RCB vs PBKS: ಆರ್ಸಿಬಿ vs ಪಂಜಾಬ್ ಕಿಂಗ್ಸ್ ನಡುವೆ ನಾಳೆ ಮತ್ತೆ ಪಂದ್ಯ
IPL 2025: Royal Challengers Bengaluru vs Punjab Kings: ಈ ಬಾರಿಯ ಐಪಿಎಲ್ನಲ್ಲಿ ಆರ್ಸಿಬಿ ತಂಡವು ತವರು ಮೈದಾನದಲ್ಲಿ ಮೂರನೇ ಬಾರಿ ಸೋಲನುಭವಿಸಿದೆ. ಮಳೆಯ ಕಾರಣ 14 ಓವರ್ಗಳಿಗೆ ಸೀಮಿತವಾಗಿದ್ದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 95 ರನ್ ಕಲೆಹಾಕಿದರೆ, ಪಂಜಾಬ್ ಕಿಂಗ್ಸ್ ತಂಡವು 12.1 ಓವರ್ಗಳಲ್ಲಿ ಈ ಗುರಿ ಮುಟ್ಟಿದೆ.

IPL 2025: ಇಂಡಿಯನ್ ಪ್ರೀಮಿಯರ್ ಲೀಗ್ನ 34ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ವಿರುದ್ಧ ಪಂಜಾಬ್ ಕಿಂಗ್ಸ್ (PBKS) ತಂಡ ಜಯ ಸಾಧಿಸಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಆರ್ಸಿಬಿ ತಂಡವನ್ನು 5 ವಿಕೆಟ್ಗಳಿಂದ ಮಣಿಸುವಲ್ಲಿ ಶ್ರೇಯಸ್ ಅಯ್ಯರ್ ಪಡೆ ಯಶಸ್ವಿಯಾಗಿದೆ. ಈ ಮ್ಯಾಚ್ನೊಂದಿಗೆ ಉಭಯ ತಂಡಗಳು ಐಪಿಎಲ್ನ ಮೊದಲಾರ್ಥ ಪೂರ್ಣಗೊಳಿಸಿದೆ. ಇದೀಗ ದ್ವಿತೀಯಾರ್ಧದ ಮೊದಲ ಪಂದ್ಯದಲ್ಲೇ ಉಭಯ ತಂಡಗಳು ಮುಖಾಮುಖಿಯಾಗಲಿದೆ. ಅದು ಕೂಡ ನಾಳೆ (ಏಪ್ರಿಲ್ 20) ಎಂಬುದು ವಿಶೇಷ.
ಐಪಿಎಲ್ ಮ್ಯಾನೇಜ್ಮೆಂಟ್ ರೂಪಿಸಿರುವ ವೇಳಾಪಟ್ಟಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ತಂಡಗಳಿಗೆ ಬ್ಯಾಕ್ ಟು ಬ್ಯಾಕ್ ಪಂದ್ಯಗಳನ್ನು ನಿಗದಿ ಮಾಡಲಾಗಿದೆ. ಅದರಂತೆ ಉಭಯ ತಂಡಗಳು ಭಾನುವಾರ ಮತ್ತೆ ಮುಖಾಮುಖಿಯಾಗಬೇಕಿದೆ.
ಪಂದ್ಯ ಎಲ್ಲಿ, ಎಷ್ಟು ಗಂಟೆಗೆ?
ಈ ಪಂದ್ಯವು ಪಂಜಾಬ್ ಕಿಂಗ್ಸ್ ತಂಡದ ತವರು ಮೈದಾನದಲ್ಲಿ ನಡೆಯಲಿದೆ. ಅಂದರೆ ಚಂಡೀಗಢ್ನ ಮುಲ್ಲನ್ಪುರ್ ಸ್ಟೇಡಿಯಂನಲ್ಲಿ ಆರ್ಸಿಬಿ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಸೆಣಸಲಿದೆ.
ಏಪ್ರಿಲ್ 20 ರಂದು, ಭಾನುವಾರ ಸಂಜೆ 3.30 ಕ್ಕೆ ಈ ಮ್ಯಾಚ್ ಶುರುವಾಗಲಿದ್ದು, ಇದಕ್ಕಾಗಿ ಉಭಯ ತಂಡಗಳು ಶನಿವಾರ ಬೆಂಗಳೂರಿನಿಂದ ಚಂಡೀಗಢ್ನತ್ತ ಪ್ರಯಾಣ ಬೆಳೆಸಲಿದೆ. ಅಂದರೆ ಉಭಯ ತಂಡಗಳ ನಡುವಣ ಮುಖಾಮುಖಿಗೆ ಕೇವಲ ಒಂದು ದಿನಗಳ ಬಿಡುವು ಮಾತ್ರ ಇದೆ.
ಇತ್ತ ಕಳೆದ ಪಂದ್ಯದಲ್ಲಿ ಸೋತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ನಾಳಿನ (ಏ.20) ಪಂದ್ಯದಲ್ಲಿ ಗೆಲ್ಲುವ ಮೂಲಕ ಸೇಡು ತೀರಿಸಿಕೊಳ್ಳಲಿದೆಯಾ ಕಾದು ನೋಡಬೇಕಿದೆ.
ಪಂಜಾಬ್ ಪಡೆ ಜಯಭೇರಿ:
ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮೊದಲ ಮುಖಾಮುಖಿಯಲ್ಲಿ ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಬೌಲಿಂಗ್ ಆಯ್ದುಕೊಂಡರು. ಮಳೆಯ ಕಾರಣ 14 ಓವರ್ಗಳಿಗೆ ಸೀಮಿತವಾಗಿದ್ದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆರ್ಸಿಬಿ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ.
ಅದರಲ್ಲೂ ಕೇವಲ 63 ರನ್ಗಳಿಗೆ 9 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ಹಂತದಲ್ಲಿ ಸ್ಪೋಟಕ ಇನಿಂಗ್ಸ್ ಆಡಿದ ಟಿಮ್ ಡೇವಿಡ್ 26 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 5 ಫೋರ್ಗಳೊಂದಿಗೆ ಅಜೇಯ 50 ರನ್ ಬಾರಿಸಿದರು. ಈ ಮೂಲಕ ಆರ್ಸಿಬಿ ತಂಡವು ನಿಗದಿತ 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 95 ರನ್ ಕಲೆಹಾಕಿತು.
ಈ ಗುರಿಯನ್ನು ಬೆನ್ನತ್ತಿದ ಪಂಜಾಬ್ ಕಿಂಗ್ಸ್ ತಂಡವು 12.1 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 98 ರನ್ ಬಾರಿಸಿ ಐದು ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಪಂಜಾಬ್ ಕಿಂಗ್ಸ್ ತಂಡವು ಮೊದಲಾರ್ಥವನ್ನು ಜಯದೊಂದಿಗೆ ಅಂತ್ಯಗೊಳಿಸಿದೆ. ಇದೀಗ ಭಾನುವಾರ ನಡೆಯಲಿರುವ ದ್ವಿತೀಯಾರ್ಧ ಮೊದಲ ಪಂದ್ಯಕ್ಕಾಗಿ ಉಭಯ ತಂಡಗಳು ಸಜ್ಜಾಗಬೇಕಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇಯಿಂಗ್ 11: ಫಿಲಿಪ್ ಸಾಲ್ಟ್ , ವಿರಾಟ್ ಕೊಹ್ಲಿ , ರಜತ್ ಪಾಟಿದಾರ್ (ನಾಯಕ) , ಲಿಯಾಮ್ ಲಿವಿಂಗ್ಸ್ಟೋನ್ , ಜಿತೇಶ್ ಶರ್ಮಾ ( ವಿಕೆಟ್ ಕೀಪರ್ ) , ಟಿಮ್ ಡೇವಿಡ್ , ಕೃನಾಲ್ ಪಾಂಡ್ಯ , ಭುವನೇಶ್ವರ್ ಕುಮಾರ್ , ಜೋಶ್ ಹ್ಯಾಝಲ್ವುಡ್ , ಸುಯಶ್ ಶರ್ಮಾ , ಯಶ್ ದಯಾಳ್.
ಇದನ್ನೂ ಓದಿ: IPL 2025: ಡೆಲ್ಲಿ ಕ್ಯಾಪಿಟಲ್ಸ್ ಪ್ಲೇಆಫ್ಗೇರಲು ಮೂರೇ ಮೂರು ಹೆಜ್ಜೆ ದೂರ
ಪಂಜಾಬ್ ಕಿಂಗ್ಸ್ ಪ್ಲೇಯಿಂಗ್ 11: ಪ್ರಿಯಾಂಶ್ ಆರ್ಯ , ನೆಹಾಲ್ ವಧೇರಾ , ಶ್ರೇಯಸ್ ಅಯ್ಯರ್ (ನಾಯಕ) , ಶಶಾಂಕ್ ಸಿಂಗ್ , ಜೋಶ್ ಇಂಗ್ಲಿಸ್ ( ವಿಕೆಟ್ ಕೀಪರ್ ) , ಮಾರ್ಕಸ್ ಸ್ಟೊಯಿನಿಸ್ , ಮಾರ್ಕೊ ಯಾನ್ಸೆನ್ , ಹರ್ಪ್ರೀತ್ ಬ್ರಾರ್ , ಕ್ಸೇವಿಯರ್ ಬಾರ್ಟ್ಲೆಟ್ , ಅರ್ಶ್ದೀಪ್ ಸಿಂಗ್ , ಯುಜ್ವೇಂದ್ರ ಚಹಲ್.
Published On - 7:18 am, Sat, 19 April 25