IND vs SL: ಟೀಂ ಇಂಡಿಯಾಕ್ಕೆ 45 ಓವರ್‌ಗಳಲ್ಲಿ 207 ರನ್ ಗುರಿ
India vs SL XI Practice Match Day 3: ಕೊಲಂಬೊದಲ್ಲಿ ನಡೆದ ಭಾರತ ಮತ್ತು ಶ್ರೀಲಂಕಾ XI ನಡುವಿನ 3 ದಿನಗಳ ಅಭ್ಯಾಸ ಪಂದ್ಯದ ಮೂರನೇ ದಿನದಂದು, ಶ್ರೀಲಂಕಾ ತಂಡ ಎರಡನೇ ಇನ್ನಿಂಗ್ಸ್‌ನಲ್ಲಿ 200 ರನ್ ಗಳಿಸಿ, ಭಾರತಕ್ಕೆ 207 ರನ್‌ಗಳ ಗುರಿ ನೀಡಿದೆ. ಆರಂಭಿಕ ನಿಶಾನ್ ಮಧುಷ್ಕ 63 ರನ್ ಗಳಿಸಿ ಮಿಂಚಿದರೆ, ಭಾರತದ ಪರ ಗುರ್ನೂರ್ ಬ್ರಾರ್ ಮತ್ತು ರವೀಂದ್ರ ಜಡೇಜಾ ತಲಾ 2 ವಿಕೆಟ್ ಪಡೆದರು. ಭಾರತವು ಉಳಿದ 45 ಓವರ್‌ಗಳಲ್ಲಿ ಈ ಗುರಿಯನ್ನು ಬೆನ್ನಟ್ಟಬೇಕಿದೆ.

ಕೊಲಂಬೊದ ನಾನ್‌ಡಿಸ್ಕ್ರಿಪ್ಟ್ಸ್ ಕ್ರಿಕೆಟ್ ಕ್ಲಬ್ ಮೈದಾನದಲ್ಲಿ ನಡೆದ ಭಾರತ ಮತ್ತು ಶ್ರೀಲಂಕಾ XI (India vs Sri Lanka XI) ನಡುವಿನ 3 ದಿನಗಳ ಅಭ್ಯಾಸ ಪಂದ್ಯದ ಮೂರನೇ ದಿನದಂದು ಎರಡನೇ ಇನ್ನಿಂಗ್ಸ್ ಆರಂಭಿಸಿದ ಆತಿಥೇಯ ಶ್ರೀಲಂಕಾ ತಂಡ ಪೂರ್ಣ 45 ಓವರ್ ಬ್ಯಾಟಿಂಗ್ ಮಾಡಿ 200 ರನ್ ಕಲೆಹಾಕಿದೆ. ಮೊದಲ ಇನ್ನಿಂಗ್ಸ್‌ನಲ್ಲಿ 6 ರನ್‌ಗಳ ಮುನ್ನಡೆ ಪಡೆದುಕೊಂಡಿದ್ದ ಶ್ರೀಲಂಕಾ ಭಾರತದ ಗೆಲುವಿಗೆ 207 ರನ್‌ಗಳ ಗುರಿ ನೀಡಿದೆ. ಉಳಿದಿರುವ 45 ಓವರ್‌ಗಳಲ್ಲಿ ಭಾರತ ತಂಡ ಈ ಗುರಿಯನ್ನು ಬೆನ್ನಟ್ಟಬೇಕಿದೆ. ಇನ್ನು ಎರಡನೇ ಇನ್ನಿಂಗ್ಸ್‌ನಲ್ಲಿ ಶ್ರೀಲಂಕಾ ಪರ ಆರಂಭಿಕ ನಿಶಾನ್ ಮಧುಷ್ಕ ಅತ್ಯಧಿಕ 63 ರನ್‌ಗಳ ಇನ್ನಿಂಗ್ಸ್ ಆಡಿದರು. ಭಾರತದ ಪರ ಗುರ್ನೂರ್ ಬ್ರಾರ್ ಹಾಗೂ ರವೀಂದ್ರ ಜಡೇಜಾ ತಲಾ 2 ವಿಕೆಟ್ ಪಡೆದರು.
ಮೊದಲ ಇನ್ನಿಂಗ್ಸ್‌ನಲ್ಲಿ ಶ್ರೀಲಂಕಾ 363 ರನ್ಗಳಿಗೆ ಇನ್ನಿಂಗ್ಸ್ ಡಿಕ್ಲೇರ್ ಘೋಷಿಸಿದರೆ, ಟೀಂ ಇಂಡಿಯಾ ಎರಡನೇ ದಿನದಾಟದಲ್ಲಿ 6 ವಿಕೆಟ್‌ಗೆ 357 ರನ್ ಕಲೆಹಾಕಿತು. ಹೀಗಾಗಿ 6 ರನ್‌ಗಳ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಆತಿಥೇಯ ಶ್ರೀಲಂಕಾ XI ಮೂರನೇ ದಿನದಾಟದ ಚಹಾ ವಿರಾಮದ ಹೊತ್ತಿಗೆ 45 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 200 ರನ್ ಕಲೆಹಾಕಿ ಡಿಕ್ಲೇರ್ ಘೋಷಿಸಿತು. ಇದರೊಂದಿಗೆ ಭಾರತದ ಗೆಲುವಿಗೆ 207 ರನ್‌ಗಳ ಗುರಿ ನೀಡಿತು.
ಶ್ರೀಲಂಕಾದ ಎರಡನೇ ಇನ್ನಿಂಗ್ಸ್
ಎರಡನೇ ಇನ್ನಿಂಗ್ಸ್‌ನಲ್ಲಿ ಶ್ರೀಲಂಕಾ ಇಲೆವೆನ್ ಪರ ನಿಶಾನ್ ಮದುಷ್ಕ 63 ರನ್ ಗಳಿಸಿ ರಿಟೈರ್ಡ್ ಹರ್ಟ್ ಆದರೆ, ಮತ್ತೊಬ್ಬ ಆರಂಭಿಕ ರವಿಂದು ರಸಂತ 8 ರನ್ ಗಳಿಸಿ ಔಟಾದರು. ಪಸಿಂದು ಸೂರ್ಯಬಂದರ 4 ರನ್ ಗಳಿಸಿದರೆ, ಪವನ್ ರತ್ನಾಯಕೆ 16 ರನ್ ಗಳಿಸಿ ಔಟಾದರು. ಅಂಜೆಲಾ ಬಂಡಾರ 35 ರನ್, ನಿಪುನ್ ಧನಂಜಯ 46 ರನ್ ಮತ್ತು ಸೋನಾಲ್ ದಿನುಷಾ 9 ರನ್ ಗಳಿಸಿ ಔಟಾದರು. ರಮೇಶ್ ಮೆಂಡಿಸ್ 16 ರನ್ ಗಳಿಸಿ ಅಜೇಯರಾಗಿ ಉಳಿದರೆ, ಕೇಶರ ನುವಂತ 1 ರನ್ ಗಳಿಸಿ ಔಟಾದರು. ಭಾರತದ ಪರ ರವೀಂದ್ರ ಜಡೇಜ ಮತ್ತು ಗುರ್ನೂರ್ ಬ್ರಾರ್ ತಲಾ 2 ವಿಕೆಟ್ ಪಡೆದರೆ, ಮೊಹಮ್ಮದ್ ಸಿರಾಜ್ ಮತ್ತು ಪ್ರಸಿದ್ಧ್ ಕೃಷ್ಣ ತಲಾ 1 ವಿಕೆಟ್ ಪಡೆದರು.
ಭಾರತದ ಮೊದಲ ಇನ್ನಿಂಗ್ಸ್
ಮೊದಲ ಇನ್ನಿಂಗ್ಸ್‌ನಲ್ಲಿ ಭಾರತದ ಬ್ಯಾಟಿಂಗ್ ಬಗ್ಗೆ ಹೇಳುವುದಾದರೆ, ಯಶಸ್ವಿ ಜೈಸ್ವಾಲ್ ಖಾತೆ ತೆರೆಯದೆಯೇ ಔಟಾದರು. ಕೆ.ಎಲ್. ರಾಹುಲ್ 40, ದೇವದತ್ ಪಡಿಕ್ಕಲ್ 142, ರವೀಂದ್ರ ಜಡೇಜಾ 63 ರನ್‌ಗಳ ಇನ್ನಿಂಗ್ಸ್ ಆಡಿದರು. ಉಳಿದಂತೆ ರಿಷಭ್ ಪಂತ್ 2, ಧ್ರುವ್ ಜುರೆಲ್ 1 ಮತ್ತು ಮಾನವ್ ಸುತಾರ್ 41 ರನ್ ಗಳಿಸಿ ಔಟಾದರೆ, ಕುಲ್ದೀಪ್ ಯಾದವ್ 1 ರನ್, ಮೊಹಮ್ಮದ್ ಸಿರಾಜ್ 1 ರನ್, ಸರಾಂಶ್ ಜೈನ್ 22 ರನ್ ಗಳಿಸಿದರು. ಗುರ್ನೂರ್ ಬ್ರಾರ್ 36 ರನ್ ಗಳಿಸಿ ಅಜೇಯರಾಗಿ ಉಳಿದರು. ಶ್ರೀಲಂಕಾ ಪರ ರಮೇಶ್ ಮೆಂಡಿಸ್-ಅಸಂಕಾ ಮನೋಜ್ ತಲಾ 2 ವಿಕೆಟ್ ಪಡೆದರೆ, ವಿಶ್ವ ಫೆರ್ನಾಂಡೊ ಮತ್ತು ಕೇಸರ ನುವಂತ ತಲಾ 1 ವಿಕೆಟ್ ಪಡೆದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:28 pm, Sun, 9 August 26




