AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾಯಕನ ಜೊತೆ ಜಗಳವಾಡಿ ಅರ್ಧದಲ್ಲೇ ಮೈದಾನ ತೊರೆದ ವಿಂಡೀಸ್ ವೇಗಿ

West Indies vs England: ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ತಂಡವು 50 ಓವರ್​ಗಳಲ್ಲಿ 8 ವಿಕೆಟ್ ಕಳೆದುಕೊಂಡು 263 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ವೆಸ್ಟ್ ಇಂಡೀಸ್ ಪರ ಬ್ರಾಂಡನ್ ಕಿಂಗ್ (102) ಹಾಗೂ ಕೀಸಿ ಕಾರ್ಟಿ (128) ಭರ್ಜರಿ ಶತಕ ಬಾರಿಸಿದರು.

ನಾಯಕನ ಜೊತೆ ಜಗಳವಾಡಿ ಅರ್ಧದಲ್ಲೇ ಮೈದಾನ ತೊರೆದ ವಿಂಡೀಸ್ ವೇಗಿ
Alzarri Joseph
ಝಾಹಿರ್ ಯೂಸುಫ್
|

Updated on: Nov 07, 2024 | 2:26 PM

Share

ಕ್ರಿಕೆಟ್ ಮೈದಾನದಲ್ಲಿ ಎದುರಾಳಿ ತಂಡಗಳ ವಿರುದ್ಧ ಕೋಪ ತಾಪಗಳು ಕಂಡು ಬರುವುದು ಸಾಮಾನ್ಯ. ಆದರೆ ವೆಸ್ಟ್ ಇಂಡೀಸ್ ತಂಡ ಆಟಗಾರ ಅಲ್ಝಾರಿ ಜೋಸೆಫ್ ತನ್ನ ನಾಯಕನೇ ವಿರುದ್ಧವೇ ಜಗಳವಾಡಿಕೊಂಡಿದ್ದಾರೆ. ಈ ಜಗಳವು ತಾರಕ್ಕೇರಿ ಅರ್ಧದಲ್ಲೇ ಮೈದಾನ ತೊರೆದ ಘಟನೆ ಕೂಡ ನಡೆದಿದೆ. ಬಾರ್ಬಡೋಸ್​ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯದ ವೇಳೆ ಈ ಘಟನೆ ನಡೆದಿದ್ದು, ಪಂದ್ಯದ ನಡುವೆಯೇ ಅಲ್ಝಾರಿ ಜೋಸೆಫ್ ಮೈದಾನ ತೊರೆದಿದ್ದಾರೆ.

ಈ ಪಂದ್ಯದ 4ನೇ ಓವರ್​ನಲ್ಲಿ ಅಲ್ಝಾರಿ ಜೋಸೆಫ್ ದಾಳಿಗಿಳಿದಿದ್ದರು. ಇದೇ ವೇಳೆ ನಾಯಕ ಶಾಯ್ ಹೋಪ್ ಸೆಟ್ ಮಾಡಿದ ಫೀಲ್ಡಿಂಗ್​ನಿಂದ ಅಲ್ಝಾರಿ ಸಂತುಷ್ಟರಾಗಿರಲಿಲ್ಲ. ಹೀಗಾಗಿ ನಾಯಕನೊಂದಿಗೆ ಫೀಲ್ಡಿಂಗ್ ವಿಚಾರವಾಗಿ ವಾಗ್ವಾದಕ್ಕಿಳಿದಿದ್ದಾರೆ.

ಅತ್ತ ಕಡೆಯಿಂದ ಶಾಯ್ ಹೋಪ್ ಕೂಡ ಅಲ್ಝಾರಿ ಜೋಸೆಫ್​ಗೆ ಪ್ರತ್ಯುತ್ತರ ನೀಡಿದ್ದಾರೆ. ಇದರಿಂದ ಕೋಪಗೊಂಡ ಅಲ್ಝಾರಿ ಬೌನ್ಸರ್​ ಎಸೆಯುವ ಮೂಲಕ ಜೋರ್ಡನ್ ಕಾಕ್ಸ್ (1) ವಿಕೆಟ್ ಪಡೆದರು.

ಈ ವೇಳೆಯು ನಾಯಕನೊಂದಿಗೆ ವಾಗ್ವಾದ ಮುಂದುವರೆಸಿದರು. ಅಷ್ಟೇ ಅಲ್ಲದೆ 4ನೇ ಓವರ್​ ಮುಗಿಯುತ್ತಿದ್ದಂತೆ ಅಲ್ಝಾರಿ ಜೋಸೆಫ್ ಮೈದಾನ ತೊರೆದು ಡ್ರೆಸ್ಸಿಂಗ್​ ರೂಮ್​ಗೆ ತೆರಳಿದ್ದಾರೆ. ಇದೇ ವೇಳೆ ವೆಸ್ಟ್ ಇಂಡೀಸ್ ತಂಡದ ಕೋಚ್ ಡ್ಯಾರೆನ್ ಸ್ಯಾಮಿ ಕೂಡ ಆಟಗಾರರನ್ನು ಬೌಂಡರಿ ಲೈನ್​ನ ಹೊರಗೆ ನಿಂತು ನಿಯಂತ್ರಿಸುತ್ತಿರುವುದು ಕಾಣಬಹುದು.

ಅಲ್ಝಾರಿ ಜೋಸೆಫ್ ವಿಡಿಯೋ:

ಅತ್ತ ಅರ್ಧದಲ್ಲೇ ಮೈದಾನ ತೊರೆದ ಅಲ್ಝಾರಿ ಜೋಸೆಫ್ ಕೆಲ ನಿಮಿಷಗಳ ಬಳಿಕ ಮತ್ತೆ ಬಂದಿದ್ದಾರೆ. ಅಲ್ಲದೆ 10 ಓವರ್​ಗಳನ್ನು ಪೂರ್ಣಗೊಳಿಸಿ 2 ವಿಕೆಟ್ ಕಬಳಿಸಿದರು. ಇದೀಗ ಅಲ್ಝಾರಿ ಜೋಸೆಫ್ ಅವರ ಕೋಪ ತಾಪದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಗೆದ್ದು ಬೀಗಿದ ವಿಂಡೀಸ್:

ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ತಂಡವು 50 ಓವರ್​ಗಳಲ್ಲಿ 8 ವಿಕೆಟ್ ಕಳೆದುಕೊಂಡು 263 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ವೆಸ್ಟ್ ಇಂಡೀಸ್ ಪರ ಬ್ರಾಂಡನ್ ಕಿಂಗ್ (102) ಹಾಗೂ ಕೀಸಿ ಕಾರ್ಟಿ (128) ಭರ್ಜರಿ ಶತಕ ಬಾರಿಸಿದರು. ಈ ಸೆಂಚುರಿಗಳ ನೆರವಿನಿಂದ ವೆಸ್ಟ್ ಇಂಡೀಸ್ ತಂಡವು 43 ಓವರ್​ಗಳಲ್ಲಿ 267 ರನ್ ಬಾರಿಸಿ 8 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ.

ಇದನ್ನೂ ಓದಿ: IPL 2025: RCB ಖರೀದಿಸಲೇಬೇಕಾದ 4 ಆಟಗಾರರನ್ನು ಹೆಸರಿಸಿದ ABD

ಈ ಗೆಲುವಿನೊಂದಿಗೆ ವೆಸ್ಟ್ ಇಂಡೀಸ್ ತಂಡವು ಮೂರು ಪಂದ್ಯಗಳ ಸರಣಿಯನ್ನು 2-1 ಅಂತರದಿಂದ ಗೆದ್ದುಕೊಂಡಿದೆ. ಇದಕ್ಕೂ ಮುನ್ನ ನಡೆದ ಮೊದಲ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವು 8 ವಿಕೆಟ್​ಗಳ ಜಯ ಸಾಧಿಸಿದರೆ, 2ನೇ ಏಕದಿನ ಪಂದ್ಯವನ್ನು ಇಂಗ್ಲೆಂಡ್ 5 ವಿಕೆಟ್​ಗಳಿಂದ ಗೆದ್ದುಕೊಂಡಿತ್ತು. ಇದೀಗ ಮೂರನೇ ಏಕದಿನ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿ ವಿಂಡೀಸ್ ಪಡೆ ಸರಣಿ ಗೆಲುವು ದಾಖಲಿಸಿತು.