
ಹರಾರೆಯಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲಿ ಆತಿಥೇಯ ಜಿಂಬಾಬ್ವೆ ತಂಡವನ್ನು ಏಕಪಕ್ಷೀಯವಾಗಿ ಮಣಿಸಿದ ಟೀಂ ಇಂಡಿಯಾ (India vs Zimbabwe) ಮೂರು ಪಂದ್ಯಗಳ ಸರಣಿಯಲ್ಲಿ ಸತತ ಎರಡನೇ ಪಂದ್ಯವನ್ನು ಗೆಲ್ಲುವ ಮೂಲಕ ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ ಟಿ20 ಸರಣಿಯನ್ನು ವಶಪಡಿಸಿಕೊಂಡಿದೆ. ಇದರೊಂದಿಗೆ ಪೂರ್ಣ ಪ್ರಮಾಣದ ನಾಯಕನಾಗಿ ಶ್ರೇಯಸ್ ಅಯ್ಯರ್ (Ishan Kishan) ಮೊದಲ ಟಿ20 ಸರಣಿ ಗೆದ್ದ ಸಾಧನೆಯನ್ನು ಮಾಡಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಕಿಶನ್ ಹಾಗೂ ತಿಲಕ್ ಅವರ ಅರ್ಧಶತಕದ ನೆರವಿನಿಂದ 219 ರನ್ ಕಲೆಹಾಕಿ ಜಿಂಬಾಬ್ವೆ ಗೆಲುವಿಗೆ 220 ರನ್ ಗುರಿ ನೀಡಿತು. ಈ ಗುರಿ ಬೆನ್ನಟ್ಟಿದ ಜಿಂಬಾಬ್ವೆ ಪೂರ್ಣ 20 ಓವರ್ಗಳನ್ನು ಆಡಲು ಸಾಧ್ಯವಾಗದೆ 18ನೇ ಓವರ್ನಲ್ಲಿ 129 ರನ್‌ಗಳಿಗೆ ಆಲೌಟ್ ಆಗುವ ಮೂಲಕ 90 ರನ್‌ಗಳಿಂದ ಸೋಲೊಪ್ಪಿಕೊಂಡಿತು.
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಉತ್ತಮ ಆರಂಭ ಪಡೆಯಲಿಲ್ಲ. ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಅವರ ಇನ್ನಿಂಗ್ಸ್ ಕೇವಲ 8 ರನ್‌ಗಳಿಗೆ ಕೊನೆಗೊಂಡಿತು. ವೈಭವ್ ಸೂರ್ಯವಂಶಿ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶಿಸಿದರಾದರೂ ಕೇವಲ 20 ರನ್ ಗಳಿಸಲಷ್ಟೇ ಶಕ್ತರಾದರು. ಆದರೆ ಆ ನಂತರ ಜೊತೆಯಾದ ಇಶಾನ್ ಕಿಶನ್ ಹಾಗೂ ನಾಯಕ ಶ್ರೇಯಸ್ ಅಯ್ಯರ್ ತಂಡದ ಇನ್ನಿಂಗ್ಸ್ ನಿಭಾಯಿಸಿದರು. ಇಬ್ಬರೂ ಮೂರನೇ ವಿಕೆಟ್‌ಗೆ 42 ಎಸೆತಗಳಲ್ಲಿ 66 ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಂಡರು.
ಆದರೆ ಶ್ರೇಯಸ್ ಅಯ್ಯರ್ 25 ರನ್‌ಗಳಿಗೆ ಔಟಾಗುವ ಮೂಲಕ ಇವರಿಬ್ಬರ ಜೊತೆಯಾಟ ಮುರಿದುಬಿದ್ದಿತು. ಆ ಬಳಿಕ ಬಂದ ತಿಲಕ್ ವರ್ಮಾ, ಇಶಾನ್‌ಗೆ ಉತ್ತಮ ಬೆಂಬಲ ನೀಡಿದರು. ನಾಲ್ಕನೇ ವಿಕೆಟ್‌ಗೆ ಇಬ್ಬರೂ 43 ಎಸೆತಗಳಲ್ಲಿ 94 ರನ್‌ಗಳ ಪಾಲುದಾರಿಕೆಯನ್ನು ನೀಡಿದರು. ಆದರೆ ಶತಕದತ್ತ ಸಾಗುತ್ತಿದ್ದ ಇಶಾನ್ ಕಿಶನ್ 81 ರನ್‌ಗಳಿಸಿ ಔಟಾಗುವ ಮೂಲಕ ಈ ಜೊತೆಯಾಟಕ್ಕೆ ಅಂತ್ಯ ಹಾಡಲಾಯಿತು. ರಿಂಕು ಸಿಂಗ್ ಅವರ ಇನ್ನಿಂಗ್ಸ್ 12 ರನ್‌ಗಳಿಗೆ ಕೊನೆಗೊಂಡರೆ, ತಿಲಕ್ ತಮ್ಮ ಆಕ್ರಮಣಕಾರಿ ಆಟವನ್ನು ಮುಂದುವರಿಸಿ 29 ಎಸೆತಗಳಲ್ಲಿ ಔಟಾಗದೆ 60 ರನ್ ಗಳಿಸಿದರು. ಶಿವಂ ದುಬೆ ಮೂರು ಎಸೆತಗಳಲ್ಲಿ 6 ರನ್ ಬಾರಿಸಿ ಅಜೇಯರಾಗಿ ಉಳಿದರು.
IND vs ZIM: ಟಿ20 ಕ್ರಿಕೆಟ್ನಲ್ಲಿ ಹೊಸ ಇತಿಹಾಸ ಸೃಷ್ಟಿಸಿದ ಟೀಂ ಇಂಡಿಯಾ
ಈ ಗುರಿ ಬೆನ್ನಟ್ಟಿದ ಜಿಂಬಾಬ್ವೆಗೆ ಬ್ರಿಯಾನ್ ಬೆನೆಟ್ ಸ್ಫೋಟಕ ಆರಂಭ ಒದಗಿಸಿಕೊಟ್ಟರು. ಆದರೆ ಬೆನೆಟ್ 32 ರನ್ ಗಳಿಸಿ ಔಟಾಗುವ ಮೂಲಕ ಜಿಂಬಾಬ್ವೆ ತಂಡದ ಪೆವಿಲಿಯನ್ ಪರೇಡ್ ಕೂಡ ಶುರುವಾಯಿತು. ಆರಂಭಿಕ ಬೆನ್ ಕರನ್ 1 ರನ್ ಗಳಿಸಿ ಔಟಾದರೆ, ಡಿಯೋನ್ ಮೈಯರ್ಸ್ 12 ರನ್ ಗಳಿಸಿ ರವಿ ಬಿಷ್ಣೋಯ್ಗೆ ಬಲಿಯಾದರು. ನಾಯಕ ಸಿಕಂದರ್ ರಝಾ ಡಕ್ ಔಟ್ ಆದರೆ, ರಯಾನ್ ಬರ್ಲ್ 20 ರನ್ ಗಳಿಸಿ ಔಟಾದರು. ಬ್ರಾಡ್ ಇವಾನ್ಸ್ 19 ರನ್ ಗಳಿಸಿ ಅಭಿಷೇಕ್ಗೆ ಬಲಿಯಾದರು. ನ್ಯೂಮನ್ ನ್ಯಾಮುರಿ 3 ರನ್ ಗಳಿಸಿದರೆ, ತಡಿವನಾಶೆ ಮರುಮಾನಿ 24 ರನ್ ಗಳಿಸಿದರು. ಭಾರತ ಪರ ಅಭಿಷೇಕ್ ಶರ್ಮಾ 3 ವಿಕೆಟ್ ಪಡೆದರೆ, ಯಶ್ ಠಾಕೂರ್ ಹಾಗೂ ಪ್ರಿನ್ಸ್ ಯಾದವ್ ತಲಾ 2 ವಿಕೆಟ್ ಪಡೆದರು. ಉಳಿದಂತೆ ತಿಲಕ್ ವರ್ಮಾ, ಶಿವಂ ದುಬೆ ಮತ್ತು ರವಿ ಬಿಷ್ಣೋಯ್ ತಲಾ ಒಂದು ವಿಕೆಟ್ ಪಡೆದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:01 pm, Sat, 25 July 26