IPL 2027: RCB ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ ಜೋಶ್ ಹೇಝಲ್​ವುಡ್​!

ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಕ್ಕೆ 2027ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2027) ಆರಂಭಕ್ಕೂ ಮುನ್ನವೇ ಭರ್ಜರಿ ಸಿಹಿಸುದ್ದಿ ಸಿಕ್ಕಿದೆ. ಆಸ್ಟ್ರೇಲಿಯಾದ ಬಿಡುವಿಲ್ಲದ ಅಂತಾರಾಷ್ಟ್ರೀಯ ಕ್ರಿಕೆಟ್ ವೇಳಾಪಟ್ಟಿಯ ನಡುವೆಯೂ, ಸ್ಟಾರ್ ವೇಗಿ ಜೋಶ್ ಹೇಝಲ್‌ವುಡ್ ಮುಂಬರುವ ಐಪಿಎಲ್‌ನಲ್ಲಿ ಆಡಲು ತಾವು ಸಂಪೂರ್ಣ ಲಭ್ಯವಿರುವುದಾಗಿ ಖಚಿತಪಡಿಸಿದ್ದಾರೆ.

IPL 2027: RCB ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ ಜೋಶ್ ಹೇಝಲ್​ವುಡ್​!
Josh Hazelwood
Image Credit source: IPL

Updated on: Nov 22, 2026 | 8:40 AM

ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-20 ರಲ್ಲಿ ಆಸ್ಟ್ರೇಲಿಯನ್ ಆಟಗಾರರು ಕಣಕ್ಕಿಳಿಯಲಿದ್ದಾರಾ? ಈ ಪ್ರಶ್ನೆಗೆ ಇನ್ನೂ ಸ್ಪಷ್ಟ ಉತ್ತರ ಸಿಕ್ಕಿಲ್ಲ. ಇದಾಗ್ಯೂ, ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಅಭಿಮಾನಿಗಳಿಗೆ ಆಸೀಸ್ ಸ್ಟಾರ್ ವೇಗಿ ಜೋಶ್ ಹೇಝಲ್‌ವುಡ್ ಕಡೆಯಿಂದ ಭರ್ಜರಿ ಗುಡ್ ನ್ಯೂಸ್ ಸಿಕ್ಕಿದೆ. ಮುಂಬರುವ 2027ರ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಟೂರ್ನಿಯಲ್ಲಿ ಆಡಲು ತಾವು ಸಂಪೂರ್ಣವಾಗಿ ಲಭ್ಯವಿರುವುದಾಗಿ ಅವರು ಫ್ರಾಂಚೈಸಿಗೆ ಖಚಿತಪಡಿಸಿದ್ದಾರೆ.

2025 ಮತ್ತು 2026ರಲ್ಲಿ ಸತತ ಎರಡು ಬಾರಿ ಟ್ರೋಫಿ ಗೆದ್ದು ಬೀಗಿರುವ ಆರ್‌ಸಿಬಿ, ಈಗ 2027ರಲ್ಲಿ ಚಾಂಪಿಯನ್ ಪಟ್ಟ ಉಳಿಸಿಕೊಂಡು ಐತಿಹಾಸಿಕ ‘ಹ್ಯಾಟ್ರಿಕ್’ ಸಾಧಿಸುವ ಗುರಿ ಹೊಂದಿದೆ. ಈ ನಿಟ್ಟಿನಲ್ಲಿ ಹೇಝಲ್‌ವುಡ್ ಅವರನ್ನು ₹12.50 ಕೋಟಿ ನೀಡಿ ಉಳಿಸಿಕೊಂಡಿದ್ದ ಆರ್‌ಸಿಬಿ ಆಡಳಿತ ಮಂಡಳಿಗೆ, ಅವರ ಈ ನಿರ್ಧಾರ ದೊಡ್ಡ ನಿರಾಳತೆ ತಂದಿದೆ.

Loading...

ಆರ್‌ಸಿಬಿಗೆ ಜೈ ಎಂದ ಜೋಶ್:

2027ನೇ ವರ್ಷ ಆಸ್ಟ್ರೇಲಿಯಾ ಕ್ರಿಕೆಟ್ ತಂಡಕ್ಕೆ ಅತ್ಯಂತ ಸವಾಲಿನದ್ದಾಗಿದೆ. ಜನವರಿಯಿಂದ ಮಾರ್ಚ್‌ವರೆಗೆ ಭಾರತದ ವಿರುದ್ಧ 5 ಪಂದ್ಯಗಳ ಬಾರ್ಡರ್-ಗವಾಸ್ಕರ್ ಟ್ರೋಫಿ, ಐಪಿಎಲ್ ಮುಗಿದ ತಕ್ಷಣ ಇಂಗ್ಲೆಂಡ್‌ನಲ್ಲಿ ಪ್ರತಿಷ್ಠಿತ ಆ್ಯಶಸ್ ಸರಣಿ ಹಾಗೂ ವರ್ಷದ ಕೊನೆಯಲ್ಲಿ ಏಕದಿನ ವಿಶ್ವಕಪ್ ನಡೆಯಲಿದೆ.

ಈ ಬಿಡುವಿಲ್ಲದ ಅಂತಾರಾಷ್ಟ್ರೀಯ ವೇಳಾಪಟ್ಟಿ ಮತ್ತು ಕಾರ್ಯಭಾರದ ಒತ್ತಡದಿಂದಾಗಿ ಆಸ್ಟ್ರೇಲಿಯಾದ ಪ್ರಮುಖ ಆಟಗಾರರಾದ ಟ್ರಾವಿಸ್ ಹೆಡ್ ಮತ್ತು ಮಿಚೆಲ್ ಸ್ಟಾರ್ಕ್ 2027ರ ಐಪಿಎಲ್‌ನಿಂದ ಹಿಂದೆ ಸರಿದಿದ್ದಾರೆ. ಇನ್ನು ಪ್ಯಾಟ್ ಕಮಿನ್ಸ್ ಕೂಡ ಅಲಭ್ಯರಾಗುವ ಸಾಧ್ಯತೆಯಿದೆ. ಇದರ ನಡುವೆ ಜೋಶ್ ಹೇಝಲ್‌ವುಡ್ ಮಾತ್ರ ಐಪಿಎಲ್‌ ಆಡಲು ಗ್ರೀನ್ ಸಿಗ್ನಲ್ ನೀಡಿದ್ದಾರೆ.

ಪವರ್‌ಪ್ಲೇ ಹಾಗೂ ಡೆತ್ ಓವರ್‌ಗಳಲ್ಲಿ ರನ್ ನಿಯಂತ್ರಿಸುವ ಜೊತೆಗೆ ವಿಕೆಟ್ ಕಬಳಿಸುವಲ್ಲಿ ನಿಸ್ಸೀಮರಾಗಿರುವ ಹೇಝಲ್‌ವುಡ್ ಉಪಸ್ಥಿತಿ ಆರ್‌ಸಿಬಿಗೆ ದೊಡ್ಡ ವರದಾನವಾಗಿದೆ. ಈಗಾಗಲೇ ತಂಡದಲ್ಲಿ ಉಳಿಸಿಕೊಂಡಿರುವ ಭುವನೇಶ್ವರ್ ಕುಮಾರ್, ಯಶ್ ದಯಾಳ್, ಜೇಕಬ್ ಡಫಿ, ನುವಾನ್ ತುಷಾರ ಮತ್ತು ರಾಸಿಖ್ ದಾರ್ ಅವರೊಂದಿಗೆ ಹೇಝಲ್‌ವುಡ್ ಸೇರಿಕೊಳ್ಳುವುದರಿಂದ ಬೆಂಗಳೂರಿನ ಬೌಲಿಂಗ್ ಪಡೆ ಮತ್ತಷ್ಟು ಬಲಿಷ್ಠವಾಗಿದೆ.

ಹರಾಜಿಗೂ ಮುನ್ನ ಆರ್‌ಸಿಬಿ ಲೆಕ್ಕಾಚಾರ:

20 ಆಟಗಾರರನ್ನು ಉಳಿಸಿಕೊಂಡಿರುವ ಆರ್‌ಸಿಬಿ ಬಳಿ ಮುಂಬರುವ ಮಿನಿ ಹರಾಜಿಗೆ ₹14.15 ಕೋಟಿ ಪರ್ಸ್ ಮೊತ್ತ ಹೊಂದಿದೆ. ತಂಡದಲ್ಲಿ ಇನ್ನೂ 5 ಸ್ಥಾನಗಳು ಖಾಲಿಯಿದ್ದು, ಇದರಲ್ಲಿ ಕೇವಲ ಒಂದು ವಿದೇಶಿ ಆಟಗಾರನ ಸ್ಥಾನ ಮಾತ್ರ ಬಾಕಿಯಿದೆ. ಹೇಝಲ್‌ವುಡ್ ಲಭ್ಯತೆ ಖಚಿತವಾಗಿರುವುದರಿಂದ, ಹರಾಜಿನಲ್ಲಿ ವಿದೇಶಿ ಸ್ಟಾರ್ ವೇಗಿಗಾಗಿ ಹುಡುಕಾಟ ನಡೆಸುವ ತಲೆನೋವು ಆರ್‌ಸಿಬಿಗೆ ತಪ್ಪಿದಂತಾಗಿದೆ.

ಒಟ್ಟಿನಲ್ಲಿ, ಜೋಶ್ ಹೇಝಲ್‌ವುಡ್ ಅವರ ಈ ಬದ್ಧತೆ ಆರ್‌ಸಿಬಿ ಪಾಳಯದಲ್ಲಿ ಹೊಸ ಉತ್ಸಾಹ ತುಂಬಿದ್ದು, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮತ್ತೊಮ್ಮೆ ಅವರ ಮಾರಕ ಬೌಲಿಂಗ್ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

 

ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಚೀಫ್ ಸಬ್ ಎಡಿಟರ್. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Loading...
Unable to load recommendations.
Follow Us