IND vs SA 2nd Odi: ಟೀಮ್ ಇಂಡಿಯಾಗೆ ಗೆಲ್ಲಲೇಬೇಕಾದ ಅನಿವಾರ್ಯತೆ: ತಂಡದಲ್ಲಿ 2 ಬದಲಾವಣೆ ಸಾಧ್ಯತೆ

India Predicted Playing XI: ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದ ರಿಷಬ್ ಪಂತ್ (16), ಶ್ರೇಯಸ್ ಅಯ್ಯರ್ (17) ರನ್ ಸೇರಿಸಲಷ್ಟೇ ಶಕ್ತರಾದರು.

IND vs SA 2nd Odi: ಟೀಮ್ ಇಂಡಿಯಾಗೆ ಗೆಲ್ಲಲೇಬೇಕಾದ ಅನಿವಾರ್ಯತೆ: ತಂಡದಲ್ಲಿ 2 ಬದಲಾವಣೆ ಸಾಧ್ಯತೆ
IND vs SA 2nd Odi
Follow us
TV9 Web
| Updated By: ಝಾಹಿರ್ ಯೂಸುಫ್

Updated on: Jan 20, 2022 | 7:28 PM

ಭಾರತ-ದಕ್ಷಿಣ ಆಫ್ರಿಕಾ ನಡುವಣ ಏಕದಿನ ಸರಣಿಯ 2ನೇ ಪಂದ್ಯವು ಶುಕ್ರವಾರ ನಡೆಯಲಿದೆ. ಮೊದಲ ಪಂದ್ಯದಲ್ಲಿ ಸೋತಿರುವ ಭಾರತ ತಂಡದ 2ನೇ ಪಂದ್ಯದ ಪ್ಲೇಯಿಂಗ್ ಇಲೆವೆನ್​ನಲ್ಲಿ ಬದಲಾವಣೆ ಮಾಡಿಕೊಳ್ಳುವ ಸಾಧ್ಯತೆಯಿದೆ. ಏಕೆಂದರೆ ಮೊದಲ ಪಂದ್ಯ ನಡೆದ ಪಾರ್ಲ್‌ನ ಬೋಲ್ಯಾಂಡ್ ಪಾರ್ಕ್‌ನಲ್ಲೇ ಈ ಪಂದ್ಯ ನಡೆಯಲಿದ್ದು, ಹೀಗಾಗಿ ಮೊದಲ ಪಂದ್ಯದಲ್ಲಿ ವಿಫಲರಾದ ಒಂದಿಬ್ಬರನ್ನು ಕೈ ಬಿಡುವ ಸಾಧ್ಯತೆ ಹೆಚ್ಚಿದೆ. ಮೊದಲ ಏಕದಿನ ಪಂದ್ಯದಲ್ಲಿ ಭಾರತದ ಮಧ್ಯಮ ಕ್ರಮಾಂಕವು ದಯನೀಯವಾಗಿ ವಿಫಲವಾಗಿದೆ. ಕೆಎಲ್ ರಾಹುಲ್ ಔಟಾದ ನಂತರ ಶಿಖರ್ ಧವನ್ ಮತ್ತು ವಿರಾಟ್ ಕೊಹ್ಲಿ ಎರಡನೇ ವಿಕೆಟ್‌ಗೆ 92 ರನ್‌ಗಳ ಜೊತೆಯಾಟ ಆಡಿದರು. ಆದರೆ ಈ ಜೋಡಿ ವಿಕೆಟ್ ಒಪ್ಪಿಸಿದ ಬಳಿಕ ಭಾರತದ ಮಧ್ಯಮ ಕ್ರಮಾಂಕ ಕೂಡ ಸಂಪೂರ್ಣ ಕುಸಿಯಿತು.

ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದ ರಿಷಬ್ ಪಂತ್ (16), ಶ್ರೇಯಸ್ ಅಯ್ಯರ್ (17) ರನ್ ಸೇರಿಸಲಷ್ಟೇ ಶಕ್ತರಾದರು. ಪದಾರ್ಪಣೆ ಮಾಡಿದ ವೆಂಕಟೇಶ್ ಅಯ್ಯರ್ ಕೂಡ 2 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಇಂತಹ ಪರಿಸ್ಥಿತಿಯಲ್ಲಿ ನಾಯಕ ಕೆಎಲ್ ರಾಹುಲ್ ಎರಡನೇ ಏಕದಿನ ಪಂದ್ಯಕ್ಕೂ ಮುನ್ನ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಿದೆ. ಒಂದು ವೇಳೆ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಸೋತರೆ ಸರಣಿ ಸೌತ್ ಆಫ್ರಿಕಾ ಪಾಲಾಗಲಿದೆ. ಹೀಗಾಗಿ ಮೂರು ಪಂದ್ಯಗಳ ಏಕದಿನ ಸರಣಿಯ 2ನೇ ಪಂದ್ಯವು ಟೀಮ್ ಇಂಡಿಯಾ ಪಾಲಿಗೆ ನಿರ್ಣಾಯಕವಾಗಿದೆ.

ಸೂರ್ಯಕುಮಾರ್ ಯಾದವ್‌ಗೆ ಅವಕಾಶ ಸಿಗಬಹುದು: ಮೊದಲ ಪಂದ್ಯದ ವೈಫಲ್ಯದ ಕಾರಣ 2ನೇ ಪಂದ್ಯಕ್ಕಾಗಿ ಮಧ್ಯಮ ಕ್ರಮಾಂಕದಲ್ಲಿ ಬದಲಾವಣೆ ಆಗಬಹುದು. ಅತ್ತ ಬೆಂಚ್ ಕಾದಿದ್ದ ಸೂರ್ಯಕುಮಾರ್ ಯಾದವ್ ಅವಕಾಶ ನೀಡಬಹುದು. ಏಕೆಂದರೆ ಮೊದಲ ಪಂದ್ಯದಲ್ಲಿ ವೆಂಕಟೇಶ್ ಅಯ್ಯರ್ ಆಲ್​ರೌಂಡರ್ ಆಗಿ ಸ್ಥಾನ ಪಡೆದರೂ ಬೌಲಿಂಗ್ ಮಾಡಿರಲಿಲ್ಲ. ಹೀಗಾಗಿ ಅಯ್ಯರ್ ಸ್ಥಾನದಲ್ಲಿ ಸೂರ್ಯಕುಮಾರ್ ಯಾದವ್ ಅವರನ್ನು ಕಣಕ್ಕಿಳಿಸಬಹುದು.

ಚಾಹಲ್-ಅಶ್ವಿನ್ ಅವರ ನೀರಸ ಪ್ರದರ್ಶನ: ಮೊದಲ ಪಂದ್ಯದಲ್ಲಿ ಭಾರತದ ಸೋಲಿಗೆ ಮಧ್ಯಮ ಓವರ್‌ನಲ್ಲಿ ಭಾರತೀಯ ಬೌಲರ್‌ಗಳ ಪ್ರದರ್ಶನ ಕೂಡ ಒಂದು ಕಾರಣ. ವಿಶೇಷವಾಗಿ, ಪಾರ್ಲ್‌ನ ಸಹಾಯಕ ಪಿಚ್‌ನಲ್ಲಿಯೂ ಸ್ಪಿನ್ನರ್‌ಗಳು ಪರಿಣಾಮಕಾರಿ ಎಂದು ಸಾಬೀತುಪಡಿಸಲಿಲ್ಲ. ಆರ್ ಅಶ್ವಿನ್ ಮತ್ತು ಯುಜ್ವೇಂದ್ರ ಚಹಾಲ್ ತಮ್ಮ 20 ಓವರ್‌ಗಳ ಕೋಟಾದಲ್ಲಿ 106 ರನ್ ನೀಡಿ ಕೇವಲ ಒಂದು ವಿಕೆಟ್ ಪಡೆದರು. ಮತ್ತೊಂದೆಡೆ, ದಕ್ಷಿಣ ಆಫ್ರಿಕಾ ಪರ ಏಡನ್ ಮಾರ್ಕ್ರಾಮ್, ತಬ್ರೇಜ್ ಶಮ್ಸಿ ಮತ್ತು ಕೇಶವ್ ಮಹಾರಾಜ್ ಒಟ್ಟು 26 ಓವರ್‌ಗಳನ್ನು ಬೌಲ್ ಮಾಡಿ 124 ರನ್‌ಗಳಿಗೆ 4 ವಿಕೆಟ್ ಪಡೆದರು. ಇದು ಪಂದ್ಯದ ಗೆಲುವಿನ ಅಥವಾ ಸೋಲಿನ ಫಲಿತಾಂಶವನ್ನು ನಿರ್ಧರಿಸುವಲ್ಲಿ ನಿರ್ಣಾಯಕವಾಯಿತು.

ಚಾಹಲ್-ಅಶ್ವಿನ್ ಮಧ್ಯಮ ಓವರ್‌ನಲ್ಲಿ ವಿಕೆಟ್ ಪಡೆಯುವಲ್ಲಿ ವಿಫಲರಾದರು. ಮತ್ತೊಂದೆಡೆ ಬವುಮಾ ಮತ್ತು ವ್ಯಾನ್ ಡೆರ್ ಡುಸ್ಸೆನ್ ದಾಖಲೆಯ ಜೊತೆಯಾಟ ಆಡುವ ಮೂಲಕ ಗೆಲುವಿಗೆ ಅಡಿಪಾಯ ಹಾಕಿದರು. ಇಂತಹ ಪರಿಸ್ಥಿತಿಯಲ್ಲಿ ಈ ಇಬ್ಬರು ಸ್ಪಿನ್ನರ್‌ಗಳಲ್ಲಿ ಯಾರನ್ನಾದರೂ ಎರಡನೇ ಏಕದಿನ ಪಂದ್ಯದಲ್ಲಿ ಹೊರಗಿಡಬಹುದು. ಅಥವಾ ಪಿಚ್ ಮತ್ತು ಈ ಇಬ್ಬರು ಬೌಲರ್‌ಗಳ ಅನುಭವವನ್ನು ಪರಿಗಣಿಸಿ ಮತ್ತೊಮ್ಮೆ ಅವಕಾಶ ನೀಡಿದರೂ ಅಚ್ಚರಿಪಡಬೇಕಿಲ್ಲ.

ಬುಮ್ರಾ ಮಿಂಚಿಂಗ್: ಜಸ್ಪ್ರೀತ್ ಬುಮ್ರಾ ಹೊರತುಪಡಿಸಿ, ಮೊದಲ ODI ನಲ್ಲಿ, ಶಾರ್ದೂಲ್ ಠಾಕೂರ್ ಮತ್ತು ಭುವನೇಶ್ವರ್ ಕುಮಾರ್ ಇಬ್ಬರೂ ದುಬಾರಿ ಮತ್ತು ವಿಕೆಟ್​ ಪಡೆಯಲು ವಿಫಲರಾದರು. ಆದಾಗ್ಯೂ, ಶಾರ್ದೂಲ್ ಬ್ಯಾಟಿಂಗ್‌ನಲ್ಲಿ ಮಿಂಚಿದರು. ಆದರೆ ಬೌಲಿಂಗ್​ನ ವೈಫಲ್ಯತೆ ಇದೀಗ ಟೀಮ್ ಇಂಡಿಯಾ ಚಿಂತೆಗೆ ಕಾರಣವಾಗಿದೆ. ಇದೀಗ ಮೊಹಮ್ಮದ್ ಸಿರಾಜ್ ಸಂಪೂರ್ಣವಾಗಿ ಫಿಟ್ ಆಗಿದ್ದು, ಹೀಗಾಗಿ ಅವರನ್ನು ಪ್ಲೇಯಿಂಗ್-11 ನಲ್ಲಿ ಸೇರಿಸಿಕೊಳ್ಳಬಹುದು.

ಭಾರತದ ಸಂಭಾವ್ಯ ಪ್ಲೇಯಿಂಗ್ XI ಹೀಗಿರಲಿದೆ: ಕೆಎಲ್ ರಾಹುಲ್, ಶಿಖರ್ ಧವನ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ರಿಷಬ್ ಪಂತ್, ಆರ್ ಅಶ್ವಿನ್, ಯುಜ್ವೇಂದ್ರ ಚಾಹಲ್, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.

ಇದನ್ನೂ ಓದಿ: ICC Mens ODI Team: ಐಸಿಸಿ ಏಕದಿನ ತಂಡ ಪ್ರಕಟ: ಟೀಮ್ ಇಂಡಿಯಾದ ಆಟಗಾರರಿಗಿಲ್ಲ ಸ್ಥಾನ

ಇದನ್ನೂ ಓದಿ: IPL 2022: ಹೊಸ ಎರಡು ತಂಡಗಳು ಆಯ್ಕೆ ಮಾಡಿದ 6 ಆಟಗಾರರು ಇವರೇ..!