
ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಟಿ20 ಪಂದ್ಯದಿಂದ ಹೊರಗುಳಿಯುವ ಭೀತಿಯಲ್ಲಿದ್ದ ಇಶಾನ್ ಕಿಶನ್ಗೆ (Ishan Kishan) ರಿಷಭ್ ಪಂತ್ ಬಯೋ ಬಬಲ್ ತೊರೆದಿದ್ದು ವರದಾನವಾಯಿತು. ಓಪನರ್ ಆಗಿ ಮತ್ತೆ ಕಣಕ್ಕಿಳಿದ ಕಿಶನ್ 31 ಎಸೆತಗಳಲ್ಲಿ 34 ರನ್ ಗಳಿಸಿ ಔಟಾದರು. ಈ ಸರಣಿಯಲ್ಲಿ ಬ್ಯಾಟಿಂಗ್ನಲ್ಲಿ ತಂಡಕ್ಕೆ ಮಹತ್ವದ ಕೊಡುಗೆ ನೀಡದ ಕಿಶನ್ ಅಂತಿಮ ಟಿ20 ಯಲ್ಲಿ ವಿಕೆಟ್ ಕೀಪಿಂಗ್ ಮಾಡಿ ಆ ಒಂದು ಕ್ಯಾಚ್ ಹಿಡಿದಿದ್ದು ಟೀಮ್ ಇಂಡಿಯಾ ಗೆಲುವಿಗೆ ಕಾರಣವಾಯಿತು. ಹೌದು, ರೋಹಿತ್ (Rohit Sharma) ಪಡೆ ನೀಡಿದ್ದ 185 ರನ್ಗಳ ಕಠಿಣ ಟಾರ್ಗೆಟ್ ಬೆನ್ನಟ್ಟಿದ ವೆಸ್ಟ್ ಇಂಡೀಸ್ಗೆ ಆರಂಭದಲ್ಲೇ ದೀಪಕ್ ಚಹಾರ್ ಶಾಕ್ ನೀಡಿದರು. ಹೀಗಿರುವಾಗ ನಿಕೋಲಸ್ ಪೂರನ್ (Nicholas Pooran) ಏಕಾಂಗಿ ಹೋರಾಟ ಶುರು ಮಾಡಿದರು. ಒಂದು ಹಂತದಲ್ಲಿ ಪೂರನ್ ಜತೆಗೂಡಿದ ರೋವ್ಮನ್ ಪೊವೆಲ್ ಭಾರತದ ಬೌಲರ್ಗಳನ್ನು ಕಾಡಿದರು. ಇವರನ್ನು ಔಟ್ ಮಾಡುವುದೇ ಭಾರತಕ್ಕೆ ದೊಡ್ಡ ಸವಾಲಾಯಿತು. ಇವರಿಬ್ಬರು ಕ್ರೀಸ್ನಲ್ಲಿ ಇದ್ದಿದ್ದರೆ ವೆಸ್ಟ್ ಇಂಡೀಸ್ಗೆ ಗೆಲುವು ಕಟ್ಟಿಟ್ಟ ಬುತ್ತಿ ಎಂಬುದು ಖಚಿತವಾಗಿತ್ತು.
ಕೇವಲ 4 ಓವರ್ಗಳಲ್ಲಿ ಈ ಜೋಡಿ 47 ರನ್ ಕಲೆಹಾಕಿತು. ಆದರೆ, ಹರ್ಷಲ್ ಪಟೇಲ್ ತಮ್ಮ ಸ್ಲೋವರ್ ಬಾಲ್ ಮೂಲಕ 14 ಎಸೆತಗಳಲ್ಲಿ 25 ರನ್ ಸಿಡಿಸಿದ್ದ ರೋವ್ಮನ್ ಪೊವೆಲ್ರನ್ನು ಪೆವಿಲಿಯನ್ಗೆ ಅಟ್ಟುವಲ್ಲಿ ಯಶಸ್ವಿಯಾದರು. ಆದರೆ, ಪೂರನ್ ಅರ್ಧಶತಕ ಬಾರಿಸಿ ತಮ್ಮದೇ ಶೈಲಿಯ ಬಿರುಸಿನ ಆಟವಾಡುತ್ತಿದ್ದರು. ಇವರ ಆಟಕ್ಕೆ ಬ್ರೇಕ್ ಹಾಕಿದ್ದು ಶಾರ್ದೂಲ್ ಥಾಕೂರ್ ಹಾಗೂ ಇಶಾನ್ ಕಿಶನ್. 18ನೇ ಓವರ್ನಲ್ಲಿ ಶಾರ್ದೂಲ್ ಅವರು ಪೂರನ್ಗೆ ವೈಡ್ ಔಟ್ಸೈಡ್ ಮೂಲಕ ಸ್ಲೋವರ್ ಬಾಲ್ ಎಸೆದರು. ಇದನ್ನು ಸಿಕ್ಸ್ಗೆ ಅಟ್ಟಲು ಪೂರನ್ ಯತ್ನಿಸಿದರು.
ಆದರೆ, ಚೆಂಡು ಅಂದುಕೊಂಡ ರೀತಿಯಲ್ಲಿ ಬ್ಯಾಟ್ಗೆ ತಾಗದೇ ಗಾಳಿಯಲ್ಲಿ ಮೇಲೆ ಹೋಯಿತು. ಅತ್ತ ವಿಕೆಟ್ ಹಿಂಬದಿಯಿಂದ ಇಶಾನ್ ಕಿಶನ್ ಓಡಿ ಬಂದು ಅಚ್ಚರಿ ಎಂಬಂತೆ ಡೈವ್ ಬಿದ್ದು ರೋಚಕ ಕ್ಯಾಚ್ ಹಿಡಿದರು. ಈ ಮೂಲಕ ಪೂರನ್ ಅವರು 47 ಎಸೆತಗಳಲ್ಲಿ 61 ರನ್ ಚಚ್ಚಿ ಔಟಾದರು. ಇದು ಪಂದ್ಯದ ಸ್ಥಿತಿಯನ್ನೇ ಬದಲಾಯಿಸಿತು. ಕಿಶನ್ ಹಿಡಿದ ಈ ಒಂದು ಕ್ಯಾಚ್ನಿಂದ ಮ್ಯಾಚ್ ಸಂಪೂರ್ಣವಾಗಿ ಟೀಮ್ ಇಂಡಿಯಾ ಕಡೆ ವಾಲಿತು. ಅಂತಿಮವಾಗಿ ವಿಂಡೀಸ್ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 167 ರನ್ ಗಳಿಸಲಕಷ್ಟೇ ಶಕ್ತವಾಗಿ ಸೋಲು ಕಂಡಿತು.
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಭಾರತ ಮಧ್ಯಮ ಕ್ರಮಾಂಕದ ಬ್ಯಾಟರ್ಗಳಾದ ಸೂರ್ಯಕುಮಾರ್ ಯಾದವ್ (65ರನ್, 31 ಎಸೆತ, 1 ಬೌಂಡರಿ, 7 ಸಿಕ್ಸರ್) ಹಾಗೂ ವೆಂಕಟೇಶ್ ಅಯ್ಯರ್ (35*ರನ್, 19 ಎಸೆತ, 4 ಬೌಂಡರಿ, 2 ಸಿಕ್ಸರ್) ಸ್ಫೋಟಕ ಬ್ಯಾಟಿಂಗ್ ನೆರವಿನಿಂದ 5 ವಿಕೆಟ್ಗೆ 184 ರನ್ ಪೇರಿಸಿತು. ರೋಹಿತ್ ಪಡೆ ಈ ಪಂದ್ಯದಲ್ಲಿ 17 ರನ್ಗಳಿಂದ ಗೆದ್ದು ಬಿಗಿತು. ಈ ಮೂಲಕ ಚುಟುಕು ಕ್ರಿಕೆಟ್ ಸರಣಿಯಲ್ಲಿ ಭಾರತ 3-0 ಯಿಂದ ಕ್ಲೀನ್ಸ್ವೀಪ್ ಸಾಧಿಸಿತು.
Rohit Sharma: ಪಂದ್ಯ ಮುಗಿದ ಬಳಿಕ ಖುಷಿಯಲ್ಲಿ ರೋಹಿತ್ ಶರ್ಮಾ ಆಡಿದ ಮಾತು ನೀವೇ ಕೇಳಿ
Rohit Sharma: ಇತಿಹಾಸ ರಚಿಸಿದ ರೋಹಿತ್ ಶರ್ಮಾ: ಟಿ20 ಕ್ರಿಕೆಟ್ನಲ್ಲಿ ಭಾರತ ಈಗ ನಂಬರ್ ಒನ್ ತಂಡ
Published On - 9:29 am, Mon, 21 February 22