India vs Sri Lanka 1st T20: ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ 2 ರನ್ಗಳ ರೋಚಕ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಭಾರತ ತಂಡವು ಹೊಸ ವರ್ಷದಲ್ಲಿ ಶುಭಾರಂಭ ಮಾಡಿದೆ. ಇದಕ್ಕೂ ಮುನ್ನ ಟಾಸ್ ಗೆದ್ದ ಶ್ರೀಲಂಕಾ ತಂಡದ ನಾಯಕ ದಸುನ್ ಶಾನಕ ಬೌಲಿಂಗ್ ಆಯ್ದುಕೊಂಡರು. ಅದರಂತೆ ಇನಿಂಗ್ಸ್ ಆರಂಭಿಸಿದ ಟೀಮ್ ಇಂಡಿಯಾ ಪರ ಶುಭ್ಮನ್ ಗಿಲ್ ಹಾಗೂ ಇಶಾನ್ ಕಿಶನ್ ಆರಂಭಿಕರಾಗಿ ಕಣಕ್ಕಿಳಿದರು. ಆದರೆ ಚೊಚ್ಚಲ ಪಂದ್ಯದಲ್ಲೇ ಕೇವಲ 7 ರನ್ಗೆ ಔಟಾಗುವ ಮೂಲಕ ಶುಭ್ಮನ್ ಗಿಲ್ ನಿರಾಸೆ ಮೂಡಿಸಿದರು.
ಇದಾಗ್ಯೂ ಮತ್ತೊಂದೆಡೆ ಇಶಾನ್ ಕಿಶನ್ ಭರ್ಜರಿ ಬ್ಯಾಟಿಂಗ್ ನಡೆಸಿದರು. ಆದರೆ 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಸೂರ್ಯಕುಮಾರ್ ಯಾದವ್ (7) ಹಾಗೂ ಸಂಜು ಸ್ಯಾಮ್ಸನ್ (5) ಬೇಗನೆ ನಿರ್ಗಮಿಸಿದರು. ಪರಿಣಾಮ ಕಿಶನ್ ಎಚ್ಚರಿಕೆಯ ಬ್ಯಾಟಿಂಗ್ಗೆ ಒತ್ತು ನೀಡಿದರು.
ಅದರಂತೆ ತಂಡದ ಮೊತ್ತ 6.5 ಓವರ್ನಲ್ಲಿ 46 ರನ್ ಆಗಿದ್ದ ವೇಳೆ ಜೊತೆಯಾದ ಇಶಾನ್ ಕಿಶನ್ ಹಾಗೂ ಹಾರ್ದಿಕ್ ಪಾಂಡ್ಯ ಉತ್ತಮ ಜೊತೆಯಾಟವಾಡಿದರು. ಈ ಹಂತದಲ್ಲಿ 2 ಸಿಕ್ಸ್ ಹಾಗೂ 3 ಫೋರ್ನೊಂದಿಗೆ 29 ಎಸೆತಗಳಲ್ಲಿ 37 ರನ್ ಬಾರಿಸಿದ್ದ ಕಿಶನ್ ಭರ್ಜರಿ ಹೊಡೆತಕ್ಕೆ ಮುಂದಾಗಿ ಕ್ಯಾಚ್ ನೀಡಿದರು.
ಈ ವೇಳೆ ಪಂದ್ಯದ ಮೇಲೆ ಹಿಡಿತ ಸಾಧಿಸಿದ ಶ್ರೀಲಂಕಾ ಬೌಲರ್ಗಳು ಟೀಮ್ ಇಂಡಿಯಾದ ರನ್ ಗತಿಯನ್ನು ನಿಯಂತ್ರಿಸಿದರು. ಪರಿಣಾಮ 10.3 ಓವರ್ಗಳಲ್ಲಿ ಟೀಮ್ ಇಂಡಿಯಾ ಕಲೆಹಾಕಿದ್ದು ಕೇವಲ 77 ರನ್ ಮಾತ್ರ. ಮೊದಲ ಹತ್ತು ಓವರ್ಗಳ ಮುಕ್ತಾಯದ ಬೆನ್ನಲ್ಲೇ ಬಿರುಸಿನ ಆಟಕ್ಕೆ ಮುಂದಾದ ಹಾರ್ದಿಕ್ ಪಾಂಡ್ಯ (29) ವಿಕೆಟ್ ಕೀಪರ್ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. 14.1 ಓವರ್ಗಳಲ್ಲಿ 94 ರನ್ಗೆ 5 ಪ್ರಮುಖ ವಿಕೆಟ್ ಕಳೆದುಕೊಂಡಿದ್ದ ಟೀಮ್ ಇಂಡಿಯಾಗೆ ದೀಪಕ್ ಹೂಡಾ ಹಾಗೂ ಅಕ್ಷರ್ ಪಟೇಲ್ ಆಸರೆಯಾದರು.
ಕೊನೆಯ 6 ಓವರ್ಗಳಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸಿದ ಈ ಜೋಡಿ ಅರ್ಧಶತಕದ ಜೊತೆಯಾಟವಾಡಿದರು. ಅದರಲ್ಲೂ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ ದೀಪಕ್ ಹೂಡಾ 23 ಎಸೆತಗಳಲ್ಲಿ 4 ಭರ್ಜರಿ ಸಿಕ್ಸ್ ಹಾಗೂ 1 ಫೋರ್ನೊಂದಿಗೆ ಅಜೇಯ 41 ರನ್ ಚಚ್ಚಿದರು. 20 ಎಸೆತಗಳಲ್ಲಿ 31 ರನ್ ಕಲೆಹಾಕುವ ಮೂಲಕ ಅಕ್ಷರ್ ಪಟೇಲ್ ದೀಪಕ್ ಹೂಡಾಗೆ ಉತ್ತಮ ಸಾಥ್ ನೀಡಿದರು. ಪರಿಣಾಮ ನಿಗದಿತ 20 ಓವರ್ಗಳಲ್ಲಿ ಟೀಮ್ ಇಂಡಿಯಾ 5 ವಿಕೆಟ್ ನಷ್ಟಕ್ಕೆ 162 ರನ್ ಕಲೆಹಾಕಿತು.
ಈ ಸ್ಪರ್ಧಾತ್ಮಕ ಗುರಿ ಬೆನ್ನತ್ತಿ ಶ್ರೀಲಂಕಾ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ಚೊಚ್ಚಲ ಪಂದ್ಯದಲ್ಲಿ ಕಣಕ್ಕಿಳಿದ ಶಿವಂ ಮಾವಿ 2ನೇ ಓವರ್ನಲ್ಲೇ ಪಾತುಂ ನಿಸ್ಸಂಕಾ (1) ರನ್ನು ಕ್ಲೀನ್ ಬೌಲ್ಡ್ ಮಾಡುವ ಮೂಲಕ ಮೊದಲ ಯಶಸ್ಸು ತಂದುಕೊಟ್ಟರು. ಇದರ ಬೆನ್ನಲ್ಲೇ ಧನಂಜಯ ಡಿಸಿಲ್ವಾ (8) ವಿಕೆಟ್ ಪಡೆಯುವಲ್ಲಿ ಮಾವಿ ಯಶಸ್ವಿಯಾದರು.
ಇದಾದ ಬಳಿಕ ಪವರ್ಪ್ಲೇನಲ್ಲಿ ಶ್ರೀಲಂಕಾ ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿತು. ಪರಿಣಾಮ ಟೀಮ್ ಇಂಡಿಯಾಗೆ 3ನೇ ವಿಕೆಟ್ ಲಭಿಸಿದ್ದು 8ನೇ ಓವರ್ನಲ್ಲಿ. ಉಮ್ರಾನ್ ಮಲಿಕ್ ಎಸೆತದಲ್ಲಿ ಅಸಲಂಕಾ (12) ಭರ್ಜರಿ ಹೊಡೆತಕ್ಕೆ ಯತ್ನಿಸಿದ್ದರು. ಆದರೆ ಅದ್ಭುತ ರನ್ನಿಂಗ್ ಕ್ಯಾಚ್ ಹಿಡಿಯುವ ಮೂಲಕ ಇಶಾನ್ ಕಿಶನ್ ಟೀಮ್ ಇಂಡಿಯಾಗೆ ಮೂರನೇ ಯಶಸ್ಸು ತಂದುಕೊಟ್ಟರು.
ಈ ಹಂತದಲ್ಲಿ ಟೀಮ್ ಇಂಡಿಯಾ ಮೇಲುಗೈ ಸಾಧಿಸಿತು. ಅಲ್ಲದೆ ಹರ್ಷಲ್ ಪಟೇಲ್ ಕುಸಾಲ್ ಮೆಂಡಿಸ್ (28) ಹಾಗೂ ಭಾನುಕಾ ರಾಜಪಕ್ಸೆ (10) ವಿಕೆಟ್ ಪಡೆದು ಲಂಕಾಗೆ ಆಘಾತ ನೀಡಿದರು.
ಆದರೆ ಈ ಹಂತದಲ್ಲಿ ಜೊತೆಯಾದ ನಾಯಕ ದುಸನ್ ಶಾನಕ ಹಾಗೂ ವನಿಂದು ಹಸರಂಗ ಸ್ಪೋಟಕ ಬ್ಯಾಟಿಂಗ್ ನಡೆಸಿದರು. ಪರಿಣಾಮ ಕೊನೆಯ 6 ಓವರ್ಗಳಲ್ಲಿ ಶ್ರೀಲಂಕಾಗೆ ಗೆಲ್ಲಲು 56 ರನ್ಗಳ ಅವಶ್ಯಕತೆಯಿತ್ತು. ಈ ವೇಳೆ 10 ಎಸೆತಗಳಲ್ಲಿ 21 ರನ್ ಬಾರಿಸಿದ ಹಸರಂಗ ವಿಕೆಟ್ ಪಡೆಯುವಲ್ಲಿ ಶಿವಂ ಮಾವಿ ಯಶಸ್ವಿಯಾದರು. ಇದಾಗ್ಯೂ ಏಕಾಂಗಿ ಹೋರಾಟ ಮುಂದುವರೆಸಿದ ದಾಸುನ್ ಶಾನಕ ಭರ್ಜರಿ ಬ್ಯಾಟಿಂಗ್ ಮುಂದುವರೆಸಿದರು.
ಈ ಹಂತದಲ್ಲಿ ಹಾರ್ದಿಕ್ ಪಾಂಡ್ಯ ಬೌಲಿಂಗ್ನಲ್ಲಿ ಬದಲಾವಣೆ ಮಾಡಿದರು. ಉಮ್ರಾನ್ ಮಲಿಕ್ ಕೈಗೆ ಚೆಂಡು ನೀಡುವ ಮೂಲಕ 27 ಎಸೆತಗಳಲ್ಲಿ 3 ಭರ್ಜರಿ ಸಿಕ್ಸ್ 3 ಫೋರ್ ಬಾರಿಸಿದ ದುಸನ್ ಶಾನಕ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಆದರೆ ಅಂತಿಮ ಹಂತದಲ್ಲಿ ಕರುಣರತ್ನೆ ಹರ್ಷಲ್ ಪಟೇಲ್ ಓವರ್ನಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಪರಿಣಾಮ ಕೊನೆಯ ಓವರ್ನಲ್ಲಿ ಶ್ರೀಲಂಕಾಗೆ ಗೆಲ್ಲಲು 13 ರನ್ಗಳ ಅವಶ್ಯಕತೆಯಿತ್ತು.
ಕೊನೆಯ ಓವರ್ನ ಮೊದಲ ಎಸೆತವನ್ನು ಅಕ್ಷರ್ ಪಟೇಲ್ ವೈಡ್ ಎಸೆದರು. ಮರು ಎಸೆತದಲ್ಲಿ 1 ರನ್. 2ನೇ ಎಸೆತದಲ್ಲಿ ಯಾವುದೇ ರನ್ ಇಲ್ಲ. 3ನೇ ಎಸೆತದಲ್ಲಿ ಕರುಣರತ್ನೆ ಭರ್ಜರಿ ಸಿಕ್ಸ್. 4ನೇ ಎಸೆತದಲ್ಲಿ ಯಾವುದೇ ರನ್ ಇಲ್ಲ. 5ನೇ ಎಸೆತದಲ್ಲಿ 2 ರನ್ ಓಡುವ ಯತ್ನದಲ್ಲಿ ರಜಿತ ರನೌಟ್. ಕೊನೆಯ ಎಸೆತದಲ್ಲಿ 4 ರನ್ಗಳ ಅವಶ್ಯಕತೆ. ಸ್ಟ್ರೈಕ್ನಲ್ಲಿದ್ದ ಕರುಣರತ್ನೆ ಕೇವಲ 1 ರನ್ ಮಾತ್ರ ಕಲೆಹಾಕಿದರು. ಇದರೊಂದಿಗೆ ಟೀಮ್ ಇಂಡಿಯಾ 2 ರನ್ಗಳ ರೋಚಕ ಜಯ ಸಾಧಿಸಿತು.
ಟೀಮ್ ಇಂಡಿಯಾ ಪರ ಶಿವಂ ಮಾವಿ 4 ಓವರ್ಗಳಲ್ಲಿ 22 ರನ್ ನೀಡಿ 4 ವಿಕೆಟ್ ಕಬಳಿಸಿದರೆ, ಉಮ್ರಾನ್ ಮಲಿಕ್ ಹಾಗೂ ಹರ್ಷಲ್ ಪಟೇಲ್ ತಲಾ 2 ವಿಕೆಟ್ ಕಬಳಿಸಿದರು.
ಭಾರತ- 162/5 (20)
ಶ್ರೀಲಂಕಾ- 160 (20)
ಟೀಮ್ ಇಂಡಿಯಾ ಪ್ಲೇಯಿಂಗ್ 11: ಇಶಾನ್ ಕಿಶನ್, ಶುಭಮನ್ ಗಿಲ್ (ಪಾದರ್ಪಣೆ), ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್, ಹಾರ್ದಿಕ್ ಪಾಂಡ್ಯ(ನಾಯಕ), ದೀಪಕ್ ಹೂಡಾ, ಅಕ್ಷರ್ ಪಟೇಲ್, ಹರ್ಷಲ್ ಪಟೇಲ್, ಶಿವಂ ಮಾವಿ (ಪಾದರ್ಪಣೆ), ಉಮ್ರಾನ್ ಮಲಿಕ್, ಯುಜ್ವೇಂದ್ರ ಚಾಹಲ್
ಇದನ್ನೂ ಓದಿ: RCB ತಂಡದ ಮೊದಲ ಪ್ಲೇಯಿಂಗ್ ಇಲೆವೆನ್ನಲ್ಲಿ ಯಾರೆಲ್ಲಾ ಇದ್ದರು ಗೊತ್ತಾ?
ಶ್ರೀಲಂಕಾ ಪ್ಲೇಯಿಂಗ್ 11: ಪಾತುಂ ನಿಸ್ಸಾಂಕ, ಕುಸಲ್ ಮೆಂಡಿಸ್, ಧನಂಜಯ ಡಿ ಸಿಲ್ವಾ, ಚರಿತ್ ಅಸಲಂಕಾ, ಭಾನುಕಾ ರಾಜಪಕ್ಸೆ, ದಸುನ್ ಶನಕ(ನಾಯಕ), ವನಿಂದು ಹಸರಂಗ, ಚಮಿಕಾ ಕರುಣಾರತ್ನೆ, ಮಹೀಶ್ ತೀಕ್ಷಣ, ಕಸುನ್ ರಜಿತ, ದಿಲ್ಶನ್ ಮಧುಶಂಕ
Published On - 10:42 pm, Tue, 3 January 23