RR vs RCB, IPL 2023: ಐಪಿಎಲ್ನಲ್ಲಿಂದು ಎರಡು ಪಂದ್ಯ: ರಾಜಸ್ಥಾನ್- ಆರ್ಸಿಬಿ ಮಧ್ಯೆ ಹೈವೋಲ್ಟೇಜ್ ಕದನ
CSK vs KKR, IPL 2023: ಐಪಿಎಲ್ನಲ್ಲಿಂದು ಎರಡು ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಮೊದಲ ಮ್ಯಾಚ್ನಲ್ಲಿ ರಾಜಸ್ಥಾನ್ ರಾಯಲ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮುಖಾಮುಖಿ ಆಗಲಿದೆ. ದ್ವಿತೀಯ ಪಂದ್ಯದಲ್ಲಿ ಚೆನ್ನೈ-ಕೋಲ್ಕತ್ತಾವನ್ನು ಎದುರಿಸಲಿದೆ.

16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿಂದು (IPL 2023) ಎರಡು ಮಹತ್ವದ ಪಂದ್ಯಗಳು ನಡೆಯಲಿದೆ. ಜೈಪುರದ ಸವಾಯಿ ಮಾನ್ಸಿಂಗ್ ಸ್ಟೇಡಿಯಂನಲ್ಲಿ ಆಯೋಜಿಸಲಾಗಿರುವ ಮೊದಲ ಮ್ಯಾಚ್ನಲ್ಲಿ ಸಂಜು ಸ್ಯಾಮ್ಸನ್ ನಾಯಕತ್ವದ ರಾಜಸ್ಥಾನ್ ರಾಯಲ್ಸ್ ಮತ್ತು ಫಾಫ್ ಡುಪ್ಲೆಸಿಸ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RR vs RCB) ಮುಖಾಮುಖಿ ಆಗಲಿದೆ. ಅಂತೆಯೆ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯಲಿರುವ ದ್ವಿತೀಯ ಪಂದ್ಯದಲ್ಲಿ ಎಂಎಸ್ ಧೋನಿ ಅವರ ಚೆನ್ನೈ ಸೂಪರ್ ಕಿಂಗ್ಸ್ ತಂಡ ಕೋಲ್ಕತ್ತಾ ನೈಟ್ ರೈಡರ್ಸ್ (CSK vs KKR) ಅನ್ನು ಎದುರಿಸಲಿದೆ.
ಆರ್ಆರ್ vs ಆರ್ಸಿಬಿ:
ಪ್ಲೇ ಆಫ್ಗೇರುವ ದೃಷ್ಟಿಯಿಂದ ರಾಜಸ್ಥಾನ್-ಆರ್ಸಿಬಿ ಉಭಯ ತಂಡಗಳಿಗೆ ಇದು ಮಾಡು ಇಲ್ಲವೇ ಮಡಿ ಪಂದ್ಯ. ಒಂದು ವೇಳೆ ಆರ್ಸಿಬಿ ಸೋತರೆ ರಾಜಸ್ಥಾನ್ ರಾಯಲ್ಸ್ಗೆ ಪ್ಲೇಆಫ್ ಪ್ರವೇಶಿಸುವ ಅವಕಾಶ ಇರಲಿದೆ. ಆರ್ಆರ್ ಸೋತರೆ ಬಹುತೇಕ ಟೂರ್ನಿಯಿಂದ ಹೊರಬಿದ್ದಂತೆ. ಹಾಗಾಗಿ ಪ್ಲೇಆಫ್ ರೇಸ್ನಲ್ಲಿರುವ ಉಭಯ ತಂಡಗಳಿಗೂ ಇದು ನಾಕೌಟ್ ಪಂದ್ಯ ಎಂದರೆ ತಪ್ಪಾಗಲಾರದು. ಆರ್ಆರ್ ತಂಡಕ್ಕೆ ಯಶಸ್ವಿ ಜೈಸ್ವಾಲ್ ಸ್ಫೋಟಕ ಆರಂಭ ಒದಗಿಸುತ್ತಿರುವುದು ಪ್ಲಸ್ ಪಾಯಿಂಟ್. ಜೋಸ್ ಬಟ್ಲರ್ ಕೂಡ ನೆರವಾಗುತ್ತಿದ್ದಾರೆ. ಸಂಜು ಸ್ಯಾಮ್ಸನ್, ಶಿಮ್ರೋನ್ ಹೆಟ್ಮೇರ್ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಅಸ್ತ್ರ. ಧ್ರುವ್ ಜುರೆಲ್ ಮತ್ತು ಜೇಸನ್ ಹೋಲ್ಡರ್ ಕಡೆಯಿಂದ ಉತ್ತಮ ಆಟ ಬರಬೇಕಿದೆ. ಆರ್ಆರ್ ಸ್ಪಿನ್ನರ್ಗಳಾದ ಚಹಲ್, ಅಶ್ವಿನ್ ಮತ್ತು ಝಂಪಾ ಎದುರಾಳಿಗೆ ಕಂಟಕವಾಗಿದ್ದಾರೆ. ಟ್ರೆಂಟ್ ಬೌಲ್ಟ್, ಸಂದೀಪ್ ಶರ್ಮಾ, ಜೇಸನ್ ಹೋಲ್ಡನ್, ಕುಲ್ದೀಪ್ ಸೇನ್ ವೇಗಿಗಳಾಗಿದ್ದಾರೆ.
IPL 2023: 4 ಕೋಟಿ ರೂ.ಗೆ 575 ರನ್ಸ್: 3.8 ಕೋಟಿ ರೂ.ಗೆ 39 ರನ್ಸ್..!
ಇತ್ತ ಆರ್ಸಿಬಿ ಪರ ಬ್ಯಾಟಿಂಗ್ನಲ್ಲಿ ವಿರಾಟ್ ಕೊಹ್ಲಿ, ಮ್ಯಾಕ್ಸ್ವೆಲ್ ಹಾಗೂ ಫಾಫ್ ಡುಪ್ಲೆಸಿಸ್ ಕಡೆಯಿಂದ ಮಾತ್ರ ಕೊಡುಗೆ ಬರುತ್ತಿದೆ. ಮಹಿಪಾಲ್ ಲುಮ್ರೂರ್ ಮತ್ತೊಮ್ಮೆ ಅಬ್ಬರಿಸಬೇಕಿದೆ. ದಿನೇಶ್ ಕಾರ್ತಿಕ್, ಕೇದರ್ ಜಾಧವ್ ಕಡೆಯಿಂದ ಕೂಡ ರನ್ ಬರಬೇಕು. ಮೊಹಮ್ಮದ್ ಸಿರಾಜ್ ಮತ್ತು ಜೋಶ್ ಹ್ಯಾಜ್ಲೆವುಡ್ ತಂತ್ರದೊಂದಿಗೆ ಬೌಲಿಂಗ್ ಮಾಡಬೇಕು. ಇಂಪ್ಯಾಕ್ಟ್ ಪ್ಲೇಯರ್ ಆಗಿದ್ದ ಹರ್ಷಲ್ ಪಟೇಲ್ ನೀರಿನಂತೆ ರನ್ ಹರಿಯ ಬಿಡುತ್ತಿದ್ದಾರೆ. ಹನಿಂದು ಹಸರಂಗ ಮತ್ತು ಕರ್ಣ್ ಶರ್ಮಾ ಕೂಡ ಮಾರಕವಾಗಬೇಕಿದೆ. ಒಟ್ಟಾರೆ ತಂಡದಲ್ಲಿ ಏನಾದರು ಬದಲಾವಣೆ ಮಾಡಿದರಷ್ಟೆ ಬೆಂಗಳೂರು ಜಯ ಸಾಧಿಸಿ ಮುಂದಿನ ಹಂತಕ್ಕೆ ತೇರ್ಗಡೆ ಆಗಬಹುದು.
ಸಿಎಸ್ಕೆ-ಕೆಕೆಆರ್:
ಸಿಎಸ್ಕೆ ತಂಡ ಬ್ಯಾಟಿಂಗ್-ಬೌಲಿಂಗ್ ಎರಡೂ ವಿಭಾಗಗಳಲ್ಲಿ ಬಲಿಷ್ಠವಾಗಿದೆ. ರುತುರಾಯ್ ಗಾಯಕ್ವಾಡ್, ಡೆವೋನ್ ಕಾನ್ವೆ ಭರ್ಜರಿ ಫಾರ್ಮ್ನಲ್ಲಿದ್ದು ಅತ್ಯುತ್ತಮ ಆರಂಭ ಒದಗಿಸುತ್ತಿದ್ದಾರೆ. ಅಜಿಂಕ್ಯಾ ರಹಾನೆ ಕೂಡ ಸ್ಫೋಟಕ ಬ್ಯಾಟಿಂಗ್ ನಡೆಸುತ್ತಿದ್ದಾರೆ. ಶಿವಂ ದುಬೆ ಪ್ರತಿ ಪಂದ್ಯದಲ್ಲಿ ಅಬ್ಬರಿಸುವ ಮೂಲಕ ಗಮನ ಸೆಳೆದಿದ್ದಾರೆ. ಅಂಬಟಿ ರಾಯುಡು ಹಾಗೂ ಮೊಯೀನ್ ಅಲಿ ಕಡೆಯಿಂದ ನಿರೀಕ್ಷೆಗೆ ತಕ್ಕ ಆಟ ಬರುತ್ತಿಲ್ಲ. ಧೋನಿ ಹಾಗೂ ಜಡೇಜಾ ಫಿನಿಶಿಂಗ್ ಜವಾಬ್ದಾರಿ ಹೊತ್ತಿದ್ದಾರೆ. ಆರಂಭದಲ್ಲಿ ಮಂಕಾಗಿದ್ದ ಸಿಎಸ್ಕೆ ಬೌಲಿಂಗ್ ಈಗ ಬಲಿಷ್ಠವಾಗಿದೆ. ಮತೀಶಾ ಪತಿರಾನ ವಿಕೆಟ್ ಟೇಕಿಂಗ್ ಬೌಲರ್ ಆಗಿ ಕಾಣಿಸಿಕೊಂಡಿದ್ದಾರೆ. ತುಶಾರ್ ದೇಶ್ಪಾಂಡೆ, ಮಹೀಶಾ ತೀಕ್ಷಣ, ದೀಪಕ್ ಚಹರ್, ಜಡೇಜಾ, ಅಲಿ ಸಾಥ್ ನೀಡುತ್ತಿದ್ದಾರೆ.
ಕೆಕೆಆರ್ಗೆ ಇದು ಮಾಡು ಇಲ್ಲವೇ ಮಡಿ ಪಂದ್ಯ. ಜೇಸನ್ ರಾಯ್ ಹಾಗೂ ರಹಮಾನುಲ್ಲಾ ಗುರ್ಬಾಜ್ ಜೋಡಿ ಉತ್ತಮ ಆರಂಭ ಒದಗಿಸಬೇಕಿದೆ. ನಾಯಕ ನಿತೀಶ್ ರಾಣ ಹಾಗೂ ರಿಂಕು ಸಿಂಗ್, ವೆಂಕಟೇಶ್ ಅಯ್ಯರ್ ಮಾತ್ರ ಪ್ರತಿ ಪಂದ್ಯದಲ್ಲಿ ರನ್ ಕಲೆಹಾಕುತ್ತಿದ್ದಾರೆ. ಆಂಡ್ರೆ ರಸೆಲ್ ಅಬ್ಬರಿಸಬೇಕು. ಸುನಿಲ್ ನರೈನ್, ವರುಣ್ ಚಕ್ರವರ್ತಿ ಮಾರಕವಾಗಿದ್ದರೆ ಹರ್ಷಿತ್ ರಾಣ, ಸುಯೇಶ್ ಶರ್ಮಾ ಭರವಸೆ ಮೂಡಿಸಿದ್ದಾರೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:37 am, Sun, 14 May 23




