IPL 2022: RCB ಪರ ಮಿಂಚಿದ್ದು ಯಾರು? ಮುಗ್ಗರಿಸಿದ್ದು ಯಾರು?
IPL 2022 RCB top performers: ಆರ್ಸಿಬಿ ಈ ಬಾರಿ 16 ಪಂದ್ಯಗಳನ್ನು ಆಡಿದರೂ ಪ್ರಮುಖ ಆಟಗಾರರಿಂದ ನಿರೀಕ್ಷಿತ ಆಟ ಮೂಡಿಬಂದಿಲ್ಲ ಎಂಬುದೇ ಸತ್ಯ. ಏಕೆಂದರೆ ತಂಡದಲ್ಲಿ ಕೆ.ಜಿ.ಎಫ್ ಎಂದೇ ಖ್ಯಾತರಾಗಿದ್ದ ಫಾಫ್ ಡುಪ್ಲೆಸಿಸ್, ಗ್ಲೆನ್ ಮ್ಯಾಕ್ಸ್‌ವೆಲ್ ಹಾಗೂ ವಿರಾಟ್ ಕೊಹ್ಲಿ ನಿರ್ಣಾಯಕ ಪಂದ್ಯಗಳಲ್ಲಿ ಕೈಕೊಡುವ ಮೂಲಕ ನಿರಾಸೆ ಮೂಡಿಸಿದರು.
IPL 2022: ಐಪಿಎಲ್ ಸೀಸನ್ 15 ಗೆ ತೆರೆಬೀಳಲು ಇನ್ನು ಒಂದು ಪಂದ್ಯ ಮಾತ್ರ ಬಾಕಿ ಇದೆ. ಆದರೆ ಆ ಫೈನಲ್ ಪಂದ್ಯವನ್ನು ಆಡುವ ಅವಕಾಶವನ್ನು ಆರ್ಸಿಬಿ (RCB) ತಂಡ ಕೈತಪ್ಪಿಸಿಕೊಂಡಿದೆ. ಈ ಬಾರಿ ಆಡಿದ ಲೀಗ್ ಹಂತದ 14 ಪಂದ್ಯಗಳಲ್ಲಿ 8 ಪಂದ್ಯಗಳನ್ನು ಗೆದ್ದುಕೊಂಡಿದ್ದ ಆರ್ಸಿಬಿ ಪಾಯಿಂಟ್ಸ್ ಟೇಬಲ್ನಲ್ಲಿ 4ನೇ ಸ್ಥಾನ ಪಡೆದುಕೊಂಡಿತ್ತು. ಈ ಮೂಲಕ ಪ್ಲೇಆಫ್ ಆಡುವ ಅವಕಾಶವನ್ನು ಗಿಟ್ಟಿಸಿಕೊಂಡಿತು. ಅದರಂತೆ ಮೊದಲ ಎಲಿಮಿನೇಟರ್ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಸೋಲುಣಿಸಿದ ಆರ್ಸಿಬಿ 2ನೇ ಕ್ವಾಲಿಫೈಯರ್ಗೇರಿತು. ಆದರೆ ನಿರ್ಣಾಯಕ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ದ ಮುಗ್ಗರಿಸುವ ಮೂಲಕ ಆರ್ಸಿಬಿ ಐಪಿಎಲ್ ಜರ್ನಿಯನ್ನು ಅಂತ್ಯಗೊಳಿಸಿದೆ. ಇದರೊಂದಿಗೆ ಆರ್ಸಿಬಿ ತಂಡದ ಕಪ್ ಗೆಲ್ಲುವ ಕನಸು 16ನೇ ಸೀಸನ್ಗೆ ಮುಂದುವರೆದಿದೆ.
ಇತ್ತ ಆರ್ಸಿಬಿ ಈ ಬಾರಿ 16 ಪಂದ್ಯಗಳನ್ನು ಆಡಿದರೂ ಪ್ರಮುಖ ಆಟಗಾರರಿಂದ ನಿರೀಕ್ಷಿತ ಆಟ ಮೂಡಿಬಂದಿಲ್ಲ ಎಂಬುದೇ ಸತ್ಯ. ಏಕೆಂದರೆ ತಂಡದಲ್ಲಿ ಕೆ.ಜಿ.ಎಫ್ ಎಂದೇ ಖ್ಯಾತರಾಗಿದ್ದ ಫಾಫ್ ಡುಪ್ಲೆಸಿಸ್, ಗ್ಲೆನ್ ಮ್ಯಾಕ್ಸ್‌ವೆಲ್ ಹಾಗೂ ವಿರಾಟ್ ಕೊಹ್ಲಿ ನಿರ್ಣಾಯಕ ಪಂದ್ಯಗಳಲ್ಲಿ ಕೈಕೊಡುವ ಮೂಲಕ ನಿರಾಸೆ ಮೂಡಿಸಿದರು. ಇನ್ನು ಬೌಲಿಂಗ್ನಲ್ಲೂ ಆರ್ಸಿಬಿ ತಂಡದ ಪ್ರದರ್ಶನ ಸಾಧಾರಣ ಮಟ್ಟದಲ್ಲಿತ್ತು. ಹಾಗಿದ್ರೆ ಈ ಬಾರಿ ಆರ್ಸಿಬಿ ಪರ ಅತ್ಯುತ್ತಮ ಪ್ರದರ್ಶನ ನೀಡಿದ ಆಟಗಾರ ಯಾರು, ವಿಫಲರಾದ ಆಟಗಾರರು ಯಾರೆಲ್ಲಾ ನೋಡೋಣ…
ಅತೀ ಹೆಚ್ಚು ರನ್ಗಳಿಸಿದ ಟಾಪ್ 5 ಬ್ಯಾಟ್ಸ್ಮನ್ಗಳು:
- ಫಾಫ್ ಡುಪ್ಲೆಸಿಸ್: 468 ರನ್ (16 ಇನಿಂಗ್ಸ್)
- ವಿರಾಟ್ ಕೊಹ್ಲಿ: 341 ರನ್ (16 ಇನಿಂಗ್ಸ್)
- ರಜತ್ ಪಾಟಿದಾರ್: 333 ರನ್ (7 ಇನಿಂಗ್ಸ್)
- ದಿನೇಶ್ ಕಾರ್ತಿಕ್: 330 ರನ್ (16 ಇನಿಂಗ್ಸ್)
- ಗ್ಲೆನ್ ಮ್ಯಾಕ್ಸ್‌ವೆಲ್: 301 ರನ್ (13 ಇನಿಂಗ್ಸ್)
ವಿಫಲರಾದ ಬ್ಯಾಟ್ಸ್ಮನ್ಗಳು:
- ಅನೂಜ್ ರಾವತ್: 129 ರನ್ (8 ಇನಿಂಗ್ಸ್)
- ಸುಯಶ್ ಪ್ರಭುದೇಸಾಯಿ: 67 ರನ್ (5 ಇನಿಂಗ್ಸ್)
- ಮಹಿಪಾಲ್ ಲೋಮ್ರರ್: 86 ರನ್ ( 5 ಇನಿಂಗ್ಸ್)
ಅತೀ ಹೆಚ್ಚು ವಿಕೆಟ್ ಪಡೆದ ಬೌಲರ್ಗಳು:
- ವನಿಂದು ಹಸರಂಗ: 26 ವಿಕೆಟ್ (16 ಪಂದ್ಯಗಳು)
- ಜೋಶ್ ಹ್ಯಾಝಲ್ವುಡ್: 20 ವಿಕೆಟ್ (12 ಪಂದ್ಯಗಳು)
- ಹರ್ಷಲ್ ಪಟೇಲ್: 19 ವಿಕೆಟ್ (15 ಪಂದ್ಯಗಳು)
ವಿಫಲರಾದ ಬೌಲರ್ಗಳು:
- ಮೊಹಮ್ಮದ್ ಸಿರಾಜ್: 9 ವಿಕೆಟ್ (15 ಪಂದ್ಯಗಳು)
- ಆಕಾಶ್ ದೀಪ್: 5 ವಿಕೆಟ್ (5 ಪಂದ್ಯಗಳು)
- ಶಹಬಾಜ್ ಅಹ್ಮದ್: 4 ವಿಕೆಟ್ (16 ಪಂದ್ಯಗಳು)
ಇಲ್ಲಿ ಆರ್ಸಿಬಿ ಪರ ಡುಪ್ಲೆಸಿಸ್ ಹೊರತುಪಡಿಸಿ ಯಾವುದೇ ಬ್ಯಾಟ್ಸ್ಮನ್ 400 ರನ್ಗಳ ಗಡಿದಾಟಿಲ್ಲ. ಹಾಗೆಯೇ ಹಸರಂಗ, ಹ್ಯಾಝಲ್ವುಡ್ ಹಾಗೂ ಹರ್ಷಲ್ ಪಟೇಲ್ ಹೊರತುಪಡಿಸಿ ಆರ್ಸಿಬಿ ತಂಡದ ಯಾವುದೇ ಬೌಲರ್ 10 ವಿಕೆಟ್ ಪಡೆದಿಲ್ಲ ಎಂಬುದನ್ನು ಗಮನಿಸಬೇಕು. ಅಂದರೆ ಆರ್ಸಿಬಿ ಒಂದೆಡೆ ಬೌಲಿಂಗ್ನಲ್ಲಿ ತುಸು ಉತ್ತಮ ಪ್ರದರ್ಶನ ನೀಡಿದರೂ, ಬ್ಯಾಟ್ಸ್ಮನ್ಗಳು ಸಂಪೂರ್ಣ ಕೈಕೊಟ್ಟಿರುವುದು ಸ್ಪಷ್ಟ. ಏಕೆಂದರೆ ಈ ಬಾರಿ ಆರ್ಸಿಬಿ ಪರ ಯಾವುದೇ ಆಟಗಾರ 500 ರನ್ ಬಾರಿಸಿಲ್ಲ. ಅದರಲ್ಲೂ 400 ರನ್ಗಳ ಗಡಿದಾಟಿದ್ದು ಏಕೈಕ ಆಟಗಾರ. ಇದರಲ್ಲೇ ಆರ್ಸಿಬಿ ತಂಡದ ಬ್ಯಾಟಿಂಗ್ ವೈಫಲ್ಯವನ್ನು ಊಹಿಸಬಹುದು. ಇನ್ನು ಈ ಬಾರಿ ಆರ್ಸಿಬಿ ರಿಟೈನ್ ಮಾಡಿಕೊಂಡಿದ್ದ ಬೌಲರ್ ಮೊಹಮ್ಮದ್ ಸಿರಾಜ್ ಕೇವಲ 9 ವಿಕೆಟ್ ಪಡೆದರೆ ನೀಡಿದ್ದು 514 ರನ್ಗಳು ಎಂದರೆ ನಂಬಲೇಬೇಕು.
ಇಲ್ಲಿ ಆರ್ಸಿಬಿ ತಂಡವು ಸಾಂಘಿಕ ಪ್ರದರ್ಶನ ನೀಡುವಲ್ಲಿ ಎಡವಿರುವುದು ಮೇಲ್ನೋಟಕ್ಕೆ ಸ್ಪಷ್ಟ. ಇದಾಗ್ಯೂ ಹಸರಂಗ, ಹ್ಯಾಝಲ್ವುಡ್, ಹರ್ಷಲ್ ಪಟೇಲ್ ಅವರ ಬೌಲಿಂಗ್ ಪ್ರದರ್ಶನ ಹಾಗೂ ರಜತ್ ಪಾಟಿದಾರ್ ಹಾಗೂ ಫಿನಿಶರ್ ಆಗಿ ದಿನೇಶ್ ಕಾರ್ತಿಕ್ ಅವರ ಅದ್ಭುತ ಬ್ಯಾಟಿಂಗ್ ಈ ಬಾರಿ ಆರ್ಸಿಬಿ ತಂಡದಲ್ಲಿ ಕಂಡು ಬಂದ ಸಕರಾತ್ಮಕ ವಿಷಯಗಳು.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ: ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ (ನಾಯಕ), ರಜತ್ ಪಾಟಿದಾರ್, ಗ್ಲೆನ್ ಮ್ಯಾಕ್ಸ್‌ವೆಲ್, ಮಹಿಪಾಲ್ ಲೊಮ್ರೋರ್, ದಿನೇಶ್ ಕಾರ್ತಿಕ್, ಶಹಬಾಜ್ ಅಹ್ಮದ್, ವನಿಂದು ಹಸರಂಗ, ಹರ್ಷಲ್ ಪಟೇಲ್, ಜೋಶ್ ಹ್ಯಾಜಲ್‌ವುಡ್, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್, ಅನೇಶ್ವರ್ ಗೌತಮ್ , ಶೆರ್ಫೇನ್ ರುದರ್‌ಫೋರ್ಡ್, ಅನುಜ್ ರಾವತ್, ಸುಯಶ್ ಪ್ರಭುದೇಸಾಯಿ, ಚಾಮ ಮಿಲಿಂದ್, ಜೇಸನ್ ಬೆಹ್ರೆಂಡಾರ್ಫ್, ಡೇವಿಡ್ ವಿಲ್ಲಿ, ಕರ್ಣ್ ಶರ್ಮಾ, ಫಿನ್ ಅಲೆನ್, ಸಿದ್ದಾರ್ಥ್ ಕೌಲ್.
ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:03 pm, Sat, 28 May 22