IND vs AFG: ಅಫ್ಘನ್ ವಿರುದ್ಧ ಭಾರತಕ್ಕೆ ಇನ್ನಿಂಗ್ಸ್ ಮತ್ತು 300 ರನ್​ಗಳ ಜಯ

India Dominates Afghanistan: ನ್ಯೂ ಚಂಡೀಗಢದ ಮುಲ್ಲನ್‌ಪುರದಲ್ಲಿ ನಡೆದ ಭಾರತ vs ಅಫ್ಘಾನಿಸ್ತಾನ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಮೂರು ದಿನಗಳಿಗೂ ಮೊದಲೇ ಭರ್ಜರಿ ಇನ್ನಿಂಗ್ಸ್ ಜಯ ಗಳಿಸಿದೆ. ಭಾರತ ಮೊದಲು ಬ್ಯಾಟಿಂಗ್ ಮಾಡಿ 564 ರನ್ ಗಳಿಸಿತು. ಅಫ್ಘಾನಿಸ್ತಾನ ತಂಡವು ಎರಡೂ ಇನ್ನಿಂಗ್ಸ್‌ಗಳಲ್ಲಿ ಭಾರತದ ಮುನ್ನಡೆಯನ್ನು ತಲುಪುವಲ್ಲಿ ವಿಫಲವಾಗಿ, ಹೀನಾಯ ಇನ್ನಿಂಗ್ಸ್ ಸೋಲಿಗೆ ಶರಣಾಯಿತು. ಗಿಲ್ ನಾಯಕತ್ವದ ಭಾರತೀಯ ಪಡೆ ನಿರೀಕ್ಷಿಸಿದಂತೆ ಏಕಪಕ್ಷೀಯ ಗೆಲುವು ಸಾಧಿಸಿದೆ.

IND vs AFG: ಅಫ್ಘನ್ ವಿರುದ್ಧ ಭಾರತಕ್ಕೆ ಇನ್ನಿಂಗ್ಸ್ ಮತ್ತು 300 ರನ್​ಗಳ ಜಯ
Ind Vs Afg

Updated on: Jun 08, 2026 | 3:45 PM

ನ್ಯೂ ಚಂಡೀಗಢದ ಮುಲ್ಲನ್‌ಪುರದಲ್ಲಿರುವ ಮಹಾರಾಜ ಯಾದವೀಂದ್ರ ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ಅಫ್ಘಾನಿಸ್ತಾನ (India vs Afghanistan) ನಡುವಿನ ಏಕೈಕ ಟೆಸ್ಟ್ ಪಂದ್ಯದವನ್ನು ನಿರೀಕ್ಷಿಸಿದ್ದಂತೆಯೇ ಆತಿಥೇಯ ಟೀಂ ಇಂಡಿಯಾ ಏಕಪಕ್ಷೀಯವಾಗಿ ಗೆದ್ದುಕೊಂಡಿದೆ. ಪೂರ್ಣ ಮೂರು ದಿನವೂ ನಡೆಯದ ಈ ಪಂದ್ಯದಲ್ಲಿ ಗಿಲ್​ ಪಡೆ ಇನ್ನಿಂಗ್ಸ್ ಜಯ ದಾಖಲಿಸಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಟೀಂ ಇಂಡಿಯಾ 8 ವಿಕೆಟ್ ಕಳೆದುಕೊಂಡು 564 ರನ್​ಗಳಿಸಿ ತನ್ನ ಮೊದಲ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಇದಾದ ಬಳಿಕ ಬ್ಯಾಟಿಂಗ್‌ ಆರಂಭಿಸಿದ ಅಫ್ಘಾನಿಸ್ತಾನ 152 ರನ್​ಗಳಿಗೆ ತನ್ನ ಮೊದಲ ಇನ್ನಿಂಗ್ಸ್ ಮುಗಿಸಿತು. ಹೀಗಾಗಿ ಮೊದಲ ಇನ್ನಿಂಗ್ಸ್​ನಲ್ಲಿ 412 ರನ್​ಗಳ ಮುನ್ನಡೆ ಸಾಧಿಸಿದ್ದ ಭಾರತ ಫಾಲೋ ಆನ್ ಹೇರಿತು. ಆದ್ದರಿಂದ ಮತ್ತೆ ಬ್ಯಾಟಿಂಗ್​ಗೆ ಇಳಿದ ಅಫ್ಘನ್ ಪಡೆ 112 ರನ್​ಗಳಿಗೆ ಆಲೌಟ್ ಆಗುವ ಮೂಲಕ ಇನ್ನಿಂಗ್ಸ್ ಮತ್ತು 300 ರನ್​ಗಳ ಹೀನಾಯ ಸೋಲು ಅನುಭವಿಸಿತು.

456 ರನ್ ಕಲೆಹಾಕಿದ ಟೀಂ ಇಂಡಿಯಾ

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಟೀಂ ಇಂಡಿಯಾ ಎರಡು ಶತಕ ಹಾಗೂ 3 ಅರ್ಧಶತಕಗಳ ನೆರವಿನಿಂದ ಮೊದಲ ಇನ್ನಿಂಗ್ಸ್​ನಲ್ಲಿ 456 ರನ್ ಕಲೆಹಾಕಿತು. ತಂಡದ ಪರ ಆರಂಭಿಕ ಕೆಎಲ್ ರಾಹುಲ್ 100 ರನ್​ಗಳ ಇನ್ನಿಂಗ್ಸ್ ಆಡಿದರೆ, ಇತ್ತ ನಾಯಕ ಶುಭ್​ಮನ್ ಗಿಲ್ ಕೂಡ 126 ರನ್​ಗಳ ಇನ್ನಿಂಗ್ಸ್ ಆಡಿದರು. ಇವರಿಬ್ಬರನ್ನು ಹೊರತುಪಡಿಸಿ ಮೂರನೇ ಕ್ರಮಾಂಕದಲ್ಲಿ ಬಂದ ಸಾಯಿ ಸುದರ್ಶನ್ 81 ರನ್​ಗಳ ಇನ್ನಿಂಗ್ಸ್ ಆಡಿದರೆ, ರಿಷಭ್ ಪಂತ್ ಕೂಡ 81 ರನ್​ ಬಾರಿಸಿದರು. ಕೊನೆಯಲ್ಲಿ ವಾಷಿಂಗ್ಟನ್ ಸುಂದರ್ ಕೂಡ 52 ರನ್​ಗಳ ಕಾಣಿಕೆ ನೀಡಿದರು. ಇತ್ತ ಅಫ್ಘಾನಿಸ್ತಾನ ಪರ ಬೌಲಿಂಗ್‌ನಲ್ಲಿ ಮಿಂಚಿದ ಮೊಹಮ್ಮದ್ ಸಲೀಂ 6 ವಿಕೆಟ್​ಗಳ ಗೊಂಚಲು ಪಡೆದರು.

6 ವಿಕೆಟ್ ಪಡೆದ ಮಾನವ್

ಮೊದಲ ಇನ್ನಿಂಗ್ಸ್‌ನಲ್ಲಿ ಅಫ್ಘಾನಿಸ್ತಾನ 152 ರನ್‌ಗಳಿಗೆ ಆಲೌಟ್ ಆಯಿತು. ತಂಡದ ಪರ ರಹಮತ್ ಶಾ 60 ರನ್​ಗಳ ಇನ್ನಿಂಗ್ಸ್ ಆಡಿದ್ದನ್ನು ಬಿಟ್ಟರೆ ಉಳಿದ ಯಾವ ಬ್ಯಾಟ್ಸ್‌ಮನ್​ಗೂ 20 ರನ್​ಗಳ ಗಡಿ ದಾಟಿ ಹೋಗಲು ಸಾಧ್ಯವಾಗಲಿಲ್ಲ. ಅಫ್ಘನ್ ತಂಡವನ್ನು ಇಷ್ಟು ಕಡಿಮೆ ಮೊತ್ತಕ್ಕೆ ಕಟ್ಟಿಹಾಕುವಲ್ಲಿ ಪ್ರಮುಖ ಪಾತ್ರವಹಿಸಿದ ಮಾನವ್ ಸುತಾರ್ ಚೊಚ್ಚಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್​ನಲ್ಲಿ 6 ವಿಕೆಟ್ ಉರುಳಿಸಿದರು. ಈ ಇನ್ನಿಂಗ್ಸ್​ನಲ್ಲಿ ಸುತಾರ್ 22 ಓವರ್‌ಗಳಲ್ಲಿ 33 ರನ್‌ ನೀಡಿ 6 ವಿಕೆಟ್‌ಗಳನ್ನು ಕಬಳಿಸಿದರು. ಇವರ ಜೊತೆಗೆ ಕನ್ನಡಿಗ ಪ್ರಸಿದ್ಧ್ ಕೃಷ್ಣ ಕೂಡ 3 ವಿಕೆಟ್ ಪಡೆದರು. ಮೊದಲ ಇನ್ನಿಂಗ್ಸ್​ನಲ್ಲಿ 412 ರನ್​ಗಳ ಮುನ್ನಡೆ ಪಡೆದುಕೊಂಡ ಟೀಂ ಇಂಡಿಯಾ ಫಾಲೋ ಆನ್ ಹೇರಿತು.

IND vs AFG: ಅಫ್ಘನ್ ವಿರುದ್ಧ 12ನೇ ಟೆಸ್ಟ್ ಶತಕ ಬಾರಿಸಿದ ಕನ್ನಡಿಗ ಕೆಎಲ್ ರಾಹುಲ್‌

112 ರನ್​ಗಳಿಗೆ ಅಫ್ಘನ್ ಆಲೌಟ್

ಫಾಲೋ ಆನ್ ಪಡೆದ ಅಫ್ಘಾನಿಸ್ತಾನದ ಬ್ಯಾಟಿಂಗ್‌ ಎರಡನೇ ಇನ್ನಿಂಗ್ಸ್​ನಲ್ಲೂ ಸುಧಾರಿಸಲಿಲ್ಲ. ಎರಡನೇ ಇನ್ನಿಂಗ್ಸ್‌ನಲ್ಲಿ ಅಫ್ಘನ್ ತಂಡಕ್ಕೆ 9 ವಿಕೆಟ್‌ಗಳಿಗೆ 112 ರನ್‌ ಮಾತ್ರ ಗಳಿಸಲು ಸಾಧ್ಯವಾಯಿತು. ಕೊನೆಯ ಬ್ಯಾಟ್ಸ್‌ಮನ್ ಕ್ರೀಸ್‌ಗೆ ಬರಲಿಲ್ಲ. ಅಫ್ಘಾನಿಸ್ತಾನದ ಎರಡನೇ ಇನ್ನಿಂಗ್ಸ್‌ನಲ್ಲಿ ಕೇವಲ 3 ಬ್ಯಾಟ್ಸ್‌ಮನ್‌ಗಳು ಎರಡಂಕಿಯ ಗಡಿ ದಾಟಲು ಸಾಧ್ಯವಾಯಿತು. ಅಫ್ಘನ್ ಪರ ಸೆದಿಖುಲ್ಲಾ ಅಟಲ್ 42, ಅಬ್ದುಲ್ ಮಲಿಕ್ 8, ರಹಮಾನಲ್ಲಾ ಗುರ್ಬಾಜ್ 24, ರಹಮತ್ ಶಾ 13 ರನ್​ಗಳ ಇನ್ನಿಂಗ್ಸ್ ಆಡಿದರು. ಉಳಿದವರೆಲ್ಲ ಒಂದಂಕಿಗೆ ವಿಕೆಟ್ ಒಪ್ಪಿಸಿದರು. ಭಾರತ ಪರ ಎರಡನೇ ಇನ್ನಿಂಗ್ಸ್​ನಲ್ಲಿ ವಾಷಿಂಗ್ಟನ್ ಸುಂದರ್ 4, ಕುಲ್ದೀಪ್ ಯಾದವ್ 3, ಮಾನವ್ ಸುತಾರ್ ಮತ್ತು ಮೊಹಮ್ಮದ್ ಸಿರಾಜ್ ತಲಾ 1 ವಿಕೆಟ್ ಪಡೆದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:04 pm, Mon, 8 June 26

ಪೃಥ್ವಿಶಂಕರ

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Follow Us