ಆನ್‌ಲೈನ್ ಗೇಮಿಂಗ್ ಮಸೂದೆ ಅಂಗೀಕಾರ; ಸಾವಿರ ಕೋಟಿ ರೂ. ಒಪ್ಪಂದ ಮಾಡಿಕೊಂಡಿದ್ದ ಬಿಸಿಸಿಐ ಕಥೆ ಏನು?
BCCI: ಕೇಂದ್ರ ಸರ್ಕಾರವು ಆನ್‌ಲೈನ್ ಗೇಮಿಂಗ್ ಮಸೂದೆಯನ್ನು ಅಂಗೀಕರಿಸಿದ್ದು, ಡ್ರೀಮ್ 11 ಮತ್ತು ಬಿಸಿಸಿಐ ನಡುವಿನ ಒಪ್ಪಂದಕ್ಕೆ ದೊಡ್ಡ ಅಪಾಯ ಉಂಟಾಗಿದೆ. ಈ ನಿಷೇಧದಿಂದಾಗಿ ಫ್ಯಾಂಟಸಿ ಗೇಮಿಂಗ್ ಪ್ಲಾಟ್‌ಫಾರ್ಮ್‌ಗಳು ಮುಚ್ಚುವ ಸಾಧ್ಯತೆಯಿದೆ. ಬಿಸಿಸಿಐಗೆ ಸಾವಿರಾರು ಕೋಟಿ ರೂಪಾಯಿ ನಷ್ಟವಾಗುವ ಸಾಧ್ಯತೆಯಿದೆ. ಆದರೆ ಇತರ ಪ್ರಾಯೋಜಕತ್ವಗಳನ್ನು ಕಂಡುಕೊಳ್ಳುವ ಸಾಧ್ಯತೆಯೂ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಕೇಂದ್ರ ಸರ್ಕಾರವು ಸಂಸತ್ತಿನಲ್ಲಿ ಆನ್‌ಲೈನ್ ಗೇಮಿಂಗ್ ಮಸೂದೆಯನ್ನು (Online Gaming Bill 2025) ಅಂಗೀಕರಿಸಿದೆ. ಆಗಸ್ಟ್ 20 ರಂದು ಲೋಕಸಭೆಯಲ್ಲಿ ಆನ್‌ಲೈನ್ ಗೇಮಿಂಗ್ ಪ್ರಚಾರ ಮತ್ತು ನಿಯಂತ್ರಣ ಮಸೂದೆ 2025 ಅಂಗೀಕರಿಸಿದ ಒಂದು ದಿನದ ನಂತರ, ಆಗಸ್ಟ್ 21 ರಂದು ರಾಜ್ಯಸಭೆಯು ಕೂಡ ಈ ಮಸೂದೆಯನ್ನು ಅಂಗೀಕರಿಸಿತು. ಇದರ ಅಂಗೀಕಾರದೊಂದಿಗೆ, ಆನ್‌ಲೈನ್‌ನಲ್ಲಿ ಹಣ ಹೂಡಿಕೆ ಮಾಡಿ ಆಡುವ ಆಟಗಳನ್ನು ಈಗ ನಿಷೇಧಿಸಲಾಗುವುದು. ಈ ಮಸೂದೆ ಕಾನೂನಾಗುತ್ತಿದ್ದಂತೆ, ದೇಶದಲ್ಲಿ ಚಾಲನೆಯಲ್ಲಿರುವ ಅನೇಕ ಫ್ಯಾಂಟಸಿ ಗೇಮಿಂಗ್ ಪ್ಲಾಟ್‌ಫಾರ್ಮ್‌ಗಳ ಅಂಗಡಿ ಬಂದಾಗಲಿದೆ. ಇವುಗಳಲ್ಲಿ Dream11 ಅಗ್ರಸ್ಥಾನದಲ್ಲಿದೆ. ಆದರೆ Dream11 ಸ್ಥಗಿತಗೊಂಡರೆ, ಈ ಕಂಪನಿಯೊಂದಿಗೆ 3 ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿದ್ದ ಬಿಸಿಸಿಐಗೂ ಹೊಡೆತ ಬೀಳಲಿದೆ.
ಬುಧವಾರ ಮತ್ತು ಗುರುವಾರ, ಆನ್‌ಲೈನ್ ಮನಿ ಗೇಮಿಂಗ್ ಅನ್ನು ನಿಷೇಧಿಸುವ ಮಸೂದೆಯನ್ನು ಸಂಸತ್ತಿನ ಉಭಯ ಸದನಗಳಲ್ಲಿ ಅಂಗೀಕರಿಸಲಾಯಿತು. ಹಣದ ಬಳಕೆ (ಬೆಟ್ಟಿಂಗ್ ರೀತಿ) ಆಗುವ ಆನ್‌ಲೈನ್ ಗೇಮ್ಗಳನ್ನು ನಿಷೇಧಿಸಲು ಈ ಮಸೂದೆ ಅನುವು ಮಾಡಿಕೊಡುತ್ತದೆ. ಈ ಮಸೂದೆ ಜಾರಿಗೆ ಬಂದ ಬಳಿಕ ಈ ರೀತಿಯ ಪ್ಲಾಟ್‌ಫಾರ್ಮ್‌ಗಳು ನಿಯಮ ಉಲ್ಲಂಘಿಸಿದರೆ, ಕೋಟಿ ಮೊತ್ತದ ದಂಡ ಹಾಗೂ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಕಳೆದ ಕೆಲವು ವರ್ಷಗಳಿಂದ ಭಾರತದಲ್ಲಿ ನಡೆಯುತ್ತಿರುವ ಫ್ಯಾಂಟಸಿ ಗೇಮಿಂಗ್ ಸೇವೆಯ ಮೇಲೆ ಇದರ ದೊಡ್ಡ ಪರಿಣಾಮ ಬೀರುತ್ತದೆ. ಇದರಲ್ಲಿ ಸಾಮಾನ್ಯ ಜನರು ಕ್ರಿಕೆಟ್, ಫುಟ್‌ಬಾಲ್ ಮತ್ತು ಇತರ ಕ್ರೀಡೆಗಳಿಗೆ ಸಂಬಂಧಿಸಿದ ನೈಜ ಪಂದ್ಯಗಳಿಗಾಗಿ ಹಣವನ್ನು ಹೂಡಿಕೆ ಮಾಡಿ ತಮ್ಮ ತಂಡವನ್ನು ರಚಿಸುತ್ತಿದ್ದರು ಮತ್ತು ವಿಜೇತರು ಹಣದ ಜೊತೆಗೆ ಇತರ ಬಹುಮಾನಗಳನ್ನು ಪಡೆಯುತ್ತಿದ್ದರು.
358 ಕೋಟಿ ರೂ.ಗಳ ಒಪ್ಪಂದ
ಇದರಲ್ಲಿ ಅತಿದೊಡ್ಡ ಕಂಪನಿಯಾಗಿ ಹೊರಹೊಮ್ಮಿದ ಡ್ರೀಮ್-11, ಕಳೆದ ಕೆಲವು ವರ್ಷಗಳಲ್ಲಿ ಭಾರತೀಯ ಕ್ರಿಕೆಟ್‌ನಲ್ಲಿಯೂ ಸಕ್ರಿಯವಾಗಿತ್ತು. ಇದರ ಪರಿಣಾಮವಾಗಿ, 2023 ರಲ್ಲಿ, ಡ್ರೀಮ್-11 ಬಿಸಿಸಿಐ ಜೊತೆ 358 ಕೋಟಿ ರೂ.ಗಳ ಒಪ್ಪಂದಕ್ಕೆ ಸಹಿ ಹಾಕಿತು. ಈ ಒಪ್ಪಂದದೊಂದಿಗೆ, ಕಂಪನಿಯು ಭಾರತೀಯ ಕ್ರಿಕೆಟ್ ತಂಡದ ಶೀರ್ಷಿಕೆ ಪ್ರಾಯೋಜಕತ್ವವನ್ನು ಪಡೆದುಕೊಂಡಿದೆ. ಅಂದಿನಿಂದ ಡ್ರೀಮ್-11 ಹೆಸರನ್ನು ಟೀಂ ಇಂಡಿಯಾದ ಜೆರ್ಸಿಯ ಮೇಲೆ ಮುದ್ರಿಸಲಾಗುತ್ತಿತ್ತು. ಈ ಒಪ್ಪಂದವು 3 ವರ್ಷಗಳ ಅವಧಿಗೆ ಆಗಿದ್ದು, ಅದು 2026 ರಲ್ಲಿ ಕೊನೆಗೊಳ್ಳಲಿದೆ. ಆದರೆ ಅದಕ್ಕೂ ಮುಂಚೆಯೇ, ಈ ಮಸೂದೆ ಅಂಗೀಕಾರವಾದ ನಂತರ, ಬಿಸಿಸಿಐ ಇದರಿಂದ ಎಷ್ಟು ನಷ್ಟ ಅನುಭವಿಸುತ್ತದೆ ಎಂಬ ಪ್ರಶ್ನೆ ಉದ್ಭವಿಸುತ್ತಿದೆ?
ಬಿಸಿಸಿಐ ನಷ್ಟ ಅನುಭವಿಸುತ್ತದೆಯೇ ಅಥವಾ ಇಲ್ಲವೇ ಎಂಬುದು ಡ್ರೀಮ್ 11 ಮೇಲೆ ಎಷ್ಟು ಪರಿಣಾಮ ಬೀರುತ್ತದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಡ್ರೀಮ್ 11 ಕಂಪನಿಯು ಆನ್‌ಲೈನ್ ಹಣದ ಗೇಮಿಂಗ್ ಅನ್ನು ಆಧರಿಸಿರುವುದರಿಂದ ದೊಡ್ಡ ನಷ್ಟವನ್ನು ಅನುಭವಿಸುತ್ತದೆ ಎಂಬುದು ಸ್ಪಷ್ಟವಾಗಿದೆ. ಆದರೆ ಕಂಪನಿಯು ಬಿಸಿಸಿಐ ಜೊತೆಗಿನ ತನ್ನ ಒಪ್ಪಂದವನ್ನು ತಕ್ಷಣವೇ ಕೊನೆಗೊಳಿಸುತ್ತದೆಯೇ ಎಂಬುದು ಮುಂಬರುವ ದಿನಗಳಲ್ಲಿ ತಿಳಿಯುತ್ತದೆ. ಬಿಸಿಸಿಐ ಮತ್ತು ಡ್ರೀಮ್ -11 ನಡುವಿನ ಈ ಒಪ್ಪಂದದಲ್ಲಿ 1 ವರ್ಷಕ್ಕಿಂತ ಕಡಿಮೆ ಸಮಯ ಉಳಿದಿದೆ. ಅಂತಹ ಪರಿಸ್ಥಿತಿಯಲ್ಲಿ, ಬಿಸಿಸಿಐ ಈಗಾಗಲೇ 358 ಕೋಟಿ ರೂ. ಒಪ್ಪಂದದಲ್ಲಿ ಅರ್ಧಕ್ಕಿಂತ ಹೆಚ್ಚಿನ ಮೊತ್ತವನ್ನು ಪಡೆದುಕೊಂಡಿದೆ. ಆದರೆ ಉಳಿದ ಮೊತ್ತವು ಈ ಒಪ್ಪಂದ ಪೂರ್ಣಗೊಂಡಿದೆಯೇ ಅಥವಾ ಇಲ್ಲವೇ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ.
ಈ ಬಿಸಿ ಐಪಿಎಲ್‌ಗೂ ತಟ್ಟಲಿದೆ
ಡ್ರೀಮ್-11 ಮಾತ್ರವಲ್ಲದೆ, ಮತ್ತೊಂದು ದೊಡ್ಡ ಆನ್‌ಲೈನ್ ಗೇಮಿಂಗ್ ಕಂಪನಿ ಮೈ ಸರ್ಕಲ್-11 ಮೇಲೂ ಪರಿಣಾಮ ಬೀರಲಿದೆ. ಈ ಕಂಪನಿಯು ಕೂಡ ಬಿಸಿಸಿಐ ಜೊತೆ ಒಪ್ಪಂದ ಮಾಡಿಕೊಂಡಿದೆ. ಮಿಲಿಯನ್ ಡಾಲರ್ ಟೂರ್ನಿ ಐಪಿಎಲ್ ಜೊತೆಗೆ 5 ಸೀಸನ್‌ಗಳ ಒಪ್ಪಂದಕ್ಕೆ ಸಹಿ ಹಾಕಿತ್ತು. ಇಬ್ಬರ ನಡುವಿನ ಈ ಒಪ್ಪಂದವು 625 ಕೋಟಿ ರೂ. ಮೌಲ್ಯದ್ದಾಗಿತ್ತು. ಅಂದರೆ, ಬಿಸಿಸಿಐ, ಈ ಕಂಪನಿಯಿಂದ ಪ್ರತಿ ವರ್ಷ 125 ಕೋಟಿ ರೂ.ಗಳನ್ನು ಪಡೆಯುತ್ತಿದೆ. ಇದೀಗ ಕೇವಲ 2 ಸೀಸನ್‌ಗಳು ಮಾತ್ರ ಕಳೆದಿದ್ದು, ಇನ್ನು 3 ಸೀಸನ್‌ಗಳ ಒಪ್ಪಂದ ಉಳಿದಿದೆ. ಅಂತಹ ಪರಿಸ್ಥಿತಿಯಲ್ಲಿ, ಈ ಒಪ್ಪಂದದ ಭವಿಷ್ಯವು ಹೊಸ ನಿಯಮಗಳ ಆಧಾರದ ಮೇಲೆ ಕಂಪನಿಯು ಮುಂದೆ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ.
ಬಿಸಿಸಿಐ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ
ಆದಾಗ್ಯೂ, ಈ ಎರಡೂ ಒಪ್ಪಂದಗಳು ಮಧ್ಯದಲ್ಲಿ ಮುರಿದುಬಿದ್ದರೂ, ಅದು ಬಿಸಿಸಿಐ ಮೇಲೆ ಯಾವುದೇ ಮಹತ್ವದ ಪರಿಣಾಮ ಬೀರುವುದಿಲ್ಲ ಎಂದು ಕ್ರೀಡಾ ವಕೀಲ ವಿದುಷ್ಪತ್ ಸಿಂಘಾನಿಯಾ ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ಇದಕ್ಕೆ ಕಾರಣವನ್ನು ನೀಡುತ್ತಾ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಮುಂದೆ ಪ್ರಾಯೋಜಕತ್ವದ ಕೊರತೆಯಿಲ್ಲ. ಈ ಕಂಪನಿಗಳ ಜೊತೆಗಿನ ಒಪ್ಪಂದ ಮುರಿದು ಬಿದ್ದರೂ, ಬೇರೆ ಯಾವುದಾದರೂ ಆಯ್ಕೆಯನ್ನು ಕಂಡುಕೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ. ಆದಾಗ್ಯೂ, ಅನೇಕ ಸ್ಟಾರ್ ಆಟಗಾರರು ವಿಭಿನ್ನ ಫ್ಯಾಂಟಸಿ ಗೇಮಿಂಗ್ ಕಂಪನಿಗಳೊಂದಿಗೆ ಸಂಬಂಧ ಹೊಂದಿರುವುದರಿಂದ ಆಟಗಾರರ ವೈಯಕ್ತಿಕ ಪ್ರಾಯೋಜಕತ್ವದ ಮೇಲೆ ಇದು ಪರಿಣಾಮ ಬೀರುವುದು ಖಚಿತ ಎಂದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:30 pm, Fri, 22 August 25
