
2026 ಐಪಿಎಲ್ಗೆ (IPL 2026) ಇನ್ನು ಸಾಕಷ್ಟು ಸಮಯವಿದೆ. ಆದಾಗ್ಯೂ ಸನ್ರೈಸರ್ಸ್ ಹೈದರಾಬಾದ್ (SRH) ತಂಡ ಈಗಾಗಲೇ ತನ್ನ ತಯಾರಿಯನ್ನು ಆರಂಭಿಸಿದೆ. ಅದರಂತೆ ಸನ್ರೈಸರ್ಸ್ ಹೈದರಾಬಾದ್ ತನ್ನ ಕೋಚಿಂಗ್ ವಿಭಾಗಕ್ಕೆ ಮಾಜಿ ಭಾರತೀಯ ವೇಗದ ಬೌಲರ್ನನ್ನು ಸೇರಿಸಿಕೊಂಡಿದೆ. ಆ ಆಟಗಾರ ಬೇರ್ಯಾರು ಅಲ್ಲ, ತನ್ನ ವೇಗದ ಬೌಲಿಂಗ್ ಮೂಲಕವೇ ಟೀಂ ಇಂಡಿಯಾದಲ್ಲಿ ಮಿಂಚಿ ಮರೆಯಾದ ವರುಣ್ ಆರೋನ್ (Varun Aaron). ಮುಂಬರುವ ಐಪಿಎಲ್ನಲ್ಲಿ ವರುಣ್, ಸನ್ರೈಸರ್ಸ್ ಹೈದರಾಬಾದ್ನ ಬೌಲಿಂಗ್ ಕೋಚ್ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ. ಅಂದರೆ, ಕಳೆದ ಸೀಸನ್ನಲ್ಲಿ ತಂಡದ ಭಾಗವಾಗಿದ್ದ ಜೇಮ್ಸ್ ಫ್ರಾಂಕ್ಲಿನ್ ಬದಲಿಗೆ ವರುಣ್ ಆರೋನ್ ಅವರನ್ನು ತಂಡಕ್ಕೆ ನೇಮಕಗೊಳ್ಳಲಾಗಿದ್ದು, ಈ ಮಾಹಿತಿಯನ್ನು ಸ್ವತಃ ಸನ್ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ತನ್ನ ಅಧಿಕೃತ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ನೀಡಿದೆ.
ಸನ್ರೈಸರ್ಸ್ ಹೈದರಾಬಾದ್ ತಂಡವು ವರುಣ್ ಆರೋನ್ ಅವರನ್ನು ಐಪಿಎಲ್ 2026 ರ ಸೀಸನ್ಗೆ ಹೊಸ ಬೌಲಿಂಗ್ ಕೋಚ್ ಆಗಿ ಘೋಷಿಸಿದೆ . ವರುಣ್ ಆರೋನ್ ಭಾರತ ಪರ ಟೆಸ್ಟ್ ಮತ್ತು ಏಕದಿನ ಮಾದರಿಗಳಲ್ಲಿ ಆಡಿದ್ದಾರೆ . ಈ ವರ್ಷದ ಆರಂಭದಲ್ಲಿ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ ವರುಣ್ಗೆ ಈಗ ಸನ್ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ಈ ದೊಡ್ಡ ಜವಾಬ್ದಾರಿಯನ್ನು ವಹಿಸಿದೆ. ಈ ಬಗ್ಗೆ ಪೋಸ್ಟ್ ಅನ್ನು ಹಂಚಿಕೊಂಡಿರುವ ಎಸ್ಆರ್ಹೆಚ್, ‘‘ನಮ್ಮ ಕೋಚಿಂಗ್ ಸಿಬ್ಬಂದಿಗೆ ಆಕ್ರಮಣಕಾರಿ ಬೌಲರ್ಗೆ ಸ್ವಾಗತ . ವರುಣ್ ಆರೋನ್ ಸನ್ರೈಸರ್ಸ್ ಹೈದರಾಬಾದ್ ತಂಡದ ಹೊಸ ಬೌಲಿಂಗ್ ಕೋಚ್ ಆಗಿರುತ್ತಾರೆ’ ಎಂದು ಬರೆದುಕೊಂಡಿದೆ .
ದೇಶೀಯ ಕ್ರಿಕೆಟ್ ಮತ್ತು ಐಪಿಎಲ್ನಲ್ಲಿ ತಮ್ಮ ವೇಗದಿಂದ ಎಲ್ಲರನ್ನೂ ಮೆಚ್ಚಿಸಿದ್ದ ವರುಣ್ಗೆ ಟೀಂ ಇಂಡಿಯಾದಲ್ಲಿ ಹೆಚ್ಚಿನ ಅವಕಾಶಗಳು ಸಿಗಲಿಲ್ಲ. ಇದಕ್ಕೆ ಕಾರಣ ಅವರ ಇಂಜುರಿ ಸಮಸ್ಯೆ. ಈ ಸಮಸ್ಯೆಯಿಂದ ಅವರ ಅಂತರರಾಷ್ಟ್ರೀಯ ವೃತ್ತಿಜೀವನ ಹೆಚ್ಚು ವರ್ಷ ನಡೆಯಲಿಲ್ಲ. ಆದಾಗ್ಯೂ ಸನ್ರೈಸರ್ಸ್ ಹೈದರಾಬಾದ್ ಅವರ ಅನುಭವದ ಲಾಭವನ್ನು ಪಡೆಯಲು ನಿರ್ಧರಿಸಿದೆ.
ಸೆನಾ ದೇಶಗಳಲ್ಲಿ ಟೆಸ್ಟ್ ಸರಣಿ ಗೆಲ್ಲುವುದು ಐಪಿಎಲ್ ಗೆಲ್ಲುವುದಕ್ಕಿಂತ ದೊಡ್ಡ ಸಾಧನೆ; ಶುಭ್ಮನ್ ಗಿಲ್
2011 ರಲ್ಲಿ ಅಂತರರಾಷ್ಟ್ರೀಯ ವೃತ್ತಿಜೀವನ ಪ್ರಾರಂಭಿಸಿದ ವರುಣ್ ಆರೋನ್, 2015 ರಲ್ಲಿ ಟೀಂ ಇಂಡಿಯಾ ಪರ ತಮ್ಮ ಕೊನೆಯ ಪಂದ್ಯವನ್ನು ಆಡಿದ್ದರು. ಈ ಸಮಯದಲ್ಲಿ, ಅವರು 9 ಟೆಸ್ಟ್ ಮತ್ತು 9 ಏಕದಿನ ಪಂದ್ಯಗಳಲ್ಲಿ ತಂಡವನ್ನು ಪ್ರತಿನಿಧಿಸಿದ್ದರು, ಆಡಿದ 9 ಟೆಸ್ಟ್ಗಳಲ್ಲಿ ಒಟ್ಟು 18 ವಿಕೆಟ್ಗಳನ್ನು ಕಬಳಿಸಿದ್ದ ವರುಣ್, ಏಕದಿನ ಮಾದರಿಯಲ್ಲಿ 11 ವಿಕೆಟ್ಗಳನ್ನು ಉರುಳಿಸಿದ್ದರು. ಇದಲ್ಲದೆ, ವರುಣ್ 52 ಐಪಿಎಲ್ ಪಂದ್ಯಗಳನ್ನು ಆಡಿದ್ದು 50 ವಿಕೆಟ್ಗಳನ್ನು ಸಹ ಪಡೆದಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:13 pm, Mon, 14 July 25