DC vs KKR: ಔಪಚಾರಿಕ ಪಂದ್ಯದಲ್ಲಿ ಕೆಕೆಆರ್ ಮಣಿಸಿದ ಡೆಲ್ಲಿ ಕ್ಯಾಪಿಟಲ್ಸ್
IPL 2026: ಐಪಿಎಲ್ 2026 ರ ಅಂತಿಮ ಲೀಗ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಮಣಿಸಿ ಭರ್ಜರಿ ಗೆಲುವು ಸಾಧಿಸಿತು. ಕೆಎಲ್ ರಾಹುಲ್ ಅವರ ಆಕರ್ಷಕ ಅರ್ಧಶತಕದ (60 ರನ್) ನೆರವಿನಿಂದ ಡೆಲ್ಲಿ 203 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಕೆಕೆಆರ್, ಅಜಿಂಕ್ಯ ರಹಾನೆ (63 ರನ್) ಅವರ ಉತ್ತಮ ಆಟದ ಹೊರತಾಗಿಯೂ ಮಧ್ಯಮ ಕ್ರಮಾಂಕದ ವೈಫಲ್ಯದಿಂದ ಸೋಲೊಪ್ಪಿಕೊಂಡಿತು. ಈ ಗೆಲುವಿನೊಂದಿಗೆ ಡೆಲ್ಲಿ ಪಾಯಿಂಟ್ಸ್ ಟೇಬಲ್‌ನಲ್ಲಿ 6ನೇ ಸ್ಥಾನಕ್ಕೇರಿತು.

ಐಪಿಎಲ್ 2026 (IPL 2026) ರ ಕೊನೆಯ ಲೀಗ್ ಪಂದ್ಯ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ (KKR vs DC) ನಡುವೆ ನಡೆಯಿತು. ಎರಡೂ ತಂಡಗಳು ಈಗಾಗಲೇ ಪ್ಲೇಆಫ್ ರೇಸ್ನಿಂದ ಹೊರಬಿದ್ದಿದ್ದರಿಂದ ಈ ಪಂದ್ಯ ಕೇವಲ ಔಪಚಾರಿಕವಾಗಿತ್ತು. ಅದರಂತೆ ಈ ಔಪಚಾರಿಕ ಪಂದ್ಯದಲ್ಲಿ ಕೆಕೆಆರ್ ತಂಡವನ್ನು ಮಣಿಸಿದ ಡೆಲ್ಲಿ ತನ್ನ 7ನೇ ಗೆಲುವಿನೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ 6ನೇ ಸ್ಥಾನಕ್ಕೇರಿತು. ಇತ್ತ ಕೆಕೆಆರ್ ತನ್ನ 7ನೇ ಸೋಲಿನೊಂದಿಗೆ 7ನೇ ಸ್ಥಾನಕ್ಕೆ ಜಾರಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಡೆಲ್ಲಿ 20 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 203 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಕೆಕೆಆರ್ ತಂಡದ ಮಧ್ಯಮ ಕ್ರಮಾಂಕ ಕೈಕೊಟ್ಟ ಕಾರಣದಿಂದಾಗಿ ಶಾರುಖ್ ಪಡೆ 40 ರನ್ಗಳಿಂದ ಸೋಲೊಪ್ಪಿಕೊಂಡಿತು.
200 ರನ್ ದಾಟಿದ ಡೆಲ್ಲಿ
ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಪರ ಒಟ್ಟು 6 ಬ್ಯಾಟ್ಸ್‌ಮನ್‌ಗಳು ಅಮೋಘ ಪ್ರದರ್ಶನ ನೀಡಿ ತಂಡವನ್ನು 200 ರನ್ಗಳ ಗಡಿ ದಾಟಿಸಿದರು. ಅದರಲ್ಲೂ ಕನ್ನಡಿಗ ಕೆಎಲ್ ರಾಹುಲ್ 30 ಎಸೆತಗಳಲ್ಲಿ 200 ಸ್ಟ್ರೈಕ್ ರೇಟ್‌ನಲ್ಲಿ 60 ರನ್ ಬಾರಿಸಿದರು. ಇದು 19 ನೇ ಸೀಸನ್‌ನಲ್ಲಿ ಕೆಎಲ್ ಅವರ ಐದನೇ ಅರ್ಧಶತಕವಾಗಿತ್ತು. ಈ ಇನ್ನಿಂಗ್ಸ್‌ನಲ್ಲಿ ಕೆಎಲ್ 4 ಸಿಕ್ಸರ್‌ಗಳು ಮತ್ತು 5 ಬೌಂಡರಿಗಳನ್ನು ಬಾರಿಸಿದರು. ಕೆಎಲ್ ಹೊರತುಪಡಿಸಿ, ನಾಯಕ ಅಕ್ಷರ್ ಪಟೇಲ್ 39 ರನ್, ಡೇವಿಡ್ ಮಿಲ್ಲರ್ 28 ರನ್, ಸಾಹಿಲ್ ಪರಾಖ್ 24 ರನ್ ಮತ್ತು ಅಭಿಷೇಕ್ ಪೊರೆಲ್ 22 ರನ್ ಗಳಿಸಿದರು. ಕೊನೆಯಲ್ಲಿ ಅಶುತೋಷ್ ಶರ್ಮಾ 11 ಎಸೆತಗಳಲ್ಲಿ ಔಟಾಗದೆ 18 ರನ್ ಗಳಿಸಿ ದೆಹಲಿ 200 ರನ್ ದಾಟಲು ಸಹಾಯ ಮಾಡಿದರು. ಕೆಕೆಆರ್ ಪರ ಸೌರಭ್ ದುಬೆ 2 ವಿಕೆಟ್ ಪಡೆದರೆ, ಅನುಕುಲ್ ರಾಯ್, ಸುನಿಲ್ ನರೈನ್ ಮತ್ತು ವರುಣ್ ಚಕ್ರವರ್ತಿ ತಲಾ 1 ವಿಕೆಟ್ ಪಡೆದರು.
ರಹಾನೆ ಅರ್ಧಶತಕ
ಈ ಗುರಿ ಬೆನ್ನಟ್ಟಿದ ಕೆಕೆಆರ್ ಕೂಡ ಉತ್ತಮ ಆರಂಭ ಪಡೆಯಿತು. ರಹಾನೆ ಹಾಗೂ ಅಲೆನ್ ಮೊದಲ ವಿಕೆಟ್ಗೆ 43 ರನ್ಗಳ ಜೊತೆಯಾಟ ನಡೆಸಿದರು. ಆದರೆ 20 ರನ್ ಬಾರಿಸಿದ ಅಲೆನ್ ಔಟಾಗುವ ಮೂಲಕ ಈ ಜೊತೆಯಾಟಕ್ಕೆ ಬ್ರೇಕ್ ಬಿದ್ದಿತು. ಆ ಬಳಿಕ ಬಂದ ಕನ್ನಡಿಗ ಮನೀಶ್ ಪಾಂಡೆ 25 ರನ್ ಬಾರಿಸಿ ಔಟಾದರೆ, ಗ್ರೀನ್ ಇನ್ನಿಂಗ್ಸ್ ಕೇವಲ 2 ರನ್ಗಳಿಗೆ ಅಂತ್ಯವಾಯಿತು. ಸತತ ವಿಕೆಟ್ ಪತನದ ನಡುವೆಯೂ ನಾಯಕನ ಇನ್ನಿಂಗ್ಸ್ ಆಡಿದ ಅಜಿಂಕ್ಯ ರಹಾನೆ ಅರ್ಧಶತವನ್ನು ಪೂರೈಸಿದರು.
ಕೈಕೊಟ್ಟ ಮಧ್ಯಮ ಕ್ರಮಾಂಕ
ಆದರೆ 63 ರನ್ ಬಾರಿಸಿ ರಹಾನೆ ಔಟಾಗುವುದರೊಂದಿಗೆ ಕೆಕೆಆರ್ ತಂಡದ ಪೆವಿಲಿಯನ್ ಪರೇಡ್ ಶುರುವಾಯಿತು. ರಹಾನೆ ಕ್ರೀಸ್‌ನಲ್ಲಿ ಇರುವ ತನಕ ಕೆಕೆಆರ್ ಗೆಲುವಿನ ಫೇವರೇಟ್ ಎನಿಸಿತ್ತು. ಆದರೆ ತಂಡದ ಮಧ್ಯಮ ಕ್ರಮಾಂಕ ಬೇಗನೇ ಕುಸಿದ ಕಾರಣ ಕೆಕೆಆರ್ ಗೆಲ್ಲುವ ಪಂದ್ಯವನ್ನು ಕೈಚೆಲ್ಲಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:28 pm, Sun, 24 May 26





