
ಭಾರತ ಮತ್ತು ಇಂಗ್ಲೆಂಡ್ (India vs England) ನಡುವಿನ ಏಕದಿನ ಸರಣಿಯ ಮೂರನೇ ಮತ್ತು ಕೊನೆಯ ಪಂದ್ಯ ಜುಲೈ 19 ರ ಭಾನುವಾರದಂದು ನಡೆಯಲಿದೆ. ಈ ಪಂದ್ಯದ ಫಲಿತಾಂಶವು ಏಕದಿನ ಸರಣಿ ಟ್ರೋಫಿಯನ್ನು ಯಾರು ಗೆಲ್ಲುತ್ತಾರೆ ಎಂಬುದನ್ನು ನಿರ್ಧರಿಸುತ್ತದೆ. ಲಾರ್ಡ್ಸ್‌ನ (Lord’s cricket ground) ಇತಿಹಾಸವನ್ನು ನೋಡಿದರೆ, ಆತಿಥೇಯ ಇಂಗ್ಲೆಂಡ್ ಮೇಲುಗೈ ಸಾಧಿಸಿದೆ. ಟೀಂ ಇಂಡಿಯಾ ಕಳೆದ 22 ವರ್ಷಗಳಿಂದ ಅಂದರೆ 2004 ರಿಂದ ಈ ಮೈದಾನದಲ್ಲಿ ಒಂದೇ ಒಂದು ಪಂದ್ಯವನ್ನು ಗೆದ್ದಿಲ್ಲ. ಆದ್ದರಿಂದ ಈ ಬಾರಿ ಟೀಂ ಇಂಡಿಯಾ ಇತಿಹಾಸವನ್ನು ಬದಲಿಸುವ ಇರಾದೆಯಲ್ಲಿದೆ. ಆದರೆ ಗೆಲುವು ಮಾತ್ರವಲ್ಲದೆ, ಈ ಮೈದಾನದಲ್ಲಿ ಭಾರತ ಪುರುಷ ತಂಡದ ಪರ ಯಾರು ಮೊದಲ ಶತಕ ಬಾರಿಸುತ್ತಾರೆ ಎಂಬುದನ್ನು ನೋಡಲು ಅಭಿಮಾನಿಗಳು ಸಹ ಕಾದು ಕುಳಿತಿದ್ದಾರೆ.
ಹೌದು, ಭಾರತ ತಂಡವು ಐತಿಹಾಸಿಕ ಲಾರ್ಡ್ಸ್ ಕ್ರಿಕೆಟ್ ಮೈದಾನದಲ್ಲಿ ಟೆಸ್ಟ್, ಏಕದಿನ ಮತ್ತು ಟಿ20 ಸ್ವರೂಪಗಳಲ್ಲಿ ಹಲವಾರು ಪಂದ್ಯಗಳನ್ನು ಆಡಿದೆ. ಈ ಮೈದಾನವು ಮೂರು ಸ್ವರೂಪಗಳಲ್ಲಿ ಯಾವುದರಲ್ಲೂ ಭಾರತೀಯ ತಂಡಕ್ಕೆ ಹೆಚ್ಚಿನ ಯಶಸ್ಸನ್ನು ತಂದುಕೊಟ್ಟಿಲ್ಲ. 1983 ರಲ್ಲಿ ಭಾರತ ಇಲ್ಲಿ ತನ್ನ ಮೊದಲ ವಿಶ್ವಕಪ್ ಗೆದ್ದಿದ್ದರೂ ಮತ್ತು ಕೆಲವು ಸ್ಮರಣೀಯ ಟೆಸ್ಟ್ ವಿಜಯಗಳನ್ನು ಸಾಧಿಸಿದ್ದರೂ, ಈ ಮೈದಾನವು ವಿಶೇಷವಾಗಿ ಉತ್ತಮವಾಗಿಲ್ಲ.
ಆದರೆ ಫಲಿತಾಂಶಗಳನ್ನು ಹೊರತುಪಡಿಸಿ, ಟೀಂ ಇಂಡಿಯಾದ ಬ್ಯಾಟ್ಸ್‌ಮನ್‌ಗಳ ಬಗ್ಗೆ ಮಾತನಾಡಿದರೆ, ಅವರು ಟೆಸ್ಟ್ ಪಂದ್ಯಗಳಲ್ಲಿ ಹಲವಾರು ಶತಕಗಳನ್ನು ಸಿಡಿಸಿದ್ದರೂ, ಇಲ್ಲಿಯವರೆಗೆ ಯಾವುದೇ ಭಾರತೀಯ ಬ್ಯಾಟ್ಸ್‌ಮನ್ ಈ ಮೈದಾನದಲ್ಲಿ ಏಕದಿನ ಪಂದ್ಯಗಳಲ್ಲಿ ಶತಕದ ಇನ್ನಿಂಗ್ಸ್ ಆಡಿಲ್ಲ. ಭಾರತ ತಂಡವು 1975 ರಲ್ಲಿ ಇಲ್ಲಿ ತನ್ನ ಮೊದಲ ಏಕದಿನ ಪಂದ್ಯವನ್ನು ಆಡಿತ್ತು. ಅದರ ನಂತರ, 2022 ರವರೆಗಿನ 47 ವರ್ಷಗಳಲ್ಲಿ, ಟೀಂ ಇಂಡಿಯಾ ಈ ಮೈದಾನದಲ್ಲಿ ಕೇವಲ ಒಂಬತ್ತು ಏಕದಿನ ಪಂದ್ಯಗಳನ್ನು ಆಡಿದ್ದು, ಯಾವುದೇ ಬ್ಯಾಟ್ಸ್‌ಮನ್ ಶತಕ ಬಾರಿಸುವಲ್ಲಿ ಯಶಸ್ವಿಯಾಗಿಲ್ಲ.
IND vs ENG: ಲಾರ್ಡ್ಸ್‌ನಲ್ಲಿ ತಮ್ಮ ವೃತ್ತಿಜೀವನದ ಮಹದಾಸೆಯನ್ನು ಈಡೇರಿಸಿಕೊಳ್ತಾರಾ ಕೊಹ್ಲಿ
ಸುನಿಲ್ ಗವಾಸ್ಕರ್, ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ, ಯುವರಾಜ್ ಸಿಂಗ್, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಅವರಂತಹ ದಂತಕಥೆಯ ಬ್ಯಾಟ್ಸ್‌ಮನ್‌ಗಳು ಲಾರ್ಡ್ಸ್‌ನಲ್ಲಿ ಹಲವಾರು ಏಕದಿನ ಪಂದ್ಯಗಳನ್ನು ಆಡಿದ್ದಾರೆ, ಆದರೆ ಅವರಲ್ಲಿ ಯಾರೂ ಶತಕ ಬಾರಿಸಿಲ್ಲ. ಮಾಜಿ ನಾಯಕ ಸೌರವ್ ಗಂಗೂಲಿ 2004 ರಲ್ಲಿ ಇಂಗ್ಲೆಂಡ್ ವಿರುದ್ಧ 90 ರನ್ ಗಳಿಸುವ ಮೂಲಕ ಲಾರ್ಡ್ಸ್‌ನಲ್ಲಿ ಭಾರತೀಯನೊಬ್ಬ ಗಳಿಸಿದ ಅತ್ಯಧಿಕ ಏಕದಿನ ಸ್ಕೋರ್ ದಾಖಲೆಯನ್ನು ಹೊಂದಿದ್ದಾರೆ. ಕಾಕತಾಳೀಯವಾಗಿ, ಲಾರ್ಡ್ಸ್‌ನಲ್ಲಿ ಭಾರತದ ಕೊನೆಯ ಏಕದಿನ ಗೆಲುವು ಅದೇ ಪಂದ್ಯದಲ್ಲಿ ಬಂದಿತ್ತು. ಗಂಗೂಲಿ, ರಾಹುಲ್ ದ್ರಾವಿಡ್, ಯುವರಾಜ್ ಸಿಂಗ್ ಮತ್ತು ಎಂಎಸ್ ಧೋನಿ ಇಲ್ಲಿ ಭಾರತದ ಪರ ತಲಾ ಎರಡು ಅರ್ಧಶತಕಗಳನ್ನು ಸಿಡಿಸಿದ್ದಾರೆ.