ಐಪಿಎಲ್ ಸೀಸನ್ 15 (IPL 20220 ಆರಂಭದಲ್ಲೇ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡವು ಸಂಕಷ್ಟಕ್ಕೆ ಸಿಲುಕಿದೆ. ಏಕೆಂದರೆ ಈ ಬಾರಿ ಅತ್ಯಧಿಕ ಮೊತ್ತ ನೀಡಿ ಖರೀದಿಸಿದ ವೇಗಿ ದೀಪಕ್ ಚಹರ್ ಅವರು ಗಾಯದ ಕಾರಣ ಐಪಿಎಲ್ನ ಮೊದಲಾರ್ಧದಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂಬುದು ಖಚಿತವಾಗಿದೆ. ಇತ್ತ ಗಾಯದಿಂದ ಚೇತರಿಸಿಕೊಂಡು ಅಂತಿಮ ಹಂತದಲ್ಲಿ ತಂಡವನ್ನು ಸೇರಿಕೊಂಡ ಆರಂಭಿಕ ಆಟಗಾರ ರುತುರಾಜ್ ಗಾಯಕ್ವಾಡ್ ಮೊದಲೆರಡು ಪಂದ್ಯಗಳಲ್ಲಿ ವಿಫಲರಾಗಿದ್ದಾರೆ. ಇನ್ನು ಆಡಿದ ಮೊದಲ ಎರಡೂ ಪಂದ್ಯಗಳಲ್ಲೂ ಸಿಎಸ್ಕೆ ಸೋತಿದೆ. ಈ ಸತತ ಸೋಲಿನ ಚಿಂತೆ ಒಂದೆಡೆಯಾದರೆ, ಇದೀಗ ತಂಡದ ಇಬ್ಬರು ವಿದೇಶಿ ಆಟಗಾರರು ಮುಂದಿನ ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ. ಸಿಎಸ್ಕೆ ತಂಡದಲ್ಲಿರುವ ಇಂಗ್ಲೆಂಡ್ ಆಲ್ರೌಂಡರ್ ಕ್ರಿಸ್ ಜೋರ್ಡಾನ್ ಅನಾರೋಗ್ಯಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮತ್ತೊಂದೆಡೆ ವೇಗದ ಬೌಲರ್ ಆಡಮ್ ಮಿಲ್ನ್ ಕೂಡ ಗಾಯಗೊಂಡಿದ್ದಾರೆ. ಒಂದೆಡೆ ಗಂಟಲಿನ ಸೋಂಕಿನಿಂದ ಬಳಲುತ್ತಿರುವ ಕ್ರಿಸ್ ಜೋರ್ಡಾನ್ ಅವರನ್ನು ಮುಂದಿನ ಪಂದ್ಯದಲ್ಲೂ ಕಣಕ್ಕಿಳಿಯುವುದು ಅನುಮಾನ. ಇದೀಗ ಗಾಯಗೊಂಡಿರುವ ಆಡಮ್ ಮಿಲ್ನ್ ಭಾನುವಾರ ನಡೆಯಲಿರುವ ಪಂಜಾಬ್ ಕಿಂಗ್ಸ್ ವಿರುದ್ದ ಆಡುವುದಿಲ್ಲ ಎಂದು ತಿಳಿದು ಬಂದಿದೆ.
ಈಗಾಗಲೇ ಪ್ರಮುಖ ವೇಗಿ ದೀಪಕ್ ಚಹರ್ ಅವರ ಅನುಪಸ್ಥಿತಿಯಲ್ಲಿ ಸಿಎಸ್ಕೆ ತಂಡದ ಬೌಲಿಂಗ್ ಲೈನಪ್ ಹಳಿ ತಪ್ಪಿದೆ. ಇದೀಗ ಪ್ರಮುಖ ಆಲ್ರೌಂಡರ್ ಕ್ರಿಸ್ ಜೋರ್ಡಾನ್ ಹಾಗೂ ವೇಗಿ ಆಡಮ್ ಮಿಲ್ನ್ ಕೂಡ ಕೆಲ ಪಂದ್ಯಗಳಿಗೆ ಅಲಭ್ಯರಾಗುತ್ತಿರುವುದು ಸಿಎಸ್ಕೆ ತಂಡದ ಚಿಂತೆಯನ್ನು ಹೆಚ್ಚಿಸಿದೆ. ಒಟ್ಟಿನಲ್ಲಿ ಸತತ ಎರಡು ಸೋಲುಗಳಿಂದ ಕಂಗೆಟ್ಟಿರುವ ಚೆನ್ನೈ ಸೂಪರ್ ಕಿಂಗ್ಸ್ ಬ್ಯಾಕ್ ಟು ಬ್ಯಾಕ್ ಆಘಾತಗಳು ಎದುರಾಗುತ್ತಿರುವುದು ಹೊಸ ಚಿಂತೆಗೆ ಕಾರಣವಾಗಿದೆ. ಇದಾಗ್ಯೂ ಪಂಜಾಬ್ ಕಿಂಗ್ಸ್ ವಿರುದ್ದ ಗೆಲ್ಲುವ ಮೂಲಕ ಗೆಲುವಿನ ಖಾತೆ ತೆರೆಯುವ ಇರಾದೆಯಲ್ಲಿದೆ ಸಿಎಸ್ಕೆ .
ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡ ಹೀಗಿದೆ:
ರವೀಂದ್ರ ಜಡೇಜಾ (ನಾಯಕ), ಎಂಎಸ್ ಧೋನಿ, ರುತುರಾಜ್ ಗಾಯಕ್‌ವಾಡ್, ಅಂಬಟಿ ರಾಯುಡು, ಮೊಯಿನ್ ಅಲಿ, ಶಿವಂ ದುಬೆ, ದೀಪಕ್ ಚಹರ್, ಡ್ವೇನ್ ಬ್ರಾವೋ, ರಾಬಿನ್ ಉತ್ತಪ್ಪ, ಕೆಎಂ ಆಸಿಫ್, ತುಷಾರ್ ದೇಶಪಾಂಡೆ, ಮಹೇಶ್ ತೀಕ್ಷಣ, ಎನ್ ಜಗದೀಶನ್, ಹರಿ ನಿಶಾಂತ್, ಸುಭ್ರಂಶು ಸೇನಾಪತಿ , ರಾಜವರ್ಧನ್ ಹಂಗರ್ಗೇಕರ್, ಭಗತ್ ವರ್ಮಾ, ಪ್ರಶಾಂತ್ ಸೋಲಂಕಿ, ಕ್ರಿಸ್ ಜೋರ್ಡನ್, ಡ್ವೈನ್ ಪ್ರಿಟೋರಿಯಸ್, ಡೆವೊನ್ ಕಾನ್ವೇ, ಆಡಮ್ ಮಿಲ್ನೆ, ಮಿಚೆಲ್ ಸ್ಯಾಂಟ್ನರ್.
ಇದನ್ನೂ ಓದಿ: IPL ಆಡಿದ್ದ 11 ಪಾಕಿಸ್ತಾನಿ ಆಟಗಾರರು ಯಾರು ಗೊತ್ತಾ?
ಇದನ್ನೂ ಓದಿ: IPL 2022: ಇವರೇ RCB ಪರ ಹ್ಯಾಟ್ರಿಕ್ ವಿಕೆಟ್ ಪಡೆದ ಮೂವರು ಬೌಲರುಗಳು