ನ್ಯೂಝಿಲೆಂಡ್ ವಿರುದ್ಧದ ಮೂರು ಪಂದ್ಯಗಳ ಸರಣಿಯಲ್ಲಿ ಟೀಮ್ ಇಂಡಿಯಾ 3-0 ಅಂತರದಿಂದ ಸೋಲನುಭವಿಸಿದೆ. ಈ ಹೀನಾಯ ಸೋಲಿನ ಬೆನ್ನಲ್ಲೇ ಭಾರತ ತಂಡದ ಕಳಪೆ ಪ್ರದರ್ಶನದ ವಿರುದ್ಧ ಟೀಕೆಗಳು ಕೇಳಿ ಬಂದಿದ್ದವು. ಅದರಲ್ಲೂ ಈ ಸೋಲು ಟೆಸ್ಟ್ ಕ್ರಿಕೆಟ್ನಲ್ಲಿ ಭಾರತ ತಂಡದ ಅಧಃಪತನಕ್ಕೆ ಮುನ್ನುಡಿ ಎಂದು ವಿಶ್ಲೇಷಿಸಲಾಗಿತ್ತು. ಆದರೆ ಅಂತಹದ್ದೇನು ಸಹ ಸಂಭವಿಸಲ್ಲ ಎಂದಿದ್ದಾರೆ ನ್ಯೂಝಿಲೆಂಡ್ ತಂಡದ ನಾಯಕ ಟಾಮ್ ಲ್ಯಾಥಮ್.
ಟೀಮ್ ಇಂಡಿಯಾ ನ್ಯೂಝಿಲೆಂಡ್ ವಿರುದ್ಧ ಸೋತ ಮಾತ್ರಕ್ಕೆ, ಅವರು ಕಳಪೆ ತಂಡವಲ್ಲ. ರಾತ್ರೋರಾತ್ರಿ ಒಂದು ತಂಡ ಕಳಪೆ ತಂಡವಾಗಿ ಮಾರ್ಪಡಲ್ಲ. ನನ್ನ ಪ್ರಕಾರ ಭಾರತ ತಂಡವು ಅದ್ಭುತವಾಗಿ ಕಂಬ್ಯಾಕ್ ಮಾಡಲಿದೆ ಎಂದು ಟಾಮ್ ಲ್ಯಾಥಮ್ ಅಭಿಪ್ರಾಯಪಟ್ಟಿದ್ದಾರೆ.
ಭಾರತೀಯ ಕ್ರಿಕೆಟ್ ನಿಜವಾಗಿಯೂ ವಿಶೇಷವಾಗಿದೆ. ನಾವು ಅವರ ವಿರುದ್ಧ ಸಾಕಷ್ಟು ಕ್ರಿಕೆಟ್ ಆಡಿದ್ದೇವೆ. ಐಪಿಎಲ್‌ನಲ್ಲಿ ಹಲವು ಆಟಗಾರರು ಅವರೊಂದಿಗೆ ಆಡುತ್ತಾರೆ. ನಮ್ಮ ಗೆಲುವಿನಲ್ಲಿ ಅವರು ಕೃಪೆ ತೋರಿದ್ದಾರೆ ಎಂದು ಹೇಳಬಹುದೇ ಹೊರತು, ಅವರು ಕೆಟ್ಟ ತಂಡವಂತು ಅಲ್ಲ ಟಾಮ್ ಲ್ಯಾಥಮ್ ಹೇಳಿದ್ದಾರೆ.
ನನ್ನ ಪ್ರಕಾರ ಟೀಮ್ ಇಂಡಿಯಾ ಇನ್ನೂ ಗುಣಮಟ್ಟದ ತಂಡವಾಗಿಯೇ ಉಳಿದಿದೆ. ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಒಂದು ತಂಡ ಕೆಟ್ಟ ತಂಡವಾಗುವುದಿಲ್ಲ. ಅವರು ಈಗಲೂ ಅಸಾಧಾರಣ ತಂಡವಾಗಿಯೇ ಉಳಿದಿದೆ. ಹೀಗಾಗಿ ಸರಿಯಾದ ಸಮಯಕ್ಕೆ ಟೀಮ್ ಇಂಡಿಯಾ ಪುಟಿದೇಳುವ ವಿಶ್ವಾಸವಿದೆ ಎಂದು ನ್ಯೂಝಿಲೆಂಡ್ ಟೆಸ್ಟ್ ತಂಡದ ನಾಯಕ ಲಾಥಮ್ ತಿಳಿಸಿದ್ದಾರೆ.
ಇತ್ತೀಚೆಗೆ ನಡೆದ ಭಾರತದ ವಿರುದ್ಧದ 3 ಪಂದ್ಯಗಳ ಟೆಸ್ಟ್ ಸರಣಿಯನ್ನು ನ್ಯೂಝಿಲೆಂಡ್ 3-0 ಅಂತರದಿಂದ ಗೆದ್ದುಕೊಂಡಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಕಿವೀಸ್ ಪಡೆ 8 ವಿಕೆಟ್ಗಳ ಜಯ ಸಾಧಿಸಿತ್ತು. ಇನ್ನು ಪುಣೆಯಲ್ಲಿ ನಡೆದ 2ನೇ ಪಂದ್ಯವನ್ನು ನ್ಯೂಝಿಲೆಂಡ್ 113 ರನ್ಗಳಿಂದ ಗೆದ್ದುಕೊಂಡಿತ್ತು. ಹಾಗೆಯೇ ಮೂರನೇ ಟೆಸ್ಟ್ ಪಂದ್ಯದಲ್ಲಿ 25 ರನ್ಗಳ ಜಯ ಸಾಧಿಸುವ ಮೂಲಕ 3-0 ಅಂತರದಿಂದ ಸರಣಿ ಗೆದ್ದುಕೊಂಡಿತ್ತು.
ವಿಶೇಷ ಎಂದರೆ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಭಾರತದಲ್ಲಿ ಇದು ನ್ಯೂಝಿಲೆಂಡ್ ತಂಡದ ಮೊದಲ ಟೆಸ್ಟ್ ಸರಣಿ ಗೆಲುವಾಗಿದೆ. ಈ ಗೆಲುವಿನೊಂದಿಗೆ ಭಾರತದಲ್ಲಿ ಟೀಮ್ ಇಂಡಿಯಾವನ್ನು 3-0 ಅಂತರದಿಂದ ಸೋಲಿಸಿದ ಮೊದಲ ತಂಡವೆಂಬ ಹೆಗ್ಗಳಿಕೆಗೆ ಪಾತ್ರವಾಯಿತು.
ಇದನ್ನೂ ಓದಿ: IPL 2025: ಐಪಿಎಲ್ ಮೆಗಾ ಹರಾಜಿಗೆ ಇಟಲಿ ಆಟಗಾರ ಎಂಟ್ರಿ
ಇದೀಗ ಟೀಮ್ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗಾಗಿ ಸಜ್ಜಾಗುತ್ತಿದೆ. ಈ ಸರಣಿಯ ಮೂಲಕ ಭಾರತ ತಂಡವು ಬೌನ್ಸ್ ಬ್ಯಾಕ್ ಮಾಡುವ ವಿಶ್ವಾಸವನ್ನು ಕಿವೀಸ್ ತಂಡದ ನಾಯಕ ಟಾಮ್ ಲ್ಯಾಥಮ್ ವ್ಯಕ್ತಪಡಿಸಿದ್ದಾರೆ.