
ಏಷ್ಯಾಕಪ್ ರೈಸಿಂಗ್ ಸ್ಟಾರ್ಸ್ 2026 ಟೂರ್ನಿಯಲ್ಲಿ ಯುವ ಆಟಗಾರರನ್ನೊಳಗೊಂಡ ಭಾರತ ತಂಡಕ್ಕೆ ಈಗ ನಿಜವಾದ ಸವಾಲು ಎದುರಾಗಿದೆ. ಪಾಕಿಸ್ತಾನ-ಎ ವಿರುದ್ಧದ ಸೋಲಿನಿಂದಾಗಿ ಟೀಂ ಇಂಡಿಯಾ ಸಂಕಷ್ಟಕ್ಕೆ ಸಿಲುಕಿದೆ. ಹೀಗಾಗಿ ಸೆಮಿಫೈನಲ್ ಹಾದಿಯನ್ನು ಸುಗಮ ಮಾಡಿಕೊಳ್ಳಬೇಕಾದರೆ ಯುಎಇ ವಿರುದ್ಧದ ಕೊನೆಯ ಲೀಗ್ ಪಂದ್ಯದಲ್ಲಿ ಭಾರತ ಗೆಲ್ಲಲೇಬೇಕು.ಈ ನಿರ್ಣಾಯಕ ಪಂದ್ಯದಲ್ಲಿ ಭಾರತೀಯ ಬ್ಯಾಟರ್‌ಗಳು ಹೇಗೆ ಆಡುತ್ತಾರೆ ಎಂಬ ಕುತೂಹಲ ಅಭಿಮಾನಿಗಳಲ್ಲಿದೆ. ಅದರಲ್ಲೂ ಯುವ ಆರಂಭಿಕ ಆಟಗಾರ ವೈಭವ್ ಸೂರ್ಯವಂಶಿ ಮೇಲೆ ಹೆಚ್ಚಿನ ನಿರೀಕ್ಷೆಯಿದೆ. ಇತ್ತ ಬೌಲರ್‌ಗಳು ಕೂಡ ತಮ್ಮ ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನ ನೀಡಬೇಕಿದೆ. ನಾಯಕ ತಿಲಕ್ ವರ್ಮಾ ಮುಂದಾಳತ್ವದಲ್ಲಿ ಭಾರತ ತಂಡ ಈ ಮಹತ್ವದ ಪಂದ್ಯಕ್ಕೆ ಸಜ್ಜಾಗಿದೆ.
ಸೆಮಿಫೈನಲ್ ತಲುಪಬೇಕಾದರೆ ಭಾರತ ಬ್ಯಾಟಿಂಗ್ ಮಾತ್ರವಲ್ಲ, ಬೌಲಿಂಗ್‌ನಲ್ಲೂ ಸುಧಾರಣೆ ಮಾಡಿಕೊಳ್ಳಬೇಕಿದೆ. ನೇಪಾಳ ವಿರುದ್ಧದ ಪಂದ್ಯದಲ್ಲಿ ಭಾರತೀಯ ಬೌಲರ್‌ಗಳು ಎದುರಾಳಿ ತಂಡವನ್ನು ಕೇವಲ 26 ರನ್‌ಗಳಿಗೆ ಆಲೌಟ್ ಮಾಡಿ ಮಿಂಚಿದ್ದರು. ಆದರೆ ಪಾಕಿಸ್ತಾನ-ಎ ವಿರುದ್ಧ ಅದೇ ರೀತಿಯ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ವಿಶೇಷವಾಗಿ ಕೊನೆಯ ಓವರ್‌ಗಳಲ್ಲಿ ರನ್ ನಿಯಂತ್ರಿಸುವಲ್ಲಿ ಬೌಲರ್‌ಗಳು ಎಡವಿದ್ದರು. ಹೀಗಾಗಿ ಹರ್ಷಿತ್ ರಾಣಾ, ಪ್ರಿನ್ಸ್ ಯಾದವ್ ಮತ್ತು ಶಹಬಾಜ್ ಅಹ್ಮದ್ ಶಿಸ್ತಿನಿಂದ ಬೌಲಿಂಗ್ ಮಾಡಬೇಕಿದೆ. ಇತ್ತ ಯುಎಇ ತಂಡವನ್ನು ಕೂಡ ಭಾರತ ಹಗುರವಾಗಿ ಪರಿಗಣಿಸುವಂತಿಲ್ಲ. ಪಾಕಿಸ್ತಾನ ವಿರುದ್ಧ 184 ರನ್ ಗಳಿಸಿದ್ದ ಯುಎಇ, ನೇಪಾಳ ವಿರುದ್ಧ ಕೇವಲ 121 ರನ್‌ಗಳಿಗೆ ಆಲೌಟ್ ಆಗಿತ್ತು. ಹೀಗಾಗಿ ಎದುರಾಳಿ ತಂಡಕ್ಕೆ ಆರಂಭದಲ್ಲೇ ಆಘಾತ ನೀಡುವುದು ಭಾರತದ ಬೌಲರ್‌ಗಳ ಮುಂದಿರುವ ಪ್ರಮುಖ ಸವಾಲಾಗಿದೆ.
ಗ್ರೂಪ್-ಬಿಯಲ್ಲಿ ಪಾಕಿಸ್ತಾನ-ಎ ಈಗಾಗಲೇ ಎರಡು ಗೆಲುವುಗಳೊಂದಿಗೆ ನಾಲ್ಕು ಅಂಕಗಳನ್ನು ಪಡೆದುಕೊಂಡಿದೆ. ಭಾರತ ಮತ್ತು ನೇಪಾಳ ತಲಾ ಎರಡು ಅಂಕಗಳನ್ನು ಹೊಂದಿವೆ. ಯುಎಇ ವಿರುದ್ಧ ಭಾರತ ಗೆದ್ದರೆ ನಾಲ್ಕು ಅಂಕಗಳನ್ನು ತಲುಪಲಿದೆ. ಇದರಿಂದ ಸೆಮಿಫೈನಲ್ ಪ್ರವೇಶದ ಆಸೆ ಜೀವಂತವಾಗಿರಲಿದೆ. ಆದರೆ ಅದೇ ದಿನ ನಡೆಯುವ ಪಾಕಿಸ್ತಾನ-ಎ ಮತ್ತು ನೇಪಾಳ ನಡುವಿನ ಪಂದ್ಯದ ಫಲಿತಾಂಶವೂ ಭಾರತದ ಹಾದಿಯನ್ನು ನಿರ್ಧರಿಸಲಿದೆ.
ಒಂದು ವೇಳೆ ನೇಪಾಳ ಗೆದ್ದರೆ ಭಾರತ, ಪಾಕಿಸ್ತಾನ ಮತ್ತು ನೇಪಾಳ ತಂಡಗಳು ತಲಾ ನಾಲ್ಕು ಅಂಕಗಳನ್ನು ಹೊಂದಲಿವೆ. ಆಗ ನೆಟ್ ರನ್‌ರೇಟ್ ನಿರ್ಣಾಯಕವಾಗಲಿದೆ. ಸದ್ಯ ಭಾರತದ ನೆಟ್ ರನ್‌ರೇಟ್ +2.580 ಇದ್ದರೆ, ಪಾಕಿಸ್ತಾನ-ಎ ತಂಡದ್ದು +1.090 ಹಾಗೂ ನೇಪಾಳದ್ದು -2.461 ಆಗಿದೆ. ಹೀಗಾಗಿ ಯುಎಇ ವಿರುದ್ಧ ಕೇವಲ ಗೆಲುವು ಸಾಧಿಸಿದರೆ ಸಾಲದು, ಸಾಧ್ಯವಾದಷ್ಟು ದೊಡ್ಡ ಅಂತರದಲ್ಲಿ ಗೆಲ್ಲುವುದು ಭಾರತಕ್ಕೆ ಅನುಕೂಲವಾಗಲಿದೆ. ಎರಡು ಪಂದ್ಯಗಳ ಫಲಿತಾಂಶ ಹೊರಬಂದ ಬಳಿಕವೇ ಸೆಮಿಫೈನಲ್ ಲೆಕ್ಕಾಚಾರ ಸ್ಪಷ್ಟವಾಗಲಿದೆ.