AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟೀಕೆಗಳ ಬೆನ್ನಲ್ಲೇ ಟೀಮ್ ಇಂಡಿಯಾಗೆ ನಬಿ ಎಂಟ್ರಿ..!

India vs Afghanistan Test: ಭಾರತ ಮತ್ತು ಅಫ್ಘಾನಿಸ್ತಾನ್ ನಡುವಣ ಟೆಸ್ಟ್ ಪಂದ್ಯವು ಜೂನ್ 6 ರಿಂದ ಶುರುವಾಗಲಿದೆ. ಈ ಪಂದ್ಯಕ್ಕಾಗಿ ಟೀಮ್ ಇಂಡಿಯಾ ಭರದ ಸಿದ್ಧತೆಯಲ್ಲಿದ್ದು, ಈ ಸಿದ್ಧತೆಗಳ ನಡುವೆ ಜಮ್ಮು ಕಾಶ್ಮೀರ ವೇಗಿ ಆಖಿಬ್ ನಬಿ ಅವರನ್ನು ಮೀಸಲು ಆಟಗಾರನಾಗಿ ಭಾರತ ಟೆಸ್ಟ್ ತಂಡಕ್ಕೆ ಆಯ್ಕೆ ಮಾಡಲಾಗಿದೆ.

ಟೀಕೆಗಳ ಬೆನ್ನಲ್ಲೇ ಟೀಮ್ ಇಂಡಿಯಾಗೆ ನಬಿ ಎಂಟ್ರಿ..!
Auqib Nabi Image Credit source: Starsports
ಝಾಹಿರ್ ಯೂಸುಫ್
|

Updated on:Jun 03, 2026 | 9:10 AM

Share

ದೇಶಿಯ ಕ್ರಿಕೆಟ್‌ನಲ್ಲಿ ಭರ್ಜರಿ ಪ್ರದರ್ಶನ ನೀಡಿದರೂ ಭಾರತ ತಂಡಕ್ಕೆ ಆಯ್ಕೆಯಾಗದ ಜಮ್ಮು ಮತ್ತು ಕಾಶ್ಮೀರದ ಸ್ಟಾರ್ ವೇಗಿ ಆಖಿಬ್ ನಬಿ ಅವರಿಗೆ ಕೊನೆಗೂ ಟೀಮ್ ಇಂಡಿಯಾದಿಂದ ಬುಲಾವ್ ಬಂದಿದೆ. ಆದರೆ ಆಟಗಾರನಾಗಿ ಅಲ್ಲ. ಬದಲಾಗಿ ಟೀಮ್ ಇಂಡಿಯಾದ ನೆಟ್​ ಬೌಲರ್ ಆಗಿ ಎಂಬುದು ವಿಶೇಷ.

ಅಫ್ಘಾನಿಸ್ತಾನ ವಿರುದ್ಧದ ಟೆಸ್ಟ್ ಪಂದ್ಯದ ಸಿದ್ಧತೆಗಾಗಿ ಬಿಸಿಸಿಐ ಆಖಿಬ್ ನಬಿ ಅವರನ್ನು ಅಧಿಕೃತ ನೆಟ್ ಬೌಲರ್ ಹಾಗೂ ಸ್ಟ್ಯಾಂಡ್‌ಬೈ ಆಟಗಾರನಾಗಿ ಆಯ್ಕೆ ಮಾಡಿದೆ. ಅದರಂತೆ ಇದೀಗ ಅವರು ಮುಲ್ಲನ್‌ಪುರದಲ್ಲಿ ಟೀಮ್ ಇಂಡಿಯಾ ಆಟಗಾರರಿಗೆ ಬೌಲಿಂಗ್ ಅಭ್ಯಾಸ ನಡೆಸಿಕೊಡುತ್ತಿದ್ದಾರೆ.

‘ಬಾರಾಮುಲ್ಲಾ ಎಕ್ಸ್‌ಪ್ರೆಸ್’ ಸಾಧನೆ:

ಬಾರಾಮುಲ್ಲಾ ಎಕ್ಸ್‌ಪ್ರೆಸ್ ಎಂದೇ ಖ್ಯಾತರಾಗಿರುವ ಆಖಿಬ್ ನಬಿ, ಕಳೆದ ಎರಡು ರಣಜಿ ಸೀಸನ್‌ಗಳಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರು.

  •  2025-26ರ ರಣಜಿ ಟ್ರೋಫಿ ಸೀಸನ್‌ನಲ್ಲಿ ಜಮ್ಮು ಮತ್ತು ಕಾಶ್ಮೀರ ತಂಡ ಚಾಂಪಿಯನ್ ಪಟ್ಟಕ್ಕೇರಲು ಅಖಿಬ್ ಪ್ರಮುಖ ಪಾತ್ರವಹಿಸಿದ್ದರು.
  • ಆ ಸೀಸನ್‌ನಲ್ಲಿ ಆಖಿಬ್ ನಬಿ ಪಡೆದ ವಿಕೆಟ್​ಗಳ ಸಂಖ್ಯೆ ಬರೋಬ್ಬರಿ 60
  • 2024-25 ಹಾಗೂ 2025-26ರ ರಣಜಿ ಸೀಸನ್​ಗಳ ಮೂಲ ಆಖಿಬ್ ನಬಿ ಒಟ್ಟು  104 ವಿಕೆಟ್‌ಗಳನ್ನು ಕಬಳಿಸಿದ್ದರು.

ಇದಾಗ್ಯೂ ಅಫ್ಘಾನಿಸ್ತಾನ್ ವಿರುದ್ಧದ ಟೆಸ್ಟ್ ಪಂದ್ಯಕ್ಕೆ ಆಖಿಬ್ ನಬಿ ಅವರನ್ನು ಆಯ್ಕೆ ಮಾಡಿರಲಿಲ್ಲ. ಈ ಬಗ್ಗೆ ಮಾಜಿ ಕ್ರಿಕೆಟರುಗಳಿಂದ ವ್ಯಾಪಕ ಟೀಕೆಗಳು ವ್ಯಕ್ತವಾಗಿದ್ದವು.

ಅದರಲ್ಲೂ ದಿಲೀಪ್ ವೆಂಗ್​ಸರ್ಕಾರ್ ಆಯ್ಕೆ ಸಮಿತಿಯ ನಡೆಯನ್ನು ವ್ಯಂಗ್ಯವಾಡಿ, ರಣಜಿ ಟೂರ್ನಿಯನ್ನೇ ಕ್ಯಾನ್ಸಲ್ ಮಾಡುವಂತೆ ಸೂಚಿಸಿದ್ದರು. ಮತ್ತೊಂದೆಡೆ ಸಂಜಯ್ ಮಂಜ್ರೇಕರ್ ಕೂಡ ಇದು ಅನ್ಯಾಯದ ನಡೆ ಎಂದು ಟೀಕಿಸಿದ್ದರು.

ಹೀಗೆ ಎಲ್ಲಾ ಕಡೆಯಿಂದ ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿ ವಿರುದ್ಧ ಟೀಕೆಗಳು ವ್ಯಕ್ತವಾಗುತ್ತಿದ್ದಂತೆ, ಇದೀಗ ಆಖಿಬ್ ನಬಿ ಅವರನ್ನು ಟೀಮ್ ಇಂಡಿಯಾಗೆ ಹೆಚ್ಚುವರಿ ಆಟಗಾರನಾಗಿ ಆಯ್ಕೆ ಮಾಡಿದ್ದಾರೆ.

ಸದ್ಯಕ್ಕೆ ಟೀಮ್ ಇಂಡಿಯಾಗೆ ಎಂಟ್ರಿ ಕೊಟ್ಟಿರುವ ಆಖಿಬ್ ನಬಿಗೆ ಟೀಮ್ ಇಂಡಿಯಾ ಪರ ಪಾದಾರ್ಪಣೆ ಮಾಡಲು ಅವಕಾಶ ಸಿಗುವುದಿಲ್ಲ. ಏಕೆಂದರೆ ಅವರನ್ನು 15 ಸದಸ್ಯರ ತಂಡದಲ್ಲಿ ಪರಿಗಣಿಸಲಾಗಿಲ್ಲ. ಬದಲಾಗಿ ಸ್ಟ್ಯಾಂಡ್ ಬೈ ಪ್ಲೇಯರ್​ಗಳ ಪಟ್ಟಿಯಲ್ಲಿರಿಸಲಾಗಿದೆ.

ಒಂದು ವೇಳೆ ಯಾವುದಾದರೂ ಬೌಲರ್​ ಗಾಯಗೊಂಡರೆ ಆಖಿಬ್ ನಬಿ ಅವರನ್ನು 15 ಸದಸ್ಯರುಗಳ ಬಳಗಕ್ಕೆ ಆಯ್ಕೆ ಮಾಡಲಾಗುತ್ತದೆ. ಹೀಗಾಗಿ ಅಫ್ಘಾನಿಸ್ತಾನ್ ವಿರುದ್ಧದ ಟೆಸ್ಟ್ ಪಂದ್ಯಕ್ಕೂ ಮುನ್ನ ನಬಿ ಟೀಮ್ ಇಂಡಿಯಾದ ನೆಟ್ ಬೌಲರ್​ ಆಗಿ ಮುಂದುವರೆಯಲಿದ್ದಾರೆ.

ಭಾರತ ಟೆಸ್ಟ್ ತಂಡ: ಶುಭ್​ಮನ್ ಗಿಲ್ (ನಾಯಕ), ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್ (ಉಪ ನಾಯಕ), ಸಾಯಿ ಸುದರ್ಶನ್, ರಿಷಭ್ ಪಂತ್, ದೇವದತ್ ಪಡಿಕ್ಕಲ್, ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಮಾನವ್ ಸುತಾರ್, ಗುರ್ನೂರ್ ಬ್ರಾರ್, ಧ್ರುವ್ ಜುರೆಲ್, ಹರ್ಷ್ ದುಬೆ.

ಇದನ್ನೂ ಓದಿ: ವೈಭವ್ ಸೂರ್ಯವಂಶಿಯಿಂದ ರಾಜಸ್ಥಾನ್ ರಾಯಲ್ಸ್​ಗೆ 33.87 ಕೋಟಿ ರೂ. ಲಾಭ!

ಟೀಮ್ ಇಂಡಿಯಾ ನೆಟ್ ಬೌಲರ್‌ಗಳ ಪಟ್ಟಿ:

  • ವೇಗದ ಬೌಲರ್‌ಗಳು: ಆಖಿಬ್ ನಬಿ, ಪ್ರಿನ್ಸ್ ಯಾದವ್, ಗುರ್ಜಪ್ನೀತ್ ಸಿಂಗ್.
  • ಸ್ಪಿನ್ನರ್‌ಗಳು: ಸಾರಂಶ್ ಜೈನ್ (ಆಫ್-ಸ್ಪಿನ್), ಜೀಶನ್ ಅನ್ಸಾರಿ (ಲೆಗ್-ಸ್ಪಿನ್), ಶಿವಾಂಗ್ ಕುಮಾರ್ (ಚೈನಾಮನ್).

Published On - 9:04 am, Wed, 3 June 26

Follow Us
Zahir Yusuf
Zahir Yusuf

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More