IPL 2026: ಆರಕ್ಕೆ ಆರು ಜಯ; ಈತ ಆಡಿದ ಪಂದ್ಯಗಳಲ್ಲಿ ಆರ್​ಸಿಬಿ ಸೋಲಲೇ ಇಲ್ಲ

Jacob Duffy undefeated season: ಆರ್‌ಸಿಬಿ 2026ರ ಐಪಿಎಲ್ ಪ್ರಶಸ್ತಿಯನ್ನು ಸತತ ಎರಡನೇ ಬಾರಿ ಗೆದ್ದು ಚಾಂಪಿಯನ್ ಪಟ್ಟವನ್ನು ಉಳಿಸಿಕೊಂಡಿದೆ. ಈ ಐತಿಹಾಸಿಕ ವಿಜಯದಲ್ಲಿ ನ್ಯೂಜಿಲೆಂಡ್‌ನ ಜಾಕೋಬ್ ಡಫ್ಫಿ ಪ್ರಮುಖ ಪಾತ್ರ ವಹಿಸಿದ್ದಾರೆ. ತಮ್ಮ ಚೊಚ್ಚಲ ಐಪಿಎಲ್ ಆವೃತ್ತಿಯ ಆರು ಪಂದ್ಯಗಳಲ್ಲೂ ಆರ್‌ಸಿಬಿ ಸೋಲದೆ, ಟ್ರೋಫಿ ಗೆದ್ದ ಮೊದಲ ಆಟಗಾರ ಎಂಬ ವಿಶಿಷ್ಟ ದಾಖಲೆ ಬರೆದಿದ್ದಾರೆ. ಅವರ ಪ್ರದರ್ಶನ ತಂಡದ ಸಂಘಟಿತ ಹೋರಾಟಕ್ಕೆ ಮತ್ತಷ್ಟು ಬಲ ತುಂಬಿತು.

IPL 2026: ಆರಕ್ಕೆ ಆರು ಜಯ; ಈತ ಆಡಿದ ಪಂದ್ಯಗಳಲ್ಲಿ ಆರ್​ಸಿಬಿ ಸೋಲಲೇ ಇಲ್ಲ
Jacob Duffy
Image Credit source: PTI

Updated on: Jun 01, 2026 | 5:40 PM

ತನ್ನ ಹಾಲಿ ಚಾಂಪಿಯನ್ ಪಟ್ಟವನ್ನು ಉಳಿಸಿಕೊಳ್ಳುವ ಸಲುವಾಗಿಯೇ 2026 ರ ಐಪಿಎಲ್ (IPL 2026) ಅಖಾಡಕ್ಕೆ ಧುಮುಕ್ಕಿದ್ದ ಆರ್​ಸಿಬಿ (RCB) ಕೊನೆಗೂ ತನ್ನ ಗುರಿಯನ್ನು ಮುಟ್ಟಿದೆ. ಅಹಮದಾಬಾದ್‌ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಮಣಿಸಿದ ಆರ್​ಸಿಬಿ ಸತತ ಎರಡನೇ ಬಾರಿಗೆ ಟ್ರೋಫಿ ಎತ್ತಿಹಿಡಿದಿದೆ. ಇಡೀ ಸೀಸನ್ ಉದ್ದಕ್ಕೂ ಅಲ್ಲಲ್ಲಿ ಕೊಂಚ ಎಡವಿದ್ದನ್ನು ಬಿಟ್ಟರೆ, ಉಳಿದೆಲ್ಲ ಪಂದ್ಯಗಳಲ್ಲಿ ಆರ್​ಸಿಬಿ ಪಾರುಪತ್ಯ ಮೆರೆದಿತ್ತು. ಅದರಲ್ಲೂ ಲೀಗ್ ಹಂತದಲ್ಲಿ ಆಡಿದ14 ಲೀಗ್ ಪಂದ್ಯಗಳಲ್ಲಿ ಒಂಬತ್ತು ಪಂದ್ಯಗಳನ್ನು ಗೆದ್ದು ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಪಡೆದುಕೊಂಡಿದ್ದ ಆರ್​ಸಿಬಿ, ಪ್ಲೇಆಫ್​ನಲ್ಲಿ ಕ್ವಾಲಿಫೈಯರ್ 1 ಮತ್ತು ಫೈನಲ್ ಪಂದ್ಯವನ್ನು ಗೆದ್ದು ಟ್ರೋಫಿಯನ್ನು ತನ್ನಲ್ಲೇ ಉಳಿಸಿಕೊಂಡಿತು ತಂಡದ ಈ ಸಾಧನೆಗೆ ಸಂಘಟಿತ ಹೋರಾಟವೇ ಕಾರಣವಾಗಿತ್ತು.

ಈ ಆವೃತ್ತಿಯಲ್ಲಿ ಆರ್​ಸಿಬಿ ಸೋತಿದ್ದು, ಕೇವಲ ಐದು ಪಂದ್ಯಗಳನ್ನು ಮಾತ್ರ. ಆದಾಗ್ಯೂ ಆರ್​ಸಿಬಿ ಪರ ಇದೇ ಮೊದಲ ಬಾರಿಗೆ ಐಪಿಎಲ್ ಆಡಿದ್ದ ನ್ಯೂಜಿಲೆಂಡ್​ನ ವೇಗದ ಬೌಲರ್ ಜಾಕೋಬ್ ಡಫ್ಫಿ ಈ ಆವೃತ್ತಿಯಲ್ಲಿ ಒಂದೇ ಒಂದು ಸೋಲನ್ನು ಎದುರಿಸಲಿಲ್ಲ ಎಂಬುದು ಗಮನಿಸಬೇಕಾದ ಸಂಗತಿ. ಮೇಲೆ ಹೇಳಿದಂತೆ ಮೊದಲ ಬಾರಿಗೆ ಐಪಿಎಲ್ ಆಡುತ್ತಿರುವ ಡಫ್ಫಿ ಚೊಚ್ಚಲ ಆವೃತ್ತಿಯಲ್ಲಿ ಒಂದೇ ಒಂದು ಪಂದ್ಯವನ್ನು ಸೋಲದೆ ಟ್ರೋಫಿ ಎತ್ತಿಹಿಡಿಯುವ ಮೂಲಕ ವಿಶಿಷ್ಟ ದಾಖಲೆಯನ್ನು ನಿರ್ಮಿಸಿದರು.

ಆರಕ್ಕೆ ಆರು ಪಂದ್ಯಗಳಲ್ಲೂ ಜಯ

ಜಾಕೋಬ್ ಡಫಿ ಐಪಿಎಲ್ 2026 ರಲ್ಲಿ ಫೈನಲ್ ಸೇರಿದಂತೆ ಆರು ಪಂದ್ಯಗಳನ್ನು ಆಡಿದರು. ಅವರು ಆಡಿದ ಪ್ರತಿ ಪಂದ್ಯದಲ್ಲೂ ಆರ್‌ಸಿಬಿ ಗೆಲುವು ಸಾಧಿಸಿತು. ಈ ಮೂಲಕ ಡಫ್ಫಿ ಒಂದೇ ಒಂದು ಪಂದ್ಯವನ್ನು ಸೋಲದೆ ಐಪಿಎಲ್ ಪ್ರಶಸ್ತಿಯನ್ನು ಗೆದ್ದ ಮೊದಲ ಆರ್‌ಸಿಬಿ ಆಟಗಾರ ಎಂಬ ದಾಖಲೆಯನ್ನು ನಿರ್ಮಿಸಿದರು. ಈ ಬಾರಿಯ ಐಪಿಎಲ್‌ನಲ್ಲಿ ಉತ್ತಮ ಆರಂಭ ಪಡೆದ ಡಫ್ಫಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಲೀಗ್​ನ ಮೊದಲ ಪಂದ್ಯದಲ್ಲಿ 22 ರನ್‌ ನೀಡಿ 3 ವಿಕೆಟ್ ಕಬಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

ಆ ನಂತರ ಸಿಎಸ್​ಕೆ ವಿರುದ್ಧ ನಡೆದ ಮುಂದಿನ ಪಂದ್ಯದಲ್ಲಿಯೂ 2 ವಿಕೆಟ್ ಕಬಳಿಸಿದರು. ಮುಂಬೈ ಇಂಡಿಯನ್ಸ್ ವಿರುದ್ಧ 1 ವಿಕೆಟ್ ಪಡೆದ ಡಫ್ಫಿಗೆ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಯಾವುದೇ ವಿಕೆಟ್ ಸಿಗಲಿಲ್ಲ. ಆದಾಗ್ಯೂ, ಗುಜರಾತ್ ಟೈಟಾನ್ಸ್ ವಿರುದ್ಧದ ಕ್ವಾಲಿಫೈಯರ್ 1 ರಲ್ಲಿ ಮತ್ತೆ ಆಡುವ ಅವಕಾಶ ಪಡೆದಿದ್ದ ಡಫ್ಫಿ 3 ವಿಕೆಟ್ ಕಬಳಿಸಿದರು. ಅದಾದ ಬಳಿಕ ನಡೆದ ಫೈನಲ್‌ ಪಂದ್ಯದಲ್ಲಿ ಡಫ್ಫಿಗೆ ವಿಕೆಟ್ ಸಿಗಲಿಲ್ಲ. ಆದಾಗ್ಯೂ ಉಳಿದವರ ಪ್ರದರ್ಶನದಿಂದಾಗಿ ಆರ್‌ಸಿಬಿ ಕಪ್ ಗೆದ್ದುಕೊಂಡಿತು. ಇನ್ನು ಈ ಆವೃತ್ತಿಯಲ್ಲಿ ಆಡಿದ 6 ಪಂದ್ಯಗಳಲ್ಲಿ ಡಫ್ಫಿ 9 ವಿಕೆಟ್ ಕಬಳಿಸಿದರು.

IPL 2026 Final: ಈ ಸಲನೂ ಕಪ್ ನಮ್ದು..! ಸತತ 2ನೇ ಬಾರಿಗೆ ಆರ್​ಸಿಬಿ ಮುಡಿಗೇರಿದ ಐಪಿಎಲ್ ಕಿರೀಟ

ಜಾಕೋಬ್ ಡಫ್ಫಿ ವೃತ್ತಿಜೀವನ

ಜಾಕೋಬ್ ಡಫ್ಫಿ ಟಿ20 ಕ್ರಿಕೆಟ್‌ನಲ್ಲಿ ನಂಬರ್ ಒನ್ ಬೌಲರ್ ಕೂಡ ಆಗಿದ್ದಾರೆ. ಆಡಿರುವ 48 ಪಂದ್ಯಗಳಲ್ಲಿ 62 ವಿಕೆಟ್‌ಗಳನ್ನು ಪಡೆದಿದ್ದಾರೆ. ಏಕದಿನ ಪಂದ್ಯಗಳಲ್ಲಿ ಡಫ್ಫಿ ಆಡಿರುವ 19 ಪಂದ್ಯಗಳಲ್ಲಿ 35 ವಿಕೆಟ್‌ಗಳನ್ನು ಪಡೆದಿದ್ದು, ಟೆಸ್ಟ್ ಕ್ರಿಕೆಟ್​ನಲ್ಲಿ ಆಡಿರುವ 4 ಪಂದ್ಯಗಳಲ್ಲಿ 25 ವಿಕೆಟ್‌ಗಳನ್ನು ಪಡೆದಿದ್ದಾರೆ. ಐಪಿಎಲ್‌ನಲ್ಲಿ 9 ವಿಕೆಟ್‌ಗಳನ್ನು ಪಡೆದಿರುವುದರ ಜೊತೆಗೆ, ದಿ ಹಂಡ್ರೆಡ್​ ಲೀಗ್​ನಲ್ಲಿ 8 ವಿಕೆಟ್‌ಗಳು ಮತ್ತು ಟಿ20 ಬ್ಲಾಸ್ಟ್‌ನಲ್ಲಿ 10 ವಿಕೆಟ್‌ಗಳನ್ನು ಪಡೆದಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:35 pm, Mon, 1 June 26

pruthvi Shankar

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Follow Us