RCB vs MI: ಮುಂಬೈ ವಿರುದ್ಧ ಕೃನಾಲ್, ಭುವಿ ಕೆಚ್ಚೆದೆಯ ಆಟಕ್ಕೆ ಆರ್​​ಸಿಬಿಗೆ ಒಲಿದ ಜಯ

RCB vs MI IPL 2026: ಐಪಿಎಲ್ 2026 ರ 54ನೇ ಪಂದ್ಯದಲ್ಲಿ ಆರ್​ಸಿಬಿ ತಂಡ ಮುಂಬೈ ಇಂಡಿಯನ್ಸ್ ವಿರುದ್ಧ ರೋಚಕ ಗೆಲುವು ಸಾಧಿಸಿತು. ಕೊನೆಯ ಓವರ್​ನಲ್ಲಿ ಭುವನೇಶ್ವರ್ ಕುಮಾರ್ ಬಾರಿಸಿದ ಸಿಕ್ಸರ್ ತಂಡಕ್ಕೆ ಗೆಲುವು ತಂದುಕೊಟ್ಟಿತು. ಕೃನಾಲ್ ಪಾಂಡ್ಯ ಬ್ಯಾಟಿಂಗ್‌‌ನಲ್ಲಿ ಮಿಂಚಿದರೆ, ಭುವನೇಶ್ವರ್ ಬೌಲಿಂಗ್‌ನಲ್ಲಿ 4 ವಿಕೆಟ್ ಪಡೆದರು. ಈ ಗೆಲುವಿನೊಂದಿಗೆ ಆರ್​ಸಿಬಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದರೆ, ಮುಂಬೈ ಪ್ಲೇ ಆಫ್‌ನಿಂದ ಹೊರಬಿದ್ದಿತು.

RCB vs MI: ಮುಂಬೈ ವಿರುದ್ಧ ಕೃನಾಲ್, ಭುವಿ ಕೆಚ್ಚೆದೆಯ ಆಟಕ್ಕೆ ಆರ್​​ಸಿಬಿಗೆ ಒಲಿದ ಜಯ
Rcb

Updated on: May 11, 2026 | 12:13 AM

ಕೋಟ್ಯಾಂತರ ಆರ್​​ಸಿಬಿ (RCB) ಅಭಿಮಾನಿಗಳ ಹೃದಯ ಬಡಿತವನ್ನು ಹೆಚ್ಚಿಸಿದ್ದ ಐಪಿಎಲ್ 2026 ರ 54ನೇ ಪಂದ್ಯದಲ್ಲಿ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ (MI) ತಂಡವನ್ನು 20ನೇ ಓವರ್​ನ ಕೊನೆಯ ಎಸೆತದಲ್ಲಿ ಮಣಿಸುವ ಮೂಲಕ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ರಣರೋಚಕ ಗೆಲುವು ದಾಖಲಿಸಿತು. ಆರ್​ಸಿಬಿಯ ಈ ಗೆಲುವಿನ ರೂವಾರಿಗಳೆಂದರೆ ಅದು ಭುವನೇಶ್ವರ್ ಕುಮಾರ್ (Bhuvneshwar Kumar) ಹಾಗೂ ಕೃನಾಲ್ ಪಾಂಡ್ಯ (Krunal Pandya). ಕೃನಾಲ್ ಬ್ಯಾಟಿಂಗ್​ನಲ್ಲಿ ಸ್ಮರಣೀಯ ಇನ್ನಿಂಗ್ಸ್ ಆಡಿದರೆ, ಇತ್ತ ಭುವನೇಶ್ವರ್ ಬೌಲಿಂಗ್‌ನಲ್ಲಿ 4 ವಿಕೆಟ್ ಪಡೆಯುವುದರ ಜೊತೆಗೆ ಬ್ಯಾಟಿಂಗ್​ನಲ್ಲಿ ಗೆಲುವಿನ ಸಿಕ್ಸರ್ ಬಾರಿಸಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಮುಂಂಬೈ 166 ರನ್ ಕಲೆಹಾಕಿತು. ಗುರಿ ಬೆನ್ನಟ್ಟಿದ ಆರ್​ಸಿಬಿ 2 ವಿಕೆಟ್​ಗಳ ಜಯ ಸಾಧಸಿತು. ಈ ಗೆಲುವಿನೊಂದಿಗೆ ಆರ್​ಸಿಬಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದರೆ, ಇತ್ತ ಮುಂಬೈ ಇಂಡಿಯನ್ಸ್ ಪ್ಲೇ ಆಫ್​ನಿಂದ ಅಧಿಕೃತವಾಗಿ ಹೊರಬಿದ್ದಿತು.

ಮುಂಬೈಗೆ ನಮನ್- ತಿಲಕ್ ಆಸರೆ

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ತಂಡವು ಉತ್ತಮ ಆರಂಭವನ್ನು ಪಡೆಯಲಿಲ್ಲ, ಕೇವಲ ಮೂರು ಓವರ್‌ಗಳಲ್ಲಿ ತಮ್ಮ ಆರಂಭಿಕ ಮೂವರು ಬ್ಯಾಟ್ಸ್‌ಮನ್‌ಗಳನ್ನು ಕಳೆದುಕೊಂಡಿತು. ಭುವನೇಶ್ವರ್ ಕುಮಾರ್ ಇದಕ್ಕೆ ಕಾರಣರಾಗಿದ್ದರು, ರೋಹಿತ್ ಶರ್ಮಾ ಮತ್ತು ಸೂರ್ಯಕುಮಾರ್ ಯಾದವ್ ಅವರನ್ನು ಸತತ ಎಸೆತಗಳಲ್ಲಿ ಔಟ್ ಮಾಡಿದರು. ರೋಹಿತ್ ಕೇವಲ 10 ಎಸೆತಗಳಲ್ಲಿ 22 ರನ್ ಗಳಿಸಿದರೆ, ಸೂರ್ಯಕುಮಾರ್​ಗೆ ಖಾತೆ ತೆರೆಯಲು ಸಾಧ್ಯವಾಗಲಿಲ್ಲ. ಅಲ್ಲಿಂದ ಜೊತೆಯಾದ ನಮನ್ ಧೀರ್ ಮತ್ತು ತಿಲಕ್ ವರ್ಮಾ 82 ರನ್‌ಗಳ ಜೊತೆಯಾಟ ಕಟ್ಟಿ ತಂಡವನ್ನು 100 ರನ್​ಗಳ ಗಡಿ ದಾಟಿಸಿದರು.

ಆದಾಗ್ಯೂ ನಮನ್ ಅರ್ಧಶತಕದಂಚಿನಲ್ಲಿ ಎಡವಿದರೆ, ಜೀವದಾನದ ಲಾಭ ಪಡೆದ ತಿಲಕ್ ಅರ್ಧಶತಕದ ಇನ್ನಿಂಗ್ಸ್ ಆಡಿದರು. ಇವರಿಬ್ಬರು ಕ್ರೀಸ್‌ನಲ್ಲಿ ಇರುವವರೆಗೂ, ಮುಂಬೈ ದೊಡ್ಡ ಸ್ಕೋರ್ ಗಳಿಸುವುದು ಖಚಿತವಾಗಿತ್ತು. ಆದಾಗ್ಯೂ, ಭುವನೇಶ್ವರ್ 18 ನೇ ಓವರ್‌ನಲ್ಲಿ ತಿಲಕ್ ಅವರನ್ನು ಔಟ್ ಮಾಡಿದರು. ಅಂತಿಮವಾಗಿ ಮುಂಬೈ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 166 ರನ್ ಗಳಿಸಲಷ್ಟೇ ಶಕ್ತವಾಯಿತು. ಆರ್​ಸಿಬಿ ಪರ ಭುವನೇಶ್ವರ್ ಕುಮಾರ್ ಗರಿಷ್ಠ 4 ವಿಕೆಟ್‌ಗಳನ್ನು ಪಡೆದರು.

ಆರಂಭದಲ್ಲೇ ಎಡವಿದ ಆರ್​ಸಿಬಿ

ಈ ಗುರಿ ಬೆನ್ನಟ್ಟಿದ ಆರ್​ಸಿಬಿ ಕಥೆಯೂ ಭಿನ್ನವಾಗಿರಲಿಲ್ಲ. ದೀಪಕ್ ಚಾಹರ್ ಅವರ ಮ್ಯಾಜಿಕ್​ನಿಂದಾಗಿ ಆರ್​ಸಿಬಿ ಪವರ್‌ಪ್ಲೇ ಒಳಗೆ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿತು. ಚಾಹರ್ ತಮ್ಮ ಮೊದಲ ಓವರ್‌ನಲ್ಲೇ ವಿರಾಟ್ ಕೊಹ್ಲಿಯನ್ನು ಶೂನ್ಯಕ್ಕೆ ಔಟ್ ಮಾಡಿದರು. ನಂತರ ದೇವದತ್ ಪಡಿಕ್ಕಲ್ ಕೂಡ ಚಾಹರ್​ಗೆ ಬಲಿಯಾದರು. ಆ ಬಳಿಕ ದಾಳಿಗಿಳಿದ ಕಾರ್ಬಿನ್ ಬಾಷ್ ನಾಯಕ ರಜತ್ ಪಾಟಿದಾರ್ ಅವರ ದೊಡ್ಡ ವಿಕೆಟ್ ಪಡೆದರು. ಅಲ್ಲಿಂದ, ಕೃನಾಲ್ ಪಾಂಡ್ಯ ಮತ್ತು ಜಾಕೋಬ್ ಬೆಥೆಲ್ 55 ರನ್‌ಗಳ ಜೊತೆಯಾಟವನ್ನು ರಚಿಸಿದರು.

ಕೃನಾಲ್ ಗೆಲುವಿನ ಅರ್ಧಶತಕ

ಬೆಥೆಲ್ ಔಟಾದ ನಂತರವೂ, ಕ್ರುನಾಲ್ ತಾಳ್ಮೆಯ ಬ್ಯಾಟಿಂಗ್ ಪ್ರದರ್ಶಿಸಿ 32 ಎಸೆತಗಳಲ್ಲಿ ಅರ್ಧಶತಕ ಗಳಿಸಿ ತಂಡವನ್ನು ಗೆಲುವಿನತ್ತ ಕೊಂಡೊಯ್ಯುವ ಕೆಲಸ ಮಾಡಿದರು. ಆದರೆ ಇಲ್ಲಿ ಆತುರ ಪಟ್ಟ ಜಿತೇಶ್ ಶರ್ಮಾ ತಮ್ಮ ವಿಕೆಟ್ ಒಪ್ಪಿಸುವ ಮೂಲಕ ತಂಡವನ್ನು ಸಂಕಷ್ಟಕ್ಕೆ ಸಿಲುಕಿಸಿದರು. ಜಿತೇಶ್ ನಂತರ ಬಂದ ಡೇವಿಡ್ ಮೊದಲ ಎಸೆತದಲ್ಲೇ ಔಟಾದರು. ಏತನ್ಮಧ್ಯೆ, ಕಾಲಿನ ಗಾಯಕ್ಕೆ ತುತ್ತಾದ ಕ್ರುನಾಲ್, ನೋವಿನ ನಡುವೆಯೂ 18 ನೇ ಓವರ್‌ನಲ್ಲಿ ಎರಡು ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ತಂಡದಲ್ಲಿ ಗೆಲುವಿನ ಆಸೆ ಮೂಡಿಸಿದರು.

RCB vs MI IPL 2026 Highlights: ರಣರೋಚಕ ಪಂದ್ಯದಲ್ಲಿ ಗೆದ್ದ ಆರ್​ಸಿಬಿ

ಕೊನೆಯ ಓವರ್ ಥ್ರಿಲರ್

ಅಂತಿಮ ಓವರ್‌ನಲ್ಲಿ 15 ರನ್‌ಗಳು ಬೇಕಾಗಿದ್ದವು. ಮುಂಬೈ ಪರ ರಾಜ್ ಅಂಗದ್ ಬಾವಾ ಬೌಲ್ ಮಾಡಿದರೆ, ಸ್ಟ್ರೈಕ್​ನಲ್ಲಿ ಶೆಫರ್ಡ್​ ಇದ್ದರು. ಅನಾನುಭವಿ ಬಾವಾಗೆ ಒತ್ತಡವನ್ನು ನಿಯಂತ್ರಿಸಲು ಸಾಧ್ಯವಾಗದೆ ಈ ಓವರ್​ನಲ್ಲಿ ವೈಡ್​ಗಳು ಹಾಗೂ ನೋ ಬಾಲ್ ಕೂಡ ಬೌಲ್ ಮಾಡಿದರು. ಇದೆಲ್ಲದರ ಲಾಭ ಪಡೆಯಲು ಶೆಫರ್ಡ್​ಗೆ ಸಾಧ್ಯವಾಗಲಿಲ್ಲ. ನಿರ್ಣಾಯಕ ಹಂತದಲ್ಲಿ ಶೆರ್ಫಡ್ ಬರೋಬ್ಬರಿ 11 ಎಸೆತಗಳನ್ನು ಎದುರಿಸಿ ಕೇವಲ 4 ರನ್ ಬಾರಿಸಿ ಔಟಾದರು.

ಶೆಫರ್ಡ್​ ವಿಕೆಟ್ ಬಳಿಕ ಬಂದ ಭುವನೇಶ್ವರ್ ಕುಮಾರ್ ಬಂದ ತಕ್ಷಣವೇ ಸಿಕ್ಸರ್ ಬಾರಿಸಿದರು. ನಂತರದ ಎಸೆತದಲ್ಲಿ ಸಿಂಗಲ್ ತೆಗೆದುಕೊಂಡರು. ಹೀಗಾಗಿ ಕೊನೆಯ ಎಸೆತದಲ್ಲಿ ಎರಡು ರನ್‌ಗಳು ಬೇಕಾಗಿದ್ದವು. ಸ್ಟ್ರೈಕ್​ನಲ್ಲಿದ್ದ ರಸಿಕ್ ಸಲಾಂ ಎರಡು ರನ್‌ಗಳನ್ನು ಗಳಿಸಿ ತಂಡಕ್ಕೆ ರೋಮಾಂಚಕ ಗೆಲುವು ತಂದುಕೊಟ್ಟರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:53 pm, Sun, 10 May 26

Follow Us