ಆರ್‌ಸಿಬಿ- ಪಂಜಾಬ್ ಪಂದ್ಯ ಆರಂಭಕ್ಕೆ ಕಟ್- ಆಫ್ ಸಮಯ ಯಾವುದು? ರದ್ದಾದರೆ ಯಾವ ತಂಡಕ್ಕೆ ಲಾಭ?
RCB vs PBKS: ಐಪಿಎಲ್ 2025ರ 34ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಬೇಕಿತ್ತು. ಆದರೆ ಬೆಂಗಳೂರಿನ ಭಾರೀ ಮಳೆಯಿಂದ ಪಂದ್ಯ ವಿಳಂಬವಾಗಿದೆ. ಟಾಸ್‌ಗಾಗಿ ಕಟ್-ಆಫ್ ಸಮಯ ರಾತ್ರಿ 10.41 ಮತ್ತು ಪಂದ್ಯ ಆರಂಭಕ್ಕೆ 10.56 ಆಗಿದೆ. ಪಂದ್ಯ ರದ್ದಾದರೆ, ಎರಡೂ ತಂಡಗಳಿಗೆ ತಲಾ ಒಂದು ಅಂಕ ಸಿಗುತ್ತದೆ.

ಐಪಿಎಲ್ 2025 (IPL 2025) ರ 34 ನೇ ಪಂದ್ಯವು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ (RCB vs PBKS) ನಡುವೆ ನಡೆಯಲಿದೆ. ಆದಾಗ್ಯೂ, ಬೆಂಗಳೂರಿನಲ್ಲಿ ಧಾರಕಾರವಾಗಿ ಮಳೆ ಸುರಿಯುತ್ತಿರುವ ಕಾರಣ ಚಿನ್ನಸ್ವಾಮಿ ಮೈದಾನದಲ್ಲಿ ಇನ್ನೂ ಟಾಸ್ ಕೂಡ ನಡೆದಿಲ್ಲ. ನಿಗಧಿತ ಸಮಯದಂತೆ ಟಾಸ್ 7 ಗಂಟೆಗೆ ನಡೆದರೆ, ಪಂದ್ಯ 7:30 ಕ್ಕೆ ಆರಂಭವಾಗಬೇಕಾಗಿತ್ತು. ಆದರೆ ಇದುವರೆಗೂ ಟಾಸ್ ಕೂಡ ನಡೆದಿಲ್ಲ. ಹೀಗಾಗಿ ಪಂದ್ಯ ನಡೆಯುವ ಸಾಧ್ಯತೆಗಳು ತೀರ ಕಡಿಮೆ ಇದೆ ಎಂದು ಹೇಳಲಾಗುತ್ತಿದೆಯಾದರೂ, ಚಿನ್ನಸ್ವಾಮಿ ಮೈದಾನದಲ್ಲಿ ಅತ್ಯಾಧುನಿಕ ಒಳಚರಂಡಿ ವ್ಯವಸ್ಥೆ ಇರುವ ಕಾರಣ ಮಳೆ ನಿಂತರೆ 30 ನಿಮಿಷದೊಳಗೆ ಪಂದ್ಯ ಆರಂಭವಾಗಲಿದೆ. ಇದರ ಹೊರತಾಗಿಯೂ ಈ ಪಂದ್ಯ ರದ್ದಾದರೆ, ಆರ್‌ಸಿಬಿ ಮತ್ತು ಪಂಜಾಬ್ ನಡುವೆ ಯಾವ ತಂಡಕ್ಕೆ ಹೆಚ್ಚು ಲಾಭ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ.
ಕಟ್- ಆಫ್ ಸಮಯ ಯಾವುದು?
ವಾಸ್ತವವಾಗಿ ಐಪಿಎಲ್ ನಿಯಮದ ಪ್ರಕಾರ ಪಂದ್ಯಕ್ಕೆ ಮಳೆ ಅಡ್ಡಪಡಿಸಿದರೆ, ಪಂದ್ಯದದ ಟಾಸ್ ನಡೆಯಲು ಕಟ್-ಆಫ್ ಸಮಯವನ್ನು ರಾತ್ರಿ 10.41 ಕ್ಕೆ ನಿಗದಿಪಡಿಸಲಾಗಿದೆ. ಅಂದರೆ ಈ ಸಮಯದೊಳಗೆ ಪಂದ್ಯದ ಟಾಸ್ ನಡೆಯಲೇಬೇಕು. ಟಾಸ್ ಬಳಿಕ ಪಂದ್ಯ ಆರಂಭವಾಗಲು ಕಟ್-ಆಫ್ ಸಮಯ ರಾತ್ರಿ 10.56 ಆಗಿದೆ. ಹಾಗಾಗಿ ಬೆಂಗಳೂರಿನಲ್ಲಿ ಪಂದ್ಯ ಆರಂಭವಾಗಲು ಇನ್ನು ಸಾಕಷ್ಟು ಸಮಯವಿದೆ. ಆದರೆ ಇದಕ್ಕೆ ಮಳೆರಾಯ ಅವಕಾಶ ಮಾಡಿಕೊಡಬೇಕಾಗಿದೆ.
ತಲಾ ಒಂದೊಂದು ಅಂಕ
ಕಟ್ ಆಫ್ ಸಮಯದೊಳಗೆ ಪಂದ್ಯ ಆರಂಭವಾದರೆ, ಪಂದ್ಯದ ಫಲಿತಾಂಶವನ್ನು ನಿರ್ಣಯಿಸಲು ಉಭಯ ತಂಡಗಳು ಕನಿಷ್ಠ ಪಕ್ಷ ತಲಾ 5 ಓವರ್ಗಳ ಪಂದ್ಯವನ್ನು ಆಡಲೇಬೇಕು. ಅದು ಸಾಧ್ಯವಾಗದರೆ ಪಂದ್ಯವನ್ನು ಡ್ರಾದಲ್ಲಿ ಅಂತ್ಯಗೊಳಿಸಲಾಗುತ್ತದೆ. ಆ ಪ್ರಕಾರ ಆರ್‌ಸಿಬಿ ಹಾಗೂ ಪಂಜಾಬ್ ನಡುವಿನ ಪಂದ್ಯ ಮಳೆಯಿಂದ ರದ್ದಾದರೆ, ಎರಡೂ ತಂಡಗಳಿಗೆ ತಲಾ ಒಂದು ಅಂಕ ಸಿಗುತ್ತದೆ. ಪ್ರಸ್ತುತ ಈ ಎರಡು ತಂಡಗಳು ಟೂರ್ನಿಯಲ್ಲಿ ತಲಾ 6 ಪಂದ್ಯಗಳನ್ನಾಡಿದ್ದು, ತಲಾ 4 ಪಂದ್ಯಗಳಲ್ಲಿ ಗೆಲುವು ಸಾಧಿಸಿವೆ. ಈ ಮೂಲಕ 8 ಅಂಕಗಳೊಂದಿಗೆ ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿವೆ.
IPL 2025: ಬೆಂಗಳೂರಿನಲ್ಲಿ ಇನ್ನೂ ಆರಂಭವಾಗದ ಪಂದ್ಯ; ಮಳೆಯಿಂದ ರದ್ದಾಗುತ್ತಾ?
ಆರ್ಸಿಬಿಗೆ 2ನೇ ಸ್ಥಾನ
ಇನ್ನು ಈ ಪಂದ್ಯ ಮಳೆಯಿಂದ ರದ್ದಾದರೆ ಉಭಯ ತಂಡಗಳಿಗೆ ತಲಾ ಒಂದು ಅಂಕಗಳನ್ನು ನೀಡಲಾಗುತ್ತದೆ. ಈ ಮೂಲಕ ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವ ಆರ್‌ಸಿಬಿ ಒಟ್ಟಾರೆ 9 ಅಂಕಗಳೊಂದಿಗೆ ನೇರವಾಗಿ 2ನೇ ಸ್ಥಾನಕ್ಕೇರಲಿದೆ. ಇತ್ತ ಪಂಜಾಬ್ ಕಿಂಗ್ಸ್ ಕೂಡ 9 ಅಂಕಗಳೊಂದಿಗೆ ಮೂರನೇ ಸ್ಥಾನಕ್ಕೇರಲಿದೆ. ಉಭಯ ತಂಡಗಳು ತಲಾ 9 ಅಂಕಗಳನ್ನು ಹೊಂದಿವೆಯಾದರೂ ನೆಟ್ ರನ್ರೇಟ್ನಲ್ಲಿ ಆರ್‌ಸಿಬಿ, ಪಂಜಾಬ್ಗಿಂತ ಮೇಲಿರುವ ಕಾರಣ ಆರ್ಸಿಬಿಗೆ 2ನೇ ಸ್ಥಾನ ಸಿಗಲಿದೆ. ಈ ಎರಡೂ ತಂಡಗಳು ಮೇಲೇರುವುದರಿಂದ ಗುಜರಾತ್ ಟೈಟಾನ್ಸ್ ತಂಡಕ್ಕೆ ಭಾರಿ ನಷ್ಟವಾಗಲಿದ್ದು, ತಂಡವು ಎರಡು ಸ್ಥಾನ ಕಳೆದುಕೊಂಡು ನಾಲ್ಕನೇ ಸ್ಥಾನಕ್ಕೆ ಕುಸಿಯಲಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:53 pm, Fri, 18 April 25