IPL 2025: ಲಕ್ನೋನ ಏಕಾನ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ನ 30ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಲಕ್ನೋ ಸೂಪರ್ ಜೈಂಟ್ಸ್ (LSG) ತಂಡವು ನಿರೀಕ್ಷಿತ ಪ್ರದರ್ಶನ ನೀಡಿರಲಿಲ್ಲ. ಇದಾಘ್ಯೂ ರಿಷಭ್ ಪಂತ್ 49 ಎಸೆತಗಳಲ್ಲಿ 63 ರನ್ ಬಾರಿಸಿದರು. ಈ ಅರ್ಧಶತಕದ ನೆರವಿನೊಂದಿಗೆ ಲಕ್ನೋ ಸೂಪರ್ ಜೈಂಟ್ಸ್ ತಂಡ 20 ಓವರ್ಗಳಲ್ಲಿ 166 ರನ್ ಕಲೆಹಾಕಿತು.
167 ರನ್ಗಳ ಸ್ಪರ್ಧಾತ್ಮಕ ಗುರಿ ಪಡೆದ ಚೆನ್ನೈ ಸೂಪರ್ ಕಿಂಗ್ಸ್ ತಂಡವು 15 ಓವರ್ಗಳಲ್ಲಿ ಕಲೆಹಾಕಿದ್ದು ಕೇವಲ 111 ರನ್ಗಳು ಮಾತ್ರ. ಕೊನೆಯ 5 ಓವರ್ಗಳಲ್ಲಿ ಸಿಎಸ್ಕೆ ತಂಡವು 55 ರನ್ಗಳ ಗುರಿ ಪಡೆದಿತ್ತು. ಇದಾಗ್ಯೂ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ ರಿಷಭ್ ಪಂತ್ ತೆಗೆದುಕೊಂಡ ಅಚ್ಚರಿಯ ನಿರ್ಧಾರಗಳೇ LSG ಪಾಲಿಗೆ ಮುಳುವಾಯಿತು.
15ನೇ ಓವರ್ ಮುಕ್ತಾಯದ ವೇಳೆಗೆ ಮಹೇಂದ್ರ ಸಿಂಗ್ ಧೋನಿ ಕ್ರೀಸ್ಗೆ ಆಗಮಿಸಿದ್ದರು. ಧೋನಿಗೆ ಸ್ಪಿನ್ ಬೌಲರ್‌ಗಳ ವಿರುದ್ಧ ಸಮಸ್ಯೆಗಳಿವೆ ಎಂದು ಎಲ್ಲರಿಗೂ ತಿಳಿದಿದೆ. ಪಿಚ್ ಸ್ಪಿನ್ ಬೌಲರ್‌ಗಳಿಗೆ ಅನುಕೂಲಕರವಾಗಿದ್ದರೂ ರಿಷಭ್ ಪಂತ್ ರವಿ ಬಿಷ್ಣೋಯ್‌ಗೆ ಓವರ್ ನೀಡಲಿಲ್ಲ ಎಂಬುದೇ ಅಚ್ಚರಿ.
ಮೂರು ಓವರ್ಗಳಲ್ಲಿ ಖೇವಲ 18 ರನ್ ನೀಡಿ 2 ವಿಕೆಟ್ ಪಡೆದಿದ್ದ ರವಿ ಬಿಷ್ಣೋಯ್ ಅವರಿಂದ ಕೊನೆಯ 5 ಓವರ್ಗಳಲ್ಲಿ ಒಂದು ಓವರ್ ಹಾಕಿಸದಿರುವುದು ಎಲ್ಲರಿಗೂ ಅಚ್ಚರಿ ಮೂಡಿಸಿತ್ತು. ಈ ಬಗ್ಗೆ ಲೈವ್ನಲ್ಲೇ ಕಾಮೆಂಟೇಟರ್ಗಳು ಸಹ ಪ್ರಶ್ನೆಗಳೆನ್ನೆತ್ತಿದ್ದರು.
ಈ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಪರ ದುಬಾರಿಯಾಗಿದ್ದು ಶಾರ್ದೂಲ್ ಠಾಕೂರ್. ಇದಾಗ್ಯೂ ರಿಷಭ್ ಪಂತ್ 17ನೇ ಮತ್ತು 19ನೇ ಓವರ್ಗಳನ್ನು ಶಾರ್ದೂಲ್ ಠಾಕೂರ್ಗೆ ನೀಡಿರುವುದು ಮತ್ತೊಂದು ಅಚ್ಚರಿ. ಲಯದಲ್ಲಿ ಇಲ್ಲದಿದ್ದರೂ ಶಾರ್ದೂಲ್ ಠಾಕೂರ್ಗೆ ಸತತ ಬೌಲಿಂಗ್ ನೀಡುವ ಮೂಲಕ ಪಂತ್ ಪಂದ್ಯವನ್ನೇ ಕೈಚೆಲ್ಲಿಕೊಂಡರು.
ಈ ಪಂದ್ಯದ 16ನೇ ಓವರ್ನ ನಂತರ ಅಂಪೈರ್‌ಗಳು ಚೆಂಡನ್ನು ಬದಲಾಯಿಸಿದರು. ಉತ್ತಮ ಚೆಂಡಿನೊಂದಿಗೆ ಸ್ಪಿನ್ನರ್‌ಗೆ ಬೌಲಿಂಗ್ ಮಾಡುವುದು ಸುಲಭವಾಗುತ್ತಿತ್ತು. ಆದರೆ ರಿಷಭ್ ಪಂತ್ ರವಿ ಬಿಷ್ಣೋಯ್‌ಗೆ ಓವರ್ ನೀಡದೇ, ಶಾರ್ದೂಲ್ ಠಾಕೂರ್ಗೆ ಕೈಗೆ ಚೆಂಡು ನೀಡಿದರು.
ಈ ಪಂದ್ಯದ ಡೆತ್ ಓವರ್ಗಳಲ್ಲಿ ಅವೇಶ್ ಖಾನ್ ಅತ್ಯುತ್ತಮ ಬೌಲಿಂಗ್ ಪ್ರದರ್ಶಿಸಿದ್ದರು. ಇದರ ನಡುವೆ ಧೋನಿ ಬ್ಯಾಟ್ನಿಂದ ಡೀಪ್ ಥರ್ಡ್ಮ್ಯಾನ್ನತ್ತ ಬೌಂಡರಿ ಹೋಯಿತು. ಇದಾಗ್ಯೂ ರಿಷಭ್ ಪಂತ್ ಅತ್ತ ಕಡೆ ಫೀಲ್ಡಿಂಗ್ ಸೆಟ್ ಮಾಡದಿರುವುದು ಕೂಡ ಅಚ್ಚರಿಗೆ ಕಾರಣವಾಗಿತ್ತು.
ಇದನ್ನೂ ಓದಿ: ಮೋಸದಾಟದ ಡೌಟ್… ಹಾರ್ದಿಕ್ ಪಾಂಡ್ಯ ಬ್ಯಾಟ್ ಪರಿಶೀಲಿಸಿದ ಅಂಪೈರ್
ಶಾರ್ದೂಲ್ ಠಾಕೂರ್ 3 ಓವರ್ಗಳಲ್ಲಿ 37 ರನ್ ನೀಡಿದ್ದರು. ಇದಾಗ್ಯೂ ನಿರ್ಣಾಯಕ ಹಂತದಲ್ಲಿ ರಿಷಭ್ ಪಂತ್ 19ನೇ ಓವರ್ ಅನ್ನು ಶಾರ್ದೂಲ್ ಠಾಕೂರ್ ಕೈಯಿಂದ ಹಾಕಿಸಿರುವುದೇ ಆಶ್ಚರ್ಯ. ಪರಿಣಾಮ ಈ ಓವರ್ನಲ್ಲಿ ಫುಲ್ ಟಾಸ್ ನೋಬಾಲ್ನೊಂದಿಗೆ ಶಾರ್ದೂಲ್ ಬರೋಬ್ಬರಿ 19 ರನ್ ಬಿಟ್ಟುಕೊಟ್ಟರು. ಪರಿಣಾಮ ಗೆಲ್ಲಬಹುದಾಗಿದ್ದ ಪಂದ್ಯವನ್ನು ಲಕ್ನೋ ಸೂಪರ್ ಜೈಂಟ್ಸ್ ಕೈಚೆಲ್ಲಿಕೊಂಡರು.