್ರರಾಗಲಿದ್ದಾರೆ.