IND vs PAK ಪಂದ್ಯದ ಫಲಿತಾಂಶ ನಿರ್ಧರಿಸಲು 30 ಎಸೆತಗಳನ್ನು ಎಸೆಯಲೇಬೇಕು..!
India vs Pakistan: ಟಿ20 ವಿಶ್ವಕಪ್ನ 28ನೇ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಮುಖಾಮುಖಿಯಾಗಲಿದೆ. ಕೊಲಂಬೊದ ಆರ್. ಪ್ರೇಮದಾಸ ಸ್ಟೇಡಿಯಂನಲ್ಲಿ ಭಾನುವಾರ (ಫೆ.15) ನಡೆಯಲಿರುವ ಈ ಪಂದ್ಯಕ್ಕೆ ಇದೀಗ ಮಳೆ ಭೀತಿ ಎದುರಾಗಿದೆ. ಒಂದು ವೇಳೆ ಮಳೆ ಬಂದರೆ ಫಲಿತಾಂಶ ನಿರ್ಧರಿಸುವುದು ಹೇಗೆ ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.

T20 World Cup 2026: ಟಿ20 ವಿಶ್ವಕಪ್ನ 28ನೇ ಪಂದ್ಯಕ್ಕೆ ಮಳೆ ಭೀತಿ ಎದುರಾಗಿದೆ. ಕೊಲಂಬೊದಲ್ಲಿ ಭಾನುವಾರ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇದರಿಂದ ಭಾರತ ಮತ್ತು ಪಾಕಿಸ್ತಾನ್ ನಡುವಣ ಪಂದ್ಯಕ್ಕೆ ಅಡಚಣೆ ಉಂಟಾಗುವ ಸಾಧ್ಯತೆಯಿದೆ. ಒಂದು ವೇಳೆ ಮಳೆಯಿಂದಾಗಿ ಪಂದ್ಯಕ್ಕೆ ಅಡಚಣೆ ಉಂಟಾದರೆ ಫಲಿತಾಂಶ ನಿರ್ಧರಿಸಲು ಡಕ್ವರ್ತ್ ಲೂಯಿಸ್ ನಿಯಮದ ಮೊರೆ ಹೋಗಲಿದ್ದಾರೆ.
ಆದರೆ ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರ ಫಲಿತಾಂಶ ನಿರ್ಧರಿಸಲು ದ್ವಿತೀಯ ಇನಿಂಗ್ಸ್ ಆಡುವ ತಂಡವು ಕನಿಷ್ಠ 5 ಓವರ್‌ಗಳನ್ನು ಆಡಿರಲೇಬೇಕು. ಅಂದರೆ ಉಭಯ ತಂಡಗಳು ಕನಿಷ್ಠ 30 ಎಸೆತಗಳನ್ನು ಎದುರಿಸಿದರೆ ಮಾತ್ರ ಡಿಎಲ್ಎಸ್ ನಿಯಮದ ಪ್ರಕಾರ ಫಲಿತಾಂಶವನ್ನು ನಿರ್ಧರಿಸಲಾಗುತ್ತದೆ.
- ಕನಿಷ್ಠ ಓವರ್‌ಗಳು: ಪಂದ್ಯದ ಅಧಿಕೃತ ಫಲಿತಾಂಶ ಘೋಷಿಸಲು ಉಭಯ ತಂಡಗಳು ಕನಿಷ್ಠ ತಲಾ 5 ಓವರ್‌ಗಳನ್ನು ಆಡಲೇಬೇಕು.
- ಪರಿಸ್ಥಿತಿ: ಮಳೆಯಿಂದಾಗಿ ಪಂದ್ಯವು ಸ್ಥಗಿತಗೊಂಡರೆ, ಎರಡನೇ ಬ್ಯಾಟಿಂಗ್ ಮಾಡುವ ತಂಡ (ಉದಾಹರಣೆಗೆ ಭಾರತ) ಕನಿಷ್ಠ 5 ಓವರ್‌ಗಳನ್ನು ಪೂರ್ಣಗೊಳಿಸಿದರೆ ಮಾತ್ರ DLS ವಿಧಾನದಡಿ ವಿಜೇತರನ್ನು ನಿರ್ಧರಿಸಲು ಸಾಧ್ಯವಾಗುತ್ತದೆ.
- ಪಂದ್ಯ ರದ್ದು: ಒಂದು ವೇಳೆ ಮಳೆಯ ಕಾರಣದಿಂದ ಎರಡೂ ತಂಡಗಳು ತಲಾ 5 ಓವರ್‌ಗಳನ್ನು ಆಡಲು ಸಾಧ್ಯವಾಗದಿದ್ದರೆ ಮಾತ್ರ ಪಂದ್ಯವನ್ನು ‘ರದ್ದು’ ಎಂದು ಘೋಷಿಸಲಾಗುತ್ತದೆ.
- ಮೀಸಲು ದಿನ: ಗ್ರೂಪ್ ಹಂತದ ಪಂದ್ಯಗಳಿಗೆ ಯಾವುದೇ ಮೀಸಲು ದಿನ ಇರುವುದಿಲ್ಲ. ಪಂದ್ಯವನ್ನು ನಿಗದಿತ ದಿನದಂದೇ ಮುಗಿಸಬೇಕಾಗುತ್ತದೆ.
- ಒಂದು ಅಂಕ: ಪಂದ್ಯವು ರದ್ದಾದರೆ ಉಭಯ ತಂಡಗಳು ತಲಾ ಒಂದೊಂದೇ ಅಂಕಗಳನ್ನು ಪಡೆಯಲಿದ್ದಾರೆ.
ಅಂದರೆ ಇಲ್ಲಿ ಭಾರತ ಮತ್ತು ಪಾಕಿಸ್ತಾನ್ ನಡುವಣ ಪಂದ್ಯದ ಫಲಿತಾಂಶ ನಿರ್ಧಾರವಾಗಬೇಕಿದ್ದರೆ ಉಭಯ ತಂಡಗಳು ಕನಿಷ್ಠ 5 ಓವರ್‌ಗಳನ್ನು ಆಡಲೇಬೇಕು. ಉದಾಹರಣೆಗೆ…
ಪಾಕಿಸ್ತಾನ್ ತಂಡವು ಮೊದಲು ಬ್ಯಾಟ್ ಮಾಡಿ 20 ಓವರ್ಗಳಲ್ಲಿ 150 ರನ್ಗಳಿಸಿದೆ ಎಂದಿಕೊಟ್ಟುಕೊಳ್ಳಿ. ಈ ಗುರಿಯನ್ನು ಬೆನ್ನತ್ತಿದ ಭಾರತ ತಂಡವು 5 ಓವರ್ಗಳಲ್ಲಿ 50 ರನ್ ಗಳಿಸಿದ್ದಾಗ ಮಳೆ ಬಂದು ಪಂದ್ಯ ಸ್ಥಗಿತಗೊಂಡರೆ ಡಿಎಲ್ಎಸ್ ನಿಯಮದಡಿ ಯಾವ ತಂಡ ಹೆಚ್ಚು ರನ್ಗಳಿಸಿದೆ ಎಂಬ ಆಧಾರದ ಮೇಲೆ ಫಲಿತಾಂಶವನ್ನು ನಿರ್ಧರಿಸಲಾಗುತ್ತದೆ.
ಒಂದು ವೇಳೆ ಪಾಕಿಸ್ತಾನ್ ನೀಡಿದ ಗುರಿಯನ್ನು ಬೆನ್ನತ್ತುವಾಗ ಮಳೆ ಬಂದು ದ್ವಿತೀಯ ಇನಿಂಗ್ಸ್ 4.5 ಓವರ್ಗಳಿಗೆ ಸೀಮಿತವಾದರೆ ಡಿಎಲ್ಎಸ್ ನಿಯಮವನ್ನು ಅನ್ವಯಿಸುವುದಿಲ್ಲ. ಬದಲಾಗಿ ಪಂದ್ಯವನ್ನು ಮುಂದುವರೆಸಲು ಅವಕಾಶ ಇದೆಯೇ ಎಂದು ನೋಡಲಾಗುತ್ತದೆ. ಇದಾಗ್ಯೂ ಪಂದ್ಯವನ್ನು ಮುಂದುವರೆಸಲು ಸಾಧ್ಯವಿಲ್ಲದಿದ್ದರೆ ಮಾತ್ರ ಮ್ಯಾಚ್ ಅನ್ನು ರದ್ದುಗೊಳಿಸಲಾಗುತ್ತದೆ.
ಇದನ್ನೂ ಓದಿ: ಭಲೇ ಬಟ್ಲರ್… ಅತೀ ಕಡಿಮೆ ಎಸೆತಗಳಲ್ಲಿ ವಿಶ್ವ ದಾಖಲೆ..!
ಅಂದರೆ ಇಲ್ಲಿ ಎರಡೂ ತಂಡಗಳು ಕನಿಷ್ಠ 5 ಓವರ್‌ಗಳನ್ನು ಆಡಿದ್ದರೆ ಮಾತ್ರ ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರ ಫಲಿತಾಂಶವನ್ನು ನಿರ್ಧರಿಸಲು ಅವಕಾಶವಿದೆ. ಹೀಗಾಗಿ ಭಾರತ ಮತ್ತು ಪಾಕಿಸ್ತಾನ್ ನಡುವಣ ಪಂದ್ಯಕ್ಕೆ ಮಳೆ ಅಡಚಣೆಯನ್ನುಂಟು ಮಾಡಿದರೆ ಯಾರು ವಿಜಯಿ ಎಂದು ನಿರ್ಧಾರವಾಗಬೇಕಿದ್ದರೆ ಉಭಯ ತಂಡಗಳು ಕನಿಷ್ಠ 5 ಓವರ್ಗಳ ಇನಿಂಗ್ಸ್ ಆಡಲೇಬೇಕು.
