IND vs ENG: ಡ್ರಾ, ಗೆಲುವು, ಸೋಲು…ಇಂಗ್ಲೆಂಡ್ ವಿರುದ್ಧ ಭರ್ಜರಿ ಪ್ರದರ್ಶನ ನೀಡಿದ್ದ ಟೀಮ್ ಇಂಡಿಯಾ

India vs England 5th Test Match: ಇಂಗ್ಲೆಂಡ್ ದ್ವಿತೀಯ ಇನಿಂಗ್ಸ್​ನಲ್ಲಿ 303 ರನ್​ಗಳಿಸುವಲ್ಲಿ ಯಶಸ್ವಿಯಾಗಿದ್ದರು. ಇನ್ನು ದ್ವಿತೀಯ ಇನಿಂಗ್ಸ್​ನಲ್ಲಿ ಕೇವಲ 208 ರನ್​ಗಳ ಟಾರ್ಗೆಟ್ ಪಡೆದ ಭಾರತದ ಗೆಲುವು ಖಚಿತವಾಗಿತ್ತು.

IND vs ENG: ಡ್ರಾ, ಗೆಲುವು, ಸೋಲು...ಇಂಗ್ಲೆಂಡ್ ವಿರುದ್ಧ ಭರ್ಜರಿ ಪ್ರದರ್ಶನ ನೀಡಿದ್ದ ಟೀಮ್ ಇಂಡಿಯಾ
India vs England 5th Test
TV9kannada Web Team

| Edited By: Zahir PY

Jun 30, 2022 | 3:58 PM

India vs England 5th Test Match: ಭಾರತ-ಇಂಗ್ಲೆಂಡ್ ನಡುವಣ ಐದನೇ ಟೆಸ್ಟ್ ಪಂದ್ಯವು ಶುಕ್ರವಾರದಿಂದ (ಜುಲೈ 1) ಶುರುವಾಗಲಿದೆ. ಈ ಪಂದ್ಯವು 2021 ರಲ್ಲಿ ನಡೆದ ಇಂಗ್ಲೆಂಡ್ ವಿರುದ್ದದ ಟೆಸ್ಟ್ ಸರಣಿಯ ಭಾಗವಾಗಿದೆ. ಏಕೆಂದರೆ ಕಳೆದ ಮ್ಯಾಂಚೆಸ್ಟರ್​ನ ಓಲ್ಡ್​ ಟ್ರಾಫರ್ಡ್​ ಮೈದಾನದಲ್ಲಿ ನಡೆಯಬೇಕಿದ್ದ ಭಾರತ-ಇಂಗ್ಲೆಂಡ್ (India vs England Test) ನಡುವಿನ 5ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯವು ಕೊರೋನಾ ಕಾರಣದಿಂದ ರದ್ದಾಗಿತ್ತು. ಕೋವಿಡ್-19 ಭೀತಿ ಹಿನ್ನೆಲೆಯಲ್ಲಿ ಉಭಯ ತಂಡಗಳ ಕ್ರಿಕೆಟ್​ ಮಂಡಳಿ 5ನೇ ಟೆಸ್ಟ್ ಪಂದ್ಯವನ್ನು ಮುಂದೂಡಿದ್ದರು. ಇದೀಗ ಇಂಗ್ಲೆಂಡ್ ವಿರುದ್ದ ಸೀಮಿತ ಓವರ್​ಗಳ ಸರಣಿ ಆಡಲು ತೆರಳಿರುವ ಟೀಮ್ ಇಂಡಿಯಾ ಮುಂದೂಡಲಾಗಿದ್ದ ಕೊನೆಯ ಪಂದ್ಯವನ್ನಾಡುತ್ತಿದೆ. ಇನ್ನು 5 ಪಂದ್ಯಗಳ ಈ ಸರಣಿಯಲ್ಲಿ ಈಗಾಗಲೇ ಭಾರತ ತಂಡವು 2-1 ಮುನ್ನಡೆ ಸಾಧಿಸಿದೆ. ಈ ಸರಣಿಯ ಮೊದಲ ನಾಲ್ಕು ಪಂದ್ಯಗಳು ಹೇಗಿತ್ತು ಎಂಬುದರ ಹಿನ್ನೋಟ ಇಲ್ಲಿದೆ…

ಮೊದಲ ಟೆಸ್ಟ್ ಪಂದ್ಯ:

  • 5 ಪಂದ್ಯಗಳ ಈ ಸರಣಿಯ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ ಪ್ರದರ್ಶನ ನೀಡಿತ್ತು. ನ್ಯಾಟಿಂಗ್​ಹ್ಯಾಮ್​ನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡವು ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದರು. ಆದರೆ ಟೀಮ್ ಇಂಡಿಯಾ ಬೌಲರುಗಳ ಮುಂದೆ ಕ್ರೀಸ್ ಕಚ್ಚಿ ನಿಲ್ಲಲು ಪರದಾಡಿದ ಇಂಗ್ಲೆಂಡ್ ಮೊದಲ ಇನಿಂಗ್ಸ್​ನಲ್ಲಿ 183 ರನ್​ಗೆ ಆಲೌಟ್ ಆದರು. ಇನ್ನು ಕೆಎಲ್ ರಾಹುಲ್ ಅವರ 84 ರನ್​ಗಳ ನೆರವಿನಿಂದ ಭಾರತ ಪ್ರಥಮ ಇನಿಂಗ್ಸ್​ನಲ್ಲಿ 278 ರನ್ ಪೇರಿಸಿ ಮುನ್ನಡೆ ಸಾಧಿಸಿತ್ತು. 95 ರನ್​ಗಳ ಹಿನ್ನಡೆಯೊಂದಿಗೆ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ದ್ವಿತೀಯ ಇನಿಂಗ್ಸ್​ನಲ್ಲಿ 303 ರನ್​ಗಳಿಸುವಲ್ಲಿ ಯಶಸ್ವಿಯಾಗಿದ್ದರು. ಇನ್ನು ದ್ವಿತೀಯ ಇನಿಂಗ್ಸ್​ನಲ್ಲಿ ಕೇವಲ 208 ರನ್​ಗಳ ಟಾರ್ಗೆಟ್ ಪಡೆದ ಭಾರತದ ಗೆಲುವು ಖಚಿತವಾಗಿತ್ತು. ಆದರೆ ಐದನೇ ದಿನದಾಟದ ವೇಳೆ ಮಳೆ ಬಂದಿದ್ದರಿಂದ ಪಂದ್ಯವನ್ನು ಸ್ಥಗಿತಗೊಳಿಸಲಾಯಿತು. ಹೀಗಾಗಿ ಮೊದಲ ಟೆಸ್ಟ್ ಪಂದ್ಯವು ಡ್ರಾನಲ್ಲಿ ಕೊನೆಗೊಂಡಿತ್ತು. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ವೇಗಿ ಜಸ್​ಪ್ರೀತ್ ಬುಮ್ರಾ ಒಟ್ಟು 9 ವಿಕೆಟ್ ಉರುಳಿಸಿ ಯಶಸ್ವಿ ಬೌಲರ್ ಎನಿಸಿಕೊಂಡಿದ್ದರು.

2ನೇ ಟೆಸ್ಟ್ ಪಂದ್ಯ:

  • ಮೊದಲ ಟೆಸ್ಟ್​ನಲ್ಲಿ ಕೈ ಜಾರಿದ ಗೆಲುವನ್ನು ಪಡೆಯಲು ಟೀಮ್ ಇಂಡಿಯಾ ದ್ವಿತೀಯ ಟೆಸ್ಟ್​ನಲ್ಲಿ ಬಲಿಷ್ಠ ಪಡೆಯೊಂದಿಗೆ ಕಣಕ್ಕಿಳಿಯಿತು. ಕ್ರಿಕೆಟ್ ಕಾಶಿ ಲಾರ್ಡ್ಸ್​ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲೂ ಟಾಸ್ ಗೆದ್ದಿದ್ದು ಇಂಗ್ಲೆಂಡ್ ನಾಯಕ ಜೋ ರೂಟ್. ಆದರೆ ಈ ಬಾರಿ ಬೌಲಿಂಗ್ ಆಯ್ದುಕೊಂಡರು. ಇಂಗ್ಲೆಂಡ್​ ನಾಯಕನ ನಿರ್ಧಾರವನ್ನು ಪ್ರಶ್ನಿಸುವಂತೆ ಬ್ಯಾಟ್ ಬೀಸಿದ ಟೀಮ್ ಇಂಡಿಯಾ ಆರಂಭಿಕರಾದ ರೋಹಿತ್ ಶರ್ಮಾ (83) ಹಾಗೂ ಕೆಎಲ್ ರಾಹುಲ್ (129) ಭರ್ಜರಿ ಇನಿಂಗ್ಸ್ ಆಡಿದ್ದರು. ಆರಂಭಿಕರ ಅತ್ಯುತ್ತಮ ಆಟದ ನೆರವಿನಿಂದ ಭಾರತ ಮೊದಲ ಇನಿಂಗ್ಸ್​ನಲ್ಲಿ 364 ರನ್​ಗಳಿಸಿತ್ತು. ಇದಕ್ಕುತರವಾಗಿ ಇನಿಂಗ್ಸ್​ ಆರಂಭಿಸಿದ ಇಂಗ್ಲೆಂಡ್ ನಾಯಕ ಜೋ ರೂಟ್ (180) ಅವರ ಭರ್ಜರಿ ಶತಕದ ನೆರವನಿಂದ 391 ರನ್​ ಕಲೆಹಾಕಿತು. 27 ರನ್​ಗಳ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಭಾರತ ರಹಾನೆ (61) ಅವರ ಅರ್ಧಶತಕ ಹಾಗೂ ಮೊಹಮ್ಮದ್ ಶಮಿ ಅವರ ಅತ್ಯಮೂಲ್ಯ 56 ರನ್​ಗಳ ನೆರವಿನಿಂದ 8 ವಿಕೆಟ್​ಗೆ 298 ರನ್​ಗಳಿಸಿ ಡಿಕ್ಲೇರ್ ಘೋಷಿಸಿತು. 271 ರನ್​ಗಳ ಗುರಿ ಪಡೆದ ಇಂಗ್ಲೆಂಡ್ ತಂಡವು ಅಂತಿಮ ದಿನದಾಟದಲ್ಲಿ ಪಂದ್ಯವನ್ನು ಡ್ರಾ ಮಾಡಿಕೊಳ್ಳಲು ಹೊರಟರೆ ಟೀಮ್ ಇಂಡಿಯಾ ವೇಗಿಗಳು ಇಡೀ ಪಂದ್ಯದ ಚಿತ್ರಣ ಬದಲಿಸಿಬಿಟ್ಟರು. ಬುಮ್ರಾ (3 ವಿಕೆಟ್) ಹಾಗೂ ಮೊಹಮ್ಮದ್ ಸಿರಾಜ್ (4 ವಿಕೆಟ್) ದಾಳಿಗೆ ತತ್ತರಿಸಿದ ಇಂಗ್ಲೆಂಡ್ ತಂಡವು 120 ರನ್​ಗಳಿಗೆ ಆಲೌಟ್ ಆಯಿತು. ಈ ಮೂಲಕ ಟೀಮ್ ಇಂಡಿಯಾ ಲಾರ್ಡ್ಸ್​ ಮೈದಾನದಲ್ಲಿ 151 ರನ್​ಗಳ ಐತಿಹಾಸಿಕ ಗೆಲುವು ದಾಖಲಿಸುವಲ್ಲಿ ಯಶಸ್ವಿಯಾಗಿದ್ದರು.

3ನೇ ಟೆಸ್ಟ್ ಪಂದ್ಯ:

  • ಲಾರ್ಡ್ಸ್​ನಲ್ಲಿ ಭರ್ಜರಿ ಗೆಲುವು ದಾಖಲಿಸಿದ್ದ ಟೀಮ್ ಇಂಡಿಯಾಗೆ ಹೆಡಿಂಗ್ಲೆಯಲ್ಲಿ ಇಂಗ್ಲೆಂಡ್ ತಂಡವು ಶಾಕ್ ನೀಡಿತು. ಗೆಲುವಿನ ಹುಮ್ಮಸ್ಸಿನಲ್ಲಿದ್ದ ಭಾರತ ತಂಡವನ್ನು ಮೊದಲ ಇನಿಂಗ್ಸ್​ನಲ್ಲಿ ಕೇವಲ 78 ರನ್​ಗಳಿಗೆ ಆಲೌಟ್ ಮಾಡಿದ ಇಂಗ್ಲೆಂಡ್ ಭರ್ಜರಿ ಪ್ರದರ್ಶನ ನೀಡಿದ್ದರು. ಅಷ್ಟೇ ಅಲ್ಲದೆ ಇಂಗ್ಲೆಂಡ್ ತಂಡವು ಮೊದಲ ಇನಿಂಗ್ಸ್​ನಲ್ಲಿ ಜೋ ರೂಟ್ (121) ಅವರ ಭರ್ಜರಿ ಶತಕದ ನೆರವಿನಿಂದ 432 ರನ್​ಗಳ ಬೃಹತ್ ಮೊತ್ತ ಪೇರಿಸಿತು. ಇನ್ನು ಭಾರತ ತಂಡವನ್ನು ದ್ವಿತೀಯ ಇನಿಂಗ್ಸ್​ನಲ್ಲಿ 278 ರನ್​ಗಳಿಗೆ ಆಲೌಟ್ ಮಾಡಿ ಇನಿಂಗ್ಸ್​ ಹಾಗೂ 76 ರನ್​ಗಳ ಭರ್ಜರಿ ವಿಜಯ ಸಾಧಿಸಿ ಲಾರ್ಡ್ಸ್​ ಸೋಲಿಗೆ ಸೇಡು ತೀರಿಸಿಕೊಂಡಿತ್ತು. ಈ ಪಂದ್ಯದಲ್ಲಿ ಓಲಿ ರಾಬಿನ್ಸನ್ ಒಟ್ಟು 7 ವಿಕೆಟ್ ಪಡೆದು ಮಿಂಚಿದ್ದರು. ಇದರೊಂದಿಗೆ ಐದು ಪಂದ್ಯಗಳ ಸರಣಿಯು 1-1 ಅಂತರದಿಂದ ಸಮಬಲಗೊಂಡಿತ್ತು.

4ನೇ ಟೆಸ್ಟ್ ಪಂದ್ಯ:

  • 1-1 ಸಮಬಲಗೊಂಡಿದ್ದ ಸರಣಿಯ ನಾಲ್ಕನೇ ಪಂದ್ಯದಲ್ಲಿ ಗೆಲುವು ಉಭಯ ತಂಡಗಳಿಗೂ ಅನಿವಾರ್ಯವಾಗಿತ್ತು. ಏಕೆಂದರೆ ಸರಣಿ ಸೋಲನ್ನು ತಪ್ಪಿಸಿಕೊಳ್ಳಲು ನಾಲ್ಕನೇ ಟೆಸ್ಟ್​ ಫಲಿತಾಂಶ ನಿರ್ಣಾಯಕ. ಅದರಂತೆ ಓವಲ್​ ಮೈದಾನದಲ್ಲಿ ಕಣಕ್ಕಿಳಿದ ಟೀಮ್ ಇಂಡಿಯಾಗೆ ಮೊದಲ ಇನಿಂಗ್ಸ್​ನಲ್ಲಿ ಆಘಾತ ನೀಡುವಲ್ಲಿ ರೂಟ್ ಪಡೆ ಯಶಸ್ವಿಯಾಗಿತ್ತು. ಭಾರತವನ್ನು ಇಂಗ್ಲೆಂಡ್ ಬೌಲರುಗಳು ಕೇವಲ 191 ರನ್​ಗಳಿಗೆ ಆಲೌಟ್ ಮಾಡಿದ್ದರು. ಇದಕ್ಕುತ್ತರವಾಗಿ ಇಂಗ್ಲೆಂಡ್ ತಂಡವು 290 ರನ್​ಗಳಿಸಿ 99 ರನ್​ಗಳ ಮುನ್ನಡೆ ಕಾಯ್ದುಕೊಂಡಿತು. ಅದರಂತೆ ದ್ವಿತೀಯ ಇನಿಂಗ್ಸ್​ ಆರಂಭಿಸಿದ ಭಾರತಕ್ಕೆ ಮತ್ತೆ ನೆರವಾಗಿದ್ದು ಆರಂಭಿಕರು. ರೋಹಿತ್ ಶರ್ಮಾ ಹಾಗೂ ಕೆಎಲ್ ರಾಹುಲ್ ಅತ್ಯುತ್ತಮವಾಗಿ ಇನಿಂಗ್ಸ್ ಆರಂಭಿಸಿದರು. ಅದರಲ್ಲೂ ಹಿಟ್​ಮ್ಯಾನ್ 127 ರನ್ ಬಾರಿಸಿ ಮಿಂಚಿದ್ದರು. ಪೂಜಾರ (61), ಪಂತ್ (50) ಹಾಗೂ ಶಾರ್ದೂಲ್ ಠಾಕೂರ್ (60) ಅರ್ಧಶತಕ ಬಾರಿಸಿ ತಂಡದ ಮೊತ್ತವನ್ನು ಹೆಚ್ಚಿಸಿದ್ದರು. ಹೀಗೆ ಎರಡನೇ ಇನಿಂಗ್ಸ್​ನಲ್ಲಿ ಸಂಪೂರ್ಣ ಮೇಲುಗೈ ಸಾಧಿಸಿದ ಭಾರತ 466 ರನ್​ ಕಲೆಹಾಕಿತು. ಈ ಮೂಲಕ ಇಂಗ್ಲೆಂಡ್​ಗೆ 367 ರನ್​ಗಳ ಟಾರ್ಗೆಟ್ ನೀಡಿತು. ಒಂದು ಹಂತದಲ್ಲಿ ಡ್ರಾನಲ್ಲಿ ಅಂತ್ಯಗೊಳ್ಳಲಿದೆ ಎಂದು ಅಂದುಕೊಂಡಿದ್ದ ಪಂದ್ಯದಲ್ಲಿ ಟೀಮ್ ಇಂಡಿಯಾ ಬೌಲರುಗಳು ಮ್ಯಾಜಿಕ್ ಮಾಡಿದರು. ಅಂತಿಮ ದಿನದಾಟದಲ್ಲಿ 10 ವಿಕೆಟ್ ಉರುಳಿಸಿ ಇಂಗ್ಲೆಂಡ್ ತಂಡವನ್ನು 210 ರನ್​ಗಳಿಗೆ ಆಲೌಟ್ ಮಾಡಿತು. ಈ ಪಂದ್ಯದಲ್ಲಿ 6 ವಿಕೆಟ್ ಕಬಳಿಸಿದ ಉಮೇಶ್ ಯಾದವ್ ಹಾಗೂ ಶಾರ್ದೂಲ್ ಠಾಕೂರ್ ( 2 ಅರ್ಧಶತಕ, 3 ವಿಕೆಟ್) ಗೆಲುವಿನ ರೂವಾರಿ ಎನಿಸಿಕೊಂಡಿದ್ದರು. ಇದರೊಂದಿಗೆ ಟೀಮ್ ಇಂಡಿಯಾ ನಾಲ್ಕನೇ ಟೆಸ್ಟ್ ಪಂದ್ಯವನ್ನು 157 ರನ್​ಗಳಿಂದ ಗೆದ್ದುಕೊಂಡು ಸರಣಿಯಲ್ಲಿ 2-1 ಅಂತರದಿಂದ ಮುನ್ನಡೆ ಸಾಧಿಸಿತು.

ಇದೀಗ ಈ ಸರಣಿಯ ಐದನೇ ಪಂದ್ಯಕ್ಕಾಗಿ ಉಭಯ ತಂಡಗಳು ಸಜ್ಜಾಗಿದೆ. ಈ ಪಂದ್ಯವು ಇಂಗ್ಲೆಂಡ್ ಪಾಲಿಗೆ ನಿರ್ಣಾಯಕ. ಏಕೆಂದರೆ ಈ ಪಂದ್ಯ ಡ್ರಾ ಆದರೆ ಸರಣಿ ಟೀಮ್ ಇಂಡಿಯಾ ಪಾಲಾಗಲಿದೆ. ಹೀಗಾಗಿ ಭಾರತ ತಂಡವನ್ನು ಮಣಿಸಿ ಸರಣಿಯನ್ನು ಡ್ರಾ ಮಾಡಿಕೊಳ್ಳುವ ತವಕದಲ್ಲಿದೆ ಇಂಗ್ಲೆಂಡ್ ತಂಡ.

ಇದನ್ನೂ ಓದಿ: IND vs ENG: ಎಲ್ಲವೂ ಬದಲಾಗಿದೆ, ಟೀಮ್ ಇಂಡಿಯಾ ಗೆಲುವು ಅಂದುಕೊಂಡಷ್ಟು ಸುಲಭವಲ್ಲ

ಇತ್ತ ಭಾರತ ತಂಡಕ್ಕೆ ಇಂಗ್ಲೆಂಡ್‌ನಲ್ಲಿ ಟೆಸ್ಟ್​ ಸರಣಿ ಗೆಲ್ಲುವ ಉತ್ತಮ ಅವಕಾಶವಿದೆ. ಈ ಸರಣಿ ಗೆದ್ದರೆ 15 ವರ್ಷಗಳ ಬಳಿಕ ಇಂಗ್ಲೆಂಡ್​ನಲ್ಲಿ ಟೆಸ್ಟ್​ ಸರಣಿ ಗೆದ್ದ ಐತಿಹಾಸಿಕ ಸಾಧನೆ ಮಾಡಲಿದೆ. ಇದಕ್ಕೂ ಮುನ್ನ 2007ರಲ್ಲಿ ಭಾರತ ತಂಡ ಈ ಸಾಧನೆ ಮಾಡಿತ್ತು. ಆಗ ರಾಹುಲ್ ದ್ರಾವಿಡ್ ತಂಡದ ನಾಯಕರಾಗಿದ್ದರು. ಈ ಬಾರಿ ದ್ರಾವಿಡ್ ಕೋಚ್ ಆಗಿರುವುದರಿಂದ ಇತಿಹಾಸ ಪುನರಾರ್ವತನೆಯಾಗಲಿದೆಯಾ ಕಾದು ನೋಡಬೇಕಿದೆ.

ಇದನ್ನೂ ಓದಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada