CSK vs SRH: ತವರಿನ ಕೊನೆಯ ಪಂದ್ಯದಲ್ಲೂ ಕಣಕ್ಕಿಳಿಯದ ಧೋನಿ; ನಾಯಕ ರುತುರಾಜ್ ಹೇಳಿದ್ದೇನು?
MS Dhoni Misses CSK vs SRH: ಐಪಿಎಲ್ 2026 ರ ಸಿಎಸ್ಕೆ-ಎಸ್ಆರ್ಹೆಚ್ ಪಂದ್ಯದಲ್ಲಿ ಎಂಎಸ್ ಧೋನಿ ಗಾಯದಿಂದ ಹೊರಗುಳಿದಿದ್ದಾರೆ. ತವರಿನಲ್ಲಿ ಸಿಎಸ್ಕೆ ಕೊನೆಯ ಪಂದ್ಯವಾಗಿದ್ದರೂ, ಧೋನಿ ಅನುಪಸ್ಥಿತಿ ಅಭಿಮಾನಿಗಳಿಗೆ ನಿರಾಸೆ ತಂದಿದೆ. ನಾಯಕ ರುತುರಾಜ್ ಗಾಯಕ್ವಾಡ್, ಧೋನಿ ಗಾಯದಿಂದ ಚೇತರಿಸಿಕೊಂಡಿಲ್ಲ, ಆದರೆ ಕೊನೆಯ ಲೀಗ್ ಪಂದ್ಯದಲ್ಲಿ ಆಡುವ ಭರವಸೆ ಇದೆ ಎಂದರು.

ಐಪಿಎಲ್ 2026 (IPL 2026) ರ 63 ನೇ ಪಂದ್ಯದಲ್ಲಿ ಸಿಎಸ್ಕೆ ಹಾಗೂ ಸನ್ರೈಸರ್ಸ್ ಹೈದರಾಬಾದ್ (CSK vs SRH) ತಂಡಗಳು ಪರಸ್ಪರ ಮುಖಾಮುಖಿಯಾಗಿವೆ. ಈ ಪಂದ್ಯ ಸಿಎಸ್ಕೆಯ ತವರು ಮೈದಾನವಾದ ಎಂಎ ಚಿದಂಬರಂ ಮೈದಾನದಲ್ಲಿ ನಡೆಯುತ್ತಿದೆ. ಇದು ತವರಿನಲ್ಲಿ ಸಿಎಸ್ಕೆ ತಂಡದ ಕೊನೆಯ ಪಂದ್ಯವಾಗಿದೆ. ಈ ಪಂದ್ಯದ ಬಳಿಕ ಈ ಆವೃತ್ತಿಯಲ್ಲಿ ಸಿಎಸ್ಕೆ ಈ ಮೈದಾನದಲ್ಲಿ ಯಾವುದೇ ಪಂದ್ಯವನ್ನು ಆಡುವುದಿಲ್ಲ. ಹೀಗಾಗಿ ಸಿಎಸ್ಕೆ ತಂಡದ ಜೀವಾಳ ಎನಿಸಿಕೊಂಡಿರುವ ಮಾಜಿ ನಾಯಕ ಎಂಎಸ್ ಧೋನಿ ಈ ಪಂದ್ಯದಲ್ಲಾದರೂ ಆಡುತ್ತಾರಾ ಎಂದು ಕಾದು ಕುಳಿತಿದ್ದರು. ಆದರೆ ಈ ಪಂದ್ಯದಲ್ಲೂ ಅಭಿಮಾನಿಗಳಿಗೆ ನಿರಾಶೆ ಎದುರಾಗಿದೆ. ಧೋನಿ ತಂಡದೊಂದಿಗೆ ಕ್ರೀಡಾಂಗಣಕ್ಕೆ ಬಂದಿದ್ದರೂ, ಈ ಪಂದ್ಯವನ್ನು ಆಡುತ್ತಿಲ್ಲ.
ವಾಸ್ತವವಾಗಿ ಧೋನಿಗೆ ಇದು ಕೊನೆಯ ಐಪಿಎಲ್ ಸೀಸನ್ ಎಂಬ ಮಾತು ಸೀಸನ್ ಆರಂಭದಿಂದಲೂ ಕೇಳಿಬರುತ್ತಿದೆ. ಹೀಗಾಗಿ ಧೋನಿಗೆ ಅದ್ಧೂರಿ ವಿದಾಯ ಹೇಳಲು ಅಭಿಮಾನಿಗಳು ಎದುರು ನೋಡುತ್ತಿದ್ದರು. ಆದರೆ ಸೀಸನ್ ಆರಂಭಕ್ಕೂ ಮುನ್ನವೇ ಗಾಯಕ್ಕೆ ತುತ್ತಾದ ಧೋನಿ ಇದುವರೆಗೂ ಒಂದೇ ಒಂದು ಪಂದ್ಯವನ್ನು ಆಡಿಲ್ಲ. ಹೀಗಾಗಿ ಸಿಎಸ್ಕೆ ತನ್ನ ತವರಿನಲ್ಲಿ ಕೊನೆಯ ಲೀಗ್ ಪಂದ್ಯವನ್ನು ಇಂದು ಆಡುತ್ತಿದ್ದು, ಈ ಪಂದ್ಯದಲ್ಲಿ ಧೋನಿ ಆಡಬಹುದು ಎಂಬ ನಿರೀಕ್ಷೆಗಳಿದ್ದವು. ಆದರೆ ಆ ನಿರೀಕ್ಷೆಗಳೆಲ್ಲ ಹುಸಿಯಾಗಿವೆ.
ರುತುರಾಜ್ ಹೇಳಿದ್ದೇನು?
ಈ ಪಂದ್ಯದಲ್ಲಿ ಟಾಸ್ ಗೆದ್ದ ಬಳಿಕ ಮಾತನಾಡಿದ ಸಿಎಸ್ಕೆ ನಾಯಕ ರುತುರಾಜ್ ಗಾಯಕ್ವಾಡ್, ಧೋನಿ ತಂಡದೊಂದಿಗೆ ಕ್ರೀಡಾಂಗಣಕ್ಕೆ ಬಂದಿದ್ದಾರೆ. ಆದರೆ ಅವರು ಪ್ಲೇಯಿಂಗ್ 11ನಲ್ಲಿ ಇಲ್ಲ. ಧೋನಿ ಗಾಯದಿಂದ ಇನ್ನು ಚೇತರಿಸಿಕೊಂಡಿಲ್ಲ. ಹೀಗಾಗಿ ಅವರು ಈ ಪಂದ್ಯವನ್ನು ಆಡುತ್ತಿಲ್ಲ. ಆದಾಗ್ಯೂ ಅವರು ಈ ಆವೃತ್ತಿಯ ಕೊನೆಯ ಲೀಗ್ ಪಂದ್ಯದಲ್ಲಿ ಆಡುತ್ತಾರೆ. ನಾವು ಈ ಪಂದ್ಯವನ್ನು ಗೆಲ್ಲುತ್ತೇವೆ ಮತ್ತು ಧೋನಿ ಅಂತಿಮ ಪಂದ್ಯದಲ್ಲಿ ಆಡುತ್ತಾರೆ ಎಂದು ಆಶಿಸುತ್ತೇವೆ ಎಂದಿದ್ದಾರೆ.
CSK vs SRH IPL 2026 Live Score: ಸಿಎಸ್ಕೆ ಮೊದಲ ವಿಕೆಟ್ ಪತನ
ಉಭಯ ತಂಡಗಳು
ಸಿಎಸ್ಕೆ ತಂಡ: ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ರುತುರಾಜ್ ಗಾಯಕ್ವಾಡ್ (ನಾಯಕ), ಉರ್ವಿಲ್ ಪಟೇಲ್, ಕಾರ್ತಿಕ್ ಶರ್ಮಾ, ಡೆವಾಲ್ಡ್ ಬ್ರೆವಿಸ್, ಶಿವಂ ದುಬೆ, ಪ್ರಶಾಂತ್ ವೀರ್, ಅಕೇಲ್ ಹೊಸೈನ್, ನೂರ್ ಅಹ್ಮದ್, ಅನ್ಶುಲ್ ಕಾಂಬೋಜ್, ಸ್ಪೆನ್ಸರ್ ಜಾನ್ಸನ್.
ಸನ್ರೈಸರ್ಸ್ ಹೈದರಾಬಾದ್ ತಂಡ: ಅಭಿಷೇಕ್ ಶರ್ಮಾ, ಇಶಾನ್ ಕಿಶನ್ (ವಿಕೆಟ್ ಕೀಪರ್), ಹೆನ್ರಿಚ್ ಕ್ಲಾಸೆನ್, ಸಲೀಲ್ ಅರೋರಾ, ಸ್ಮರಣ್ ರವಿಚಂದ್ರನ್, ನಿತೀಶ್ ಕುಮಾರ್ ರೆಡ್ಡಿ, ಪ್ಯಾಟ್ ಕಮಿನ್ಸ್ (ನಾಯಕ), ಶಿವಂಗ್ ಕುಮಾರ್, ಇಶಾನ್ ಮಾಲಿಂಗ, ಸಾಕಿಬ್ ಹುಸೇನ್, ಪ್ರಫುಲ್ ಹಿಂಗೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:51 pm, Mon, 18 May 26

