IND vs SA: 2 ಸೊನ್ನೆ, 2 ಶತಕ; ಹರಿಣಗಳ ನಾಡಲ್ಲಿ ಕೇರಳದ ಹುಡುಗನ ಅಬ್ಬರ
Sanju Samson century: ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ಸತತ ಎರಡು ಪಂದ್ಯಗಳಲ್ಲಿ ಖಾತೆ ತೆರೆಯದೇ ಔಟಾಗಿದ್ದ ಸಂಜು ಸ್ಯಾಮ್ಸನ್, ಮೂರನೇ ಪಂದ್ಯದಲ್ಲಿ ಅದ್ಭುತವಾದ ಶತಕ ಸಿಡಿಸಿದರು. 51 ಎಸೆತಗಳಲ್ಲಿ ಗಳಿಸಿದ ಈ ಶತಕ ಅವರ ವೃತ್ತಿಜೀವನದ ಮೂರನೇ ಶತಕವಾಗಿದೆ. ಇದಲ್ಲದೆ ಸಂಜು ತಿಲಕ್ ವರ್ಮಾ ಜೊತೆಗೆ ಅಜೇಯ ದ್ವಿಶತಕದ ಜೊತೆಯಾಟವನ್ನು ಆಡಿದರು.
‘ಶತಕ ಅಥವಾ ಸೊನ್ನೆ’. ಟೀಂ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಸಂಜು ಸ್ಯಾಮ್ಸನ್ ಸದ್ಯ ಈ ಮನಸ್ಥಿತೆಯಲ್ಲೇ ಆಡುತ್ತಿರುವಂತಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಅಮೋಘ ಶತಕ ಸಿಡಿಸಿದ್ದ ಸಂಜು, ಆ ಬಳಿಕ ಅದ್ಯಾಕೋ ಮೌನಕ್ಕೆ ಶರಣಾಗಿದ್ದರು. ಮೊದಲ ಪಂದ್ಯದಲ್ಲಿ ಅಬ್ಬರದ ಶತಕ ಸಿಡಿಸಿದ ಸಂಜು ಕಳೆದೆರಡು ಪಂದ್ಯಗಳಲ್ಲಿ ಖಾತೆ ತೆರೆಯಲು ವಿಫಲರಾಗಿದ್ದರು. ಆದರೀಗ ಮತ್ತೆ ಲಯಕಂಡುಕೊಂಡಿರುವ ಸಂಜು, ಜೋಹಾನ್ಸ್ಬರ್ಗ್ನಲ್ಲಿ ಆಕ್ರಮಣಕಾರಿ ಆಟ ಪ್ರದರ್ಶಿಸಿ ಕೇವಲ 51 ಎಸೆತಗಳಲ್ಲಿ ತಮ್ಮ ವೃತ್ತಿಜೀವನದ ಮೂರನೇ ಶತಕ ಮತ್ತು ಈ ಸರಣಿಯ ಎರಡನೇ ಶತಕವನ್ನು ಪೂರ್ಣಗೊಳಿಸಿದರು.
ಸತತ 2 ಸೊನ್ನೆ ನಂತರ ಶತಕ
ಕಳೆದ ಕೆಲವು ಪಂದ್ಯಗಳಿಂದ ಓಪನಿಂಗ್ ಜವಾಬ್ದಾರಿ ನಿಭಾಯಿಸುತ್ತಿರುವ ಸಂಜು ಸ್ಯಾಮ್ಸನ್ ಆರಂಭಿಕನಾಗಿ ತಮ್ಮ ನೈಜ ಸಾಮರ್ಥ್ಯ ತೋರಿದ್ದು, ಬೌಲರ್ಗಳ ಹೆಡೆಮುರಿ ಕಟ್ಟುವ ಕಾರ್ಯವನ್ನು ಮುಂದುವರಿಸಿದ್ದಾರೆ. ಸ್ಯಾಮ್ಸನ್ ಕಳೆದ ಎರಡು ಪಂದ್ಯಗಳಲ್ಲಿ ಖಾತೆ ತೆರೆಯಲು ವಿಫಲರಾಗಿದ್ದರು. ಈ ಎರಡೂ ಪಂದ್ಯಗಳಲ್ಲಿ, ಅವರು ಮೊದಲ ಓವರ್‌ನಲ್ಲಿ ಮಾರ್ಕೊ ಯಾನ್ಸನ್ ಎಸೆತದಲ್ಲಿ ಬೌಲ್ಡ್ ಆಗಿದ್ದರು.
ಹೀಗಾಗಿ ಮೂರನೆ ಪಂದ್ಯದಲ್ಲಿ ಸಂಜು ಮೇಲುಗೈ ಸಾಧಿಸುತ್ತಾರಾ ಅಥವಾ ಮತ್ತೊಮ್ಮೆ ಯಾನ್ಸನ್ ಚಮತ್ಕಾರ ಮಾಡುತ್ತಾರಾ ಎಂಬ ಪ್ರಶ್ನೆ ಎಲ್ಲರ ಮನದಲ್ಲಿ ಮೂಡಿತ್ತು. ಇದಕ್ಕೆ ಪೂರಕವಾಗಿ ಮೊದಲ ಓವರ್‌ನಲ್ಲಿಯೇ ಚೆಂಡು ಬ್ಯಾಟ್‌ನ ಅಂಚನ್ನು ತಾಗಿ ಸ್ಲಿಪ್ ಕಡೆಗೆ ಹೋಯಿತು. ಆದರೆ ಚೆಂಡು ಫೀಲ್ಡರ್‌ನಿಂದ ಸ್ವಲ್ಪ ದೂರದಲ್ಲಿ ಬಿದ್ದಿದ್ದರಿಂದ ಸಂಜು ಬಚಾವ್ ಆದರು. ಇದಾದ ಬಳಿಕ ತಮ್ಮ ಆರ್ಭಟ ಶುರು ಮಾಡಿದ ಸ್ಯಾಮ್ಸನ್ ತಮ್ಮ ವೃತ್ತಿಜೀವನದ ಮೂರನೇ ಶತಕವನ್ನು ಪೂರ್ಣಗೊಳಿಸಿ ಅಜೇಯರಾಗಿ ಡಗೌಟ್ ಸೇರಿಕೊಂಡರು.
51 ಎಸೆತಗಳಲ್ಲಿ ಶತಕ ಪೂರ್ಣ
ಇದಲ್ಲದೆ ಸಂಜು, ಅಭಿಷೇಕ್ ಶರ್ಮಾ ಅವರೊಂದಿಗೆ ಪವರ್‌ಪ್ಲೇಯೊಳಗೆ 73 ರನ್‌ಗಳ ಸ್ಫೋಟಕ ಜೊತೆಯಾಟವನ್ನು ಮಾಡುವ ಮೂಲಕ ತಂಡಕ್ಕೆ ವೇಗದ ಆರಂಭ ನೀಡಿದರು. ಅಭಿಷೇಕ್ ದೊಡ್ಡ ಇನ್ನಿಂಗ್ಸ್ ಆಡಲು ಸಾಧ್ಯವಾಗಲಿಲ್ಲ ಆದರೆ ಸಂಜು ಮಾತ್ರ ತಮ್ಮ ಅಬ್ಬರ ಬ್ಯಾಟಿಂಗ್ ಮುಂದುವರಿಸಿದರು. ಹೀಗಾಗಿ ಕೇವಲ 28 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಇದಾದ ನಂತರವೂ ತಣ್ಣಗಾಗದ ಸಂಜು, ತಿಲಕ್ ವರ್ಮಾ ಅವರೊಂದಿಗೆ ದಾಖಲೆಯ ದ್ವಿಶತಕದ ಜೊತೆಯಾಟ ಆಡುವ ಮೂಲಕ ತಮ್ಮ ವೃತ್ತಿಜೀವನದ ಮೂರನೇ ಶತಕ ಮತ್ತು ಈ ಸರಣಿಯ ಎರಡನೇ ಶತಕವನ್ನು ಕೇವಲ 51 ಎಸೆತಗಳಲ್ಲಿ ಗಳಿಸಿದರು. ಶತಕ ಪೂರೈಸುವ ಮುನ್ನ ಸಂಜು 7 ಬೌಂಡರಿ ಹಾಗೂ 8 ಸಿಕ್ಸರ್‌ಗಳನ್ನು ಬಾರಿಸಿದ್ದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:37 pm, Fri, 15 November 24