ಐಪಿಎಲ್ ಫೈನಲ್ ಪಂದ್ಯದ ಆಹ್ವಾನ ತಿರಸ್ಕರಿಸಿದ ದೇಶದ 3 ಉನ್ನತ ಅಧಿಕಾರಿಗಳು
IPL 2025 Final: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-18ರ ಫೈನಲ್ ಪಂದ್ಯವು ಅಹಮದಾಬಾದ್ನಲ್ಲಿ ನಡೆಯಲಿದೆ. ಜೂನ್ 3 ರಂದು ಜರುಗಲಿರುವ ಈ ಪಂದ್ಯವನ್ನು ಭಾರತೀಯ ಸೈನಿಕರಿಗೆ ಅರ್ಪಿಸಲು ಬಿಸಿಸಿಐ ನಿರ್ಧರಿಸಿದೆ. ಅದರಂತೆ ಐಪಿಎಲ್ ಫೈನಲ್ ಪಂದ್ಯಕ್ಕೂ ಮುನ್ನ 'ಆಪರೇಷನ್ ಸಿಂಧೂರ್' ವಿಜಯೋತ್ಸವ ಆಚರಿಸಲು ತೀರ್ಮಾನಿಸಲಾಗಿದೆ.

IPL 2025: ಇಂಡಿಯನ್ ಪ್ರೀಮಿಯರ್ ಲೀಗ್ 2025ರ ಫೈನಲ್ ಪಂದ್ಯವನ್ನು ಭಾರತೀಯ ಸೈನಿಕರಿಗೆ ಅರ್ಪಿಸಲು ಬಿಸಿಸಿಐ ನಿರ್ಧರಿಸಿದೆ. ಇದಕ್ಕಾಗಿ ಜೂನ್ 3 ರಂದು ನಡೆಯಲಿರುವ ಅಂತಿಮ ಪಂದ್ಯದ ಸಮಾರೋಪ ಸಮಾರಂಭದಲ್ಲಿ ‘ಆಪರೇಷನ್ ಸಿಂಧೂರ್‘ ವಿಜಯೋತ್ಸವ ಆಚರಿಸಲಾಗುತ್ತದೆ. ಈ ಸಮಾರೋಪ ಸಮಾರಂಭದಲ್ಲಿ ಭಾಗವಹಿಸುವಂತೆ ದೇಶದ ಮೂರು ಸೇನೆಯ ಮುಖ್ಯಸ್ಥರಿಗೆ ಆಹ್ವಾನ ನೀಡಲಾಗಿತ್ತು. ಆದರೀಗ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಭೂಸೇನಾ, ವಾಯುಸೇನಾ ಹಾಗೂ ನೌಕಾಸೇನೆಯ ಮುಖ್ಯಸ್ಥರು ನಿರಾಕರಿಸಿದ್ದಾರೆ ಎಂದು ವರದಿಯಾಗಿದೆ.
ಏಪ್ರಿಲ್ 22 ರಂದು ಪಾಕಿಸ್ತಾನ್ ಬೆಂಬಲಿತ ಉಗ್ರರು ಜಮ್ಮು-ಕಾಶ್ಮೀರದ ಪಹಲ್ಗಾಮ್ನಲ್ಲಿ 26 ಮಂದಿ ಭಾರತೀಯರನ್ನು ಹತ್ಯೆಗೈದಿದ್ದರು. ಇದಕ್ಕೆ ಪ್ರತಿಯಾಗಿ ಭಾರತೀಯ ಸೇನೆ ಆಪರೇಷನ್ ಸಿಂಧೂರ್ ಮೂಲಕ ಪಾಕ್ ಮೇಲೆ ದಾಳಿ ನಡೆಸಿ ಪ್ರತೀಕಾರ ತೀರಿಸಿದ್ದರು. ಭಾರತೀಯ ಸೇನೆಯ ಈ ಕಾರ್ಯವನ್ನು ಗೌರವಿಸುವ ಸಲುವಾಗಿ ಇದೀಗ ಇಂಡಿಯನ್ ಪ್ರೀಮಿಯರ್ ಲೀಗ್ನ ಫೈನಲ್ ಪಂದ್ಯದ ವೇಳೆ ಆಪರೇಷನ್ ಸಿಂಧೂರ್ ವಿಜಯೋತ್ಸವ ಆಚರಿಸಲು ನಿರ್ಧರಿಸಲಾಗಿದೆ.
ಅದರಂತೆ ಜೂನ್ 3 ರಂದು ನಡೆಯುವ ಅಂತಿಮ ಪಂದ್ಯದ ಸಂದರ್ಭದಲ್ಲಿ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಸಾವಿರ ಸೈನಿಕರು, ಸೇನಾ ಅಧಿಕಾರಿಗಳು ಮತ್ತು ಅವರ ಕುಟುಂಬ ಸದಸ್ಯರು ಕುಳಿತುಕೊಳ್ಳಲು ವಿಶೇಷ ವ್ಯವಸ್ಥೆ ಮಾಡಲು ಬಿಸಿಸಿಐ ಯೋಜಿಸುತ್ತಿದೆ. ಆದಾಗ್ಯೂ, ಮಾಧ್ಯಮ ವರದಿಗಳ ಪ್ರಕಾರ, ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ, ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ದಿನೇಶ್ ಕೆ ತ್ರಿಪಾಠಿ ಮತ್ತು ವಾಯುಪಡೆಯ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಅಮರ್ ಪ್ರೀತ್ ಸಿಂಗ್ ಅವರು ಬಿಸಿಸಿಐನಿಂದ ಬಂದ ಆಹ್ವಾನವನ್ನು ತಿರಸ್ಕರಿಸಿದ್ದಾರೆ.
ನಮ್ಮ ಸಶಸ್ತ್ರ ಪಡೆಗಳ ಶೌರ್ಯ, ಧೈರ್ಯ ಮತ್ತು ನಿಸ್ವಾರ್ಥ ಸೇವೆಗೆ ಬಿಸಿಸಿಐ ಗೌರವಿಸುತ್ತದೆ. ಆಪರೇಷನ್ ಸಿಂಧೂರ್ ಅಡಿಯಲ್ಲಿ ಅವರ ವೀರೋಚಿತ ಪ್ರಯತ್ನಗಳು ರಾಷ್ಟ್ರವನ್ನು ರಕ್ಷಿಸುತ್ತಿವೆ ಮತ್ತು ಪ್ರೇರೇಪಿಸುತ್ತಿವೆ. ಇದರ ಗೌರವಾರ್ಥವಾಗಿ, ಐಪಿಎಲ್ ಫೈನಲ್ ಪಂದ್ಯವನ್ನು ಸಶಸ್ತ್ರ ಪಡೆಗಳಿಗೆ ಅರ್ಪಿಸಲು ಮತ್ತು ನಮ್ಮ ವೀರ ಸೈನಿಕರನ್ನು ಗೌರವಿಸಲು ನಾವು ನಿರ್ಧರಿಸಿದ್ದೇವೆ ಎಂದು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ತಿಳಿಸಿದ್ದರು.
ಅಲ್ಲದೆ ಸಮಾರೋಪ ಸಮಾರಂಭಕ್ಕೆ ಭಾರತೀಯ ಕ್ರಿಕೆಟ್ ಆಡಳಿತ ಮಂಡಳಿಯು ರಕ್ಷಣಾ ಸಿಬ್ಬಂದಿ ಮುಖ್ಯಸ್ಥರನ್ನು ಹಾಗೂ ಭೂಸೇನೆ, ನೌಕಾಪಡೆ ಮತ್ತು ವಾಯುಪಡೆಯ ಮುಖ್ಯಸ್ಥರನ್ನು ಆಹ್ವಾನಿಸಿದೆ ಎಂದು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಹೇಳಿದ್ದರು. ಆದರೀಗ ಈ ಕಾರ್ಯಕ್ರಮದಿಂದ ಭಾರತೀಯ ಸೇನಾಪಡೆಯ ಮುಖ್ಯಸ್ಥರು ಹೊರಗುಳಿಯಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ: IPL 2025: ಈ ಬಾರಿ ಕಪ್ ಗೆಲ್ಲೋರು ಇವರೇ ಎಂದ ಡೇವಿಡ್ ವಾರ್ನರ್
ಇದಾಗ್ಯೂ ಐಪಿಎಲ್ ಫೈನಲ್ ಪಂದ್ಯದ ವೇಳೆ ಬಿಸಿಸಿಐ, ಆಪರೇಷನ್ ಸಿಂಧೂರ್ ವಿಜಯೋತ್ಸವವನ್ನು ಆಚರಿಸಲಿದೆ. ಅಲ್ಲದೆ ಇದೇ ವೇಳೆ ಮಿಲಿಟರಿ ಬ್ಯಾಂಡ್‌ನ ಪ್ರದರ್ಶನವೂ ನಡೆಯಲಿದೆ ತಿಳಿದು ಬಂದಿದೆ. ಅದರಂತೆ ಜೂನ್ 3 ರಂದು ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಅದ್ಧೂರಿ ಕಾರ್ಯಕ್ರಮಗಳು ಜರುಗಲಿವೆ.
