IND vs SL: ಅತಿ ಹೆಚ್ಚು ನೋ ಬಾಲ್; ಅನಗತ್ಯ ದಾಖಲೆ ಬರೆದ ಭಾರತದ ಸ್ಪಿನ್ನರ್​​ಗಳು

India vs Sri Lanka Test: ಭಾರತ-ಶ್ರೀಲಂಕಾ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ ಸ್ಪಿನ್ನರ್‌ಗಳ ಅತಿಯಾದ ನೋ ಬಾಲ್‌ಗಳು ಅನಗತ್ಯ ದಾಖಲೆ ಸೃಷ್ಟಿಸಿವೆ. ರವೀಂದ್ರ ಜಡೇಜಾ ಹಾಗೂ ಸರಾಂಶ್ ಜೈನ್ ಇಬ್ಬರು ಸೇರಿ ಸರಣಿಯ ಒಂದು ಪಂದ್ಯದಲ್ಲಿ 10 ನೋ ಬಾಲ್‌ಗಳನ್ನು ಎಸೆದಿದ್ದಾರೆ. ಇದು ಭಾರತಕ್ಕೆ ಮುಜುಗರ ತಂದಿದೆ. 2021 ರಿಂದ ಟೆಸ್ಟ್‌ನಲ್ಲಿ ಹೆಚ್ಚು ನೋ ಬಾಲ್ ಎಸೆದ ಸ್ಪಿನ್ನರ್ ಪಟ್ಟಿಯಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ.

IND vs SL: ಅತಿ ಹೆಚ್ಚು ನೋ ಬಾಲ್; ಅನಗತ್ಯ ದಾಖಲೆ ಬರೆದ ಭಾರತದ ಸ್ಪಿನ್ನರ್​​ಗಳು
Team India

Updated on: Aug 26, 2026 | 10:02 PM

ಭಾರತ ಮತ್ತು ಶ್ರೀಲಂಕಾ (India vs Sri Lanka) ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ (Team India) ಸಾಂಘಿಕ ಪ್ರದರ್ಶನ ನೀಡುತ್ತಿದೆ. ಬ್ಯಾಟಿಂಗ್‌ ವಿಭಾಗ ರನ್​​ಗಳ ಶಿಖರ ಕಟ್ಟುತ್ತಿದ್ದರೆ, ಇತ್ತ ಬೌಲಿಂಗ್ ವಿಭಾಗ ಬಹುಬೇಗನೇ ಲಂಕಾ ತಂಡವನ್ನು ಕಟ್ಟಿಹಾಕುತ್ತಿದೆ. ಇದರ ಫಲವಾಗಿ ಟೀಂ ಇಂಡಿಯಾ ಮೊದಲ ಟೆಸ್ಟ್ ಪಂದ್ಯವನ್ನು ಗೆದ್ದಿದ್ದು, ಇದೀಗ ಎರಡನೇ ಟೆಸ್ಟ್ ಗೆಲ್ಲುವ ಸನಿಹದಲ್ಲಿದೆ. ಆದರೆ ಇಡೀ ಸರಣಿಯಲ್ಲಿ ಟೀಂ ಇಂಡಿಯಾದ ಸ್ಪಿನ್ನರ್​ಗಳ ಅಜಾಗರೂಕ ಬೌಲಿಂಗ್ ಅನಗತ್ಯ ದಾಖಲೆಗೆ ದಾರಿ ಮಾಡಿಕೊಟ್ಟಿದೆ. ಈ ಸರಣಿಯಲ್ಲಿ ಟೀಂ ಇಂಡಿಯಾ ಮೂವರು ಸ್ಪಿನ್ನರ್​ಗಳನ್ನು ಆಡಿಸುತ್ತಿದೆ. ಈ ಮೂವರಲ್ಲಿ ಇಬ್ಬರು ಸ್ಪಿನ್ನರ್​ಗಳು ಬೌಲಿಂಗ್ ಮಾಡುವ ವೇಳೆ ಹಲವು ಬಾರಿ ಗೆರೆ ದಾಟಿದ್ದು, ಅನಗತ್ಯ ದಾಖಲೆಗೆ ಕೊರಳೊಡ್ಡಿದ್ದಾರೆ.

ಸ್ಪಿನ್ನರ್​ಗಳಿಂದ ನೋ ಬಾಲ್​ಗಳು

ಮೊದಲ ಟೆಸ್ಟ್ ಪಂದ್ಯದಲ್ಲಿ ರವೀಂದ್ರ ಜಡೇಜಾ, ಮಾನವ್ ಸುತಾರ್ ಹಾಗೂ ಕುಲ್ದೀಪ್ ಯಾದವ್ ಸ್ಪಿನ್ನರ್​ಗಳಾಗಿ ಆಡಿದ್ದರು. ಆ ಪಂದ್ಯದಲ್ಲಿ ರವೀಂದ್ರ ಜಡೇಜಾ ಸಾಕಷ್ಟು ನೋ ಬಾಲ್​ಗಳನ್ನು ಎಸೆದಿದ್ದರು. ಇದರಿಂದ ತಂಡ ಸಂಕಷ್ಟಕ್ಕೂ ಸಿಲುಕಿಸಿತ್ತು. ಎರಡನೇ ಟೆಸ್ಟ್ ವೇಳೆಗೆ ಜಡೇಜಾ ತಮ್ಮ ತಪ್ಪನ್ನು ಸರಿಪಡಿಸಿಕೊಳ್ಳುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಎರಡನೇ ಪಂದ್ಯದಲ್ಲೂ ಜಡೇಜಾ ತಮ್ಮ ತಪ್ಪನ್ನು ಮುಂದುವರೆಸಿದ್ದಾರೆ. ಎರಡನೇ ಟೆಸ್ಟ್​ನಲ್ಲಿ ಜಡೇಜಾ ಜೊತೆಗೆ ಸರಾಂಶ್ ಜೈನ್ ಕೂಡ ಸೇರಿಕೊಂಡಿದ್ದಾರೆ.

ಅನಗತ್ಯ ದಾಖಲೆ

ಎರಡನೇ ಟೆಸ್ಟ್​ನಲ್ಲಿ ಸರಾಂಶ್ ಜೈನ್, ರವೀಂದ್ರ ಜಡೇಜಾ ಮತ್ತು ಮಾನವ್ ಸುತಾರ್ ಒಟ್ಟು 115 ಓವರ್‌ಗಳನ್ನು ಬೌಲಿಂಗ್ ಮಾಡಿದ್ದರು. ಇವರಲ್ಲಿ, ಜಡೇಜಾ ಮತ್ತು ಜೈನ್ 75 ಓವರ್‌ಗಳನ್ನು ಬೌಲಿಂಗ್ ಮಾಡಿದರು. ಈ 75 ಓವರ್‌ಗಳಲ್ಲಿ ಇಬ್ಬರು ಬರೋಬ್ಬರಿ ಒಟ್ಟು 10 ಬಾರಿ ಗೆರೆ ದಾಟಿದರು. ಅಂದರೆ ಇಬ್ಬರು ಸೇರಿ 10 ನೋ-ಬಾಲ್‌ಗಳನ್ನು ಎಸೆದರು. ಮೊದಲ ಇನ್ನಿಂಗ್ಸ್‌ನಲ್ಲಿ, ಜಡೇಜಾ 3 ನೋ-ಬಾಲ್‌ಗಳು ಮತ್ತು ಜೈನ್ 2 ನೋ-ಬಾಲ್‌ಗಳನ್ನು ಬೌಲ್ ಮಾಡಿದರೆ, ಎರಡನೇ ಇನ್ನಿಂಗ್ಸ್‌ನಲ್ಲಿ, ಜೈನ್ 4 ನೋ-ಬಾಲ್‌ಗಳು ಮತ್ತು ಜಡೇಜಾ 1 ನೋ-ಬಾಲ್ ಎಸೆದಿದ್ದಾರೆ. ಈ ಮೂಲಕ ಅನಗತ್ಯ ದಾಖಲೆಯನ್ನು ಟೀಂ ಇಂಡಿಯಾ ಖಾತೆಗೆ ಹಾಕಿದ್ದಾರೆ.

ಅತಿ ಹೆಚ್ಚು ನೋ ಬಾಲ್ ಎಸೆದ ತಂಡಗಳಿವು

2021 ರಿಂದ ಟೆಸ್ಟ್ ಪಂದ್ಯವೊಂದರಲ್ಲಿ ಅತಿ ಹೆಚ್ಚು ನೋ ಬಾಲ್‌ಗಳನ್ನು ಎಸೆದ ಸ್ಪಿನ್ ದಾಳಿಯ ಪಟ್ಟಿಗೆ ಭಾರತ ಮತ್ತು ಶ್ರೀಲಂಕಾ ನಡುವೆ ನಡೆಯುತ್ತಿರುವ ಪಂದ್ಯವೂ ಸೇರ್ಪಡೆಯಾಗಿದೆ. ಈ ಪಂದ್ಯದಲ್ಲಿ ಇದುವರೆಗೆ ಭಾರತದ ಬೌಲರ್‌ಗಳು 11 ನೋ ಬಾಲ್‌ಗಳನ್ನು ಎಸೆದಿದ್ದು, ಅದರಲ್ಲಿ 10 ನೋ ಬಾಲ್‌ಗಳನ್ನು ಸ್ಪಿನ್ನರ್‌ಗಳು ಎಸೆದಿದ್ದಾರೆ. ಈ ಪಟ್ಟಿಯಲ್ಲಿ ಅಫ್ಘಾನಿಸ್ತಾನದ ಸ್ಪಿನ್ನರ್‌ಗಳು ಅಗ್ರಸ್ಥಾನದಲ್ಲಿದ್ದು, 2023ರಲ್ಲಿ ಬಾಂಗ್ಲಾದೇಶದ ವಿರುದ್ಧ ನಡೆದ ಪಂದ್ಯದಲ್ಲಿ ಅಫ್ಘನ್ ತಂಡ 24 ನೋ ಬಾಲ್‌ಗಳನ್ನು ಎಸೆದಿತ್ತು. ಅದರಲ್ಲಿ 15 ನೋ ಬಾಲ್‌ಗಳನ್ನು ಸ್ಪಿನ್ನರ್‌ಗಳು ಎಸೆದಿದ್ದರು.

IND vs SL: ಭಾರತದ ವಿರುದ್ಧ ಈ ಸಾಧನೆ ಮಾಡಿದ 3ನೇ ಬ್ಯಾಟರ್ ಸೋನಲ್ ದಿನುಷಾ

ಈ ಪಟ್ಟಿಯಲ್ಲಿ ಭಾರತ ಎರಡನೇ ಸ್ಥಾನದಲ್ಲಿದ್ದು, 2021 ರಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಪಂದ್ಯದಲ್ಲಿ ಸುಮಾರು 27 ನೋ ಬಾಲ್‌ಗಳನ್ನು ಭಾರತೀಯ ಬೌಲರ್‌ಗಳು ಎಸೆದಿದ್ದರು, ಈ ಪೈಕಿ 14 ನೋ ಬಾಲ್‌ಗಳನ್ನು ಸ್ಪಿನ್ನರ್‌ಗಳು ಎಸೆದಿದ್ದರು. ಇದೀಗ ಈ ಪಟ್ಟಿಗೆ ಭಾರತ ಮತ್ತು ಶ್ರೀಲಂಕಾ ನಡುವೆ ನಡೆಯುತ್ತಿರುವ ಪಂದ್ಯವೂ ಸೇರ್ಪಡೆಯಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us