Jos Buttler: RCB ಬೌಲರ್ಗಳ ಬೆಂಡೆತ್ತಿ ವಿಶೇಷ ದಾಖಲೆ ಬರೆದ ಜೋಸ್ ಬಟ್ಲರ್
IPL 2022: ಒಂದೇ ಸೀಸನ್ನಲ್ಲಿ ಅತೀ ಹೆಚ್ಚು ಸೆಂಚುರಿ ಸಿಡಿಸಿದ ದಾಖಲೆ ಪಟ್ಟಿಯಲ್ಲೂ ಬಟ್ಲರ್ ಕಾಣಿಸಿಕೊಂಡಿದ್ದಾರೆ. 2016 ರಲ್ಲಿ 4 ಶತಕ ಬಾರಿಸುವ ಮೂಲಕ ವಿರಾಟ್ ಕೊಹ್ಲಿ ವಿಶೇಷ ದಾಖಲೆ ಬರೆದಿದ್ದರು.
IPL 2022: ಐಪಿಎಲ್ ಸೀಸನ್ 15 ರ ಪ್ಲೇಆಫ್ ಪಂದ್ಯಗಳಲ್ಲಿ ಎರಡು ಶತಕಗಳು ಮೂಡಿಬಂದಿವೆ. ಮೊದಲ ಶತಕ ಆರ್ಸಿಬಿ ಆಟಗಾರ ರಜತ್ ಪಾಟಿದಾರ್ (Rajat Patidar) ಬ್ಯಾಟ್ನಿಂದ ಬಂದರೆ, 2ನೇ ಶತಕವನ್ನು ರಾಜಸ್ಥಾನ್ ರಾಯಲ್ಸ್ ಆರಂಭಿಕ ಜೋಸ್ ಬಟ್ಲರ್ (Jos Buttler) ಸಿಡಿಸಿದ್ದಾರೆ. ವಿಶೇಷ ಎಂದರೆ ಐಪಿಎಲ್ ಇತಿಹಾಸದಲ್ಲೇ ಪ್ಲೇಆಫ್ನಲ್ಲಿ 2 ಶತಕ ಮೂಡಿಬಂದಿದ್ದು ಇದು 2ನೇ ಬಾರಿ. ಅದರಲ್ಲೂ ಪ್ಲೇಆಫ್ನಲ್ಲಿ ಶತಕ ಬಾರಿಸಿದ ಮೊದಲ ಇಂಗ್ಲೆಂಡ್ ಆಟಗಾರ ಎಂಬ ದಾಖಲೆ ಇದೀಗ ಜೋಸ್ ಬಟ್ಲರ್ ಪಾಲಾಗಿದೆ. ಇನ್ನು ಈ ಸಾಧನೆ ಮಾಡಿದ 2ನೇ ವಿದೇಶಿ ಆಟಗಾರನಾಗಿ ಬಟ್ಲರ್ ಗುರುತಿಸಿಕೊಂಡಿದ್ದಾರೆ. ಹಾಗಿದ್ರೆ ಪ್ಲೇಆಫ್ನಲ್ಲಿ ಶತಕ ಬಾರಿಸಿದ ಆಟಗಾರರು ಯಾರೆಲ್ಲಾ ನೋಡೋಣ…
- ವೀರೇಂದ್ರ ಸೆಹ್ವಾಗ್: ಪಂಜಾಬ್ ಕಿಂಗ್ಸ್ ಪರ ಆಡಿದ್ದ ಸೆಹ್ವಾಗ್ 2014 ರಲ್ಲಿ ಸಿಎಸ್ಕೆ ವಿರುದ್ದ 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ 122 ರನ್ ಬಾರಿಸಿ ದಾಖಲೆ ಬರೆದಿದ್ದರು.
- ಶೇನ್ ವಾಟ್ಸನ್: ಆಸ್ಟ್ರೇಲಿಯಾ ಆಟಗಾರ ಶೇನ್ ವಾಟ್ಸನ್ 2018 ರಲ್ಲಿ ಸಿಎಸ್ಕೆ ಪರ ಬ್ಯಾಟ್ ಬೀಸಿ ಎಸ್ಆರ್ಹೆಚ್ ವಿರುದ್ದದ ಫೈನಲ್ ಪಂದ್ಯದಲ್ಲಿ ಅಜೇಯ 117 ರನ್ ಬಾರಿಸಿ ಮಿಂಚಿದ್ದರು.
- ವೃದ್ದಿಮಾನ್ ಸಾಹ: 2014 ರಲ್ಲಿ ಪಂಜಾಬ್ ಕಿಂಗ್ಸ್ ಪರ ಆಡಿದ್ದ ವೃದ್ಧಿಮಾನ್ ಕೆಕೆಆರ್ ವಿರುದ್ದದ ಫೈನಲ್ ಪಂದ್ಯದಲ್ಲಿ ಅಜೇಯ 115 ರನ್ ಸಿಡಿಸಿದ್ದರು.
- ಮುರಳಿ ವಿಜಯ್: 2012 ರಲ್ಲಿ ಸಿಎಸ್ಕೆ ಪರ ಕಣಕ್ಕಿಳಿದಿದ್ದ ಮುರಳಿ ವಿಜಯ್ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದದ ಕ್ವಾಲಿಫೈಯರ್ 2 ಪಂದ್ಯದಲ್ಲಿ 113 ರನ್ ಬಾರಿಸಿದ್ದರು.
- ರಜತ್ ಪಾಟಿದಾರ್: ಐಪಿಎಲ್ 2022 ರಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ದ ಎಲಿಮಿನೇಟರ್ ಪಂದ್ಯದಲ್ಲಿ ಅಜೇಯ 112 ರನ್ ಬಾರಿಸುವ ಮೂಲಕ ರಜತ್ ಪಾಟಿದಾರ್ ಆರ್ಸಿಬಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.
- ಜೋಸ್ ಬಟ್ಲರ್: 2022 ರಲ್ಲಿ ನಡೆದ ಐಪಿಎಲ್ನ 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ಆರ್ಸಿಬಿ ವಿರುದ್ದ ಬಿರುಸಿನ ಬ್ಯಾಟಿಂಗ್ ಮೂಲಕ ಅಜೇಯ 106 ರನ್ ಬಾರಿಸುವ ಮೂಲಕ ಜೋಸ್ ಬಟ್ಲರ್ ಅಬ್ಬರಿಸಿದ್ದರು.
ಈ ಮೂಲಕ ಪ್ಲೇಆಫ್ನಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಶತಕ ಸಿಡಿಸಿದ ಮೊದಲ ಬ್ಯಾಟ್ಸ್ಮನ್ ಎಂಬ ದಾಖಲೆಯನ್ನು ಜೋಸ್ ಬಟ್ಲರ್ ತಮ್ಮದಾಗಿಸಿಕೊಂಡರು. ಅಷ್ಟೇ ಅಲ್ಲದೆ ಐಪಿಎಲ್ನಲ್ಲಿ 5 ಶತಕ ಬಾರಿಸಿದ 2ನೇ ಬ್ಯಾಟ್ಸ್ಮನ್ ಎಂಬ ವಿರಾಟ್ ಕೊಹ್ಲಿಯ ದಾಖಲೆಯನ್ನು ಸರಿಗಟ್ಟಿದ್ದಾರೆ. ಹಾಗೆಯೇ ಒಂದೇ ಸೀಸನ್ನಲ್ಲಿ ಅತೀ ಹೆಚ್ಚು ಸೆಂಚುರಿ ಸಿಡಿಸಿದ ದಾಖಲೆ ಪಟ್ಟಿಯಲ್ಲೂ ಬಟ್ಲರ್ ಕಾಣಿಸಿಕೊಂಡಿದ್ದಾರೆ. 2016 ರಲ್ಲಿ 4 ಶತಕ ಬಾರಿಸುವ ಮೂಲಕ ವಿರಾಟ್ ಕೊಹ್ಲಿ ವಿಶೇಷ ದಾಖಲೆ ಬರೆದಿದ್ದರು. ಇದೀಗ ಈ ಸೀಸನ್ನಲ್ಲಿ ಒಟ್ಟು 4 ಸೆಂಚುರಿ ಬಾರಿಸಿ ಜೋಸ್ ಬಟ್ಲರ್ ಈ ದಾಖಲೆಯನ್ನು ಸರಿಗಟ್ಟಿದ್ದಾರೆ.
ಇನ್ನು ಐಪಿಎಲ್ನಲ್ಲಿ ಅತೀ ಹೆಚ್ಚು ಶತಕ ಬಾರಿಸಿದ ದಾಖಲೆ ಯೂನಿವರ್ಸ್ ಬಾಸ್ ಕ್ರಿಸ್ ಗೇಲ್ ಹೆಸರಿನಲ್ಲಿದೆ. ಗೇಲ್ ಐಪಿಎಲ್ನಲ್ಲಿ ಒಟ್ಟು 6 ಶತಕ ಬಾರಿಸಿದ ದಾಖಲೆ ನಿರ್ಮಿಸಿಟ್ಟಿದ್ದಾರೆ. ಇದೀಗ ರಾಜಸ್ಥಾನ್ ರಾಯಲ್ಸ್ ಫೈನಲ್ಗೆ ತಲುಪಿದ್ದು, ಅಂತಿಮ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಅನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ಜೋಸ್ ಬಟ್ಲರ್ ಶತಕ ಸಿಡಿಸಿದ್ರೆ ಐಪಿಎಲ್ನಲ್ಲಿ ಅತ್ಯಧಿಕ ಶತಕ ಬಾರಿಸಿದ ಕ್ರಿಸ್ ಗೇಲ್ ಅವರ ದಾಖಲೆಯನ್ನು ಸರಿಗಟ್ಟಬಹುದು. ಅಲ್ಲದೆ ಐಪಿಎಲ್ ಸೀಸನ್ವೊಂದರಲ್ಲಿ 900 ರನ್ಗಳ ಗಡಿದಾಟಿದ 2ನೇ ಬ್ಯಾಟ್ಸ್ಮನ್ ಎಂಬ ದಾಖಲೆ ಕೂಡ ಜೋಸ್ ಬಟ್ಲರ್ ಪಾಲಾಗಲಿದೆ.
ಸದ್ಯ ಐಪಿಎಲ್ ಸೀಸನ್ವೊಂದರಲ್ಲಿ ಅತೀ ಹೆಚ್ಚು ರನ್ ಕಲೆಹಾಕಿದ ದಾಖಲೆ ವಿರಾಟ್ ಕೊಹ್ಲಿ ಹೆಸರಿನಲ್ಲಿದೆ. ಕೊಹ್ಲಿ 2016 ರಲ್ಲಿ 973 ರನ್ ಬಾರಿಸಿದ್ದರು. ಇದೀಗ ಭರ್ಜರಿ ಫಾರ್ಮ್ನಲ್ಲಿರುವ ಜೋಸ್ ಬಟ್ಲರ್ 824 ರನ್ ಬಾರಿಸಿದ್ದು, ಈ ಮೂಲಕ ಐಪಿಎಲ್ನಲ್ಲಿ 900 ರನ್ಗಳ ಗಡಿದಾಟುವ ಹೊಸ್ತಿಲಲ್ಲಿದ್ದಾರೆ.
ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.