
ನ್ಯೂಝಿಲೆಂಡ್ vs ಭಾರತ ಸರಣಿಯ ವೇಳಾಪಟ್ಟಿ ಪ್ರಕಟವಾಗಿದೆ. ಈ ವೇಳಾಪಟ್ಟಿಯಂತೆ ಟೀಮ್ ಇಂಡಿಯಾ ಅಕ್ಟೋಬರ್ನಲ್ಲಿ ನ್ಯೂಝಿಲೆಂಡ್ ಪ್ರವಾಸ ಕೈಗೊಳ್ಳಲಿದೆ. ಅಲ್ಲದೆ ಅಲ್ಲಿ ಒಟ್ಟು 12 ಪಂದ್ಯಗಳನ್ನಾಡಲಿದೆ. ಇದಕ್ಕೂ ಮುನ್ನ ಈ ಸರಣಿಯಲ್ಲಿ 10 ಪಂದ್ಯಗಳನ್ನು ನಿಗದಿ ಮಾಡಲಾಗಿತ್ತು. ಇದೀಗ ಹೆಚ್ಚುವರಿ 2 ಏಕದಿನ ಪಂದ್ಯಗಳನ್ನು ಸೇರಿಸಲಾಗಿದೆ. ಅದರಂತೆ 5 ಏಕದಿನ ಮತ್ತು 5 ಟಿ20 ಪಂದ್ಯಗಳು ನಡೆಯಲಿದೆ. ಇದಾದ ಬಳಿಕ 2 ಮ್ಯಾಚ್ಗಳ ಟೆಸ್ಟ್ ಸರಣಿಯನ್ನು ಆಡಲಾಗುತ್ತದೆ.
ಸಾಮಾನ್ಯವಾಗಿ ದ್ವಿಪಕ್ಷೀಯ ಸರಣಿಗಳಲ್ಲಿ 3 ಏಕದಿನ ಪಂದ್ಯಗಳನ್ನು ಆಡಲಾಗುತ್ತದೆ. ಆದರೆ, ಈ ಬಾರಿ ಕ್ರಿಕೆಟ್ ಅಭಿಮಾನಿಗಳ ಜಾಗತಿಕ ಬೇಡಿಕೆಯನ್ನು ಪರಿಗಣಿಸಿ ಬಿಸಿಸಿಐ ಮತ್ತು ನ್ಯೂಝಿಲೆಂಡ್ ಕ್ರಿಕೆಟ್ ಮಂಡಳಿಗಳು ಸರಣಿಯನ್ನು 5 ಪಂದ್ಯಗಳಿಗೆ ವಿಸ್ತರಿಸಿದ್ದಾರೆ.
ವಿಶೇಷ ಎಂದರೆ ಈ ದಶಕದಲ್ಲಿ ಟೀಮ್ ಇಂಡಿಯಾ 5 ಪಂದ್ಯಗಳ ದ್ವಿಪಕ್ಷೀಯ ಏಕದಿನ ಸರಣಿಯನ್ನು ಆಡುತ್ತಿರುವುದು ಇದೇ ಮೊದಲು. ಇದಕ್ಕೂ ಮುನ್ನ 5 ಪಂದ್ಯಗಳ ಏಕದಿನ ಸರಣಿ ಆಡಿದ್ದು 7 ವರ್ಷಗಳ ಹಿಂದೆ. ಅಂದರೆ ಮಾರ್ಚ್ 2019 ರಲ್ಲಿ ಆಸ್ಟ್ರೇಲಿಯಾ ವಿರುದ್ಧ 5 ಪಂದ್ಯಗಳ ಏಕದಿನ ಸರಣಿ ಆಡಿತ್ತು.
ಇದಾದ ಬಳಿಕ 5 ಪಂದ್ಯಗಳ ದ್ವಿಪಕ್ಷೀಯ ಸರಣಿಯಲ್ಲಿ ಟೀಮ್ ಇಂಡಿಯಾ ಕಣಕ್ಕಿಳಿದಿರಲಿಲ್ಲ. ಇದೀಗ ಜಾಗತಿಕ ಬೇಡಿಕೆಯನ್ನು ಪರಿಗಣಿಸಿ 2 ಪಂದ್ಯಗಳನ್ನು ಹೆಚ್ಚಿಸಿರುವುದಾಗಿ ಬಿಸಿಸಿಐ ಹೇಳಿಕೊಂಡಿದೆ.
ಈ ಸರಣಿಯು ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರ ಕೊನೆಯ ನ್ಯೂಝಿಲೆಂಡ್ ಪ್ರವಾಸವಾಗಿದೆ. ಹೀಗಾಗಿ ಅದರ ಸಂಪೂರ್ಣ ಲಾಭ ಪಡೆಯಲು ನ್ಯೂಝಿಲೆಂಡ್ ಕ್ರಿಕೆಟ್ ಬೋರ್ಡ್ ನಿರ್ಧರಿಸಿದೆ. ಅಂದರೆ ಅಲ್ಲಿನ ಕ್ರಿಕೆಟ್ ಮಂಡಳಿ, ಪ್ರಾಯೋಜಕರು ಮತ್ತು ಪ್ರಸಾರಕರು ಹೆಚ್ಚಿನ ಲಾಭ ಗಳಿಸಲು ಈ ಹೆಚ್ಚುವರಿ ಪಂದ್ಯಗಳನ್ನು ಕೇಳಿ ಪಡೆದಿದ್ದಾರೆ.
ಇದರಿಂದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ನ್ಯೂಝಿಲೆಂಡ್ನಲ್ಲಿ 5 ಏಕದಿನ ಪಂದ್ಯಗಳನ್ನಾಡಲಿದ್ದಾರೆ. ಈ ಇಬ್ಬರು ದಿಗ್ಗಜರು ಕಣಕ್ಕಿಳಿಯುತ್ತಿರುವುದರಿಂದ ಪ್ರಾಯೋಜಕತ್ವ ಮತ್ತು ಪ್ರೇಕ್ಷಕರಿಂದ ಉತ್ತಮ ಆದಾಯ ಗಳಿಸಬಹುದು. ಇದನ್ನೇ ಮನಗಂಡಿರುವ ನ್ಯೂಝಿಲೆಂಡ್ ಕ್ರಿಕೆಟ್ ಬೋರ್ಡ್ ಬಿಸಿಸಿಐ ಜೊತೆ ಮಾತುಕತೆ ನಡೆಸಿ ಪಂದ್ಯಗಳ ಸಂಖ್ಯೆಯನ್ನು ಹೆಚ್ಚಿಸಿದ್ದಾರೆ.
ಇದನ್ನೂ ಓದಿ: ವೈಭವ್ ಸೂರ್ಯವಂಶಿಯಿಂದ ರಾಜಸ್ಥಾನ್ ರಾಯಲ್ಸ್ಗೆ 33.87 ಕೋಟಿ ರೂ. ಲಾಭ!
ನ್ಯೂಝಿಲೆಂಡ್ ವಿರುದ್ಧದ ಸರಣಿ ಡಿಸೆಂಬರ್ 1, 2026 ರಂದು ಮುಕ್ತಾಯಗೊಳ್ಳಲಿದ್ದು, ಇದರ ಬೆನ್ನಲ್ಲೇ ಭಾರತ ತಂಡವು ಸ್ವದೇಶಕ್ಕೆ ಮರಳಿ ಶ್ರೀಲಂಕಾ ವಿರುದ್ಧ ತವರಿನಲ್ಲಿ ಸರಣಿಯನ್ನು ಆಡಲಿದೆ.
Published On - 9:36 am, Wed, 3 June 26