
ಐಪಿಎಲ್ 2026 (IPL 2026) ರ ಗುಂಪು ಹಂತದ ಪಂದ್ಯಗಳು ಮೇ 24 ರಂದು ಕೊನೆಗೊಳ್ಳಲಿವೆ. ಅದಾದ ನಂತರ, ಪ್ಲೇಆಫ್ ಸುತ್ತು ಆರಂಭವಾಗಲಿದೆ. ಈ ಸುತ್ತಿನಲ್ಲಿ 4 ತಂಡಗಳು ಪ್ರಶಸ್ತಿಗಾಗಿ ಸೆಣಸಾಡಲಿದ್ದು, ಪ್ಲೇಆಫ್ ಪಂದ್ಯಗಳು ಮೇ 26 ರಿಂದ ಪ್ರಾರಂಭವಾಗಲಿದ್ದು, ಮೇ 31 ರಂದು ನಡೆಯಲಿರುವ ಫೈನಲ್ ಪಂದ್ಯದೊಂದಿಗೆ ಕೊನೆಗೊಳ್ಳಲಿದೆ. ಪ್ಲೇಆಫ್ ಪಂದ್ಯಗಳು ಮೂರು ವಿಭಿನ್ನ ಮೈದಾನಗಳಲ್ಲಿ ನಡೆಯಲಿವೆ. ಮೊದಲ ಕ್ವಾಲಿಫೈಯರ್ ಪಂದ್ಯ ಧರ್ಮಶಾಲಾದಲ್ಲಿ, ಎಲಿಮಿನೇಟರ್ ಮತ್ತು ಎರಡನೇ ಕ್ವಾಲಿಫೈಯರ್ ಪಂದ್ಯ ನ್ಯೂ ಚಂಡೀಗಢದಲ್ಲಿ ನಡೆಯಲಿದೆ. ಫೈನಲ್ ಪಂದ್ಯ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಆದರೆ ಈ ಪಂದ್ಯದಲ್ಲಿ ಮಳೆ ಬಂದರೆ, ಫಲಿತಾಂಶವನ್ನು ಹೇಗೆ ನಿರ್ಧರಿಸಲಾಗುತ್ತದೆ ಎಂಬುದು ಹಲವರ ಪ್ರಶ್ನೆಯಾಗಿದೆ. ಅದಕ್ಕೆಲ್ಲ ಉತ್ತರ ಇಲ್ಲಿದೆ.
ಗುಂಪು ಹಂತದಲ್ಲಿ ಮಳೆಯಿಂದಾಗಿ ಪಂದ್ಯ ರದ್ದಾದರೆ, ಪ್ರತಿ ತಂಡಕ್ಕೆ ತಲಾ ಒಂದು ಅಂಕವನ್ನು ನೀಡಲಾಗುತ್ತಿತ್ತು. ಅಂದರೆ ಲೀಗ್ ಹಂತದಲ್ಲಿ ಯಾವುದೇ ಪಂದ್ಯಕ್ಕೆ ಮೀಸಲು ದಿನವಿರಲಿಲ್ಲ. ವಾಸ್ತವವಾಗಿ ಐಸಿಸಿ ಪಂದ್ಯಾವಳಿಗಳಲ್ಲಿ, ನಾಕೌಟ್ ಪಂದ್ಯಗಳಿಗೆ ಮೀಸಲು ದಿನವನ್ನು ನಿಗದಿ ಮಾಡಲಾಗಿರುತ್ತದೆ. ಆದರೆ ಐಪಿಎಲ್ ಪ್ಲೇಆಫ್‌ಗಳಿಗೆ ನಿಯಮಗಳು ಸ್ವಲ್ಪ ಭಿನ್ನವಾಗಿವೆ. ಮೊದಲ ಕ್ವಾಲಿಫೈಯರ್, ಎಲಿಮಿನೇಟರ್ ಮತ್ತು ಎರಡನೇ ಕ್ವಾಲಿಫೈಯರ್‌ಗೆ ಮೀಸಲು ದಿನವನ್ನು ಇರಿಸಲಾಗಿಲ್ಲ. ಫೈನಲ್ ಪಂದ್ಯಕ್ಕೆ ಮಾತ್ರ ಮೀಸಲು ದಿನವನ್ನು ನಿಗದಿ ಪಡಿಸಲಾಗಿದೆ. ಹಾಗಾದರೆ ಕ್ವಾಲಿಫೈಯರ್ ಮತ್ತು ಎಲಿಮಿನೇಟರ್ ಪಂದ್ಯಗಳ ಸಮಯದಲ್ಲಿ ಮಳೆ ಬಂದರೆ, ವಿಜೇತರನ್ನು ಹೇಗೆ ಘೋಷಿಸಲಾಗುತ್ತದೆ?.
ಕ್ವಾಲಿಫೈಯರ್ ಮತ್ತು ಎಲಿಮಿನೇಟರ್ ಪಂದ್ಯಗಳಲ್ಲಿ ಮಳೆ ಬಂದರೆ, ಅದೇ ದಿನ ಪಂದ್ಯವನ್ನು ಮುಗಿಸಲು ಪ್ರಯತ್ನಿಸಲಾಗುತ್ತದೆ. ಪಂದ್ಯದ ಆರಂಭ ವಿಳಂಬವಾದರೆ, ಕನಿಷ್ಠ ಐದು ಓವರ್‌ಗಳ ಪಂದ್ಯವನ್ನು ಆಡಿಸಲು ಪ್ರಯತ್ನಿಸಲಾಗುತ್ತದೆ. ಇದಕ್ಕಾಗಿ, 120 ನಿಮಿಷಗಳ ಹೆಚ್ಚುವರಿ ಸಮಯವನ್ನು ನೀಡಲಾಗಿದೆ. ಆದರೆ ಹೆಚ್ಚುವರಿ ಸಮಯದ 120 ನಿಮಿಷಗಳಲ್ಲೂ ಪಂದ್ಯ ಮುಗಿಯದಿದ್ದರೆ, ಆಗ ಪಾಯಿಂಟ್ ಪಟ್ಟಿ ಪ್ರಮುಖ ಪಾತ್ರವಹಿಸುತ್ತದೆ. ಅಂದರೆ ಪಾಯಿಂಟ್ ಪಟ್ಟಿಯಲ್ಲಿ ಯಾವ ತಂಡ ಮೇಲುಗೈ ಸಾಧಿಸಿರುತ್ತದೋ ಆ ತಂಡವನ್ನು ವಿಜಯಿ ಎಂದು ಘೋಷಿಸಲಾಗುತ್ತದೆ.
CSK vs SRH IPL 2026 Live Score: ಸಿಎಸ್ಕೆ 3ನೇ ವಿಕೆಟ್ ಪತನ
ಉದಾಹರಣೆಗೆ, ತಂಡ ಎ ಮತ್ತು ತಂಡ ಬಿ ಕ್ವಾಲಿಫೈಯರ್ ಪಂದ್ಯವನ್ನು ಆಡುತ್ತಿವೆ. ತಂಡ ಎ ಪಾಯಿಂಟ್ಸ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದು, ತಂಡ ಬಿ ಎರಡನೇ ಸ್ಥಾನದಲ್ಲಿದೆ. ಮಳೆಯಿಂದಾಗಿ ಪಂದ್ಯ ನಡೆಯದಿದ್ದರೆ, ಎ ತಂಡವನ್ನು ವಿಜಯಿ ಎಂದು ಘೋಷಿಸಲಾಗುತ್ತದೆ. ಎಲಿಮಿನೇಟರ್ ಮತ್ತು ಕ್ವಾಲಿಫೈಯರ್ 2 ಕ್ಕೂ ಈ ನಿಯಮ ಅನ್ವಯಿಸುತ್ತದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ