IPL 2025: ನಾಯಕರ ನಿಷೇಧಕ್ಕೆ ಬ್ರೇಕ್ ಹಾಕಿ ನೇರವಾಗಿ ಅವರ ಖಜಾನೆಗೆ ಕೈ ಹಾಕಿದ ಬಿಸಿಸಿಐ
IPL 2025: 2025ರ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಮೊದಲ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಇರುವುದಿಲ್ಲ. ನಿಧಾನಗತಿಯ ಓವರ್ ರೇಟ್ ನಿಯಮ ಉಲ್ಲಂಘನೆಗಾಗಿ ಅವರಿಗೆ ನಿಷೇಧ ವಿಧಿಸಲಾಗಿತ್ತು. ಆದರೆ ಈಗ ಬಿಸಿಸಿಐ ಈ ನಿಯಮವನ್ನು ರದ್ದುಗೊಳಿಸಿದೆ. ನಾಯಕನನ್ನು ಪಂದ್ಯದಿಂದ ನಿಷೇಧಿಸುವ ಬದಲಾಗಿ ಆತನ ಪಂದ್ಯ ಶುಲ್ಕವನ್ನು ಕಡಿತಗೊಳಿಸುವ ಹಾಗೂ ಡಿಮೆರಿಟ್ ಅಂಕಗಳನ್ನು ನೀಡುವ ನಿಯಮವನ್ನು ಜಾರಿಗೆ ತಂದಿದೆ.

2025 ರ ಐಪಿಎಲ್‌ನಲ್ಲಿ (IPL 2025) ಮುಂಬೈ ಇಂಡಿಯನ್ಸ್ ತಂಡ ತನ್ನ ಮೊದಲ ಪಂದ್ಯವನ್ನು ಆಡುವಾಗ, ಆ ತಂಡದ ನಿಯಮಿತ ನಾಯಕ ಹಾರ್ದಿಕ್ ಪಾಂಡ್ಯ (Hardik Pandya) ತಂಡದ ಭಾಗವಾಗಿರುವುದಿಲ್ಲ. ಅವರ ಸ್ಥಾನದಲ್ಲಿ ಸೂರ್ಯಕುಮಾರ್ ಯಾದವ್ ತಂಡವನ್ನು ಮುನ್ನಡೆಸಲಿದ್ದಾರೆ. ಇದಕ್ಕೆ ಕಾರಣ ಕಳೆದ ಸೀಸನ್ನಲ್ಲಿ ಐಪಿಎಲ್ ನಿಯಮವನ್ನು ಪಾಲಿಸದ ಹಾರ್ದಿಕ್ಗೆ 18ನೇ ಆವೃತ್ತಿಯ ಮೊದಲ ಪಂದ್ಯದಿಂದ ನಿಷೇಧ ಹೇರಲಾಗಿತ್ತು. ವಾಸ್ತವವಾಗಿ ಮುಂಬೈ ತಂಡ ಐಪಿಎಲ್‌ನಲ್ಲಿ ನಿದಾನಗತಿಯ ಓವರ್ ರೇಟ್ ನಿಯಮವನ್ನು ಮೂರು ಬಾರಿ ಉಲ್ಲಂಘಿಸಿತ್ತು. ಹೀಗಾಗಿ ಹಾರ್ದಿಕ್ ಈ ಸೀಸನ್ನ ಮೊದಲ ಪಂದ್ಯವನ್ನು ಆಡುವಂತಿಲ್ಲ. ಆದರೀಗ ನಾಯಕರನ್ನು ಪಂದ್ಯದಿಂದ ನಿಷೇಧಿಸುವ ನಿಯಮವನ್ನು ರದ್ದುಗೊಳಿಸಲು ಬಿಸಿಸಿಐ ಮುಂದಾಗಿದೆ.
ಒಂದು ಪಂದ್ಯದಿಂದ ನಿಷೇಧ
ವಾಸ್ತವವಾಗಿ ಕಳೆದ ಆವೃತ್ತಿಯ ಐಪಿಎಲ್‌ನಲ್ಲಿ ಯಾವ ತಂಡ ನಿಗದಿತ ಸಮಯದಲ್ಲಿ ಓವರ್ಗಳನ್ನು ಪೂರ್ಣಗೊಳಿಸುವುದಿಲ್ಲವೋ ಆ ತಂಡದ ನಾಯಕನಿಗೆ ಮೊದಲು ಎಚ್ಚರಿಕೆ, ನಂತರ ದಂಡ, ಕೊನೆಯದಾಗಿ ಪಂದ್ಯದಿಂದ ನಿಷೇಧಿಸುವ ನಿಯಮವನ್ನು ಜಾರಿಗೊಳಿಸಿತ್ತು. ಅದರಂತೆ ಮುಂಬೈ ಇಂಡಿಯನ್ಸ್ ತಂಡ ಮೂರು ಬಾರಿ ಈ ನಿಯಮವನ್ನು ಮುರಿದಿದಕ್ಕಾಗಿ ಪಾಂಡ್ಯಗೆ ಒಂದು ಪಂದ್ಯದಿಂದ ನಿಷೇಧ ಹೇರಲಾಗಿತ್ತು. ಆದರೀಗ ಈ ಬಾರಿಯ ಐಪಿಎಲ್ ಆರಂಭಕ್ಕೂ ಮುನ್ನ ಈ ನಿಯಮವನ್ನು ರದ್ದುಗೊಳಿಸಿರುವುದಾಗಿ ಬಿಸಿಸಿಐ ತಿಳಿಸಿದೆ.
ಐಪಿಎಲ್ ಹೊಸ ಸೀಸನ್ ಆರಂಭವಾಗುವ ಎರಡು ದಿನಗಳ ಮೊದಲು, ಮಾರ್ಚ್ 20 ರ ಗುರುವಾರ, ಬಿಸಿಸಿಐ ಮುಂಬೈನಲ್ಲಿ ಎಲ್ಲಾ 10 ತಂಡಗಳ ನಾಯಕರೊಂದಿಗೆ ವಿಶೇಷ ಸಭೆ ನಡೆಸಿತು. ಈ ಸಮಯದಲ್ಲಿ, ನಾಯಕರ ಅಧಿಕೃತ ಫೋಟೋಶೂಟ್ ಕೂಡ ನಡೆಯಿತು. ಆದರೆ ಅದಕ್ಕಿಂತ ಮುಖ್ಯವಾಗಿ, ಈ ಸಭೆಯು ಅನೇಕ ಹೊಸ ಬದಲಾವಣೆಗಳಿಗೆ ಸಾಕ್ಷಿಯಾಗಿತ್ತು. ಇದರಲ್ಲಿ ಬೌಲರ್ಗಳು ಚೆಂಡಿನ ಮೇಲೆ ಎಂಜಲು ಲೇಪನ ಮಾಡುವುದಕ್ಕೆ ಅನುಮತಿ ನೀಡುವುದರ ಜೊತೆಗೆ ರಾತ್ರಿ ಪಂದ್ಯಗಳಲ್ಲಿ ಎರಡನೇ ಇನ್ನಿಂಗ್ಸ್ನಲ್ಲಿ ಬೌಲಿಂಗ್ ಮಾಡುವ ತಂಡಕ್ಕೆ ಎರಡು ಚೆಂಡುಗಳನ್ನು ಬಳಸಲು ಅನುಮತಿ ನೀಡಲಾಗಿದೆ.
ನಿಷೇಧ ಶಿಕ್ಷೆಯಿಂದ ನಾಯಕರು ಪಾರು
ವರದಿಗಳ ಪ್ರಕಾರ, ಬಿಸಿಸಿಐ ಈಗ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಅನುಗುಣವಾಗಿ ಸ್ಲೋ ಓವರ್ ರೇಟ್ ತಪ್ಪು ಮಾಡಿದವರಿಗೆ ಶಿಕ್ಷೆಯನ್ನು ಜಾರಿಗೆ ತಂದಿದೆ. ಐಸಿಸಿ ನಿಯಮಗಳ ಪ್ರಕಾರ, ನಾಯಕ ಸ್ಲೋ ಓವರ್ ರೇಟ್ನಲ್ಲಿ ತಪ್ಪಿತಸ್ಥನೆಂದು ಕಂಡುಬಂದರೆ, ದಂಡ ವಿಧಿಸಲಾಗುತ್ತದೆ ಮತ್ತು ಡಿಮೆರಿಟ್ ಅಂಕಗಳನ್ನು ಕೂಡ ನೀಡಲಾಗುತ್ತದೆ. ಈಗ ಬಿಸಿಸಿಐ ಕೂಡ ಅದೇ ವಿಧಾನವನ್ನು ಅಳವಡಿಸಿಕೊಳ್ಳಲಿದೆ. ಲೆವೆಲ್-1 ರಲ್ಲಿ ತಪ್ಪಿತಸ್ಥರೆಂದು ಕಂಡುಬಂದರೆ, ಪಂದ್ಯ ಶುಲ್ಕದ ಶೇಕಡಾ 25 ರಿಂದ 75 ರಷ್ಟು ಹಣವನ್ನು ದಂಡವನ್ನಾಗಿ ಕಡಿತಗೊಳಿಸಲಾಗುತ್ತದೆ. ಇದಲ್ಲದೆ, ನಾಯಕನ ಖಾತೆಗೆ ಡಿಮೆರಿಟ್ ಅಂಕಗಳು ಕೂಡ ಸೇರಲಿವೆ. ಇದು ಮುಂದಿನ 3 ವರ್ಷಗಳವರೆಗೆ ಇರುತ್ತದೆ.
ಈ ಅವದಿಯಲ್ಲಿ ಒಂದು ತಂಡ ಅಧಿಕ ಬಾರಿ ಈ ನಿಯಮವನ್ನು ಉಲ್ಲಂಘಿಸಿದರೆ ಆಗ ಆ ತಂಡದ ನಾಯಕನನ್ನು ಲೆವೆಲ್-2 ತಪ್ಪಿತಸ್ಥನೆಂದು ಪರಿಗಣಿಸಲಿದ್ದು, 4 ಡಿಮೆರಿಟ್ ಅಂಕಗಳನ್ನು ನೇರವಾಗಿ ನೀಡಲಾಗುತ್ತದೆ. ಒಬ್ಬ ನಾಯಕ 4 ಡಿಮೆರಿಟ್ ಅಂಕಗಳನ್ನು ಪಡೆದ ತಕ್ಷಣ, ಮ್ಯಾಚ್ ರೆಫರಿ ನಾಯಕನ ಪಂದ್ಯ ಶುಲ್ಕದ 100 ಪ್ರತಿಶತ ಹಣವನ್ನು ಕಡಿತಗೊಳಿಸಬಹುದು ಅಥವಾ ಹೆಚ್ಚುವರಿ ಡಿಮೆರಿಟ್ ಅಂಕಗಳನ್ನು ನೀಡಬಹುದು. ಆದಾಗ್ಯೂ, ಒಬ್ಬ ನಾಯಕ ಹೆಚ್ಚು ಡಿಮೆರಿಟ್ ಅಂಕಗಳನ್ನು ಪಡೆದರೆ, ಭವಿಷ್ಯದಲ್ಲಿ ಅವನ ಮೇಲೆ ನಿಷೇಧ ಹೇರಬಹುದು.
ಐಪಿಎಲ್ ಆರಂಭಕ್ಕೂ ಮುನ್ನವೇ ವೇಳಾಪಟ್ಟಿ ಬದಲಾವಣೆ; ಕೊಲ್ಕತ್ತಾದಿಂದ ಗುವಾಹಟಿಗೆ ಪಂದ್ಯ ಶಿಫ್ಟ್
ಹಾರ್ದಿಕ್ ಮತ್ತು ಪಂತ್ಗೆ ಶಿಕ್ಷೆ
ಕಳೆದ ಸೀಸನ್ನಲ್ಲಿ ಮುಂಬೈ ಇಂಡಿಯನ್ಸ್ ನಿಗದಿತ ಸಮಯಕ್ಕೆ ಓವರ್ಗಳನ್ನು ಮುಗಿಸದ ತಪ್ಪನ್ನು ಹಲವು ಬಾರಿ ಮಾಡಿತ್ತು, ಇದಕ್ಕಾಗಿ ಆರಂಭದಲ್ಲಿ ನಾಯಕ ಮತ್ತು ತಂಡಕ್ಕೆ ದಂಡ ವಿಧಿಸಲಾಯಿತು, ಆದರೆ ಕೊನೆಯ ಪಂದ್ಯದ ನಂತರ, ಹಾರ್ದಿಕ್ ಅವರನ್ನು ಒಂದು ಪಂದ್ಯಕ್ಕೆ ನಿಷೇಧಿಸಲಾಯಿತು.. ಅದೇ ರೀತಿ, ಕಳೆದ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕರಾಗಿದ್ದ ರಿಷಭ್ ಪಂತ್ ಕೂಡ ಸತತ ಮೂರು ಈ ನಿಯಮವನ್ನು ಉಲ್ಲಂಘಿಸಿದಕ್ಕೆ ಒಂದು ಪಂದ್ಯದಿಂದ ನಿಷೇಧಕ್ಕೊಳಗಾಗಿದ್ದರು. ಹೀಗಾಗಿ ಪಂತ್ ಅನುಪಸ್ಥಿತಿಯಲ್ಲಿ ಅಕ್ಷರ್ ಪಟೇಲ್ ತಂಡದ ನಾಯಕತ್ವ ವಹಿಸಿಕೊಂಡಿದ್ದರು. ಆದರೆ ಈ ಸೀಸನ್ನಿಂದ ನಾಯಕನನ್ನು ಪಂದ್ಯದಿಂದ ಹೊರಗಿಡುವ ಯಾವ ಸಾಧ್ಯತೆಗಳು ಇರುವುದಿಲ್ಲ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:32 pm, Thu, 20 March 25