ಹರ್ಷಲ್ ಪಟೇಲ್ಗಿಂತ ಕಡಿಮೆ ವಿಕೆಟ್ ಪಡೆದರೂ ಭುವಿಗೆ ಸರಣಿ ಶ್ರೇಷ್ಠ ಪ್ರಶಸ್ತಿ: ಕಾರಣವೇನು?
India vs south africa: ಭುವಿ 4 ಪಂದ್ಯಗಳಿಂದ ಒಟ್ಟು 6 ವಿಕೆಟ್ ಕಬಳಿಸಿ ಮಿಂಚಿದ್ದರು. ವಿಶೇಷ ಎಂದರೆ ಅತ್ಯಧಿಕ ವಿಕೆಟ್ ಪಡೆದ ಬೌಲರ್ ಪಟ್ಟಿಯಲ್ಲಿ ಹರ್ಷಲ್ ಪಟೇಲ್ ಮುಂಚೂಣಿಯಲ್ಲಿದ್ದರು.
ಭಾರತ-ಸೌತ್ ಆಫ್ರಿಕಾ (IND vs SA) ನಡುವಣ 5 ಪಂದ್ಯಗಳ ಸರಣಿಯು 2-2 ಅಂತರದ ಸಮಬಲದೊಂದಿಗೆ ಅಂತ್ಯವಾಗಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಬೇಕಿದ್ದ ನಿರ್ಣಾಯಕ ಪಂದ್ಯವು ಮಳೆಗೆ ಅಹುತಿಯಾದ ಕಾರಣ ಉಭಯ ತಂಡಗಳನ್ನು ಜಂಟಿ ವಿಜೇತರೆಂದು ಘೋಷಿಸಲಾಯಿತು. ಇನ್ನು ಈ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಭುವನೇಶ್ವರ್ ಕುಮಾರ್ಗೆ (Bhuvneshwar kumar) ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ನೀಡಲಾಯಿತು. ಭುವಿ 4 ಪಂದ್ಯಗಳಿಂದ ಒಟ್ಟು 6 ವಿಕೆಟ್ ಕಬಳಿಸಿ ಮಿಂಚಿದ್ದರು. ವಿಶೇಷ ಎಂದರೆ ಅತ್ಯಧಿಕ ವಿಕೆಟ್ ಪಡೆದ ಬೌಲರ್ ಪಟ್ಟಿಯಲ್ಲಿ ಹರ್ಷಲ್ ಪಟೇಲ್ (Harshal Patel) ಮುಂಚೂಣಿಯಲ್ಲಿದ್ದರು. ಭುವನೇಶ್ವರ್ ಕುಮಾರ್ 6 ವಿಕೆಟ್ ಪಡೆದಿದ್ದರೆ, ಹರ್ಷಲ್ ಪಟೇಲ್ 7 ವಿಕೆಟ್ ಕಬಳಿಸಿದ್ದರು. ಇದಾಗ್ಯೂ ಭುವನೇಶ್ವರ್ ಕುಮಾರ್ಗೆ ಸರಣಿ ಶ್ರೇಷ್ಠ ಪ್ರಶಸ್ತಿ ನೀಡಿದ್ದು ಹೊಸ ಚರ್ಚೆಗೆ ಕಾರಣವಾಗಿತ್ತು. ಇದಾಗ್ಯೂ ಭುವಿಯನ್ನು ಮ್ಯಾನ್ ಆಫ್ ದಿ ಸಿರೀಸ್ಗೆ ಆಯ್ಕೆ ಮಾಡಲು ಕಾರಣವೇನು ಎಂದು ನೋಡುವುದಾದರೆ…
ಈ ಸರಣಿಯಲ್ಲಿ ಹರ್ಷಲ್ ಪಟೇಲ್ 4 ಪಂದ್ಯಗಳಲ್ಲಿ ಒಟ್ಟು 88 ರನ್ ನೀಡಿ 7 ವಿಕೆಟ್ ಪಡೆದಿದ್ದರು. ಅಲ್ಲದೆ ಇನ್ನಿಂಗ್ಸ್‌ವೊಂದರಲ್ಲಿ 25 ರನ್‌ಗಳಿಗೆ 4 ವಿಕೆಟ್ ಪಡೆದು ಮಿಂಚಿದ್ದರು. ಇದೇ ವೇಳೆ ಭುವನೇಶ್ವರ್ ಕುಮಾರ್ 4 ಪಂದ್ಯಗಳಲ್ಲಿ 85 ರನ್ ನೀಡಿ 6 ವಿಕೆಟ್ ಕಬಳಿಸಿ ಮಿಂಚಿದ್ದರು. ಇನ್ನು ಪಂದ್ಯವೊಂದರಲ್ಲಿ 13 ರನ್‌ಗಳಿಗೆ 4 ವಿಕೆಟ್ ಉರುಳಿಸಿದ್ದರು. ಇಲ್ಲಿ ವಿಕೆಟ್ ಪಡೆಯುವ ವಿಷಯದಲ್ಲಿ ಹರ್ಷಲ್ ಭುವಿಗಿಂತ ಮುಂದಿರಬಹುದು. ಆದರೆ ಎಕಾನಮಿ ವಿಷಯದಲ್ಲಿ ಭುವನೇಶ್ವರ್ ಕುಮಾರ್ ಮುಂದಿದ್ದಾರೆ.
ಹರ್ಷಲ್ ಅವರು 7.23 ಎಕಾನಮಿಯಲ್ಲಿ ರನ್ ನೀಡಿದ್ದರೆ, ಭುವನೇಶ್ವರ್ ಕುಮಾರ್ 6.07 ಸರಾಸರಿಯಲ್ಲಿ ರನ್ ಬಿಟ್ಟುಕೊಟ್ಟಿದ್ದರು. ಇನ್ನು ಯುಜ್ವೇಂದ್ರ ಚಹಾಲ್ ಕೂಡ ಭುವನೇಶ್ವರ್ ಕುಮಾರ್ ಅವರಂತೆಯೇ 4 ಇನ್ನಿಂಗ್ಸ್‌ಗಳಲ್ಲಿ 6 ವಿಕೆಟ್‌ಗಳನ್ನು ಪಡೆದಿದ್ದರು. ಆದರೆ ಅವರು 8.18 ಸರಾಸರಿಯಂತೆ ಪ್ರತಿ ಓವರ್ಗೆ ರನ್ ಬಿಟ್ಟುಕೊಟ್ಟಿದ್ದರು. ಹೀಗಾಗಿಯೇ ಇಡೀ ಟೂರ್ನಿಯಲ್ಲಿ ಕಡಿಮೆ ರನ್ ಬಿಟ್ಟುಕೊಟ್ಟಿದ್ದ ಭುವನೇಶ್ವರ್ ಕುಮಾರ್ ಅವರನ್ನು ಸರಣಿ ಶ್ರೇಷ್ಠ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಕ್ರಿಕೆಟ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.