IPL 2025: ರಾಜಸ್ಥಾನ್ ರಾಯಲ್ಸ್ ವಿರುದ್ಧ ಮ್ಯಾಚ್ ಫಿಕ್ಸಿಂಗ್ ಆರೋಪ
IPL 2025 LSG vs RR: ಇಂಡಿಯನ್ ಪ್ರೀಮಿಯರ್ ಲೀಗ್ನ (ಐಪಿಎಲ್ 2025) 36ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ ತಂಡ ರೋಚಕ ಜಯ ಸಾಧಿಸಿದೆ. ಈ ಗೆಲುವಿನ ರೂವಾರಿ ಅವೇಶ್ ಖಾನ್. ಅಂತಿಮ ಓವರ್ನಲ್ಲಿ 9 ರನ್ ಬೇಕಿದ್ದಾಗ ಅವೇಶ್ ನೀಡಿದ್ದು ಕೇವಲ 6 ರನ್ ಮಾತ್ರ.

IPL 2025: ಲಕ್ನೋ ಸೂಪರ್ ಜೈಂಟ್ಸ್ (LSG) ವಿರುದ್ಧ ಸೋಲಿನ ಬೆನ್ನಲ್ಲೇ ರಾಜಸ್ಥಾನ್ ರಾಯಲ್ಸ್ (RR) ವಿರುದ್ಧ ಮ್ಯಾಚ್ ಫಿಕ್ಸಿಂಗ್ ಆರೋಪ ಕೇಳಿ ಬಂದಿದೆ. ಇಂತಹದೊಂದು ಆರೋಪ ಮಾಡಿರುವುದು ರಾಜಸ್ಥಾನ ಕ್ರಿಕೆಟ್ ಅಸೋಸಿಯೇಷನ್ (ಆರ್‌ಸಿಎ) ತಾತ್ಕಾಲಿಕ ಸಮಿತಿಯ ಸಂಚಾಲಕ ಜೈದೀಪ್ ಬಿಹಾನಿ ಎಂಬುದು ವಿಶೇಷ. ಐಪಿಎಲ್ನ 36ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ತಂಡವು ಕೇವಲ 2 ರನ್ಗಳಿಂದ ಸೋಲನುಭವಿಸಿತ್ತು.
ಈ ಸೋಲಿನ ಬಗ್ಗೆ ಅನುಮಾನಗಳಿವೆ ಎಂದಿರುವ ಆರ್‌ಸಿಎ ತಾತ್ಕಾಲಿಕ ಸಮಿತಿಯ ಸಂಚಾಲಕ ಜೈದೀಪ್ ಬಿಹಾನಿ, ರಾಜಸ್ಥಾನ್ ರಾಯಲ್ಸ್ ತಂಡ ಮ್ಯಾಚ್ ಫಿಕ್ಸಿಂಗ್ ಮಾಡಿರುವ ಸಾಧ್ಯತೆಗಳಿವೆ. ಈ ಬಗ್ಗೆ ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದಾರೆ. ಶ್ರೀಗಂಗಾನಗರದ ಬಿಜೆಪಿ ಶಾಸಕರು ಕೂಡ ಆಗಿರುವ ಜೈದೀಪ್ ಬಿಹಾನಿ ಅವರ ಆರೋಪವು ಇದೀಗ ಮಹತ್ವ ಪಡೆದುಕೊಂಡಿದೆ.
ರಾಜಸ್ಥಾನ್ ಸರ್ಕಾರವು ತಾತ್ಕಾಲಿಕ ಸಮಿತಿಯನ್ನು ಸ್ಥಾಪಿಸಿರುವುದನ್ನು ಪ್ರಶ್ನಿಸಿರುವ ಜೈದೀಪ್ ಬಿಹಾನಿ, ಐಪಿಎಲ್‌ಗೆ ಸಂಬಂಧಿಸಿದಂತೆ ರಾಜಸ್ಥಾನ್ ರಾಯಲ್ಸ್‌ನ ಹಿತಾಸಕ್ತಿಗಳ ಮೇಲೆ ನಿಯಂತ್ರಣವಿಲ್ಲದಿದ್ದರೆ ಏನು ಪ್ರಯೋಜನ?. ರಾಜ್ಯ ಸರ್ಕಾರವು ಒಂದು ತಾತ್ಕಾಲಿಕ ಸಮಿತಿಯನ್ನು ರಚಿಸಿ ಇದೀಗ ಈ ಸಮಿತಿಯ 5ನೇ ಅವಧಿಗೆ ವಿಸ್ತರಿಸಿದೆ. ಈ ಸಮಿತಿಯನ್ನು ಸ್ಥಾಪಿಸುವ ಉದ್ದೇಶ ಎಲ್ಲಾ ಸ್ಪರ್ಧೆಗಳನ್ನು ಸರಿಯಾಗಿ ಆಯೋಜಿಸುವುದಾಗಿದೆ. ಆದರೆ ಪ್ರಸ್ತುತ ರಾಜಸ್ಥಾನ್ ರಾಯಲ್ಸ್ ತಂಡದ ಪ್ರದರ್ಶನ ನೋಡಿದರೆ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿರುವಂತೆ ಕಾಣುತ್ತಿದೆ ಎಂದು ಆರೋಪಿಸಿದ್ದಾರೆ.
2 ರನ್ಗಳ ರೋಚಕ ಜಯ:
ಜೈಪುರದ ಸವಾಯಿ ಮಾನ್ಸಿಂಗ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ ತಂಡವು 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 180 ರನ್ ಕಲೆಹಾಕಿತು.
ಈ ಗುರಿಯನ್ನು ಬೆನ್ನತ್ತಿದ ರಾಜಸ್ಥಾನ್ ರಾಯಲ್ಸ್ ತಂಡ 19 ಓವರ್ಗಳಲ್ಲಿ 172 ರನ್ ಕಲೆಹಾಕಿದ್ದರು. ಅದರಂತೆ ಕೊನೆಯ ಓವರ್ನಲ್ಲಿ ಗೆಲ್ಲಲು ಕೇವಲ 9 ರನ್ಗಳ ಅವಶ್ಯಕತೆಯಿತ್ತು. ಈ ಹಂತದಲ್ಲಿ ನಾಯಕ ರಿಷಭ್ ಪಂತ್ ಚೆಂಡನ್ನು ಅವೇಶ್ ಖಾನ್ ಅವರ ಕೈಗಿತ್ತರು.
20ನೇ ಓವರ್ ಎಸೆದ ಅವೇಶ್ ಖಾನ್, ಮೊದಲ ಎಸೆತದಲ್ಲಿ ಕೇವಲ 1 ರನ್ ನೀಡಿದರು. 2ನೇ ಎಸೆತದಲ್ಲಿ ಶಿಮ್ರೋನ್ ಹೆಟ್ಮೆಯರ್ 2 ರನ್ ಕಲೆಹಾಕಿದರು. ಇನ್ನು 3ನೇ ಎಸೆತದಲ್ಲಿ ಹೆಟ್ಮೆಯರ್ ಕ್ಯಾಚ್ ನೀಡಿ ಔಟಾದರು. 4ನೇ ಎಸೆತದಲ್ಲಿ ಶುಭಂ ದುಬೆ ಯಾವುದೇ ರನ್ ಕಲೆಹಾಕಿಲಿಲ್ಲ.
ಇದನ್ನೂ ಓದಿ: IPL 2025: 4+2… ಹೀಗಿದೆ RCB ತಂಡದ ಪ್ಲೇಆಫ್ ಲೆಕ್ಕಾಚಾರ
5ನೇ ಎಸೆತದಲ್ಲಿ ದುಬೆ 2 ರನ್ ಓಡಿದರು. ಪರಿಣಾಮ ಕೊನೆಯ ಎಸೆತದಲ್ಲಿ 4 ರನ್ಗಳ ಬೇಕಿತ್ತು. ಅಂತಿಮ ಎಸೆತದಲ್ಲಿ ಕೇವಲ 1 ರನ್ ಮಾತ್ರ ನೀಡುವ ಮೂಲಕ ಅವೇಶ್ ಖಾನ್ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ 2 ರನ್ಗಳ ರೋಚಕ ಗೆಲುವು ತಂದುಕೊಟ್ಟರು. ರಾಜಸ್ಥಾನ್ ರಾಯಲ್ಸ್ ತಂಡದ ಈ ಸೋಲಿನ ಬಗ್ಗೆ ಜೈದೀಪ್ ಬಿಹಾನಿ ಮ್ಯಾಚ್ ಫಿಕ್ಸಿಂಗ್ ಗಂಭೀರ ಆರೋಪ ಮಾಡಿದ್ದಾರೆ.
Published On - 2:49 pm, Tue, 22 April 25