ಹೀನಾಯವಾಗಿ ಸೋಲಿಸಿ ಪಾಕಿಸ್ತಾನದ ಕನಸನ್ನು ನುಚ್ಚುನೂರು ಮಾಡಿದ ಭಾರತ
ICC U19 World Cup 2026: 2026 ರ ಐಸಿಸಿ ಅಂಡರ್-19 ವಿಶ್ವಕಪ್‌ನ ಸೂಪರ್ ಸಿಕ್ಸ್ ಹಂತದಲ್ಲಿ, ಭಾರತ U19 ತಂಡವು ಪಾಕಿಸ್ತಾನ U19 ತಂಡವನ್ನು 58 ರನ್‌ಗಳಿಂದ ಸೋಲಿಸಿ ಸೆಮಿಫೈನಲ್ ಪ್ರವೇಶಿಸಿದೆ. ಈ ಗೆಲುವಿನೊಂದಿಗೆ ಪಾಕಿಸ್ತಾನ ಟೂರ್ನಿಯಿಂದ ಹೊರಬಿದ್ದಿದೆ. ವೇದಾಂತ್ ತ್ರಿವೇದಿ 68 ರನ್ ಗಳಿಸಿ ತಂಡಕ್ಕೆ ಆಧಾರವಾದರೆ, ಖಿಲನ್ ಪಟೇಲ್ ಮತ್ತು ಆಯುಷ್ ಮ್ಹಾತ್ರೆ ತಲಾ 3 ವಿಕೆಟ್ ಪಡೆದು ಭಾರತದ ಗೆಲುವಿಗೆ ಕಾರಣರಾದರು. ಭಾರತ ಈಗ ಅಫ್ಘಾನಿಸ್ತಾನವನ್ನು ಸೆಮಿಫೈನಲ್‌ನಲ್ಲಿ ಎದುರಿಸಲಿದೆ.

2026 ರ ಐಸಿಸಿ ಅಂಡರ್-19 ವಿಶ್ವಕಪ್‌ನ (U19 World Cup 2026) ಸೂಪರ್ ಸಿಕ್ಸ್ ಹಂತದಲ್ಲಿ, ಭಾರತ ಅಂಡರ್-19 ತಂಡವು ಪಾಕಿಸ್ತಾನ ಅಂಡರ್-19 (India U19 vs Pakistan U19) ತಂಡದ ವಿರುದ್ಧ 58 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಸೆಮಿಫೈನಲ್‌ನಲ್ಲಿ ಸ್ಥಾನ ಪಡೆಯುವ ನಿಟ್ಟಿನಲ್ಲಿ ಈ ಪಂದ್ಯ ಎರಡೂ ತಂಡಗಳಿಗೆ ನಿರ್ಣಾಯಕವಾಗಿತ್ತು. ಅದರಂತೆ ಟೀಂ ಇಂಡಿಯಾ ಪಾಕಿಸ್ತಾನವನ್ನು ಭಾರಿ ಅಂತರದಿಂದ ಸೋಲಿಸಿತು. ಈ ಗೆಲುವಿನೊಂದಿಗೆ ಟೀಂ ಇಂಡಿಯಾ ಸೆಮಿಫೈನಲ್ ತಲುಪಿದರೆ, ಇತ್ತ ಪಾಕಿಸ್ತಾನ ಟೂರ್ನಿಯಿಂದ ಹೊರಬಿದ್ದಿದೆ. ಸೂಪರ್ ಸಿಕ್ಸ್ ಹಂತದಲ್ಲಿ ಆಡಿದ 3 ಪಂದ್ಯಗಳನ್ನು ಗೆದ್ದುಕೊಂಡಿರುವ ಟೀಂ ಇಂಡಿಯಾ 2ನೇ ಗುಂಪಿನಲ್ಲಿ ಅಗ್ರಸ್ಥಾನವನ್ನು ಪಡೆದುಕೊಂಡಿದ್ದು, ಸೆಮಿಫೈನಲ್ ಸುತ್ತಿನಲ್ಲಿ ಅಫ್ಘಾನಿಸ್ತಾನ ತಂಡವನ್ನು ಎದುರಿಸಲಿದೆ.
ವೇದಾಂತ್ ತ್ರಿವೇದಿ ಅರ್ಧಶತಕ
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ಅಂಡರ್-19 ತಂಡ 49.5 ಓವರ್‌ಗಳಲ್ಲಿ 252 ರನ್‌ಗಳಿಗೆ ಆಲೌಟ್ ಆಯಿತು. ವೈಭವ್ ಸೂರ್ಯವಂಶಿ 22 ಎಸೆತಗಳಲ್ಲಿ 30 ರನ್ ಗಳಿಸುವ ಮೂಲಕ ತಂಡಕ್ಕೆ ತ್ವರಿತ ಆರಂಭ ನೀಡಿದರು. ವೈಭವ್ ಔಟಾದ ಬಳಿಕ ತಂಡದ ಇನ್ನಿಂಗ್ಸ್ ಕುಸಿಯಿತು. ಇದರ ಪರಿಣಾಮವಾಗಿ ಕೇವಲ ಒಂಬತ್ತು ಓವರ್‌ಗಳಲ್ಲಿ ಪ್ರಮುಖ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿತು. ಈ ಹಂತದಲ್ಲಿ ತಾಳ್ಮೆಯ ಇನ್ನಿಂಗ್ಸ್ ಕಟ್ಟಿದ ವೇದಾಂತ್ ತ್ರಿವೇದಿ 98 ಎಸೆತಗಳಲ್ಲಿ 68 ರನ್ ಗಳಿಸಿ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದರು.
ಇತ್ತ ಕನಿಷ್ಕ್ ಚೌಹಾಣ್ ಕೂಡ 29 ಎಸೆತಗಳಲ್ಲಿ 35 ರನ್‌ಗಳ ಉಪಯುಕ್ತ ಇನ್ನಿಂಗ್ಸ್ ಆಡಿದರು. ಆರ್‌ಎಸ್ ಅಂಬ್ರೀಶ್ 38 ಎಸೆತಗಳಲ್ಲಿ 29 ರನ್‌ಗಳ ಕಾಣಿಕೆ ನೀಡಿದರು. ಕೊನೆಯ ಓವರ್‌ಗಳಲ್ಲಿ ಕನಿಷ್ಕ್ ಚೌಹಾಣ್ ಮತ್ತು ಖಿಲನ್ ಪಟೇಲ್ ನಡುವಿನ 50 ರನ್‌ಗಳ ಪಾಲುದಾರಿಕೆಯು ಸ್ಕೋರ್ ಅನ್ನು 250 ರ ಗಡಿ ದಾಟಿಸಿತು. ಪಾಕಿಸ್ತಾನ ಪರ, ಅಬ್ದುಲ್ ಸುಭಾನ್ 9.5 ಓವರ್‌ಗಳಲ್ಲಿ ಮೂರು ವಿಕೆಟ್‌ಗಳನ್ನು ಪಡೆದರೆ, ಮೊಹಮ್ಮದ್ ಸಯ್ಯಮ್ ಎರಡು ವಿಕೆಟ್‌ಗಳನ್ನು ಪಡೆದರು.
ಪಾಕ್ ವಿರುದ್ಧದ ಪಂದ್ಯ ಮುಗಿಯುವ ಮುನ್ನವೇ ವಿಶ್ವಕಪ್ ಸೆಮಿಫೈನಲ್‌ಗೇರಿದ ಭಾರತ
ಪಾಕಿಸ್ತಾನ 194 ರನ್‌ಗಳಿಗೆ ಆಲೌಟ್
253 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಪಾಕಿಸ್ತಾನ ಅಂಡರ್-19 ತಂಡವು ಉತ್ತಮ ಆರಂಭ ಪಡೆದುಕೊಂಡಿತು. ಆದರೆ ಮಧ್ಯಮ ಓವರ್‌ಗಳಲ್ಲಿ ಭಾರತೀಯ ಬೌಲರ್‌ಗಳು ಪಾಕ್ ತಂಡವನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾದರು. ಉಸ್ಮಾನ್ ಖಾನ್ 92 ಎಸೆತಗಳಲ್ಲಿ 66 ರನ್ ಗಳಿಸಿದರೆ, ಹಮ್ಜಾ ಜಹೂರ್ 49 ಎಸೆತಗಳಲ್ಲಿ 42 ರನ್ ಗಳಿಸಿದರು. ಫರ್ಹಾನ್ ಯೂಸುಫ್ ಕೂಡ 39 ಎಸೆತಗಳಲ್ಲಿ 38 ರನ್‌ಗಳ ಕಾಣಿಕೆ ನೀಡಿದರು. ಆದಾಗ್ಯೂ, ಪಾಕಿಸ್ತಾನ 46.2 ಓವರ್‌ಗಳಲ್ಲಿ 194 ರನ್‌ಗಳಿಗೆ ಆಲೌಟ್ ಆಗಿ ಪಂದ್ಯವನ್ನು ಸೋತಿದಲ್ಲದೆ ಟೂರ್ನಿಯಿಂದ ಹೊರಬಿತ್ತು. ಭಾರತದ ಪರ ಬೌಲಿಂಗ್ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಖಿಲನ್ ಪಟೇಲ್ ಮತ್ತು ಆಯುಷ್ ಮ್ಹಾತ್ರೆ ತಲಾ ಮೂರು ವಿಕೆಟ್‌ಗಳನ್ನು ಪಡೆದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:16 pm, Sun, 1 February 26
