LSG vs RR: ರಾಯಲ್ಸ್ ಮುಂದೆ ಪಂತ್ ಪಡೆ ಪಲ್ಟಿ!

Lucknow Super Giants vs Rajasthan Royals: ಲಕ್ನೋ ಸೂಪರ್ ಜೈಂಟ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳು ಈವರೆಗೆ 7 ಬಾರಿ ಮುಖಾಮುಖಿಯಾಗಿವೆ. ಈ ವೇಳೆ ಎಲ್​ಎಸ್​ಜಿ ತಂಡ ಗೆದ್ದಿರುವುದು ಕೇವಲ 2 ಬಾರಿ ಮಾತ್ರ. ಇನ್ನುಳಿದ 5 ಪಂದ್ಯಗಳಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ಗೆಲುವು ದಾಖಲಿಸಿದೆ.

LSG vs RR: ರಾಯಲ್ಸ್ ಮುಂದೆ ಪಂತ್ ಪಡೆ ಪಲ್ಟಿ!
Rr Vs Lsg

Updated on: Apr 22, 2026 | 11:17 PM

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ 32ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್​ ತಂಡ ಭರ್ಜರಿ ಗೆಲುವು ದಾಖಲಿಸಿದೆ. ಲಕ್ನೋನ ಏಕಾನ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಎಲ್​ಎಸ್​ಜಿ ತಂಡದ ನಾಯಕ ರಿಷಭ್ ಪಂತ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡವು ನಿರೀಕ್ಷಿತ ಆರಂಭ ಪಡೆದಿರಲಿಲ್ಲ.

ಆರಂಭಿಕ ದಾಂಡಿಗ ಯಶಸ್ವಿ ಜೈಸ್ವಾಲ್ (22) ಆರಂಭದಲ್ಲಿ ಅಬ್ಬರಿಸಿದರೂ ಬೇಗನೆ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ ಧ್ರುವ್ ಜುರೆಲ್ (0) ಸಹ ಔಟಾದರು. ಎರಡು ವಿಕೆಟ್ ಪತನ ಬಳಿಕ ವೈಭವ್ ಸೂರ್ಯವಂಶಿ (8) ಕೂಡ ವಿಕೆಟ್ ಕೈಚೆಲ್ಲಿದರು.

ಹೀಗೆ ಪವರ್​ಪ್ಲೇನಲ್ಲೇ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಆಸರೆಯಾಗಿದ್ದು ಅನುಭವಿ ಆಟಗಾರ ರವೀಂದ್ರ ಜಡೇಜಾ. 29 ಎಸೆತಗಳನ್ನು ಎದುರಿಸಿದ ಜಡೇಜಾ ಅಜೇಯ 43 ರನ್​ ಬಾರಿಸಿದರು.  ಈ ಮೂಲಕ ರಾಜಸ್ಥಾನ್ ರಾಯಲ್ಸ್ ತಂಡದ ಸ್ಕೋರ್ ಅನ್ನು 20 ಓವರ್​ಗಳಲ್ಲಿ 159 ಕ್ಕೆ ತಂದು ನಿಲ್ಲಿಸಿದರು.

160 ರನ್​ಗಳ ಗುರಿ:

ಈ ಗುರಿ ಬೆನ್ನತ್ತಿದ ಲಕ್ನೋ ಸೂಪರ್ ಜೈಂಟ್ಸ್ ತಂಡ ಕೂಡ ಉತ್ತಮ ಆರಂಭ ಪಡೆದಿರಲಿಲ್ಲ. ಆರಂಭಿಕ ದಾಂಡಿಗ ಆಯುಷ್ ಬದೋನಿ (0) ಮೊದಲ ಓವರ್​ನಲ್ಲೇ ರನೌಟ್​ಗೆ ಬಲಿಯಾದರು. ಈ ವೇಳೆ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ರಿಷಭ್ ಪಂತ್ (0) ಸೊನ್ನೆ ಸುತ್ತಿ ನಿರ್ಗಮಿಸಿದರು.

ಆ ಬಳಿಕ ಬಂದ ಐಡೆನ್ ಮಾರ್ಕ್ರಾಮ್ (0) ಜೋಫ್ರಾ ಆರ್ಚರ್ ಎಸೆತದಲ್ಲಿ ಕ್ಯಾಚ್ ನೀಡಿ ಔಟಾದರು. ಈ ಹಂತದಲ್ಲಿ ಜೊತೆಗೂಡಿದ ಮಿಚೆಲ್ ಮಾರ್ಷ್ ಹಾಗೂ ನಿಕೋಲಸ್ ಪೂರನ್ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು. ಇದಾಗ್ಯೂ 22 ರನ್​ಗಳಿಸಿದ ಬಳಿಕ ಜಡೇಜಾ ಎಸೆತದಲ್ಲಿ ಪೂರನ್ ಕ್ಯಾಚಿತ್ತು ನಿರ್ಗಮಿಸಿದರು.

ಆದರೆ ಮತ್ತೊಂದೆಡೆ ಕ್ರೀಸ್ ಕಚ್ಚಿ ಆಡಿದ ಮಿಚೆಲ್ ಮಾರ್ಷ್ 39 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಇದರ ನಡುವೆ 15 ರನ್​ ಬಾರಿಸಿ ಹಿಮ್ಮತ್ ಸಿಂಗ್ ವಿಕೆಟ್ ಒಪ್ಪಿಸಿದ್ದರು.

ಅದರಂತೆ ಕೊನೆಯ 5 ಓವರ್​ಗಳಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ 61 ರನ್​ಗಳ ಅವಶ್ಯಕತೆಯಿತ್ತು. ಈ ಹಂತದಲ್ಲಿ ಮಿಚೆಲ್ ಮಾರ್ಷ್ (55) ನಾಂಡ್ರೆ ಬರ್ಗರ್ ಎಸೆತದಲ್ಲಿ ಕ್ಯಾಚಿತ್ತು ಔಟಾದರು. ಇದರ ಬೆನ್ನಲ್ಲೇ ರಿಯಾನ್ ಪರಾಗ್ ಹಿಡಿದ ಅತ್ಯುತ್ತಮ ಕ್ಯಾಚ್​ಗೆ ಮುಕುಲ್ ಚೌಧರಿ (7) ಬಲಿಯಾದರು.

ಅಂತಿಮವಾಗಿ ಲಕ್ನೋ ಸೂಪರ್ ಜೈಂಟ್ಸ್ ತಂಡವು 18 ಓವರ್​ಗಳಲ್ಲಿ 119 ರನ್​ಗಳಿಸಿ ಆಲೌಟ್ ಆಗಿದೆ. ಈ ಮೂಲಕ ರಾಜಸ್ಥಾನ್ ರಾಯಲ್ಸ್ ತಂಡವು 40 ರನ್​ಗಳ ಭರ್ಜರಿ ಜಯ ಸಾಧಿಸಿದೆ.

ಲಕ್ನೋ ಸೂಪರ್ ಜೈಂಟ್ಸ್ (ಪ್ಲೇಯಿಂಗ್ XI): ಮಿಚೆಲ್ ಮಾರ್ಷ್, ಆಯುಷ್ ಬಡೋನಿ, ರಿಷಭ್ ಪಂತ್ (ನಾಯಕ), ನಿಕೋಲಸ್ ಪೂರನ್, ಐಡೆನ್ ಮಾರ್ಕ್ರಾಮ್, ಮುಕುಲ್ ಚೌಧರಿ, ಮೊಹಮ್ಮದ್ ಶಮಿ, ಮೊಹ್ಸಿನ್ ಖಾನ್, ಪ್ರಿನ್ಸ್ ಯಾದವ್, ದಿಗ್ವೇಶ್ ಸಿಂಗ್ ರಾಠಿ, ಮಯಾಂಕ್ ಯಾದವ್.

ಇದನ್ನೂ ಓದಿ: ದಾಖಲೆ… ವಿಶ್ವ ದಾಖಲೆ… ಅಭಿಷೇಕ್ ಶರ್ಮಾ ಹೆಸರಿಗೆ ಭರ್ಜರಿ ದಾಖಲೆ

ರಾಜಸ್ಥಾನ್ ರಾಯಲ್ಸ್ (ಪ್ಲೇಯಿಂಗ್ XI): ಯಶಸ್ವಿ ಜೈಸ್ವಾಲ್, ವೈಭವ್ ಸೂರ್ಯವಂಶಿ, ಧ್ರುವ್ ಜುರೆಲ್, ರಿಯಾನ್ ಪರಾಗ್ (ನಾಯಕ), ಶಿಮ್ರಾನ್ ಹೆಟ್ಮೆಯರ್, ಡೊನೊವನ್ ಫೆರೇರಾ, ರವೀಂದ್ರ ಜಡೇಜಾ, ಜೋಫ್ರಾ ಆರ್ಚರ್, ರವಿ ಬಿಷ್ಣೋಯ್, ಬ್ರಿಜೇಶ್ ಶರ್ಮಾ, ನಾಂಡ್ರೆ ಬರ್ಗರ್.

Published On - 11:15 pm, Wed, 22 April 26

Follow Us