IND vs BAN: ಕ್ಯಾಚ್ ಡ್ರಾಪ್, ಬ್ಯಾಟಿಂಗ್ ವೈಫಲ್ಯ, ದುಬಾರಿ ಓವರ್; ಭಾರತದ ಸೋಲಿಗೆ ಪ್ರಮುಖ ಕಾರಣಗಳಿವು..!
IND vs BAN: ಒಂದು ಹಂತದಲ್ಲಿ ರೋಹಿತ್ ಪಡೆ ಪಂದ್ಯದಲ್ಲಿ ಪುನರಾಗಮನವನ್ನು ಮಾಡಿತ್ತಾದರೂ ತಾನು ಮಾಡಿದ 4 ತಪ್ಪುಗಳಿಂದಾಗಿ ಪಂದ್ಯವನ್ನು ಕಳೆದುಕೊಂಡಿತು.
ಮೀರ್ಪುರದಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾವನ್ನು ಮಣಿಸಿರುವ ಬಾಂಗ್ಲಾದೇಶ (India Vs Bangladesh) 3 ಪಂದ್ಯಗಳ ಸರಣಿಯಲ್ಲಿ 1-0ಯಿಂದ ಮುನ್ನಡೆ ಸಾಧಿಸಿದೆ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ (Rohit Sharma , Virat Kohli, KL Rahul) ಅವರಂತಹ ದೈತ್ಯ ಆಟಗಾರರಿದ್ದರೂ ಟೀಂ ಇಂಡಿಯಾ ತನ್ನ ಅಭಿಯಾನವನ್ನು ಗೆಲುವಿನೊಂದಿಗೆ ಆರಂಭಿಸಲು ಸಾಧ್ಯವಾಗಲಿಲ್ಲ. ವಾಸ್ತವವಾಗಿ, ಟಿ20 ವಿಶ್ವಕಪ್ ನಂತರ ಈ ಮೂವರು ಆಟಗಾರರು ನ್ಯೂಜಿಲೆಂಡ್ ಪ್ರವಾಸದಿಂದ ವಿಶ್ರಾಂತಿ ಪಡೆದಿದ್ದರು. ಹೀಗಾಗಿ ಮೂವರೂ ಬಾಂಗ್ಲಾದೇಶ ಪ್ರವಾಸದಲ್ಲಿ ತಂಡಕ್ಕೆ ಪುನರಾಗಮನ ಮಾಡಿದರು. ಆದರೆ ಈ ಪಂದ್ಯದಲ್ಲಿ ರಾಹುಲ್ ಹೊರತುಪಡಿಸಿ ಯಾವುದೇ ಬ್ಯಾಟ್ಸ್‌ಮನ್‌ಗಳಿಗೆ ರನ್ ಗಳಿಸಲು ಸಾಧ್ಯವಾಗದ ಕಾರಣ ಭಾರತ ಮೊದಲ ಪಂದ್ಯದಲ್ಲೇ ಹೀನಾಯ ಸೋಲನ್ನು ಎದುರಿಸಬೇಕಾಯಿತು. ಒಂದು ಹಂತದಲ್ಲಿ ರೋಹಿತ್ ಪಡೆ ಪಂದ್ಯದಲ್ಲಿ ಪುನರಾಗಮನವನ್ನು ಮಾಡಿತ್ತಾದರೂ ತಾನು ಮಾಡಿದ 4 ತಪ್ಪುಗಳಿಂದಾಗಿ ಪಂದ್ಯವನ್ನು ಕಳೆದುಕೊಂಡಿತು.
ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ಬಾಂಗ್ಲಾದೇಶದ ದಾಳಿಯ ಮುಂದೆ ಪೂರ್ಣ 50 ಓವರ್‌ಗಳನ್ನು ಆಡಲು ಸಾಧ್ಯವಾಗದೇ ಕೇವಲ 41.2 ಓವರ್‌ಗಳಲ್ಲಿ 186 ರನ್‌ಗಳಿಗೆ ಆಲೌಟ್ ಆಯಿತು. ಬಾಂಗ್ಲಾ ಪರ ಶಕೀಬ್ ಅಲ್ ಹಸನ್ 5 ವಿಕೆಟ್ ಪಡೆದು ಟೀಂ ಇಂಡಿಯಾವನ್ನು ಅಲ್ಪರನ್ಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾದರು. ಇದಕ್ಕೆ ಉತ್ತರವಾಗಿ ಗುರಿ ಬೆನ್ನಟ್ಟಿದ ಬಾಂಗ್ಲಾದೇಶ ತಂಡ ಇನ್ನು 24 ಎಸೆತಗಳು ಬಾಕಿ ಇರುವಂತೆಯೇ 9 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಈ ಪಂದ್ಯದಲ್ಲಿ ಗೆಲುವನ್ನು ತನ್ನ ಕೈಯಾರೆ ತಾನೇ ಕೈಚೆಲ್ಲಿದ ಟೀಂ ಇಂಡಿಯಾ ತಾನು ಮಾಡಿದ ಈ ಪ್ರಮುಖ 4 ತಪ್ಪುಗಳಿಗೆ ಸೋಲಿನ ಬೆಲೆ ತೆರಬೇಕಾಯಿತು.
ಇದನ್ನೂ ಓದಿ: IND vs BAN: ಚಿರತೆ ಜಿಗಿತ..! ಲಿಟನ್ ದಾಸ್ ಅದ್ಭುತ ಫೀಲ್ಡಿಂಗ್ಗೆ ಕೊಹ್ಲಿಯೇ ಶಾಕ್..! ವಿಡಿಯೋ ನೋಡಿ
- ಭಾರತದ ಸೋಲಿಗೆ ಬಹುದೊಡ್ಡ ಕಾರಣ ಭಾರತದ ಕಳಪೆ ಬ್ಯಾಟಿಂಗ್, ಆತಿಥೇಯರ ಮುಂದೆ ಭಾರತಕ್ಕೆ ದೊಡ್ಡ ಟಾರ್ಗೆಟ್ ಸೆಟ್ ಮಾಡಲು ಸಾಧ್ಯವಾಗಲಿಲ್ಲ. ರಾಹುಲ್ ಬಿಟ್ಟರೆ ಯಾವುದೇ ಬ್ಯಾಟ್ಸ್ಮನ್ಗೆ ರನ್ಗಳಿಸಲು ಸಾಧ್ಯವಾಗಲಿಲ್ಲ. ಶಿಖರ್ ಧವನ್ 7, ರೋಹಿತ್ ಶರ್ಮಾ 27 ಮತ್ತು ಕೊಹ್ಲಿ 9 ರನ್ ಗಳಿಸಲಷ್ಟೇ ಶಕ್ತರಾದರು. ಕಳಪೆ ಬ್ಯಾಟಿಂಗ್ನಿಂದಾಗಿ ಭಾರತಕ್ಕೆ ಸಂಪೂರ್ಣ 50 ಓವರ್ ಕೂಡ ಆಡಲು ಸಾಧ್ಯವಾಗಲಿಲ್ಲ.
- ಭಾರತದ ಸೋಲಿಗೆ ಮತ್ತೊಂದು ಕಾರಣವೆಂದರೆ ಬಾಂಗ್ಲಾ ಆಲ್ರೌಂಡರ್ ಮೆಹದಿ ಹಸನ್ ಮಿರಾಜ್. ಮೀರಜ್ ಮಾಡು ಇಲ್ಲವೇ ಮಡಿ ಸಮಯದಲ್ಲಿ 38 ರನ್ ಗಳಿಸಿ ಅಜೇಯರಾಗಿ ತಂಡಕ್ಕೆ ಗೆಲುವು ತಂದುಕೊಟ್ಟರು. ಭಾರತ ಗೆಲ್ಲಲು ಒಂದು ಹಂತದಲ್ಲಿ ಕೇವಲ ಒಂದು ವಿಕೆಟ್ ಮಾತ್ರಬೇಕಿತ್ತು. ಆದರೆ ಮೀರಜ್ ಕೊನೆಯವರೆಗೂ ನಿಂತು ಬಾಂಗ್ಲಾದೇಶಕ್ಕೆ ಜಯ ತಂದುಕೊಟ್ಟರು. ಭಾರತದ ಬೌಲರ್‌ಗಳು ಮೀರಜ್ ಮತ್ತು ರೆಹಮಾನ್ ಜೋಡಿಯನ್ನು ಮುರಿಯಲು ಸಾಧ್ಯವಾಗಲಿಲ್ಲ. ಹೀಗಾಗಿ ಇವರಿಬ್ಬರ ನಡುವೆ 51 ರನ್‌ಗಳ ಮುರಿಯದ ಜೊತೆಯಾಟವಿತ್ತು.
- ಈ ಹಂತದಲ್ಲಿ ಟೀಂ ಇಂಡಿಯಾ ಮಾಡಿದ ಆ ಎರಡು ಕಳಪೆ ಫೀಲ್ಡಿಂಗ್ ಕೂಡ ಭಾರತದ ಸೋಲಿಗೆ ಕಾರಣವಾಯಿತು. ಮೊದಲನೆಯದಾಗಿ ರಾಹುಲ್ ಸುಲಭ ಕ್ಯಾಚ್ ಬಿಟ್ಟರೆ, ನಂತರದ ಎಸೆತದಲ್ಲೇ ಸುಂದರ್ ಮತ್ತೊಂದು ಕ್ಯಾಚ್ ಹಿಡಿಯುವ ಅವಕಾಶವನ್ನು ಕೈಚೆಲ್ಲಿದರು. ಭಾರತದ ಕಳಪೆ ಫೀಲ್ಡಿಂಗ್ ಲಾಭ ಪಡೆದ ಬಾಂಗ್ಲಾ ಸುಲಭವಾಗಿ ಗುರಿ ಮುಟ್ಟಿತು.
- ಭಾರತದ ಸೋಲಿಗೆ 4ನೇ ಪ್ರಮುಖ ಕಾರಣ ದೀಪಕ್ ಚಹಾರ್ ಮಾಡಿದ ಅದೊಂದು ದುಬಾರಿ ಓವರ್. 42 ಓವರ್‌ಗಳ ನಂತರ ಬಾಂಗ್ಲಾದೇಶ ಗೆಲುವಿಗೆ 48 ಎಸೆತಗಳಲ್ಲಿ 32 ರನ್‌ಗಳ ಅಗತ್ಯವಿತ್ತು. ಹೀಗಾಗಿ ಈ ಹಂತದಲ್ಲಿ ಭಾರತ ಸುಲಭವಾಗಿ ಗೆಲ್ಲುವ ಹಂತದಲ್ಲಿತ್ತು. ಆದರೆ ಚಹಾರ್ ಮಾಡಿದ 44 ನೇ ಓವರ್ ಪಂದ್ಯವನ್ನು ಭಾರತದ ಕೈಯಿಂದ ಕಸಿದುಕೊಂಡಿತು. ಚಹಾರ್ ಈ ಓವರ್‌ನಲ್ಲಿ ಬರೋಬ್ಬರಿ 15 ರನ್ ನೀಡಿದರು. ಈ ಓವರ್‌ನ ನಂತರ, ಬಾಂಗ್ಲಾದೇಶಕ್ಕೆ 36 ಎಸೆತಗಳಲ್ಲಿ ಕೇವಲ 14 ರನ್‌ಗಳ ಬೇಕಾಯಿತು. ಈ ಸುಲಭ ಗುರಿಯನ್ನು ಬಾಂಗ್ಲಾ ಬಾಲಂಗೋಚಿಗಳು ಸುಲಭವಾಗಿ ಬೆನ್ನಟ್ಟಿದರು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:09 am, Mon, 5 December 22