India vs England: ಹೀನಾಯ ಸೋಲಿನ ಬೆನ್ನಲ್ಲೇ ಟೀಮ್ ಇಂಡಿಯಾಗೆ ದಂಡದ ಬರೆ..!
India vs England: ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಮೊದಲ ಇನಿಂಗ್ಸ್ನಲ್ಲಿ 416 ರನ್ ಕಲೆಹಾಕಿದರೆ, ಇಂಗ್ಲೆಂಡ್ ತಂಡವು ಮೊದಲ ಇನಿಂಗ್ಸ್ನಲ್ಲಿ 284 ರನ್ಗಳಿಗೆ ಆಲೌಟ್ ಆಗಿತ್ತು. ಮೊದಲ ಇನಿಂಗ್ಸ್ನಲ್ಲಿ 132 ರನ್ಗಳ ಮುನ್ನಡೆ ಪಡೆದ ಭಾರತ ತಂಡವು 2ನೇ ಇನಿಂಗ್ಸ್ನಲ್ಲಿ ಕೇವಲ 245 ರನ್ಗಳಿಗೆ ಆಲೌಟ್ ಆಯಿತು.
ಮಂಗಳವಾರ ಎಡ್ಜ್‌ಬಾಸ್ಟನ್ ಕ್ರಿಕೆಟ್ ಮೈದಾನದಲ್ಲಿ ನಡೆದ ಇಂಗ್ಲೆಂಡ್ (England vs India) ವಿರುದ್ಧ ಐದನೇ ಟೆಸ್ಟ್‌ನಲ್ಲಿ ಟೀಮ್ ಇಂಡಿಯಾ 7 ವಿಕೆಟ್ಗಳಿಂದ ಹೀನಾಯವಾಗಿ ಸೋಲನುಭವಿಸಿತು. ಈ ಸೋಲಿನ ಬೆನ್ನಲ್ಲೇ ನಿಧಾನಗತಿಯ ಓವರ್‌ರೇಟ್‌ಗಾಗಿ ಟೀಮ್ ಇಂಡಿಯಾಗೆ ದಂಡ ವಿಧಿಸಲಾಗಿದೆ. ಅಷ್ಟೇ ಅಲ್ಲದೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಪಾಯಿಂಟ್ ಟೇಬಲ್ನಲ್ಲಿ ಪಾಯಿಂಟ್ ಅನ್ನು ಕಡಿತಗೊಳಿಸಲಾಗಿದೆ. ಪರಿಣಾಮ ಭಾರತ ತಂಡವು ಸರಣಿ ಸಮಬಲಗೊಳಿಸಿದರೂ ಪಾಯಿಂಟ್ ಟೇಬಲ್ನಲ್ಲಿ ನಾಲ್ಕನೇ ಸ್ಥಾನ ಪಡೆಯುವಂತಾಗಿದೆ. ಇತ್ತ ಭಾರತ ತಂಡಕ್ಕೆ 2 ಪೆನಾಲ್ಟಿ ಪಾಯಿಂಟ್‌ಗಳು ನೀಡಲಾದ ಪರಿಣಾಮ ಅತ್ತ ಬಾಬರ್ ಆಜಮ್ ನೇತೃತ್ವದ ಪಾಕಿಸ್ತಾನಕ್ಕೆ ತಂಡವು ಪಾಯಿಂಟ್ ಟೇಬಲ್ನಲ್ಲಿ ಮೂರನೇ ಸ್ಥಾನಕ್ಕೇರಿದೆ.
ಈ ಪಂದ್ಯದಲ್ಲಿ ಭಾರತೀಯ ಬೌಲರ್ಗಳು ನಿಗದಿತ ಸಮಯದೊಳಗೆ ಓವರ್ಗಳನ್ನು ಪೂರ್ಣಗೊಳಿಸಿರಲಿಲ್ಲ. ಹೀಗಾಗಿ ಮ್ಯಾಚ್ ರೆಫರಿ ಪಂದ್ಯದ ಶುಲ್ಕದ ಶೇಕಡಾ 40 ರಷ್ಟು ದಂಡವನ್ನು ವಿಧಿಸಿದ್ದಾರೆ. ಹಾಗೆಯೇ 5 ಪೆನಾಲ್ಟಿ ಪಾಯಿಂಟ್ ಕೂಡ ನೀಡಲಾಗಿದ್ದು, ಇದರಿಂದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಪಾಯಿಂಟ್ ಟೇಬಲ್ನಲ್ಲಿ ಟೀಮ್ ಇಂಡಿಯಾ ಸ್ಥಾನ ಕುಸಿತ ಕಂಡಿದೆ.
ಐಸಿಸಿ ನೀತಿ ಸಂಹಿತೆಯ ಆರ್ಟಿಕಲ್ 2.22 ರ ಪ್ರಕಾರ, ನಿಗದಿತ ಸಮಯದಲ್ಲಿ ಬೌಲಿಂಗ್ ಮಾಡಲು ವಿಫಲವಾದರೆ ಆಟಗಾರರಿಗೆ ಅವರ ಪಂದ್ಯ ಶುಲ್ಕದ ಶೇಕಡಾ 20 ರಷ್ಟು ದಂಡ ವಿಧಿಸಲಾಗುತ್ತದೆ. ಹೆಚ್ಚುವರಿಯಾಗಿ, ICC ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಆರ್ಟಿಕಲ್ 16.11.2 ರ ಪ್ರಕಾರ, ಒಂದು ತಂಡಕ್ಕೆ ಪ್ರತಿ ಓವರ್‌ಗೆ ಒಂದು ಪಾಯಿಂಟ್ ದಂಡ ವಿಧಿಸಲಾಗುತ್ತದೆ. ಅದರಂತೆ ಟೀಮ್ ಇಂಡಿಯಾ 2 ಇನಿಂಗ್ಸ್ಗಳಲ್ಲಿ 2 ಬಾರಿ ಸ್ಲೋ ಓವರ್ ತಪ್ಪನ್ನು ಮಾಡಿದ್ದು, ಹೀಗಾಗಿ ಪಂದ್ಯದ ಶುಲ್ಕ ಶೇ.40 ರಷ್ಟು ದಂಡ ವಿಧಿಸಲಾಗಿದೆ.
ಸದ್ಯ ಪಾಯಿಂಟ್ ಟೇಬಲ್ನಲ್ಲಿ ಭಾರತ ತಂಡವು 75 ಅಂಕಗಳನ್ನು ಹೊಂದಿದ್ದರೂ ಗೆಲುವಿನ ಶೇಕಡಾವಾರಿನಲ್ಲಿ (52.08) ಹಿಂದೆ ಉಳಿದಿದೆ. ಮತ್ತೊಂದೆಡೆ ಪಾಕಿಸ್ತಾನ್ ತಂಡವು 44 ಅಂಕಗಳನ್ನು ಪಡೆದರೂ, ಗೆಲುವಿನ ಶೇಕಡಾವಾರು 52.38 ಹೊಂದಿದೆ. ಹೀಗಾಗಿ ಪಾಕ್ ತಂಡವು ಮೂರನೇ ಸ್ಥಾನ ಅಲಂಕರಿಸಿದೆ.
ಇನ್ನು ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಮೊದಲ ಇನಿಂಗ್ಸ್ನಲ್ಲಿ 416 ರನ್ ಕಲೆಹಾಕಿದರೆ, ಇಂಗ್ಲೆಂಡ್ ತಂಡವು ಮೊದಲ ಇನಿಂಗ್ಸ್ನಲ್ಲಿ 284 ರನ್ಗಳಿಗೆ ಆಲೌಟ್ ಆಗಿತ್ತು. ಮೊದಲ ಇನಿಂಗ್ಸ್ನಲ್ಲಿ 132 ರನ್ಗಳ ಮುನ್ನಡೆ ಪಡೆದ ಭಾರತ ತಂಡವು 2ನೇ ಇನಿಂಗ್ಸ್ನಲ್ಲಿ ಕೇವಲ 245 ರನ್ಗಳಿಗೆ ಆಲೌಟ್ ಆಯಿತು. ಈ ಮೂಲಕ ಇಂಗ್ಲೆಂಡ್ಗೆ ಒಟ್ಟು 378 ರನ್ಗಳ ಟಾರ್ಗೆಟ್ ನೀಡಲಾಗಿತ್ತು. ಜೋ ರೂಟ್ ಹಾಗೂ ಜಾನಿ ಬೈರ್ಸ್ಟೋವ್ ಅವರ ಭರ್ಜರಿ ಶತಕದ ನೆರವಿನೊಂದಿಗೆ ಇಂಗ್ಲೆಂಡ್ ತಂಡವು ಈ ಬೃಹತ್ ಗುರಿಯನ್ನು ಬೆನ್ನತ್ತುವ ಮೂಲಕ ಭರ್ಜರಿ ಜಯ ಸಾಧಿಸಿ ಹೊಸ ಇತಿಹಾಸ ನಿರ್ಮಿಸಿದೆ.
Published On - 10:32 am, Wed, 6 July 22